ಕೊರೊನಾ ರುದ್ರ ನರ್ತನಕ್ಕೆ ಚೀನಾ ತತ್ತರ: ಭಾರತದಲ್ಲೂ ಒಂದು ಜೀವ ಹೋಯ್ತು!
ದೆಹಲಿ: ಒಂದ್ಕಡೆ ಏರುತ್ತಿರುವ ಸಾವಿನ ಸಂಖ್ಯೆ, ಹಾಗೇ ಎಲ್ಲೆಡೆ ಹಬ್ಬುತ್ತಿರುವ ಮಹಾಮಾರಿ. ಡ್ರ್ಯಾಗನ್ ನಾಡಿನಲ್ಲೀಗ ಎಲ್ಲೆಲ್ಲೂ ಆತಂಕದ ವಾತಾವರಣ. ಪರಿಸ್ಥಿತಿ ನಿಯಂತ್ರಣಕ್ಕೆ ಜಿನ್ಪಿಂಗ್ ಸರ್ಕಾರ ಪರದಾಡ್ತಿದ್ರೆ, ವೈರಸ್ನಿಂದ ಹೇಗೆ ಬಚಾವ್ ಆಗೋದು ಅಂತಾ ಚೀನಿಯರು ಆತಂಕಕ್ಕೆ ಒಳಗಾಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಮಧ್ಯೆ ಭಾರತಕ್ಕೂ ರೋಗ ವ್ಯಾಪಿಸಿದ್ದು, ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ವುಹಾನ್ ಪ್ರಾಂತ್ಯದಲ್ಲಿ ಕೆಲ ವಾರಗಳ ಹಿಂದೆ ಇದ್ದಕ್ಕಿದ್ದಂತೆ ಜನ ಅನಾರೋಗ್ಯಕ್ಕೆ ತುತ್ತಾಗ್ತಿದ್ರು. ಈ ರೋಗದ ಆಳಕ್ಕಿಳಿದು, ಪರಿಶೀಲನೆ ನಡೆದಾಗಲೇ ಗೊತ್ತಾಗಿದ್ದು ಮಹಾಮಾರಿ ‘ಕೊರೊನಾ’ […]
ದೆಹಲಿ: ಒಂದ್ಕಡೆ ಏರುತ್ತಿರುವ ಸಾವಿನ ಸಂಖ್ಯೆ, ಹಾಗೇ ಎಲ್ಲೆಡೆ ಹಬ್ಬುತ್ತಿರುವ ಮಹಾಮಾರಿ. ಡ್ರ್ಯಾಗನ್ ನಾಡಿನಲ್ಲೀಗ ಎಲ್ಲೆಲ್ಲೂ ಆತಂಕದ ವಾತಾವರಣ. ಪರಿಸ್ಥಿತಿ ನಿಯಂತ್ರಣಕ್ಕೆ ಜಿನ್ಪಿಂಗ್ ಸರ್ಕಾರ ಪರದಾಡ್ತಿದ್ರೆ, ವೈರಸ್ನಿಂದ ಹೇಗೆ ಬಚಾವ್ ಆಗೋದು ಅಂತಾ ಚೀನಿಯರು ಆತಂಕಕ್ಕೆ ಒಳಗಾಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಮಧ್ಯೆ ಭಾರತಕ್ಕೂ ರೋಗ ವ್ಯಾಪಿಸಿದ್ದು, ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಿಸಿದೆ.
ವುಹಾನ್ ಪ್ರಾಂತ್ಯದಲ್ಲಿ ಕೆಲ ವಾರಗಳ ಹಿಂದೆ ಇದ್ದಕ್ಕಿದ್ದಂತೆ ಜನ ಅನಾರೋಗ್ಯಕ್ಕೆ ತುತ್ತಾಗ್ತಿದ್ರು. ಈ ರೋಗದ ಆಳಕ್ಕಿಳಿದು, ಪರಿಶೀಲನೆ ನಡೆದಾಗಲೇ ಗೊತ್ತಾಗಿದ್ದು ಮಹಾಮಾರಿ ‘ಕೊರೊನಾ’ ಡ್ರ್ಯಾಗನ್ ನಾಡಿಗೆ ದಾಳಿಯಿಟ್ಟಿದೆ ಅಂತಾ. ಇದಾದ ನಂತರ ಕೆಲವೇ ದಿನಗಳಲ್ಲಿ ರೋಗ ಸಾವಿರಾರು ಜನರನ್ನ ಆವರಿಸಿ, ಸಾವಿನ ಸಂಖ್ಯೆಯನ್ನು ಶತಕದ ಗಡಿ ದಾಟಿಸಿದೆ. ಇಷ್ಟೆಲ್ಲದರ ಮಧ್ಯೆ ಭಾರತಕ್ಕೂ ಕೊರೊನಾ ಎಂಬ ಭೀಕರ ರೋಗ ಹಬ್ಬುವ ಆತಂಕ ಎದುರಾಗಿದೆ.
‘ಕೊರೊನಾ’ ರೋಗಿಗಳಿಗೆ ಚಿಕಿತ್ಸೆ ನೀಡಲು ಚೀನಾ ಪರದಾಟ! ವಿಶ್ವಕ್ಕೆ ತನ್ನ ಶಕ್ತಿ ತೋರಿಸಲು ಮುಂದಾದ ಚೀನಾ 6 ದಿನಗಳಲ್ಲಿ ಸಾವಿರ ಬೆಡ್ಗಳ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿತ್ತು. ಇದಕ್ಕಾಗಿ ಹತ್ತಾರು ಜೆಸಿಬಿ ಬಳಸಿಕೊಂಡು ಕಾಮಗಾರಿ ಆರಂಭಿಸಿತ್ತು. ಆದ್ರೆ ಅಂದುಕೊಂಡ ಮಟ್ಟಕ್ಕೆ ಕಾಮಗಾರಿ ಸಾಗಿಲ್ಲ. ಹೀಗಾಗಿ 6ದಿನ ಇದ್ದ ಡೆಡ್ಲೈನ್, 10 ದಿನಕ್ಕೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಕಾಮಗಾರಿ ಮೊದಲ ಹಂತ ಪೂರ್ಣವಾಗಿದ್ದು, ಕೆಲವೇ ದಿನಗಳಲ್ಲಿ ಮಹಾಮಾರಿ ಕೊರೊನಾಗೆ ಮದ್ದು ನೀಡಲು ನೂತನ ಆಸ್ಪತ್ರೆ ಸಿದ್ಧವಾಗಲಿದೆ. ಆದರೆ ಇತ್ತ 1000 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗುತ್ತಿದ್ರೆ, ಅತ್ತ ರೋಗಿಗಳ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.
‘ಕೊರೊನಾ’ ಮರಣ ಮೃದಂಗ! ಈಗಾಗಲೇ ‘ಕೊರೊನಾ’ವೈರಸ್ಗೆ ಚೀನಾದಲ್ಲಿ 106 ಜನರು ಮೃತಪಟ್ಟಿದ್ದಾರೆ ಅಂತಾ ಅಧಿಕೃತವಾಗಿ ಘೋಷಿಸಲಾಗಿದೆ. ಸುಮಾರು 5 ಸಾವಿರ ಜನರಿಗೆ ಸೋಂಕು ತಗುಲಿದ್ದು, ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾರೆ. ಆಂತಕದ ವಿಷಯ ಅಂದ್ರೆ ಒಂದೇ ದಿನಕ್ಕೆ 1700 ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದ್ದು ಹೈಅಲರ್ಟ್ ಘೋಷಿಸಲಾಗಿದೆ. ಇನ್ನು ಏಕಾಏಕಿ ಇಷ್ಟು ರೋಗಿಗಳು ದಾಖಲಾಗಿರೋದ್ರಿಂದ ಚಿಕಿತ್ಸೆ ನೀಡಲು ಚೀನಿ ವೈದ್ಯರು ಪರದಾಡುವಂತಾಗಿದೆ. ಹೀಗಾಗಿ ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆ ಉದ್ಘಾಟನೆಯಾಗದಿದ್ದರೆ ಭಾರಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಚೀನಾ ಲ್ಯಾಬ್ನಿಂದ ‘ಕೊರೊನಾ’ ಎಂಟ್ರಿ? ಯೆಸ್, ಇಂತಹದ್ದೊಂದು ಪ್ರಶ್ನೆ ಇಡೀ ಜಾಗತಿಕ ಸಮುದಾಯವನ್ನ ಕಾಡಲಾರಂಭಿಸಿದೆ. ಈಗಿನ ಮಾಹಿತಿಗಳ ಪ್ರಕಾರ ಕೊರೊನಾ ವೈರಸ್ ಪ್ರಾಣಿಗಳಿಂದ ಹಬ್ಬಿಲ್ಲ. ಬದ್ಲಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಬಿಲ್ಡಿಂಗ್ನ ಪಿ4 ಲ್ಯಾಬ್ನಿಂದ ವೈರಸ್ ಹೊರಬಿದ್ದಿದೆ ಅಂತಾ ಹೇಳಲಾಗ್ತಿದೆ. ಈ ಮೊದ್ಲು ‘ಕೊರೊನಾ’ದ ಹುಟ್ಟು ಹಾವು ಇಲ್ಲವೇ ಬಾವಲಿಯಿಂದ ಅಂತಾ ಹೇಳಲಾಗಿತ್ತು. ಹೀಗಾಗಿ, ವುಹಾನ್ ಸಮುದ್ರ ಆಹಾರ ಮಾರುಕಟ್ಟೆಗೆ ಬೀಗ ಜಡಿಯಲಾಗಿತ್ತು. ಆದ್ರೆ ಈಗ ಚೀನಾದ ಬಯೋ ವೆಪನ್ ಕುತಂತ್ರವೇ ದುರಂತಕ್ಕೆ ಕಾರಣ ಅಂತಾ ವಿಜ್ಞಾನಿಗಳು ಆರೋಪಿಸುತ್ತಿದ್ದಾರೆ.
ಶಂಕಿತ ‘ಕೊರೊನಾ’ ವೈರಸ್ಗೆ ಭಾರತದಲ್ಲಿ ಮೊದಲ ಬಲಿ! ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಡೆಡ್ಲಿ ಕೊರೊನಾ ವೈರಸ್ ಭಾರತಕ್ಕೂ ಹಬ್ಬುವ ಭೀತಿ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಏರ್ಪೋರ್ಟ್ನಲ್ಲಿ ತೀವ್ರ ತಪಾಸಣೆ ಸಾಗಿರುವಾಗಲೇ, ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನಲಾದ ಥೈಲ್ಯಾಂಡ್ ಮೂಲದ ಮಹಿಳೆ ಕೋಲ್ಕತ್ತಾ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಶಂಕಿತ ಕೊರೊನಾ ವೈರಸ್ಗೆ ಭಾರತದಲ್ಲಿ ಮೊದಲ ಬಲಿ ಬಿದ್ದಾಗಿದೆ. ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ ವೈರಾಣು, ಈ ಮೂಲಕ ಭಾರತಕ್ಕೂ ಲಗ್ಗೆಯಿಡುವ ಮುನ್ಸೂಚನೆ ನೀಡಿದ್ದು, ಹೈಅಲರ್ಟ್ ಘೋಷಿಸಲಾಗಿದೆ. ಹಾಗೇ ನೇಪಾಳದಲ್ಲೂ ಕೊರೊನಾಗೆ ಓರ್ವ ಬಲಿಯಾಗಿದ್ದು, ಭಾರತ-ನೇಪಾಳ ಗಡಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಚೀನಾದಿಂದ 250 ಭಾರತೀಯರ ಏರ್ಲಿಫ್ಟ್ಗೆ ಸಿದ್ಧತೆ! ಇನ್ನು ವೈರಸ್ ದಾಳಿ ಮಾಡಿದ ಹಿನ್ನೆಲೆಯಲ್ಲಿ ಚೀನಾದ 17 ನಗರಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ವೈರಸ್ ಹುಟ್ಟೂರು ವುಹಾನ್ನಲ್ಲಿ ಸುಮಾರು 250 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇವರನ್ನ ಚೀನಾದಿಂದ ಭಾರತಕ್ಕೆ ಏರ್ಲಿಫ್ಟ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗ್ಲೇ ವಿದೇಶಾಂಗ ಇಲಾಖೆ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಗೆ ಪತ್ರ ಬರೆದಿದ್ದು, ಯಾವುದೇ ಸಮಯದಲ್ಲೂ ಸಿದ್ಧವಾಗಿರುವಂತೆ ಸೂಚಿಸಿದೆ. ಹೀಗಾಗಿ ಏರ್ಇಂಡಿಯಾದ ವಿಮಾನವೊಂದು ಕೇಂದ್ರದ ಸರ್ಕಾರದ ಸೂಚನೆಗಾಗಿ ಕಾದು ಕುಳಿತಿದೆ.
ಆತಂಕದ ಮಡುವಲ್ಲಿ ಚಿಂತೆಗೀಡಾಗಿರುವ ಚೀನಾ. ಮತ್ತೊಂದ್ಕಡೆ ನಮಗೂ ರೋಗ ಹಬ್ಬುತ್ತದೆ ಅನ್ನೋ ಭಯ. ಸದ್ಯಕ್ಕೆ ಎಲ್ಲೆಲ್ಲೂ ಕೊರೊನಾ ವೈರಸ್ನದ್ದೇ ಚರ್ಚೆ ಶುರುವಾಗಿದೆ. ರೋಗ ನಿಯಂತ್ರಣಕ್ಕೆ ವಿಶ್ವ ಆರೋಗ್ಯಸಂಸ್ಥೆ ಕೂಡ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಒಂದ್ಕಡೆ ವೈರಸ್ ಚೀನಾದ ‘ಬಯೋ ವೆಪನ್’ ಅನ್ನೋ ಆರೋಪಗಳು ಕೇಳಿಬರುತ್ತಿರುವಾಗಲೇ, ಇದು ಪ್ರಾಣಿಗಳಿಂದ ಹಬ್ಬಿದೆ ಅನ್ನೋ ಮಾತುಗಳು ಹರಿದಾಡ್ತಿವೆ. ಆದ್ರೆ, ವೈರಾಣು ಹುಟ್ಟಿದ್ದೆಲ್ಲಿ ಅನ್ನೋ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಗದಿರೋದು ದುರಂತವೇ ಸರಿ.
Published On - 7:10 am, Wed, 29 January 20