Alia Bhatt: ಅವಳಿ ಮಕ್ಕಳಿಗೆ ಜನ್ಮ ನೀಡ್ತಾರಾ ಆಲಿಯಾ? ಒಂದು ಸುಳ್ಳು, ಎರಡು ಸತ್ಯ ಹೇಳಿ ಗುಟ್ಟು ಬಿಟ್ಟುಕೊಟ್ಟ ರಣಬೀರ್
Alia Bhatt | Ranbir Kapoor: ‘ಅವಳಿ ಮಕ್ಕಳ ತಂದೆ ಆಗುತ್ತಿದ್ದೇನೆ. ದೊಡ್ಡ ಪೌರಾಣಿಕ ಸಿನಿಮಾದಲ್ಲಿ ನಟಿಸಿದ್ದೇನೆ. ಚಿತ್ರರಂಗದಿಂದ ದೀರ್ಘ ಕಾಲ ಬ್ರೇಕ್ ತೆಗೆದುಕೊಳ್ಳುತ್ತೇನೆ’ ಎಂದು 3 ವಾಕ್ಯಗಳನ್ನು ರಣಬೀರ್ ಕಪೂರ್ ಹೇಳಿದ್ದಾರೆ. ಇದರಲ್ಲಿ ಒಂದು ಸುಳ್ಳು, ಎರಡು ಸತ್ಯ!
ನಟಿ ಆಲಿಯಾ ಭಟ್ (Alia Bhatt) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತಾವು ತಾಯಿ ಆಗುತ್ತಿರುವ ವಿಚಾರವನ್ನು ಅವರು ಇತ್ತೀಚೆಗೆ ಜಗಜ್ಜಾಹೀರುಗೊಳಿಸಿದ್ದರು. ಪ್ರಿಯಕರ ರಣಬೀರ್ ಕಪೂರ್ (Ranbir Kapoor) ಜೊತೆ ಏಪ್ರಿಲ್ 14ರಂದು ಮದುವೆ ಆಗಿದ್ದ ಅವರು ಕೇವಲ ಎರಡೂವರೆ ತಿಂಗಳಿಗೆ ಪ್ರೆಗ್ನೆನ್ಸಿ ನ್ಯೂಸ್ ನೀಡಿದ್ದು ಎಲ್ಲರಿಗೂ ಅಚ್ಚರಿ ಉಂಟು ಮಾಡಿತ್ತು. ಈಗ ಈ ದಂಪತಿಗೆ ಜನಿಸುವ ಮಗು ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಆಲಿಯಾ ಭಟ್ ಅವರು ಅವಳಿ (Twins) ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂದು ಕೂಡ ಅಭಿಮಾನಿಗಳು ಊಹಿಸುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ರಣಬೀರ್ ಕಪೂರ್ ಹೇಳಿರುವ ಒಂದು ಸುಳ್ಳು ಮತ್ತು ಎರಡು ಸತ್ಯ!
ರಣಬೀರ್ ಕಪೂರ್ ಅವರು ‘ಶಂಷೇರಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜುಲೈ 22ರಂದು ಬಿಡುಗಡೆ ಆಗಲಿದೆ. ಅದರ ಸಲುವಾಗಿ ಅನೇಕ ಕಡೆಗಳಲ್ಲಿ ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ಖಾಸಗಿ ಜೀವನದ ಬಗ್ಗೆಯೂ ಪ್ರಶ್ನೆಗಳು ಎದುರಾಗುತ್ತಿವೆ. ಫಿಲ್ಮ್ ಕಾಂಪ್ಯಾನಿಯನ್ಗೆ ನೀಡಿದ ಸಂದರ್ಶನದಲ್ಲಿ ಅವರು ಅವಳಿ ಮಕ್ಕಳ ಬಗ್ಗೆ ಸುಳಿವು ನೀಡಿದ್ದಾರೆ. ಒಂದು ಸುಳ್ಳು ಮತ್ತು ಎರಡು ಸತ್ಯವನ್ನು ಹೇಳಬೇಕು ಎಂದು ರಣಬೀರ್ ಕಪೂರ್ ಅವರಿಗೆ ಟಾಸ್ಕ್ ನೀಡಲಾಗಿತ್ತು. ಅದಕ್ಕೆ ಅವರು ನೀಡಿದ ಉತ್ತರ ಅಚ್ಚರಿ ಮೂಡಿಸಿದೆ.
‘ನಾನು ಅವಳಿ ಮಕ್ಕಳ ತಂದೆ ಆಗುತ್ತಿದ್ದೇನೆ. ಒಂದು ದೊಡ್ಡ ಪೌರಾಣಿಕ ಸಿನಿಮಾದಲ್ಲಿ ನಟಿಸಿದ್ದೇನೆ. ಚಿತ್ರರಂಗದಿಂದ ದೀರ್ಘ ಕಾಲ ಬ್ರೇಕ್ ಪಡೆದುಕೊಳ್ಳುತ್ತೇನೆ’ ಎಂದು ಮೂರು ವಾಕ್ಯಗಳನ್ನು ರಣಬೀರ್ ಕಪೂರ್ ಹೇಳಿದ್ದಾರೆ. ಈ ಪೈಕಿ ಎರಡು ಸತ್ಯ ಯಾವುದು? ಒಂದು ಸುಳ್ಳು ಯಾವುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಪೌರಾಣಿಕ ಶೈಲಿಯ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಅವರು ನಟಿಸಿರುವುದು ನಿಜ. ಇನ್ನುಳಿದ ಎರಡು ಹೇಳಿಕೆಯಲ್ಲಿ ಒಂದು ಸುಳ್ಳು, ಇನ್ನೊಂದು ನಿಜ. ಹಾಗಾದರೆ ಸುಳ್ಳು ಯಾವುದು?
ರಣಬೀರ್ ಕಪೂರ್ ಅವರು ಚಿತ್ರರಂಗದಿಂದ ದೀರ್ಘಕಾಲ ಬ್ರೇಕ್ ತೆಗೆದುಕೊಳ್ಳುವುದು ಅನುಮಾನ. ಹಾಗಾಗಿ ಆ ಹೇಳಿಕೆಯೇ ಸುಳ್ಳು ಎಂಬುದು ಅಭಿಮಾನಿಗಳ ಊಹೆ. ಅವಳಿ ಮಕ್ಕಳಿಗೆ ತಂದೆ ಆಗುತ್ತಿರುವುದೇ ಸತ್ಯ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಆಲಿಯಾ ಭಟ್ ಅವರು ಜನ್ಮ ನೀಡಿದ ನಂತರವೇ ಈ ಒಗಟಿಗೆ ಉತ್ತರ ಸಿಗಲಿದೆ.