Azadi ka amrit mahotsav Part 3: ಹೋಮಿ ಬಾಬಾ ವಿಮಾನ ಅಪಘಾತದಲ್ಲಿ ಸಾವು -1968ರಲ್ಲಿ ತ್ರಿಭಾಷಾ ಸೂತ್ರ ಆಳವಡಿಕೆ -ಇಂದಿರಾಗಾಂಧಿಯ ದಿಟ್ಟ ತೀರ್ಮಾನಗಳು
75 Independence Day: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷವಾಗಿದೆ. ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
Important Highlight
Azadi ka amrit mahotsav: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣವಾಗಿದೆ. 75 ವರ್ಷದಲ್ಲಿ ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಭಾರತವು ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆ, ಮೈಲಿಗಲ್ಲು, ಏಳು-ಬೀಳುಗಳು, ಪ್ರಮುಖ ಘಟನಾವಳಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
- 21. ಹೋಮಿಬಾಬಾ ವಿಮಾನ ಅಪಘಾತದಲ್ಲಿ ಸಾವು: ಹೋಮಿ ಜಹಂಗೀರ್ ಬಾಬಾ, ಭಾರತದ ಅಣ್ವಸ್ತ್ರ ಕಾರ್ಯಕ್ರಮದ ಪಿತಾಮಹ ಎಂದೇ ಖ್ಯಾತರಾದವರು. ಮುಂಬೈನ ಟಾಟಾ ಇನ್ಸ್ ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯ ಸ್ಥಾಪಕ ನಿರ್ದೇಶಕರು. ಅಟಾಮಿಕ್ ಎನರ್ಜಿ ಸಂಸ್ಥೆಯ ಸ್ಥಾಪಕ ನಿರ್ದೇಶಕರು . ಗುಜರಾತ್‌ನ ಪಾರ್ಸಿ ಸಮುದಾಯದ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಹೋಮಿ ಜಹಂಗೀರ್ ಬಾಬಾ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದವರು. ಬಳಿಕ 1939ರಲ್ಲಿ ಭಾರತಕ್ಕೆ ಬಂದು ಬೆಂಗಳೂರಿನ ಐಐಎಸ್ಸಿಯಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ರೀಡರ್ ಆಗಿದ್ದರು. ಭಾರತದಲ್ಲಿ ಅಣ್ವಸ್ತ್ರ ಅಭಿವೃದ್ದಿಪಡಿಸುವ ಹೊಣೆಗಾರಿಕೆಯನ್ನು ಜವಾಹರ್ ಲಾಲ್ ನೆಹರು ಹೋಮಿ ಜಹಂಗೀರ್ ಬಾಬಾಗೆ 1948 ರಲ್ಲಿ ನೀಡಿದ್ದರು. ಭಾರತದಲ್ಲಿ ಲಭ್ಯ ಇದ್ದ ಥೋರಿಯಂ ಸಂಪನ್ಮೂಲ ಬಳಸಿಕೊಂಡು ಅಣ್ವಸ್ತ್ರ ಅಭಿವೃದ್ದಿಯಲ್ಲಿ ಹೋಮಿ ಜಹಂಗೀರ್ ಬಾಬಾ ತೊಡಗಿದ್ದರು. ಆದರೇ, ಭಾರತವು ಅಣ್ವಸ್ತ್ರ ರಾಷ್ಟ್ರವಾಗುವುದು ಆಮೆರಿಕಾಗೆ ಇಷ್ಟ ಇರಲಿಲ್ಲ. ಹೀಗಾಗಿ ಹೋಮಿ ಜಹಂಗೀರ್ ಬಾಬಾರನ್ನು ವಿಮಾನ ಅಪಘಾತದಲ್ಲಿ ಆಮೆರಿಕಾವೇ ಹತ್ಯೆ ಮಾಡಿತ್ತು ಎಂಬ ಕುತಂತ್ರದ ಕಥೆಗಳೂ ಇವೆ. 1966ರ ಜನವರಿ 24 ರಂದು ಏರ್ ಇಂಡಿಯಾ ಬೋಯಿಂಗ್ ವಿಮಾನದಲ್ಲಿ ಹೋಮಿ ಜಹಂಗೀರ್ ಬಾಬಾ ಪ್ರಯಾಣಿಸುವಾಗ ವಿಮಾನವು ಮೌಂಟ್ ಬ್ಲಾಕ್ ಪರ್ವತದ ಮೇಲೆ ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಹೋಮಿ ಜಹಂಗೀರ್ ಬಾಬಾ ಸಾವನ್ನಪ್ಪಿದ್ದರು. ಆಮೆರಿಕಾದ ಗುಪ್ತಚರ ಸಂಸ್ಥೆ ಸಿಐಎ, ವಿಮಾನದಲ್ಲಿ ಬಾಂಬ್ ಇಟ್ಟು ಮೌಂಟ್ ಬ್ಲಾಕ್ ಪರ್ವತದಲ್ಲಿ ಸ್ಪೋಟಿಸಿತು ಎಂದು ಸಿಐಎ ಏಜೆಂಟ್ ರಾಬರ್ಟ್ ಕ್ಲೌನ್ಲಿ, ಪತ್ರಕರ್ತ ಗ್ರೋಗೇರಿ ಡೌಗಲ್ಸ್ ಗೆ ನೀಡಿದ್ದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಪ್ರಧಾನಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಗೂ ವಿಜ್ಞಾನಿ ಹೋಮಿ ಜಹಂಗೀರ್ ಬಾಬಾ 13 ದಿನಗಳ ಅಂತರದಲ್ಲಿ ಸಿಐಎ ಕೈವಾಡದಿಂದ ಸಾವನ್ನಪ್ಪಿದ್ದಾರೆ ಎಂಬ ಆರೋಪ ಇದೆ.
- 22. ಶಾಸ್ತ್ರಿ ನಿಧನದ ನಂತರ ಇಂದಿರಾ ಪ್ರಧಾನಿ ಹುದ್ದೆಗೆ: ಲಾಲ್ ಬಹಾದ್ದೂರ್ ಶಾಸ್ತ್ರಿ ನಿಧನ ನಂತರ ಗುಲ್ಜಾರಿ ಲಾಲ್ ನಂದಾ 13 ದಿನಗಳ ಕಾಲ ದೇಶದ ಹಂಗಾಮಿ ಪ್ರಧಾನಿಯಾಗಿದ್ದರು . ಬಳಿಕ 1966ರ ಜನವರಿ 24 ರಂದು ಇಂದಿರಾಗಾಂಧಿ ಪ್ರಧಾನಿ ಹುದ್ದೆಗೇರಿದ್ದರು. ನೆಹರು ನಿಧನ ನಂತರ ಆಗ ಕಾಂಗ್ರೆಸ್ ಪಕ್ಷದಲ್ಲಿದ್ದ ಮೋರಾರ್ಜಿ ದೇಸಾಯಿ ಕೂಡ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೇ, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಕಾಮರಾಜ್ ಇಂದಿರಾಗಾಂಧಿರನ್ನು ಪ್ರಧಾನಿಯಾಗಲು ಮನವೊಲಿಸಿ ಕಣಕ್ಕಿಳಿಸಿದ್ದರು. ನೆಹರು ಪುತ್ರಿ ಇಂದಿರಾ, 1966 ರಿಂದ 1977ರವರೆಗೆ ದೇಶದ ಪ್ರಧಾನಿಯಾಗಿದ್ದರು . ಬಳಿಕ 1980 ರಿಂದ 1984ರ ಆಕ್ಟೋಬರ್ ವರೆಗೂ ದೇಶದ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದರು. 15 ವರ್ಷಗಳ ದೇಶದ ಪ್ರಧಾನಿಯಾಗಿ ಸುದೀರ್ಘ ಆಳ್ವಿಕೆ ನಡೆಸಿದ ಹಿರಿಮೆ ಇಂದಿರಾಗಾಂಧಿ ಅವರಿಗೆ ಸಲ್ಲುತ್ತೆ. ಪ್ರಾರಂಭದಲ್ಲಿ ಮಹಿಳೆಯಾದ ಕಾರಣ ಇಂದಿರಾಗಾಂಧಿ ದುರ್ಬಲ ಪ್ರಧಾನಿಯಾಗ್ತಾರೆ, ತಮ್ಮ ಕೈಗೊಂಬೆ ಪ್ರಧಾನಿಯಾಗ್ತಾರೆ , ತಾವು ಇಂದಿರಾಗಾಂಧಿರನ್ನು ನಿಯಂತ್ರಿಸಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕರು ಲೆಕ್ಕಾಚಾರ ಹಾಕಿದ್ದರು. ಆದರೇ, ವರ್ಷಗಳು ಕಳೆದಂತೆ, ಕಾಂಗ್ರೆಸ್ ನಾಯಕರ ಲೆಕ್ಕಾಚಾರ ತಲೆಕೆಳಗು ಮಾಡಿ ಇಂದಿರಾಗಾಂಧಿ ತಾವೇ ಎಲ್ಲ ತೀರ್ಮಾನ ಕೈಗೊಳ್ಳುತ್ತಿದ್ದರು. ಜನರು, ನಾಯಕರು ತಮ್ಮ ಬಗ್ಗೆ ಹೊಂದಿದ್ದ ಭಾವನೆಯನ್ನು ಬದಲಾಯಿಸಿಕೊಳ್ಳುವಂತೆ ಮಾಡುವ ಮೂಲಕ ತಾವು ಗೂಂಗಿ ಗೂಡಿಯಾ ಅಲ್ಲ, ಐರನ್ ಲೇಡಿ ಎಂದು ಸಾಬೀತುಪಡಿಸಿದ್ದರು . ಇಂದಿರಾಗಾಂಧಿರನ್ನು ಐರನ್ ಲೇಡಿ ಎಂದೇ ಜನರು ಕರೆಯುತ್ತಿದ್ದರು.
- 23. 1967ರಲ್ಲಿ ಡೋಕ್ಲಾಮ್ ಗಡಿಯಲ್ಲಿ ಹೊಡೆದಾಟ: ಭಾರತ-ಚೀನಾದ ಸೈನಿಕರ ನಡುವೆ ಆಗ್ಗಾಗ್ಗೆ ಘರ್ಷಣೆಗಳು ನಡೆದಿವೆ. ಮ್ಯಾಕ್ ಮೋಹನ್ ಗಡಿರೇಖೆಯನ್ನು ಚೀನಾದ ಸೈನಿಕರು ಅನೇಕ ಬಾರಿ ಉಲಂಘಿಸಿದ್ದಾರೆ. ಆಗ ಎಲ್ಲ ಭಾರತದ ಸೈನಿಕರು ಪ್ರತಿರೋಧ ತೋರಿದ್ದಾರೆ. ಪರಸ್ಪರರ ವಿರುದ್ಧ ಕಲ್ಲು ತೂರಾಟ ಮಾಡಿದ್ದಾರೆ. ಗಡಿಯಲ್ಲಿ ಸೈನಿಕರ ರಕ್ತದ ಹೊಳೆಯೇ ಹರಿದಿದೆ. 1960ರಲ್ಲಿ ಆಕ್ಸಾಯ್ ಚೀನಾ ಗಡಿಯಲ್ಲಿ ಎರಡೂ ಸೇನೆಗಳ ನಡುವೆ ಕಲ್ಲು ತೂರಾಟ ನಡೆದಿತ್ತು. 1967ರಲ್ಲಿ ಡೋಕ್ಲಾಮ್ ಗಡಿಯಲ್ಲಿ ಭಾರತ -ಚೀನಾ ಸೇನೆಗಳು ಎರಡು ತಿಂಗಳವರೆಗೂ ಪರಸ್ಪರ ಮುಖಾಮುಖಿಯಾಗಿದ್ದವು . 1967ರ ಸೆಪ್ಟೆಂಬರ್ ನಲ್ಲಿ ಭಾರತ-ಚೀನಾ ಸೈನಿಕರ ನಡುವೆ ರಕ್ತಸಿಕ್ತ ಹೊಡೆದಾಟ ನಡೆದಿತ್ತು. ಈ ಸಂಘರ್ಷದಲ್ಲಿ 300 ಮಂದಿ ಚೀನಾದ ಸೈನಿಕರು, 200 ಮಂದಿ ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಎರಡೂ ದೇಶಗಳ ಸೈನಿಕರು ದೊಣ್ಣೆ-ಕಲ್ಲುಗಳನ್ನು ಹಿಡಿದುಕೊಂಡು ಹೊಡೆದಾಡಿದ್ದರು.
- 24. 1968ರಲ್ಲಿ ತ್ರಿಭಾಷಾ ಸೂತ್ರ ಆಳವಡಿಕೆ: ಭಾರತದಲ್ಲಿ 1964 ರಿಂದ 66ರ ಅವಧಿಯಲ್ಲಿ ಶಿಕ್ಷಣ ಆಯೋಗವು ದೇಶದಲ್ಲಿ ತ್ರಿಭಾಷಾ ಸೂತ್ರ ಆಳವಡಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಇದರ ಬಗ್ಗೆ ಚರ್ಚೆ ನಡೆದು ಭಾರತದ ಸಂಸತ್ 1968ರಲ್ಲಿ ತ್ರಿಭಾಷಾ ಸೂತ್ರದ ನಿಯಮವನ್ನು ಅಂಗೀಕರಿಸಿತ್ತು. ಇದರ ಪ್ರಕಾರ, ಭಾರತದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಹಿಂದಿ, ಇಂಗ್ಲೀಷ್ ಜೊತೆಗೆ ತಮ್ಮ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಕಲಿಯುವ ಅವಕಾಶ ನೀಡಲಾಗಿತ್ತು. ದಕ್ಷಿಣದ ಕರ್ನಾಟಕ, ತಮಿಳುನಾಡು ರಾಜ್ಯಗಳ ಬೇಡಿಕೆಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ತ್ರಿಭಾಷಾ ಸೂತ್ರ ರೂಪಿಸಿತ್ತು. ಆದರೇ, ತಮಿಳುನಾಡಿನ ಸಿಎಂ ಆಗಿದ್ದ ಸಿ.ಎನ್.ಅಣ್ಣಾದೊರೈ ತ್ರಿಭಾಷಾ ಸೂತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ತಮಿಳುನಾಡು ತ್ರಿಭಾಷಾ ಸೂತ್ರ ಪಾಲಿಸುತ್ತಿಲ್ಲ. ತಮಿಳುನಾಡಿನಲ್ಲಿ ಹಿಂದಿ ಭಾಷೆಯ ಹೇರಿಕೆಯನ್ನು ಮಾಡಲಾಗುತ್ತಿದೆ ಎಂದು ದ್ರಾವಿಡ ಪಕ್ಷಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದವು. ತಮಿಳುನಾಡಿನಲ್ಲಿ ಹಿಂದಿ ಭಾಷೆ ಹೇರಿಕೆ ಮಾಡಲಾಗುತ್ತಿದೆ ಎಂದು ದೊಡ್ಡ ಹೋರಾಟವನ್ನು ಜನರು, ದ್ರಾವಿಡ ಪಕ್ಷಗಳು ನಡೆಸಿದ್ದವು. 1986ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ತ್ರಿಭಾಷಾ ಸೂತ್ರವನ್ನು ಮುಂದುವರಿಸಲಾಗಿತ್ತು.
- 25. ಪಾಕಿಸ್ತಾನದ ವಿರುದ್ಧ 1971ರಲ್ಲಿ ಭಾರತಕ್ಕೆ ಜಯ: 1971ರಲ್ಲಿ ಪಾಕಿಸ್ತಾನವು ಪೂರ್ವ ಪಾಕಿಸ್ತಾನವಾದ ಬಾಂಗ್ಲಾದೇಶದ ಮೇಲೆ ದಬ್ಬಾಳಿಕ, ದೌರ್ಜನ್ಯ ನಡೆಸಿತ್ತು. ಪೂರ್ವ ಪಾಕಿಸ್ತಾನ ಅಭಿವೃದ್ದಿಯಲ್ಲಿ ಹಿಂದುಳಿದಿತ್ತು. ಪಾಕಿಸ್ತಾನದ ಸೈನಿಕರು ಪೂರ್ವ ಪಾಕಿಸ್ತಾನದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದರು. ಇದರಿಂದಾಗಿ ಪೂರ್ವ ಪಾಕಿಸ್ತಾನದ ಜನರು ಭಾರತದತ್ತ ಆಶ್ರಯ ಕೋರಿ ವಲಸೆ ಬರಲಾರಂಭಿಸಿದ್ದರು. ಪೂರ್ವ ಪಾಕಿಸ್ತಾನದ ಜನರ ಮಾನವ ಹಕ್ಕುಗಳ ಉಲಂಘನೆಯಾಗುತ್ತಿತ್ತು. ಆಗ ಬಾಂಗ್ಲಾದೇಶದ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ ಭಾರತದ ಪ್ರಧಾನಿ ಇಂದಿರಾಗಾಂಧಿ ಯುದ್ಧ ಘೋಷಿಸಿದ್ದರು. ಯುದ್ಧದಲ್ಲಿ ಭಾರತವು ಪಾಕಿಸ್ತಾನದ ಸೇನೆಯನ್ನು ಸೋಲಿಸಿತ್ತು. ಪಾಕಿಸ್ತಾನದ ಸಾವಿರಾರು ಸೈನಿಕರನ್ನು ಭಾರತದ ಸೇನೆಯು ಜೀವಂತ ಸೆರೆ ಹಿಡಿದಿತ್ತು. ಬಳಿಕ ಪಾಕ್ ಸೇನೆಯು ಭಾರತಕ್ಕೆ ಶರಣಾದ ಬಳಿಕ ಪಾಕ್ ಸೈನಿಕರನ್ನು ಪಾಕಿಸ್ತಾನದ ವಶಕ್ಕೆ ಒಪ್ಪಿಸಲಾಯಿತು. ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟ ಖ್ಯಾತಿ ಇಂದಿರಾಗಾಂಧಿಗೆ ಸಲ್ಲುತ್ತೆ. ಪಾಕ್ ವಿರುದ್ಧ ಭಾರತ ಯುದ್ಧದಲ್ಲಿ ಭರ್ಜರಿ ಜಯ ಗಳಿಸಿತ್ತು. ಆಗ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರೇ ಇಂದಿರಾಗಾಂಧಿರನ್ನು ದುರ್ಗೆ ಎಂದು ಕರೆದಿದ್ದರು. ಇಂದಿರಾಗಾಂಧಿಯ ಇಮೇಜ್ ವೃದ್ದಿಗೆ ಹಾಗೂ ನಾಯಕತ್ವ ಬಲವಾಗಲು ಯುದ್ಧದ ಜಯ ಕಾರಣವಾಯಿತು.
- 26. ಇಂದಿರಾಗಾಂಧಿಯ ದಿಟ್ಟ ತೀರ್ಮಾನಗಳು: ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿ ತಾವೊಬ್ಬ ಸ್ಟ್ರಾಂಗ್ ಪ್ರಧಾನಿ ಎಂಬುದನ್ನು ತಮ್ಮ ಕೆಲಸ ಹಾಗೂ ತೀರ್ಮಾನಗಳ ಮೂಲಕ ಸಾಬೀತುಪಡಿಸಿದ್ದರು . ಇಂದಿರಾಗಾಂಧಿ ವಿರುದ್ಧ ಪ್ರತಿಪಕ್ಷಗಳು ಇಂದಿರಾ ಹಠಾವೋ ಘೋಷಣೆ ಮೊಳಗಿಸಿದ್ದರು. ಆದರೇ, ಇದಕ್ಕೆ ಪ್ರತಿಯಾಗಿ ಇಂದಿರಾಗಾಂಧಿ ದೇಶದ ಗರೀಬಿ ಹಠಾವೋ ಘೋಷಣೆ ಮೊಳಗಿಸಿದ್ದರು . ಬಡತನ ನಿರ್ಮೂಲನೆ ಸೇರಿದಂತೆ 20 ಅಂಶಗಳ ಕಾರ್ಯಕ್ರಮಗಳನ್ನು ಪ್ರಧಾನಿಯಾಗಿ ಘೋಷಿಸಿದ್ದರು . ಉಳುವವನೇ ಭೂಮಿಯ ಒಡೆಯ ಕಾಯಿದೆಯನ್ನು ಜಾರಿಗೊಳಿಸಿದ್ದರು. ಇದರಿಂದ ಭೂಮಿ ಸಾಗುವಳಿ ಮಾಡುತ್ತಿದ್ದ ಬಡವರು ಭೂ ಮಾಲೀಕರಾದರು. ರಾಜ-ಮಹಾರಾಜರುಗಳಿಗೆ ಬೊಕ್ಕಸದಿಂದ ನೀಡುತ್ತಿದ್ದ ಹಣವನ್ನು ಸ್ಥಗಿತಗೊಳಿಸಿದ್ದರು. ಕಾಂಗ್ರೆಸ್ ಪಕ್ಷದ ಅಧಿಕೃತ ರಾಷ್ಟ್ರಪತಿ ಅಭ್ಯರ್ಥಿ ನೀಲಂ ಸಂಜೀವ್ ರೆಡ್ಡಿ ವಿರುದ್ಧ ವಿ.ವಿ.ಗಿರಿರನ್ನು ಬೆಂಬಲಿಸಿದ್ದರು. ಆತ್ಮಸಾಕ್ಷಿ ಮತ ಚಲಾವಣೆಗೆ ಕಾಂಗ್ರೆಸ್ ಶಾಸಕರು, ಸಂಸದರಿಗೆ ಇಂದಿರಾ ಕರೆ ಕೊಟ್ಟಿದ್ದರು. ಇಂದಿರಾ ಬೆಂಬಲಿತ ವಿ.ವಿ.ಗಿರಿ ರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದಿದ್ದರು. ಹಣಕಾಸು ಮಂತ್ರಿ ಮೋರಾರ್ಜಿ ದೇಸಾಯಿ ಜೊತೆಗೆ ಚರ್ಚೆ ನಡೆಸದೇ, 14 ಬ್ಯಾಂಕ್ ಗಳ ರಾಷ್ಟ್ರೀಕರಣ ಘೋಷಿಸಿದ್ದರು. ಇದರಿಂದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್.ನಿಜಲಿಂಗಪ್ಪ , ಇಂದಿರಾಗಾಂಧಿರನ್ನು ಅಶಿಸ್ತಿನ ಕಾರಣ ನೀಡಿ ಕಾಂಗ್ರೆಸ್ ಪಕ್ಷದಿಂದಲೇ ಉಚ್ಚಾಟಿಸಿದ್ದರು. ಆಗ ಡಿಎಂಕೆ ಬೆಂಬಲ ಪಡೆದು ಇಂದಿರಾ ಗಾಂಧಿ ಸರ್ಕಾರ ಉಳಿಸಿಕೊಂಡು ಪ್ರಧಾನಿಯಾಗಿ ಮುಂದುವರೆದರು.
- 27. 1974ರಲ್ಲಿ ಪ್ರೊಖ್ರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆ: ಭಾರತವು ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿತ್ತು. ಭಾರತವು ಅಣ್ವಸ್ತ್ರ ರಾಷ್ಟ್ರವಾಗಬೇಕೆಂಬ ಕನಸು 1944ರಲ್ಲೇ ಇತ್ತು. ಹೋಮಿ ಜಹಾಂಗೀರ್ ಬಾಬಾ ನೇತೃತ್ವದಲ್ಲಿ 1944ರಲ್ಲಿ ಟಾಟಾ ಇನ್ಸ್ ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯನ್ನು ಅಣ್ವಸ್ತ್ರ ಸಂಶೋಧನೆಗಾಗಿ ಸ್ಥಾಪಿಸಲಾಗಿತ್ತು. ಕನ್ನಡಿಗ ವಿಜ್ಞಾನಿ ರಾಜಾರಾಮಣ್ಣ ಕೂಡ ಅಣ್ವಸ್ತ್ರ ಸಂಶೋಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು . ಭಾರತಕ್ಕೆ ಸ್ವಾತಂತ್ರ ಬಂದ ಮೇಲೆ 1948ರಲ್ಲಿ ಅಟಾಮಿಕ್ ಎನರ್ಜಿ ಕಾಯಿದೆಯನ್ನು ಜಾರಿಗೆ ತಂದು ಶಾಂತಿಯುತ ಉದ್ದೇಶಗಳಿಗೆ ಅಣ್ವಸ್ತ್ರವನ್ನು ಅಭಿವೃದ್ದಿಪಡಿಸಲು ಅವಕಾಶ ಕೊಡಲಾಯಿತು. 1954ರಲ್ಲಿ ವಿಜ್ಞಾನಿ ಹೋಮಿ ಜಹಂಗೀರ್ ಬಾಬಾ ಅವರು ಅಣ್ವಸ್ತ್ರದ ವಿನ್ಯಾಸ ಮತ್ತು ಅಭಿವೃದ್ದಿಯನ್ನು ಮಾಡಿದ್ದರು. ಅಂತಿಮವಾಗಿ 1974ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅಣ್ವಸ್ತ್ರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದರು. 1974ರ ಮೇ, 18ರಂದು ರಾಜಸ್ಥಾನದ ಪೋಖ್ರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲಾಯಿತು. ಇದಕ್ಕೆ ಸ್ಮೈಲಿಂಗ್ ಬುದ್ಧ ಎಂದು ಎಂದು ಹೆಸರಿಡಲಾಗಿತ್ತು. ಯಶಸ್ವಿಯಾಗಿ ಭಾರತ ಅಣುಬಾಂಬ್ ಪರೀಕ್ಷೆ ನಡೆಸಿತ್ತು. ಈ ಮೂಲಕ ಅಣ್ವಸ್ತ್ರ ಹೊಂದಿದ್ದ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿತ್ತು. ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಗಿದ್ದರಿಂದ ದೇಶದಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಜನಪ್ರಿಯತೆ ಹೆಚ್ಚಾಗಿತ್ತು.
- 28. 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ: ಪ್ರಧಾನಿಯಾಗಿದ್ದ ಇಂದಿರಾಗಾಂಧಿ, 1974ರ ಲೋಕಸಭಾ ಚುನಾವಣೆಯಲ್ಲಿ ರಾಯಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೇ, ಇಂದಿರಾ ವಿರುದ್ಧ ಸೋತಿದ್ದ ರಾಜ್ ನಾರಾಯಣ್, ಚುನಾವಣೆಯಲ್ಲಿ ಇಂದಿರಾ ಗಾಂಧಿ ಆಕ್ರಮ ಎಸಗಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಅಲಹಾಬಾದ್ ಹೈಕೋರ್ಟ್, ಚುನಾವಣಾ ಆಕ್ರಮ ನಡೆದಿದೆ ಎಂದು ತೀರ್ಪು ನೀಡಿ, ಇಂದಿರಾಗಾಂಧಿ ಲೋಕಸಭೆಗೆ ಆಯ್ಕೆಯಾಗಿದ್ದನ್ನು ರದ್ದುಪಡಿಸಿತ್ತು. ಆಗ ಇಂದಿರಾಗಾಂಧಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಹುದ್ದೆಯಿಂದ ಕೆಳಗಿಳಿಯಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ಆದರೇ, ಪಶ್ಚಿಮ ಬಂಗಾಳದ ಸಿಎಂ ಆಗಿದ್ದ ಸಿದ್ದಾರ್ಥ ಶಂಕರ್ ರೇ ನೀಡಿದ್ದ ಸಲಹೆ ಮೇರೆಗೆ ದೇಶದಲ್ಲಿ ಸಂವಿಧಾನದ 352ನೇ ವಿಧಿಯಡಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವ ತೀರ್ಮಾನಕ್ಕೆ ಇಂದಿರಾಗಾಂಧಿ ಬಂದರು. 1975ರ ಜೂನ್ 25ರ ರಾತ್ರಿ ತುರ್ತು ಪರಿಸ್ಥಿತಿ ಘೋಷಣೆಯ ನಿರ್ಣಯವನ್ನು ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಆಲಿ ಅಹಮದ್‌ಗೆ ಕಳಿಸಲಾಗಿತ್ತು. ಇದಕ್ಕೆ ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹಮದ್ ಕಣ್ಣು ಮುಚ್ಚಿಕೊಂಡು ಸಹಿ ಹಾಕಿದ್ದರು. ರಾತ್ರಿಯೇ ದೇಶಾದ್ಯಂತ ಪ್ರತಿಪಕ್ಷಗಳ ನಾಯಕರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ದೆಹಲಿಯ ಗಾಂಧಿ ಭವನದಲ್ಲಿದ್ದ ಜಯಪ್ರಕಾಶ್ ನಾರಾಯಣ್ , ಬೆಂಗಳೂರಿನಲ್ಲಿದ್ದ ಲಾಲ್ ಕೃಷ್ಣ ಅಡ್ವಾಣಿರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಮಾನವ ಹಕ್ಕುಗಳ ದಮನವಾಯಿತು.
- 29. ತುರ್ತು ಪರಿಸ್ಥಿತಿಯಲ್ಲಿ ನಸಬಂಧಿ, ಅಂಧಾದರ್ಬಾರ್: ದೇಶದಲ್ಲಿ 1975ರಿಂದ 1977ರವರೆಗೂ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ದೇಶದ ಭದ್ರತೆಗೆ ಧಕ್ಕೆಯಾಗ್ತಾರೆ ಎಂಬ ಕಾರಣವೊಡ್ಡಿ ವಿರೋಧ ಪಕ್ಷಗಳ ನಾಯಕರನ್ನೆಲ್ಲಾ ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಪ್ರತಿಪಕ್ಷಗಳ ಅನೇಕ ನಾಯಕರು, ಕಾರ್ಯಕರ್ತರು ಭೂಗತರಾಗಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ್ದರು. ಪ್ರಧಾನಿ ಮೋದಿ ಕೂಡ ತುರ್ತು ಪರಿಸ್ಥಿತಿ ವಿರುದ್ಧ ಭೂಗತರಾಗಿ ವೇಷ ಬದಲಿಸಿಕೊಂಡು ಸಿಖ್ಖ್ ವೇಷಧಾರಿಯಾಗಿ ದೇಶದಲ್ಲಿ ಓಡಾಡುತ್ತಿದ್ದರು. ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ಆಗ ನಸಬಂಧಿ ಜಾರಿಗೆ ತಂದಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದ ಸಿಕ್ಕ ಸಿಕ್ಕ ಜನರನ್ನು ಆಸ್ಪತ್ರೆಗೆ ಕರೆ ತಂದು ಮಕ್ಕಳಾಗದಂತೆ ಅಪರೇಷನ್ ಮಾಡಲಾಗಿತ್ತು . ತುರ್ತು ಪರಿಸ್ಥಿತಿ ಕಾಲದಲ್ಲಿ ಮಾಧ್ಯಮಗಳ ಮೇಲೂ ನಿರ್ಬಂಧ ಹೇರಲಾಗಿತ್ತು. ಮಾಧ್ಯಮಗಳ ಸೆನ್ಸಾರ್ ಮಾಡಲಾಗಿತ್ತು . ತುರ್ತು ಪರಿಸ್ಥಿತಿ ಕಾಲದಲ್ಲಿ ಜನರ ಮೂಲಭೂತ ಹಕ್ಕುಗಳ ಅಮಾನತು ಮಾಡಲಾಗಿತ್ತು. ತುರ್ತು ಪರಿಸ್ಥಿತಿ ಕಾಲದಲ್ಲಿ ಸಂವಿಧಾನೇತರ ಶಕ್ತಿ ಸಂಜಯ್ ಗಾಂಧಿ ಪ್ರಮುಖ ತೀರ್ಮಾನ ಕೈಗೊಳ್ಳುತ್ತಿದ್ದರು. 1977ರ ಮಾರ್ಚ್ 21ರವರೆಗೂ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು.
- 30. 1977ರಲ್ಲಿ ಜನತಾ ಸರ್ಕಾರ ಆಸ್ತಿತ್ವಕ್ಕೆ: ದೇಶದಲ್ಲಿ 1977ರ ಮಾರ್ಚ್ 16ರಿಂದ 20ರವರೆಗೆ 6ನೇ ಲೋಕಸಭೆಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದೇ ಪ್ರಮುಖ ಚುನಾವಣಾ ವಿಷಯವಾಗಿತ್ತು. ವಿರೋಧ ಪಕ್ಷಗಳೆಲ್ಲಾ ಒಗ್ಗೂಡಿ ಇಂದಿರಾಗಾಂಧಿ ವಿರುದ್ಧ ಹೋರಾಟ ನಡೆಸಿದ್ದವು. ತುರ್ತು ಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ಹಾಗೂ ಪುತ್ರ ಸಂಜಯ್ ಗಾಂಧಿ ಅಂಧಾ ದರ್ಬಾರ್ ನಡೆಸಿದ್ದರು. ಇದರಿಂದ ದೇಶದಲ್ಲಿ ಇಂದಿರಾಗಾಂಧಿ ಜನಪ್ರಿಯತೆ ಕಳೆದುಕೊಂಡಿದ್ದರು. ಇಂದಿರಾಗಾಂಧಿ ವಿರೋಧಿ ಅಲೆಯಲ್ಲಿ ವಿರೋಧ ಪಕ್ಷಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದವು . ಇಂದಿರಾ ಕ್ಯಾಬಿನೆಟ್ ನಲ್ಲಿ ಹಣಕಾಸು ಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿ, ಇಂದಿರಾರಿಂದ ದೂರ ಸರಿದು, ಬೇರೆ ಪಕ್ಷ ಸ್ಥಾಪಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್(ಒ), ಭಾರತೀಯ ಜನಸಂಘ, ಭಾರತೀಯ ಲೋಕದಳ ಹಾಗೂ ಪ್ರಜಾ ಸೋಷಿಯಲಿಸ್ಟ್ ಪಕ್ಷಗಳು ಒಗ್ಗೂಡಿ ಮೈತ್ರಿ ಮಾಡಿಕೊಂಡು ಜನತಾ ಮೈತ್ರಿ ಹೆಸರಿನಲ್ಲಿ ಚುನಾವಣೆ ಎದುರಿಸಿದ್ದವು . ಭಾರತೀಯ ಲೋಕದಳ ಪಕ್ಷದ ಚುನಾವಣಾ ಚಿಹ್ನೆಯಡಿಯಲ್ಲೇ ನಾಲ್ಕು ಪಕ್ಷಗಳು ಚುನಾವಣೆ ಎದುರಿಸಿದ್ದವು. ದೇಶದಲ್ಲಿ ಪ್ರಜಾಪ್ರಭುತ್ವ ಇರಬೇಕೋ, ಸರ್ವಾಧಿಕಾರ ಇರಬೇಕೋ ಎಂಬುದನ್ನು ಚುನಾವಣೆ ನಿರ್ಧರಿಸಲಿ ಎಂದು ಪ್ರತಿಪಕ್ಷಗಳು ಹೇಳಿದ್ದವು. ಬಾಬು ಜಗಜೀವನ್ ರಾಮ್, ಹೇಮಾವತಿ ನಂದನ್ ಬಹುಗುಣ, ನಂದಿನಿ ಸತಪಥಿ ಸೇರಿದಂತೆ ಅನೇಕರು ಇಂದಿರಾಗಾಂಧಿ ಅವರ ಕಾಂಗ್ರೆಸ್ ಪಕ್ಷ ತ್ಯಜಿಸಿ ಪ್ರತಿಪಕ್ಷಗಳ ಪಾಳಯ ಸೇರಿದ್ದರು. ಅಂತಿಮವಾಗಿ ಚುನಾವಣೆಯಲ್ಲಿ ಜನತಾ ಪಾರ್ಟಿ ಮೈತ್ರಿಕೂಟವು ಶೇ.41 ರಷ್ಟು ಮತ ಪಡೆದು 295 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಶೇ.34 ರಷ್ಟು ಮತ ಪಡೆದು 154 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಷ್ಟೇ ಶಕ್ತವಾಯಿತು. ಕೇಂದ್ರದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ಪ್ರಧಾನಿಯಾಗಿ ಮೊರಾರ್ಜಿ ದೇಸಾಯಿ ಅಧಿಕಾರ ಸ್ವೀಕರಿಸಿದ್ದರು. (ಮುಂದುವರಿಯುವುದು)
ತಾಜಾ ಸುದ್ದಿ