ಐಪಿಎಲ್ ಸೀಸನ್ 15 ನಲ್ಲಿ ಯುವ ವೇಗಿ ಉಮ್ರಾನ್ ಮಲಿಕ್ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿರುವ ಉಮ್ರಾನ್ ಈಗಾಗಲೇ 157 ಕಿ.ಮೀ ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ. ಇದೀಗ ಮತ್ತೊಂದು ದಾಖಲೆಯನ್ನು ಕೂಡ ತನ್ನದಾಗಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ದ ಪಂದ್ಯದಲ್ಲಿ 3 ವಿಕೆಟ್ ಉರುಳಿಸುವ ಮೂಲಕ ಉಮ್ರಾನ್ ಎಸ್ಆರ್ಹೆಚ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ 3 ವಿಕೆಟ್ಗಳೊಂದಿಗೆ ಇದೀಗ ಐಪಿಎಲ್ನಲ್ಲಿ ಉಮ್ರಾನ್ ಒಟ್ಟು ವಿಕೆಟ್ಗಳ ಸಂಖ್ಯೆ 21 ಕ್ಕೇರಿದೆ. ಅಷ್ಟೇ ಅಲ್ಲದೆ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ವಿಶೇಷ ಎಂದರೆ ಐಪಿಎಲ್‌ನ ಒಂದು ಸೀಸನ್‌ನಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆ ಇದೀಗ ಉಮ್ರಾನ್ ಮಲಿಕ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿತ್ತು.
ಬುಮ್ರಾ 2017 ರ ಐಪಿಎಲ್ನಲ್ಲಿ 20 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದರು. ಈ ವೇಳೆ ಜಸ್ಪ್ರೀತ್ ಬುಮ್ರಾ ಅವರ ವಯಸ್ಸು 23 ವರ್ಷ 165 ದಿನಗಳು. ಈ ಮೂಲಕ ಬುಮ್ರಾ ಐಪಿಎಲ್ನಲ್ಲಿ 20 ವಿಕೆಟ್ ಪಡೆದ ಭಾರತದ ಅತ್ಯಂತ ಕಿರಿಯ ವೇಗಿ ಎನಿಸಿಕೊಂಡಿದ್ದರು.
ಆದರೀಗ 22 ವರ್ಷ 176 ದಿನಗಳಲ್ಲಿ ಉಮ್ರಾನ್ ಮಲಿಕ್ 23 ವಿಕೆಟ್ ಕಬಳಿಸುವ ಮೂಲಕ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ ಐಪಿಎಲ್ ಸೀಸನ್ವೊಂದರಲ್ಲಿ 20 ಕ್ಕಿಂತ ಅಧಿಕ ವಿಕೆಟ್ ಪಡೆದ ಅತ್ಯಂತ ಕಿರಿಯ ವೇಗಿ ಎಂಬ ಹೊಸ ದಾಖಲೆ ನಿರ್ಮಿಸಿದ್ದಾರೆ.
ಸದ್ಯ ಉಮ್ರಾನ್ ಮಲಿಕ್ ಅವರ ಬೌಲಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಯುವ ವೇಗಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡುವಂತೆ ಅನೇಕ ಮಾಜಿ ಆಟಗಾರರು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಉಮ್ರಾನ್ ಮಲಿಕ್ ಅವರ ವೇಗಭರಿತ ಬೌಲಿಂಗ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಮ್ಮು-ಕಾಶ್ಮೀರದ ಯುವ ವೇಗಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ ಎಂದಿದ್ದಾರೆ.
Published On - 5:36 pm, Wed, 18 May 22