ಏಷ್ಯಾಕಪ್‌ಗಾಗಿ ಬೆಂಗಳೂರಿನ ಎನ್ಸಿಎನಲ್ಲಿ ಟೀಂ ಇಂಡಿಯಾ ಆಟಗಾರರು ತಯಾರಿ ಆರಂಭಿಸಿದ್ದಾರೆ. ಈ ನಡುವೆ ಬಹಳ ದಿನಗಳಿಂದ ತಂಡದಿಂದ ಹೊರಗುಳಿದಿದ್ದ ಆಟಗಾರರನ್ನು ಬಿಸಿಸಿಐ ಯೋ- ಯೋ ಟೆಸ್ಟ್ಗೆ ಒಳಪಡಿಸುತ್ತಿದೆ. ಹೀಗಾಗಿ ನಿನ್ನೆ ಅಂದರೆ ಆ.24 ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಈ ಪರೀಕ್ಷೆಗೆ ಒಳಗಾಗಿದ್ದರು.
ಆ ಬಳಿಕ ಈ ಫಿಟ್ನೆಸ್ ಪರೀಕ್ಷೆಯಲ್ಲಿ ತಾನು ಪಡೆದ ಅಂಕಗಳೆಷ್ಟು ಎಂಬುದನ್ನು ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಇದೀಗ ಕೊಹ್ಲಿಯ ಈ ನಡೆಯಿಂದ ಗರಂ ಆಗಿರುವ ಬಿಸಿಸಿಐ, ಕಿಂಗ್ ಕೊಹ್ಲಿಗೆ ವಾರ್ನಿಂಗ್ ನೀಡಿದೆ.
ವಾಸ್ತವವಾಗಿ ನಿನ್ನೆ ವಿರಾಟ್ ಕೊಹ್ಲಿ ಯೋ ಯೋ ಪರೀಕ್ಷೆಗೆ ಒಳಗಾಗಿದ್ದರು. ಆ ಬಳಿಕ ಈ ಟೆಸ್ಟ್ನಲ್ಲಿ ತಾನು 17.2 ಅಂಕ ಸಂಪಾಧಿಸಿರುವುದಾಗಿ ಕೊಹ್ಲಿ ತಮ್ಮ ಇನ್ಸ್ಟಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ಇದೀಗ ಕೊಹ್ಲಿಯ ಈ ನಡೆಗೆ ಗರಂ ಆಗಿರುವ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಆಟಗಾರರು ತಮ್ಮ ಫಿಟ್‌ನೆಸ್ ಸ್ಕೋರ್‌ಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಮಾಹಿತಿಯನ್ನು ನೀಡದಂತೆ ಕೇಳಿಕೊಂಡಿದೆ. ಹಾಗೆಯೇ ಯಾವುದೇ ಗೌಪ್ಯ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಕೇಳಿಕೊಂಡಿದೆ ಎಂದು ವರದಿಯಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಶಿಬಿರದಲ್ಲಿ ಭಾಗಿಯಾಗಿರುವ ಎಲ್ಲಾ ಆಟಗಾರರಿಗೆ ಮಂಡಳಿ ಸ್ಪಷ್ಟ ಸಂದೇಶ ರವಾನಿಸಿದ್ದು, ವರದಿ ಪ್ರಕಾರ, ಯಾವುದೇ ಗೌಪ್ಯ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಟಗಾರರಿಗೆ ಮೌಖಿಕವಾಗಿ ಸೂಚಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಸೂಕ್ತ ಸೂಚನೆ ನೀಡಲಾಗಿದ್ದು, ಆಟಗಾರರು ಬೇಕಿದ್ದರೆ ಟ್ರ್ಯಾಕ್ನಲ್ಲಿ ಓಡುವ ಫೋಟೋಗಳನ್ನು ಪೋಸ್ಟ್ ಮಾಡಬಹುದು. ಆದರೆ ಯೋ ಯೋ ಟೆಸ್ಟ್ನಲ್ಲಿ ಪಡೆದ ಅಂಕಗಳನ್ನು ಪೋಸ್ಟ್ ಮಾಡುವುದು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಏಷ್ಯಾಕಪ್ ಆಡುವ ಆಟಗಾರರಿಗಾಗಿ 6 ದಿನಗಳ ಶಿಬಿರವನ್ನು ಏರ್ಪಡಿಸಿದೆ. ಮೊದಲ ದಿನ ಆಟಗಾರರ ಯೋ-ಯೋ ಟೆಸ್ಟ್ ಮಾಡಲಾಗಿದೆ. ಏಷ್ಯಾಕಪ್‌ಗೆ ಮುನ್ನ ಆಟಗಾರರ ಸಂಪೂರ್ಣ ದೇಹ ಪರೀಕ್ಷೆ ನಡೆಯಲಿದೆ. ಇದು ರಕ್ತ ಪರೀಕ್ಷೆಯನ್ನು ಸಹ ಒಳಗೊಂಡಿದೆ. ತರಬೇತುದಾರರು ಆಟಗಾರರ ಫಿಟ್ನೆಸ್ ಅನ್ನು ಪರಿಶೀಲಿಸಲ್ಲಿದ್ದು, ಮಾನದಂಡವನ್ನು ಪೂರೈಸದವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದಿರುಗಿದ ಮತ್ತು ಐರ್ಲೆಂಡ್ ವಿರುದ್ಧದ 3 ಟಿ20 ಸರಣಿಯ ಭಾಗವಾಗದ ಆಟಗಾರರಿಗೆ ಮ್ಯಾನೇಜ್‌ಮೆಂಟ್ 13 ದಿನಗಳ ಫಿಟ್‌ನೆಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ರೋಹಿತ್, ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಸೇರಿದಂತೆ ಮುಂತಾದ ಆಟಗಾರರು ಸೇರಿದ್ದಾರೆ.
Published On - 9:25 am, Fri, 25 August 23