ಕೊಡಗಿನಲ್ಲಿ ಹುತ್ತರಿ ಸಂಭ್ರಮ: ಕೊಡವರ ಮನೆಗೆ ಧಾನ್ಯಲಕ್ಷ್ಮಿ ಆಗಮನ
ಕೊಡಗು ಜಿಲ್ಲೆಯಾದ್ಯಂತ ಹುತ್ತರಿ ಹಬ್ಬದ ಸಂಭ್ರಮ. ಧಾನ್ಯಲಕ್ಷ್ಮಿಯನ್ನು ಗದ್ದೆಯಿಂದ ಮನೆಗಳಿಗೆ ತುಂಬಿಸಿಕೊಳ್ಳೋ ಸಂತಸ. ಕೊಡವರ ಜನಪದ ಕಲೆಗಳು ಅನಾವರಣವಾಗುವುದು ಇದೇ ಹಬ್ಬದಲ್ಲಿ. ಸುಗ್ಗಿಹಬ್ಬ ಎಂದೇ ಪ್ರಸಿದ್ಧಿಯಾದ ಕೊಡಗಿನ ಹುತ್ತರಿ ಹಬ್ಬ ಹೇಗೆ ನಡೀತು ಅನ್ನೋದು ಇಲ್ಲಿದೆ ಓದಿ.
ಕೊಡಗು: ಜಿಲ್ಲೆಯಾದ್ಯಂತ ನಿನ್ನೆ ಹುತ್ತರಿ ಹಬ್ಬದ ಸಂಭ್ರಮ. ಕೊಡಗಿನ ಸುಗ್ಗಿಹಬ್ಬವೆಂದೇ ಹೆಸರಾಗಿದ ಹುತ್ತರಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಹುತ್ತರಿ ಎಂದರೆ ಹೊಸ ಅಕ್ಕಿ ಎಂದರ್ಥ. ಕೊಡಗಿನಲ್ಲಿ ಪುತ್ತರಿ ಎಂದೇ ಫೇಮಸ್. ಅಂದರೆ ಒಂದು ಶುಭಮುಹೂರ್ತದಲ್ಲಿ ಭತ್ತದ ಗದ್ದೆಯಿಂದ ಧಾನ್ಯಲಕ್ಷ್ಮಿಯನ್ನು ವಿಜೃಂಭಣೆಯಿಂದ ಮನೆಗೆ ತಂದು ತುಂಬಿಸಿಕೊಳ್ಳುವುದೇ ಹಬ್ಬದ ವಿಶೇಷ.
ಕೇರಳದ ಓಣಂ ಹಬ್ಬ ಕಳೆದು ಸರಿಯಾಗಿ ಮೂರು ತಿಂಗಳಲ್ಲಿ ಈ ಹಬ್ಬ ನಡೆಯುತ್ತದೆ. ಹಬ್ಬವನ್ನು ಜಿಲ್ಲೆಯ ಹಲವೆಡೆ ಹಗಲು ಆಚರಣೆ ಮಾಡಿದರೆ ಮತ್ತೆ ಕೆಲವೆಡೆ ರಾತ್ರಿ ಆಚರಣೆ ಮಾಡುತ್ತಾರೆ. ದೀಪಾವಳಿಯಂತೆ ಕೊಡಗಿನಲ್ಲಿ ಹುತ್ತರಿ ಹಬ್ಬಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.
ಹಬ್ಬದ ದಿನ ಮೊದ್ಲು ಮನೆಯಲ್ಲಿ ನೆರೆಕಟ್ಟಿ, ನೈವೇಧ್ಯ ಅರ್ಪಿಸಿ ಹಿರಿಯರ ಮೂಲಕ ಮೆರವಣಿಗೆಯಲ್ಲಿ ಗದ್ದೆಗೆ ತೆರಳಲಾಗುತ್ತೆ. ಇಲ್ಲಿ ಭತ್ತದ ಗದ್ದೆಗೆ ಪೂಜೆ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿ ಎಲ್ಲಾರು ಒಟ್ಟಾಗಿ ಸಾಂಪ್ರದಾಯಿಕ ಉಡುಪಿನಲ್ಲಿ ಕದಿರು ಹಿಡಿದು ಮನೆಗೆ ಬರ್ತಾರೆ. ಹಬ್ಬದಲ್ಲಿ ತಂಬಿಟ್ಟು ಹಾಗೂ ಹುತ್ತರಿ ಗೆಣಸಿನ ಖಾದ್ಯಗಳನ್ನ ತಯಾರಿಸಿ ಭೋಜನ ಸವಿಯುತ್ತಾರೆ. ಇನ್ನು ಗದ್ದೆಯಲ್ಲಿ ಕದಿರು ತೆಗೆದ ಬಳಿಕ ಕೊಡಗಿನ ಸಾಂಪ್ರದಾಯಿಕ ನೃತ್ಯಕ್ಕೆ ಪುರುಷರು ಮಹಿಳೆಯರು ಹೆಜ್ಜೆ ಹಾಕಿದ್ರು.
ಒಟ್ನಲ್ಲಿ ವಿಶಿಷ್ಟ ಆಚರಣೆಯಿಂದಲೇ ಗಮನ ಸೆಳೆಯುವ ಹುತ್ತರಿ ಹಬ್ಬ ಸಂಭ್ರಮದಿಂದ ನೆರವೇರಿದೆ. ಕೊಡವರು ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲೂ ಹಬ್ಬದ ಮೆರಗು ಕಮ್ಮಿಯಾಗದಿರುವುದೇ ವಿಶೇಷ.