BESCOM ಎಡವಟ್ಟು: ಬಿಲ್ ನೋಡಿ ಕೂಲಿ ಕಾರ್ಮಿಕ ರಾಜುಗೆ ಕರೆಂಟ್ ಶಾಕ್
ಬೆಸ್ಕಾಂ ಸಿಬ್ಬಂದಿ ಶೀಟ್ ಮನೆ ಮಾಲೀಕನಿಗೆ ವಿದ್ಯುತ್ ಬಿಲ್ ನೀಡಿ ಹೋಗಿದ್ದಾರೆ. ಅದರಂತೆ ಬಿಲ್ ತೆರೆದು ನೋಡಿದ ಮನೆಯ ಮಾಲೀಕ ರಾಜು ಕಂಗಾಲಾಗಿದ್ದಾರೆ.
ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ಶೀಟ್ ಮನೆ ಮಾಲೀಕನಿಗೆ ವಿದ್ಯುತ್ ಬಿಲ್ ನೀಡಿ ಹೋಗಿದ್ದಾರೆ. ಅದರಂತೆ ಬಿಲ್ ತೆರೆದು ನೋಡಿದ ಮನೆಯ ಮಾಲೀಕ ರಾಜು ಕಂಗಾಲಾಗಿದ್ದಾರೆ. ಏಕೆಂದರೆ ಅದರಲ್ಲಿ ನಮೂದಾಗಿದ್ದ ವಿದ್ಯುತ್ ಬಿಲ್ ಮೊತ್ತ ಒಟ್ಟು 23000 ರೂಪಾಯಿ ಆಗಿತ್ತು. ಬನ್ನೇರುಘಟ್ಟ ರೋಡ್ ದೊಡ್ಡ ಕಮ್ಮನಹಳ್ಳಿ ಬಿಬಿಎಂಪಿ 15th ಕ್ರಾಸ್ನಲ್ಲಿರುವ ಕಾರ್ಮಿಕ ರಾಜು ಅವರ ಶೀಟ್ ಮನೆಗೆ ಈ ಹಿಂದೆ 219, 241, 265 ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ ಬಿಲ್ ಮೊತ್ತದಲ್ಲಿ ದಿಢೀರ್ ಏರಿಕೆಯಾಗಿರುವುದನ್ನು ಕಂಡು ರಾಜು ಶಾಕ್ ಆಗಿದ್ದಾರೆ. ಫೆಬ್ರವರಿ 2022 ರಲ್ಲಿ 219 ರೂ. ಬಿಲ್ ಬಂದಿತ್ತು. ಮಾರ್ಚ್ ತಿಂಗಳಲ್ಲಿ 241 ರೂಪಾಯಿ, ಜೂನ್ನಲ್ಲಿ 265 ರೂ., ಜುಲೈನಲ್ಲಿ 419 ರೂ., ಆಗಸ್ಟ್ ತಿಂಗಳಲ್ಲಿ 348 ರೂ. ಬಿಲ್ ಬಂದಿದೆ. ಆದರೆ ಸೆಪ್ಟೆಂಬರ್ ತಿಂಗಳಿಗೆ ಬೆಸ್ಕಾಂ ಸಿಬ್ಬಂದಿ ಬಂದು 22 ಸಾವಿರ ರೂಪಾಯಿ ಕರೆಂಟ್ ಬಿಲ್ ನೀಡಿದ್ದಾರೆ. ಅಕ್ಟೋಬರ್ ತಿಂಗಳಿನದ್ದು ಎಂದು ಹೇಳಿ ಮತ್ತೆ 500 ರೂ. ಸೇರಿಸಿ 23 ಸಾವಿರ ಕಟ್ಟುವಂತೆ ಬಿಲ್ ನೀಡಿದ್ದಾರೆ. ಇದರಿಂದ ಬೇಸತ್ತ ರಾಜು ಬೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಟಿವಿ9 ಕನ್ನಡ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಎಚ್ಚೆತ್ತ ಬೆಸ್ಕಾಂ, ಮೂರು ಗಂಟೆಯಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿದೆ. ಅದರಂತೆ 22 ಸಾವಿರ ರೂಪಾಯಿ ಇದ್ದ ಬಿಲ್ ಮೊತ್ತ, 1030 ರೂಪಾಯಿಗೆ ಇಳಿಸಿದ್ದಾರೆ. ಅದರಂತೆ ರಾಜು ಅವರು 1030 ರೂ. ಪಾವತಿಸಿ ಬಿಲ್ ಕ್ಲೀಯರ್ ಮಾಡಿಕೊಂಡಿದ್ದಾರೆ. ಸುದ್ದಿ ಪ್ರಸಾರಕ್ಕೂ ಮುನ್ನ 22 ಸಾವಿರ ಪಾವತಿ ಮಾಡಲೇಬೇಕು, ಇಲ್ಲವಾದರೆ ಮೀಟರ್ ಕನೆಕ್ಷನ್ ಕಟ್ ಮಾಡುವುದಾಗಿ ಸಿಬ್ಬಂದಿ ಹೇಳಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ