ಕ್ರಿಕೆಟ್ ಅಂಗಳದಲ್ಲಿ ದಾಖಲೆಗಳು ಶಾಶ್ವತವಲ್ಲ. ಆದರೆ ಕೆಲವೊಂದು ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ ಎನ್ನಲಾಗುತ್ತದೆ. ಅಂತಹದೊಂದು ದಾಖಲೆ ಮುರಿದು ಇತಿಹಾಸ ನಿರ್ಮಿಸಿದ್ದಾರೆ ಬೆಂಗಾಲ್ ತಂಡ. ದೇಶೀಯ ಅಂಗಳದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಹಾಗೂ ಜಾರ್ಖಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಾರ್ಖಂಡ್ ಬೌಲಿಂಗ್ ಆಯ್ದುಕೊಂಡಿತು. ಇತ್ತ ಇನಿಂಗ್ಸ್ ಆರಂಭಿಸಿದ ಬೆಂಗಾಲ್ ಬ್ಯಾಟ್ಸ್ಮನ್ ಜಾರ್ಖಂಡ್ ನಾಯಕನ ನಿರ್ಧಾರ ತಪ್ಪು ಎಂಬುದನ್ನು ಮೊದಲ ಸೆಷನ್ನಲ್ಲೇ ನಿರೂಪಿಸಿದ್ದರು.
ಏಕೆಂದರೆ ಆರಂಭಿಕರಾಗಿ ಕಣಕ್ಕಿಳಿದ ಅಭಿಮನ್ಯು ಈಶ್ವರನ್ ಹಾಗೂ ಅಭಿಷೇಕ್ ರಾಮನ್ ಮೊದಲ ವಿಕೆಟ್ಗೆ 132 ರನ್ಗಳ ಜೊತೆಯಾಟವಾಡಿದ್ದರು. ಈ ಹಂತದಲ್ಲಿ ಅಭಿಮನ್ಯು 65 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಸುದೀಪ್ ಘರಾಮಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಮತ್ತೊಂದೆಡೆ ಆರಂಭಿಕ ಆಟಗಾರ ಅಭಿಷೇಕ್ ರಾಮನ್ 61 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಮಜುಂದಾರ್ ಕೂಡ ಭರ್ಜರಿ ಶತಕ ಸಿಡಿಸಿದರು. ಇನ್ನು ಪಶ್ಚಿಮ ಬಂಗಾಳ ಕ್ರೀಡಾ ಸಚಿವ ಮನೋಜ್ ತಿವಾರಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 73 ರನ್ ಸಿಡಿಸಿದರು. ಆ ಬಳಿಕ ಬಂದ ಅಭಿಷೇಕ್ ಪೊರೆಲ್ 68 ರನ್ ಬಾರಿಸಿದ್ದರು. ಇನ್ನು 7ನೇ ಬೆಂಗಾಲ್ ಪರ ಕ್ರಮಾಂಕದಲ್ಲಿ ಆಡಿದ ಆರ್ಸಿಬಿ ಆಟಗಾರ ಶಹಬಾಜ್ ಅಹ್ಮದ್ 78 ರನ್ ಬಾರಿಸಿದರೆ, 8ನೇ ಕ್ರಮಾಂಕದಲ್ಲಿ ಆಡಿದ ಸಯಾನ್ ಮೊಂಡಲ್ ಅಜೇಯ 53 ರನ್ಗಳಿಸಿದರು.
ವಿಶೇಷ ಎಂದರೆ 9ನೇ ಕ್ರಮಾಂಕದಲ್ಲಿ ಆಡಿದ ಮತ್ತೋರ್ವ ಆರ್ಸಿಬಿ ಆಟಗಾರ ಆಕಾಶ್ ದೀಪ್ 8 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಕೇವಲ 18 ಎಸೆತಗಳಲ್ಲಿ ಅಜೇಯ 53 ರನ್ ಚಚ್ಚಿದರು. ಪರಿಣಾಮ ಬೆಂಗಾಲ್ ತಂಡದ ಮೊತ್ತವು 7 ವಿಕೆಟ್ ನಷ್ಟಕ್ಕೆ 773 ರನ್ಗೆ ಬಂದು ನಿಂತಿತು. ಈ ಹಂತದಲ್ಲಿ ತಂಡದ ನಾಯಕ ಅಭಿಮನ್ಯು ಈಶ್ವರನ್ ಡಿಕ್ಲೇರ್ ಘೋಷಿಸಿದರು.
ಅಂದರೆ ಬೆಂಗಾಲ್ ಪರ ಬ್ಯಾಟ್ ಬೀಸಿದ 9 ಆಟಗಾರರು ಕೂಡ 50+ ರನ್ಗಳಿಸಿದ್ದು ವಿಶೇಷ. ಇವರಲ್ಲಿ ಸುದೀಪ್ ಘರಾಮಿ (186) ಹಾಗೂ ಅನುಸ್ತಪ್ ಮಜುಂದಾರ್ (117) ಶತಕ ಬಾರಿಸಿದರೆ, ಉಳಿದ 7 ಆಟಗಾರರು ಅರ್ಧಶತಕ ಬಾರಿಸಿದ್ದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಒಂದು ತಂಡದ ಪರ 9 ಬ್ಯಾಟ್ಸ್ಮನ್ಗಳು 50+ ರನ್ಗಳಿಸಿದ ವಿಶೇಷ ದಾಖಲೆಯನ್ನು ಬೆಂಗಾಲ್ ತಂಡ ಬರೆದಿದೆ.
ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಆಸ್ಟ್ರೇಲಿಯಾ ಅಂಗಳದಲ್ಲಿ ಮೂಡಿಬಂದಿತ್ತು. ಅಂದು ಕೇಂಬ್ರಿಡ್ಜ್ ವಿವಿ ವಿರುದ್ಧ ಆಸ್ಟ್ರೇಲಿಯಾ ಪ್ರವಾಸಿ ತಂಡದ ಎಂಟು ಆಟಗಾರರು ಅರ್ಧಶತಕಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಬರೋಬ್ಬರಿ 129 ವರ್ಷಗಳ ಬಳಿಕ ಬೆಂಗಾಲ್ ತಂಡದ 9 ಬ್ಯಾಟ್ಸ್ಮನ್ಗಳು ಅರ್ಧಶತಕಗಳನ್ನು (50+) ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಬೆಂಗಾಲ್ ರಣಜಿ ತಂಡ: ಅಭಿಮನ್ಯು ಈಶ್ವರನ್ (ನಾಯಕ) , ಅಭಿಷೇಕ್ ರಾಮನ್ , ಅಭಿಷೇಕ್ ಪೊರೆಲ್ ( ವಿಕೆಟ್ ಕೀಪರ್ ) , ಆಕಾಶ್ ದೀಪ್ , ಅನುಸ್ತುಪ್ ಮಜುಂದಾರ್ , ಇಶಾನ್ ಪೊರೆಲ್ , ಮನೋಜ್ ತಿವಾರಿ , ಮುಖೇಶ್ ಕುಮಾರ್ , ಶಹಬಾಜ್ ಅಹ್ಮದ್ , ಸುದೀಪ್ ಕುಮಾರ್ ಘರಾಮಿ , ಸಯನ್ ಮೊಂಡಲ್
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.