IND vs ZIM: ಇಂದು ಭಾರತ- ಜಿಂಬಾಬ್ವೆ ಮುಖಾಮುಖಿ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ರೋಹಿತ್ ಪಡೆ
India vs Zimbabwe, T20 World Cup: ಸೂಪರ್ -12 ಹಂತದ ಕೊನೆಯ ಪಂದ್ಯಗಳು ಈಗಾಗಲೇ ಶುರುವಾಗಿದ್ದು ನೆದರ್ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ಸೆಣೆಸಾಟ ನಡೆಸುತ್ತಿದೆ. ನಂತರ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಮಧ್ಯಾಹ್ನ ಭಾರತ ತಂಡ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.
ಐಸಿಸಿ ಟಿ20 ವಿಶ್ವಕಪ್ 2022 ರ (T20 World Cup) ಗ್ರೂಪ್ 1 ರಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಸೆಮಿ ಫೈನಲ್ಗೆ ಪ್ರವೇಶ ಪಡೆದಿದೆ. ಗ್ರೂಪ್ 2 ರಿಂದ ಯಾವ ತಂಡಗಳು ಎಂಬುದು ಇಂದು ನಿರ್ಧಾರವಾಗಲಿದೆ. ಸೂಪರ್ -12 ಹಂತದ ಕೊನೆಯ ಪಂದ್ಯಗಳು ಈಗಾಗಲೇ ಶುರುವಾಗಿದ್ದು ನೆದರ್ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ಸೆಣೆಸಾಟ ನಡೆಸುತ್ತಿದೆ. ನಂತರ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಮಧ್ಯಾಹ್ನ ಭಾರತ ತಂಡ ಜಿಂಬಾಬ್ವೆ (India vs Zimbabwe) ತಂಡವನ್ನು ಎದುರಿಸಲಿದೆ. ಈ ಪಂದ್ಯ ಮೆಲ್ಬೋರ್ನ್ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿದ್ದು ಟೀಮ್ ಇಂಡಿಯಾಕ್ಕೆ (Team Indi) ಗೆಲುವು ಅನಿವಾರ್ಯ. ಹೀಗಾಗಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಅರ್ಹತಾ ಸುತ್ತಿನ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ 12ರ ಹಂತಕ್ಕೆ ಪ್ರವೇಶಿಸಿ ಪಾಕಿಸ್ತಾನ ವಿರುದ್ಧ ಒಂದು ರನ್ ಅಂತರದ ರೋಚಕ ಜಯ ಸಾಧಿಸಿದ ಜಿಂಬಾಬ್ವೆ ತಂಡವನ್ನು ರೋಹಿತ್ ಬಳಗ ಕಡೆಗಣಿಸುವಂತಿಲ್ಲ. ಬಾಂಗ್ಲಾ ಹಾಗೂ ನೆದರ್ಲೆಂಡ್ಸ್ ತಂಡಗಳ ಎದುರು ವಿರೋಚಿತ ಹೋರಾಟ ಮಾಡಿದ್ದನ್ನೂ ಮರೆಯುವಂತಿಲ್ಲ. ಹೀಗಾಗಿ ಟೀಮ್ ಇಂಡಿಯ ಗೆಲುವಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಬೇಕಿದೆ. ತಂಡದಲ್ಲಿ ಬದಲಾವಣೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ.
ಭಾರತ ತಂಡ:
ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಕೆಎಲ್ ರಾಹುಲ್ ಕೂಡ ಲಯ ಕಂಡುಕೊಂಡಿರುವುದು ಸಂತಸದ ವಿಚಾರ. ಕಳೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಇವರು ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ, ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟ್ ಸದ್ದು ಮಡುತ್ತಿಲ್ಲ. ದಿನೇಶ್ ಕಾರ್ತಿಕ್ ಕೂಡ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ. ಅರ್ಶ್ದೀಪ್ ಸಿಂಗ್ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಭುವನೇಶ್ವರ್, ಶಮಿ ಕೂಡ ಇವರಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ಸ್ಪಿನ್ನರ್ಗಳ ಬೆಂಬಲ ಇನ್ನಷ್ಟು ಬೇಕಿದೆ.
ಜಿಂಬಾಬ್ವೆ ತಂಡ:
ಭಾರತಕ್ಕೆ ಹೋಲಿಸಿದರೆ ಜಿಂಬಾಬ್ವೆ ತಂಡಕ್ಕೆ ಅನುಭವ ಕಡಿಮೆ ಎಂದು ಹೇಳಬಹುದು. ಸಿಕಂದರ್ ರಝಾ ಅವರ ಆಲ್‌ರೌಂಡ್ ಆಟದ ಮೇಲೆ ತಂಡವು ಹೆಚ್ಚು ಅವಲಂಬಿತವಾಗಿದೆ. ಕ್ರೇಗ್ ಇರ್ವಿನ್ ನಾಯಕತ್ವದ ಜಿಂಬಾಬ್ವೆ ಪರ ಇಂದು ಇತರೆ ಆಟಗಾರರು ಕೂಡ ಮಿಂಚಿದರೆ ರೋಹಿತ್ ಬಳಗಕ್ಕೆ ಕಠಿಣವಾಗುವುದು ಖಚಿತ. ಹೀಗಾಗಿ ಎಚ್ಚರಿಕೆಯಿಂದ ಒಂದೊಂದು ಹೆಜ್ಜೆ ಇಡಬೇಕು.
ಪಂದ್ಯ ಎಷ್ಟು ಗಂಟೆಗೆ?:
ಭಾರತ ಹಾಗೂ ಜಿಂಬಾಬ್ವೆ ತಂಡಗಳು ಭಾನುವಾರ ಮೆಲ್ಬರ್ನ್‌ನ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದ್ದು 1 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಹಾಟ್‌ಸ್ಟಾರ್ ಹಾಗೂ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.
ಮೆಲ್ಬೋರ್ನ್ ಹವಮಾನ ವರದಿ:
ನವೆಂಬರ್ 6ರ ಭಾನುವಾರದಂದು ಹವಾಮಾನವು ಸ್ಪಷ್ಟವಾದೆ. ಪಂದ್ಯದ ಹಿಂದಿನ ದಿನ ರಾತ್ರಿ ಮೆಲ್ಬೋರ್ನ್‌ನಲ್ಲಿ ಲಘು ಮಳೆಯಾಗಿದೆ. ಆದರೆ ಜಿಂಬಾಬ್ವೆ ವಿರುದ್ಧದ ಭಾರತದ ಪಂದ್ಯದ ವೇಳೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಿಂದೆ ಮಳೆಯಿಂದಾಗಿ ಕಳೆದ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಕೆಲಕಾಲ ನಿಲ್ಲಿಸಬೇಕಾಯಿತು. ಜೊತೆಗೆ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಪಂದ್ಯವು ಇದರ ಪರಿಣಾಮಕ್ಕೆ ಒಳಗಾಗಿತ್ತು. ಆದರೀಗ ಭಾರತ-ಜಿಂಬಾಬ್ವೆ ನಡುವೆ ಪೂರ್ಣ ಪಂದ್ಯ ನಡೆಯಲಿದ್ದು ವರುಣ ಅಡ್ಡಿಪಡಿಸುವ ಲಕ್ಷಣ ಇಲ್ಲ ಎನ್ನಲಾಗಿದೆ.
Published On - 7:46 am, Sun, 6 November 22