ಬೆಳ್ಳಿಮೋಡಗಳ ಮಧ್ಯೆ ಅರಳಿದ ಬೆಂಕಿ ಉಂಗುರ, ಕಂಕಣ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನ
ಬೆಂಗಳೂರು: ಇಂದು ಇಡೀ ಜಗತ್ತೇ ಕೌತುಕವನ್ನು ಕಣ್ತುಂಬಿಕೊಂಡಿದೆ. ಜಗವ ಬೆಳಗೋ ಸೂರ್ಯ ವಿಶಿಷ್ಟ ರೀತಿಯಲ್ಲಿ ದರ್ಶನ ಕೊಟ್ಟಿದ್ದಾನೆ. ಸೌರಮಂಡಲದಲ್ಲಿ ಬೆಂಕಿಯುಂಗುರದಂತೆ ಪ್ರಜ್ವಲಿಸಿದ್ದಾನೆ. ಜಗತ್ತಿನಲ್ಲೇ ಮೊದಲು ದುಬೈ, ಅಬುಧಾಬಿಯಲ್ಲಿ ಬೆಳಗ್ಗೆ 9.07ಕ್ಕೆ ಕಂಕಣ ಸೂರ್ಯಗ್ರಹಣ ಗೋಚರಿಸಿದ್ದು, ಈ ಕೌತುಕವನ್ನು ಕೋಟ್ಯಂತರ ಜನ ಕಣ್ತುಂಬಿಕೊಂಡಿದ್ದಾರೆ. ಏನಿದು ಕಂಕಣ ಸೂರ್ಯ ಗ್ರಹಣ..? ಸೂರ್ಯ, ಚಂದ್ರ, ಭೂಮಿ ಸರಳ ರೇಖೆಯಲ್ಲಿ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತೆ. ಸೂರ್ಯನ ಎಷ್ಟು ಭಾಗವನ್ನ ಚಂದ್ರ ಮರೆ ಮಾಡುತ್ತೆ ಅನ್ನೋದ್ರ ಮೇಲೆ ಗ್ರಹಣ ನಿರ್ಧಾರವಾಗುತ್ತೆ. ಗ್ರಹಣ ಖಗ್ರಾಸವೋ, […]
ಬೆಂಗಳೂರು: ಇಂದು ಇಡೀ ಜಗತ್ತೇ ಕೌತುಕವನ್ನು ಕಣ್ತುಂಬಿಕೊಂಡಿದೆ. ಜಗವ ಬೆಳಗೋ ಸೂರ್ಯ ವಿಶಿಷ್ಟ ರೀತಿಯಲ್ಲಿ ದರ್ಶನ ಕೊಟ್ಟಿದ್ದಾನೆ. ಸೌರಮಂಡಲದಲ್ಲಿ ಬೆಂಕಿಯುಂಗುರದಂತೆ ಪ್ರಜ್ವಲಿಸಿದ್ದಾನೆ. ಜಗತ್ತಿನಲ್ಲೇ ಮೊದಲು ದುಬೈ, ಅಬುಧಾಬಿಯಲ್ಲಿ ಬೆಳಗ್ಗೆ 9.07ಕ್ಕೆ ಕಂಕಣ ಸೂರ್ಯಗ್ರಹಣ ಗೋಚರಿಸಿದ್ದು, ಈ ಕೌತುಕವನ್ನು ಕೋಟ್ಯಂತರ ಜನ ಕಣ್ತುಂಬಿಕೊಂಡಿದ್ದಾರೆ.
ಏನಿದು ಕಂಕಣ ಸೂರ್ಯ ಗ್ರಹಣ..? ಸೂರ್ಯ, ಚಂದ್ರ, ಭೂಮಿ ಸರಳ ರೇಖೆಯಲ್ಲಿ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತೆ. ಸೂರ್ಯನ ಎಷ್ಟು ಭಾಗವನ್ನ ಚಂದ್ರ ಮರೆ ಮಾಡುತ್ತೆ ಅನ್ನೋದ್ರ ಮೇಲೆ ಗ್ರಹಣ ನಿರ್ಧಾರವಾಗುತ್ತೆ. ಗ್ರಹಣ ಖಗ್ರಾಸವೋ, ಪಾರ್ಶ್ವವೋ ಅಥವಾ ಕಂಕಣವೋ ಅಂತ ನಿರ್ಧಾರ ಮಾಡಲಾಗುತ್ತೆ. ಇಂದಿನ ಕಂಕಣ ಸೂರ್ಯ ಗ್ರಹಣ ಸಮಯದಲ್ಲಿ ಚಂದ್ರನು ಭೂಮಿಯಿಂದ ದೂರದಲ್ಲಿದ್ದು, ಗಾತ್ರವು ಸೂರ್ಯನಿಗಿಂತ ಚಿಕ್ಕದಾಗಿ ಗೋಚರಿಸುವುದರಿಂದ ಸೂರ್ಯನ 93% ಭಾಗವನ್ನ ಮಾತ್ರ ಮರೆಮಾಡಿ ವೃತ್ತದೊಳಗೊಂದು ವೃತ್ತದಂತೆ ಗೋಚರಿಸುತ್ತೆ. ಚಂದ್ರನಿಂದ ಮರೆಯಾಗದ ಸೂರ್ಯನ ಪರಿಧಿಯ ಭಾಗ ಬೆಂಕಿಯ ಬಳೆಯಂತೆ ಹೊಳೆಯುತ್ತೆ.
ಯಾವಾಗ ಆರಂಭ..? ಯಾವಾಗ ಮೋಕ್ಷ..? ಕಂಕಣ ಸೂರ್ಯ ಗ್ರಹಣ ಬೆಳಗ್ಗೆ 8.04 ನಿಮಿಷಕ್ಕೆ ಪ್ರಾರಂಭವಾಗಿ 11.04ಕ್ಕೆ ಮುಗಿದಿದೆ. 9.24ಕ್ಕೆ ಕಂಕಣ ಗ್ರಹಣ ಸಂಭವಿಸಿ ಚಂದ್ರನ ಪರಿಧಿ ಸುತ್ತಲೂ ಸೂರ್ಯನ ಅಂಚು ಪ್ರಜ್ವಲಿಸಿದೆ. ಗ್ರಹಣ ಮಾರ್ಗದ ನೆರಳು ಸೆಕೆಂಡಿಗೆ 1.1 ಕಿ.ಮೀ ವೇಗದಲ್ಲಿ ಚಲಿಸಿ 12,900 ಕಿ.ಮೀ. ಪಥ ಕ್ರಮಿಸಿ, ಭೂಮಿಯ ಶೇಕಡಾ 0.3ರಷ್ಟು ಜಾಗದಲ್ಲಿ ಕಂಕಣ ಸೂರ್ಯ ಗ್ರಹಣವು ದರ್ಶನವಾಗಿದೆ. ತಮಿಳುನಾಡಿನ ತಿರುಪ್ಪೂರ್ ಮತ್ತು ಮರೀನಾ ದ್ವೀಪದಲ್ಲಿ 3 ನಿಮಿಷಕ್ಕೂ ಹೆಚ್ಚು ಕಾಲ ಗೋಚರವಾಗಿದೆ.
ಎಲ್ಲೆಲ್ಲಿ ‘ಕಂಕಣ’ ಗೋಚರ..? ಕಂಕಣ ಸೂರ್ಯಗ್ರಹಣವು ಕರ್ನಾಟಕ, ಕೇರಳ & ತಮಿಳುನಾಡಿನ ಭಾಗಗಳಲ್ಲಿ ಗೋಚರಿಸಿದೆ. ಭಾರತದ ಉಳಿದ ಭಾಗಗಳಲ್ಲಿ ಗ್ರಹಣವು ಪಾರ್ಶ್ವ ಸೂರ್ಯ ಗ್ರಹಣದಂತೆ ಗೋಚರವಾಗಿದೆ. ಆಸ್ಟ್ರೇಲಿಯಾ, ಫಿಲಿಪ್ಪೀನ್ಸ್, ಸೌದಿ ಅರೇಬಿಯಾ, ಸಿಂಗಾಪುರ ಮತ್ತಿತರ ದೇಶಗಳಲ್ಲೂ ಗೋಚರವಾಗಿದೆ. 2019ರ ಜನವರಿ 6, ಜುಲೈ 2ರಂದು ದೇಶದಲ್ಲಿ ಪಾರ್ಶ್ವ ಸೂರ್ಯ ಗ್ರಹಣವು ಸಂಭವಿಸಿತ್ತು.
ಎಷ್ಟು ಪ್ರಮಾಣದಲ್ಲಿ ಗೋಚರ..? ಈ ಬಾರಿ ಮಂಗಳೂರಿನಲ್ಲಿ ಅತಿ ಹೆಚ್ಚು 93.04% ರಷ್ಟು ಕಂಕಣ ಸೂರ್ಯ ಗ್ರಹಣ ಗೋಚರವಾಗಿದೆ. ಶಿವಮೊಗ್ಗ – 89.96%, ಬೆಂಗಳೂರು-89.54%, ಹುಬ್ಬಳ್ಳಿ-86.24%, ವಿಜಯಪುರ-80.64% ಗೋಚರವಾಗಿದೆ. ರಾಜ್ಯದಲ್ಲಿ ಮುಂದಿನ ಕಂಕಣ ಸೂರ್ಯಗ್ರಹಣ 45 ವರ್ಷ ಬಳಿಕ ಫೆ.17, 2064ಕ್ಕೆ ಗೋಚರವಾಗಲಿದ್ದು, ರಾಜ್ಯದಲ್ಲಿ ಸಂಪೂರ್ಣ ಸೂರ್ಯ ಗ್ರಹಣ 149 ವರ್ಷ ಬಳಿಕ ಜುಲೈ 5, 2168ಕ್ಕೆ ಗೋಚರವಾಗಲಿದೆ.
ಸೂರ್ಯ ಗ್ರಹಣದ ಲೆಕ್ಕಾಚಾರ..! ಈ ಶತಮಾನದಲ್ಲಿ 224 ಸೂರ್ಯ ಗ್ರಹಣ ಸಂಭವಿಸಿದ್ದು, 77 ಪಾರ್ಶ್ವ, 72 ಕಂಕಣ, 68 ಖಗ್ರಾಸ, 7 ಕಂಕಣ ಖಗ್ರಾಸ ಗ್ರಹಣಗಳಾಗಿವೆ ಅಂತ ನಾಸಾದ ‘ಗೊಡ್ಡಾರ್ಡ್ ಸ್ಪೇಸ್ ಸೆಂಟರ್’ ಮಾಹಿತಿ ನೀಡಿದೆ. ರಾಜ್ಯದಲ್ಲಿ ಕಳೆದ ಶತಮಾನದಲ್ಲಿ 31 ಸೂರ್ಯಗ್ರಹಣ, ಈ ಶತಮಾನದಲ್ಲಿ 32 ಗ್ರಹಣಗಳಿರಲಿವೆ. ಇಂದು ಹಾಗೂ ಫೆಬ್ರವರಿ 17, 2064ರಲ್ಲಿ ಸಂಭವಿಸುವ ಗ್ರಹಣ ಕಂಕಣ ಗ್ರಹಣಗಳಾಗಿರುತ್ತವೆ.
https://www.facebook.com/Tv9Kannada/videos/466016207645813/
Published On - 11:44 am, Thu, 26 December 19