‘ಬಾಹುಬಲಿ’ ನಂಬಿ 100 ಕೋಟಿ ರೂ. ಕಳೆದುಕೊಂಡ ನೆಟ್ಫ್ಲಿಕ್ಸ್! 200 ಕೋಟಿಯಲ್ಲಿ ಈಗ ಇನ್ನೊಂದು ಪ್ಲ್ಯಾನ್
ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸಿನಿಮಾ ಎಬ್ಬಿಸಿದ ಹವಾ ಸಣ್ಣದೇನಲ್ಲ. ಆದರೆ ಅದೇ ಬಾಹುಬಲಿಯನ್ನು ನಂಬಿಕೊಂಡಿದ್ದಕ್ಕಾಗಿ ನೆಟ್ಫ್ಲಿಕ್ಸ್ ಸಂಸ್ಥೆಗೆ ಬರೋಬ್ಬರಿ 100 ಕೋಟಿ ರೂ. ನಷ್ಟ ಆಗಿದೆ!
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದ ಬಾಹುಬಲಿ ಸಿನಿಮಾ ಎರಡು ಪಾರ್ಟ್ಗಳಲ್ಲಿ ಮೂಡಿಬಂದಿತ್ತು. ಎರಡೂ ಪಾರ್ಟ್ಗೆ ಸಿಕ್ಕಾಪಟ್ಟೆ ಕಮಾಯಿ ಆಗಿತ್ತು. ಆದರೆ ಬಾಹುಬಲಿಯ ಕಥೆ ಅಷ್ಟಕ್ಕೇ ಮುಗಿಯುವಂಥದ್ದಲ್ಲ. ಮೊದಲ ಪಾರ್ಟ್ಗಿಂತಲೂ ಮುಂಚಿನ ಕಥೆ ಏನು ಎಂಬುದನ್ನು ತೋರಿಸಲು ಒಂದು ಹೊಸ ಯೋಜನೆ ರೂಪಿಸಲಾಗಿತ್ತು. ಆದರೆ ಅದರಲ್ಲಿ ಈಗ ದೊಡ್ಡ ಬದಲಾವಣೆ ಆಗಿದೆ.
‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್ಕ್ಲೂಷನ್’ ಸಿನಿಮಾಗಳ ಪ್ರೀಕ್ವೆಲ್ ಮಾಡಲು ಈ ಹಿಂದೆ ಪ್ಲ್ಯಾನ್ ಮಾಡಲಾಗಿತ್ತು. ಅದಕ್ಕೆ ‘ಬಾಹುಬಲಿ: ಬಿಫೋರ್ ದಿ ಬಿಗಿನಿಂಗ್’ ಎಂದು ಹೆಸರಿಡಲಾಗಿತ್ತು. ಹಾಗಂತ ಅದು ಸಿನಿಮಾ ಅಲ್ಲ. ಬದಲಿಗೆ ವೆಬ್ ಸಿರೀಸ್ ರೂಪದಲ್ಲಿ ರಾಜಮಾತೆ ಶಿವಗಾಮಿಯ ಕಥೆ ಹೇಳುವುದು ಇದರ ಉದ್ದೇಶ. ಅದನ್ನು ನೆಟ್ಫ್ಲಿಕ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿತ್ತು. ಮೃಣಾಲ್ ಠಾಕೂರ್ ಮುಖ್ಯ ಪಾತ್ರ ಮಾಡುತ್ತಿದ್ದು ಈಗಾಗಲೇ ಚಿತ್ರೀಕರಣ ಕೂಡ ಮುಗಿದಿತ್ತು. ಆದರೆ ಈಗ ನೆಟ್ಫ್ಲಿಕ್ಸ್ ಸಂಸ್ಥೆ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದು, ಅದರಿಂದ 100 ಕೋಟಿ ರೂ. ನಷ್ಟ ಮಾಡಿಕೊಳ್ಳುತ್ತಿದೆ!
ಹೌದು, ಈಗಾಗಲೇ ಚಿತ್ರೀಕರಣ ಆಗಿರುವ ದೃಶ್ಯಗಳು ನೆಟ್ಫ್ಲಿಕ್ಸ್ನವರಿಗೆ ಕಿಂಚಿತ್ತೂ ಸಮಾಧಾನ ತಂದಿಲ್ಲವಂತೆ. ಹಾಗಾಗಿ 100 ಕೋಟಿ ರೂ. ಖರ್ಚು ಮಾಡಿ ಚಿತ್ರೀಕರಣ ಮಾಡಿರುವ 9 ಎಪಿಸೋಡ್ಗಳ ಈ ವೆಬ್ಸರಣಿಯನ್ನು ಕಸದ ಬುಟ್ಟಿಗೆ ಎಸೆಯಲು ತೀರ್ಮಾನಿಸಲಾಗಿದೆ. ಅದರ ಬದಲಿಗೆ, ಮತ್ತೆ 200 ಕೋಟಿ ರೂ. ಬಜೆಟ್ನಲ್ಲಿ ಹೊಸದಾಗಿ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ನಿಜವಾಗಿಯೂ ಒಂದು ಸಂಸ್ಥೆ ಹೀಗೆ ನೂರು ಕೋಟಿ ರೂ. ಕಳೆದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಸಿನಿಪ್ರಿಯರ ವಲಯದಲ್ಲಿ ಕೇಳಿಬರುತ್ತಿದೆ.
ಈ ಬಗ್ಗೆ ಹಲವು ಕಡೆ ವರದಿ ಆಗಿದೆ. ಆದರೆ ಅಧಿಕೃತವಾಗಿ ನೆಟ್ಫ್ಲಿಕ್ಸ್ನಲ್ಲಿ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರಾಜೆಕ್ಟ್ಗೆ ರಾಜಮೌಳಿ ಕೂಡ ಬಂಡವಾಳ ಹೂಡುತ್ತಿದ್ದಾರೆ. ಆದರೆ ಅವರು ಸಹ ಈ ಗಾಸಿಪ್ ಬಗ್ಗೆ ಮಾತನಾಡಿಲ್ಲ. ಸದ್ಯ ಅವರು ಆರ್ಆರ್ಆರ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘RRR’ ಚಿತ್ರದಲ್ಲಿ ಜ್ಯೂ. ಎನ್ಟಿಆರ್, ರಾಮ್ ಚರಣ್ ಹಾಗೂ ಆಲಿಯಾ ಭಟ್ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಆಲಿಯಾ ಜನ್ಮದಿನದ ಪ್ರಯುಕ್ತ ಮಾ.15ರಂದು ಅವರ ಪಾತ್ರದ ಫಸ್ಟ್ಲುಕ್ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ: ಟಿವಿ9 ಜೊತೆ ಬಾಹುಬಲಿ, ಭಜರಂಗಿ ಭಾಯ್ ಜಾನ್, RRR ಸಿನಿಮಾಗಳ ಕಥೆಗಾರ ವಿಜಯೇಂದ್ರ ಪ್ರಸಾದ್ ಮಾತು
ಸ್ನೇಹಿತರ ಅಕೌಂಟ್ನಿಂದ ನೆಟ್ಫ್ಲಿಕ್ಸ್ ನೋಡುತ್ತಿರುವವರಿಗೆ ಕಹಿ ಸುದ್ದಿ; ಶೀಘ್ರದಲ್ಲೇ ಬರಲಿದೆ ಹೊಸ ನಿಯಮ