ಕೊರೊನಾ ಆತಂಕದ ನಡುವೆ ಮನಸ್ಸಿಗೆ ಮುದ ನೀಡುತ್ತಿದೆ ಗುಲ್ ಮೊಹರ್..
ಧಾರವಾಡ: ಮೇ ತಿಂಗಳಲ್ಲಿ ಧಾರವಾಡವನ್ನ ನೋಡೋ ಅಂದವೇ ಬೇರೆ. ಎಲ್ಲೆಡೆ ಬಿಸಿಲಿನ ಬೇಗೆಯಿಂದ ನೆಲವೆಲ್ಲಾ ಬಿಕೋ ಅನ್ನುತ್ತಿದ್ದರೆ ಧಾರವಾಡ ನಗರಿ ಮಾತ್ರ ಕೆಂಪು ಬಣ್ಣದ ಹೂವುಗಳಿಂದ ಎಲ್ಲರನ್ನ ಅಚ್ಚರಿಗೊಳಿಸುತ್ತೆ. ಸದ್ಯ ಬಿರು ಬಿಸಿಲಿನ ಮಧ್ಯೆಯೂ ರಸ್ತೆ ಬದಿಯಲ್ಲಿರೋ ಕೆಲ ಗಿಡಗಳು ಚೆಲುವೆಲ್ಲಾ ತಮ್ಮದೇ ಅಂತಾ ಬೀಗುತ್ತಿವೆ. ಎಲ್ಲೆಡೆ ಕೆಂಪು ಹೂವಿನದ್ದೇ ಪಾರುಪತ್ಯ. ಮೇ ತಿಂಗಳು ಬಂದ್ರೆ ಸಾಕು ವಿದ್ಯಾಕಾಶಿ ಧಾರವಾಡದ ಗಲ್ಲಿ ಗಲ್ಲಿಗಳಲ್ಲಿ ಈ ಗುಲ್ ಮೊಹರ್ ಅಥವಾ ಮೇ ಫ್ಲಾವರ್ಗಳದ್ದೇ ಕಾರುಬಾರು. ಪ್ರಕೃತಿಗೆ ಕೆಂಪು ಸೀರೆ […]
ಧಾರವಾಡ: ಮೇ ತಿಂಗಳಲ್ಲಿ ಧಾರವಾಡವನ್ನ ನೋಡೋ ಅಂದವೇ ಬೇರೆ. ಎಲ್ಲೆಡೆ ಬಿಸಿಲಿನ ಬೇಗೆಯಿಂದ ನೆಲವೆಲ್ಲಾ ಬಿಕೋ ಅನ್ನುತ್ತಿದ್ದರೆ ಧಾರವಾಡ ನಗರಿ ಮಾತ್ರ ಕೆಂಪು ಬಣ್ಣದ ಹೂವುಗಳಿಂದ ಎಲ್ಲರನ್ನ ಅಚ್ಚರಿಗೊಳಿಸುತ್ತೆ. ಸದ್ಯ ಬಿರು ಬಿಸಿಲಿನ ಮಧ್ಯೆಯೂ ರಸ್ತೆ ಬದಿಯಲ್ಲಿರೋ ಕೆಲ ಗಿಡಗಳು ಚೆಲುವೆಲ್ಲಾ ತಮ್ಮದೇ ಅಂತಾ ಬೀಗುತ್ತಿವೆ. ಎಲ್ಲೆಡೆ ಕೆಂಪು ಹೂವಿನದ್ದೇ ಪಾರುಪತ್ಯ. ಮೇ ತಿಂಗಳು ಬಂದ್ರೆ ಸಾಕು ವಿದ್ಯಾಕಾಶಿ ಧಾರವಾಡದ ಗಲ್ಲಿ ಗಲ್ಲಿಗಳಲ್ಲಿ ಈ ಗುಲ್ ಮೊಹರ್ ಅಥವಾ ಮೇ ಫ್ಲಾವರ್ಗಳದ್ದೇ ಕಾರುಬಾರು.
ಪ್ರಕೃತಿಗೆ ಕೆಂಪು ಸೀರೆ ಅಲಂಕಾರ: ಅದರಲ್ಲೂ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಗಳಲ್ಲಂತೂ ಈ ಗಿಡಗಳದ್ದೇ ರಾಜ್ಯಬಾರ ಮಾರ್ಚ್ ನಲ್ಲಿ ಹಚ್ಚ ಹಸಿರು ಎಲೆಗಳಿಂದ ತುಂಬಿರುತ್ತಿದ್ದ ಈ ಗಿಡಗಳು ಮೇ ಆರಂಭವಾಗುತ್ತಿದ್ದಂತೆಯೇ ತನ್ನೆಲ್ಲಾ ಎಲೆಗಳನ್ನ ಉದುರಿಸಿ, ಕೆಂಪು ಬಣ್ಣದ ಹೂವು ಮುಡಿದುಕೊಂಡು ಮದುವಣಗಿತ್ತಿಯಂತೆ ನಿಂತು ಬಿಡುತ್ತವೆ. ಮೂಲತಃ ಆಫ್ರಿಕಾ ಖಂಡದ ಮಡಗಾಸ್ಕರ್ ದ್ವೀಪದ ಈ ಗಿಡದ ವೈಜ್ಞಾನಿಕ ಹೆಸರು ಡೆಲೋನಿಕ್ಸ್ ರೇಬಿಯಾ(Delonix Ragia).
ಕಾಲಾಂತರದಲ್ಲಿ ತನ್ನ ಸೌಂದರ್ಯದಿಂದಲೇ ಎಲ್ಲರ ಮನಗೆದ್ದ ಇದು ಪ್ರಪಂಚದ ಎಲ್ಲ ದೇಶಗಳಿಗೂ ಪ್ರಯಾಣ ಬೆಳೆಸಿತು. ಮೇ ತಿಂಗಳಲ್ಲಷ್ಟೇ ಕೆಂಪು ಹೂವು ಬಿಡೋದ್ರಿಂದಲೇ ಇದಕ್ಕೆ ಮೇ ಫ್ಲಾವರ್ ಟ್ರೀ ಅಂತಾ ಕರೆಯಲಾಗುತ್ತೆ. ಬೇಗನೇ ಬೆಳೆಯೋ ಗುಣ ಹೊಂದಿರೋ ಈ ಗಿಡಗಳನ್ನ ಹೆಚ್ಚಾಗಿ ಉದ್ಯಾನವನಗಳಲ್ಲಿ ಬೆಳೆಸಲಾಗುತ್ತೆ. ಎಲ್ಲ ಪರಿಸರದಲ್ಲಿ ಬೆಳೆಯೋ ಗುಣ ಈ ಗಿಡದ ಮತ್ತೊಂದು ಪ್ಲಸ್ ಪಾಯಿಂಟ್.
ಮೇ ತಿಂಗಳು ಹೊರತುಪಡಿಸಿ ಉಳಿದ ತಿಂಗಳಲ್ಲಿ ಹಚ್ಚ ಹಸಿರಿನ ಎಲೆಗಳಿಂದ ಸುಂದರವಾಗಿ ಕಾಣೋ ಈ ಗಿಡ, ಮೇ ನಲ್ಲಿ ಮಾತ್ರ ಕೆಂಪನೆಯ ಹೂವುಗಳಿಂದ ತನ್ನನ್ನ ತಾನು ಸಿಂಗರಿಸಿಕೊಳ್ಳೋದಲ್ಲದೇ ಪರಿಸರವನ್ನೂ ಸಿಂಗರಿಸುತ್ತೆ. ಹೀಗಾಗಿ ರಸ್ತೆ ಬದಿಗಳಲ್ಲಿ, ಕಚೇರಿಗಳ ಸುತ್ತಲೂ, ಉದ್ಯಾನವನಗಳ ಮಧ್ಯೆ ಈ ಗಿಡಗಳನ್ನ ಬೆಳೆಸಿ, ಪರಿಸರದ ಸೌಂದರ್ಯ ವೃದ್ಧಿಸಲಾಗುತ್ತೆ. ಒಟ್ಟಿನಲ್ಲಿ ಮೇ ತಿಂಗಳಲ್ಲಿ ಧಾರವಾಡದ ರಸ್ತೆಗಳಲ್ಲಿ ಓಡಾಡೋ ಜನರಿಗೆ ಈ ಕೆಂಪು ಹೂವುಗಳು ಮನಸ್ಸಿಗೆ ಆಹ್ಲಾದಕರ ಅನುಭೂತಿ ನೀಡೋದಂತೂ ಸತ್ಯ. (ಬರಹ-ನರಸಿಂಹಮೂರ್ತಿ ಪ್ಯಾಟಿ)
Published On - 2:53 pm, Thu, 21 May 20