‘ನಿಮ್ಮ ಅಜ್ಞಾನ ನಿಜಕ್ಕೂ ದಿಗ್ಭ್ರಮೆಗೊಳಿಸಿದೆ’; ಕಡ್ಡಿ ಮುರಿದಂತೆ ಹೇಳಿದ ನಟಿ ರಮ್ಯಾ
ದಕ್ಷಿಣದ ಭಾಷೆಗಳ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡುವುದು ಹಾಗೂ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವುದು ಎರಡು ಪ್ರತ್ಯೇಕವಾದ ವಿಚಾರ. ಅದನ್ನು ಅಜಯ್ ದೇವಗನ್ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಅನೇಕರು ಕಿವಿ ಹಿಂಡುತ್ತಿದ್ದಾರೆ.
ಅಜಯ್ ದೇವಗನ್ (Ajay Devgn) ಮಾಡಿರುವ ಒಂದು ಟ್ವೀಟ್ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳುವ ಮೂಲಕ ಅವರು ಪೇಚಿಗೆ ಸಿಲುಕಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದು ಸತ್ಯ. ಆದರೆ, ಈ ಮೊದಲು ಹಿಂದಿ ನಮ್ಮ ದೇಶದ ರಾಷ್ಟ್ರ ಭಾಷೆ ಎಂಬುದನ್ನು ತಲೆಯಲ್ಲಿ ತುಂಬಲಾಗಿತ್ತು. ಪಠ್ಯಗಳಲ್ಲೂ ಅದನ್ನೇ ಸೇರಿಸಲಾಗಿತ್ತು. ಆದರೆ, ಈಗ ಅನೇಕರಲ್ಲಿ ಜಾಗೃತಿ ಮೂಡಿದೆ. ‘ಹಿಂದಿ ನಮ್ಮ ರಾಷ್ಟ್ರ ಭಾಷೆ’ ಎಂಬ ಸುಳ್ಳನ್ನು ಹೇಳಿದರೆ ಜನರು ನಗುತ್ತಾರೆ. ಆದಾಗ್ಯೂ, ಅಜಯ್ ದೇವಗನ್ ಈ ಹೇಳಿಕೆಯನ್ನು ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ನಟಿ ರಮ್ಯಾ (Ramya) ಬೋಲ್ಡ್ ಹೇಳಿಕೆ ನೀಡಿದ್ದಾರೆ.
ಹಿಂದಿ ಬಗ್ಗೆ ಸುದೀಪ್ ಹೇಳಿದ ಮಾತು ಚರ್ಚೆ ಹುಟ್ಟು ಹಾಕಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ್ದ ಅಜಯ್ ದೇವಗನ್, ‘ನನ್ನ ಸಹೋದರ ಕಿಚ್ಚ ಸುದೀಪ್ ಅವರೇ.. ನಿಮ್ಮ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ನೀವೇಕೆ ರಿಲೀಸ್ ಮಾಡುತ್ತೀರಿ? ಅಂದು, ಇಂದು ಎಂದೆಂದಿಗೂ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಆಗಿರಲಿದೆ. ಜನ ಗಣ ಮನ’ ಎಂದಿದ್ದಾರೆ. ಅವರ ಈ ಮಾತಿಗೆ ಅನೇಕರಿಂದ ಖಂಡನೆ ವ್ಯಕ್ತವಾಗುತ್ತಿದೆ.
ರಮ್ಯಾ ಕೂಡ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿ ಉಳಿದಿಲ್ಲ. ಅಜಯ್ ದೇವಗನ್ ಅವರೇ ನಿಮ್ಮ ಅಜ್ಞಾನ ನನ್ನನ್ನು ದಿಗ್ಭ್ರಮೆಗೊಳಿಸಿದೆ. ಕೆಜಿಎಫ್, ಪುಷ್ಪ ಹಾಗೂ ಆರ್ಆರ್ಆರ್ ಹಿಂದಿ ಬೆಲ್ಟ್ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ಮಾಡಿರುವುದು ನಿಜಕ್ಕೂ ಗ್ರೇಟ್. ಕಲೆಗೆ ಭಾಷೆಯ ತಡೆ ಇಲ್ಲ. ನಿಮ್ಮ ಸಿನಿಮಾಗಳನ್ನು ನಾವು ನೋಡಿ ಆನಂದಿಸಿದಂತೆ ದಯವಿಟ್ಟು ನಮ್ಮ ಸಿನಿಮಾಗಳನ್ನು ನೋಡಿ ನೀವೂ ಆನಂದಿಸಿ’ ಎಂದು ಬರೆದುಕೊಂಡಿರುವ ಅವರು, ‘ಹಿಂದಿ ಹೇರಿಕೆ ನಿಲ್ಲಿಸಿ’ ಎನ್ನುವ ಹ್ಯಾಶ್ಟ್ಯಾಗ್ ನೀಡಿದ್ದಾರೆ.
No- Hindi is not our national language. @ajaydevgn Your ignorance is baffling. And it’s great that films like KGF Pushpa and RRR have done so well in the Hindi belt- art has no language barrier. Please enjoy our films as much as we enjoy yours- #stopHindiImposition https://t.co/60F6AyFeW3
— Divya Spandana/Ramya (@divyaspandana) April 27, 2022
ದಕ್ಷಿಣದ ಭಾಷೆಗಳ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡುವುದು ಹಾಗೂ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವುದು ಎರಡು ಪ್ರತ್ಯೇಕವಾದ ವಿಚಾರ. ಅದನ್ನು ಅಜಯ್ ದೇವಗನ್ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಅನೇಕರು ಕಿವಿ ಹಿಂಡುತ್ತಿದ್ದಾರೆ.
ಇದನ್ನೂ ಓದಿ: ಹಿಂದಿ ವಿವಾದ: ಸುದೀಪ್ ವರ್ಸಸ್ ಅಜಯ್ ದೇವಗನ್ ಕಾಂಟ್ರವರ್ಸಿ ಶುರು ಆಗಿದ್ದು ಹೇಗೆ? ಇಲ್ಲಿದೆ ವಿವರ..
ಅಜಯ್ ದೇವಗನ್ ಟ್ವೀಟ್ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದೇನು?