Ashish Nehra: ಎಳನೀರು, ಪೆನ್ನು ಪೇಪರ್ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
IPL 2022: 2019 ರಲ್ಲಿ ನೆಹ್ರಾ ಆರ್ಸಿಬಿ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಆ ಸೀಸನ್ನಲ್ಲಿ ಆರ್ಸಿಬಿ ತಂಡ ಗೆದ್ದಿದ್ದು ಕೇವಲ 5 ಮ್ಯಾಚ್ ಮಾತ್ರ.
IPL 2022: ಐಪಿಎಲ್ ಸೀಸನ್ 15 ಶುರುವಾದಾಗ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಡ್ರೆಸಿಂಗ್ ರೂಮ್ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಆಶಿಶ್ ನೆಹ್ರಾ (Ashish Nehra) ಹೇಳಿದ್ದು ಇಷ್ಟೇ…ಚೆನ್ನಾಗಿ ತಿನ್ನಿರಿ…ಚೆನ್ನಾಗಿ ವಿಶ್ರಾಂತಿ ಪಡೆಯಿರಿ, ಚೆನ್ನಾಗಿ ನಿದ್ದೆ ಮಾಡಿ…ಟ್ರೋಲರ್ಸ್ಗೆ ಇಷ್ಟು ಸಾಕಿತ್ತು. ಮೊದಲೇ ಕೋಚ್ ಆಗಿ ಆಯ್ಕೆಯಾಗಿದ್ದ ನೆಹ್ರಾ ಬಗ್ಗೆ ಅಪಹಾಸ್ಯಗಳ ಪೋಸ್ಟ್ ಸಿಕ್ಕಾಪಟ್ಟೆ ಹರಿದಾಡಿತ್ತು. ಇದರ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್ನಲ್ಲಿ ಹೇಳಿದ ಈ ಮಾತುಗಳು ಮತ್ತಷ್ಟು ಟ್ರೋಲ್ಗಳಿಗೆ ಕಂಟೆಂಟ್ ಆಯಿತು.
ಏಕೆಂದರೆ ಐಪಿಎಲ್ನಲ್ಲಿ ನೆಹ್ರಾ ಕೋಚ್ ಆಗಿ ಆಯ್ಕೆಯಾದ ಬೆನ್ನಲ್ಲೇ ಆರ್ಸಿಬಿ ತಂಡವು ಅವರನ್ನೇಕೆ ವಜಾಗೊಳಿಸಿತು ಎಂಬುದು ತುಂಬಾ ಚರ್ಚೆಯಾಗಿತ್ತು. ಏಕೆಂದರೆ 2019 ರಲ್ಲಿ ನೆಹ್ರಾ ಆರ್ಸಿಬಿ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಆ ಸೀಸನ್ನಲ್ಲಿ ಆರ್ಸಿಬಿ ತಂಡ ಗೆದ್ದಿದ್ದು ಕೇವಲ 5 ಮ್ಯಾಚ್ ಮಾತ್ರ. ಅಲ್ಲದೆ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ನೆಹ್ರಾ ಅವರನ್ನು ಆರ್ಸಿಬಿ ಫ್ರಾಂಚೈಸಿ ವಜಾ ಮಾಡಿತ್ತು.
ಇದಾದ ಬಳಿಕ ಮತ್ತೆ ಆಶಿಶ್ ನೆಹ್ರಾ ಕೋಚ್ ಆಗಿ ಕಾಣಿಸಿಕೊಂಡಿದ್ದು ಗುಜರಾತ್ ಟೈಟಾನ್ಸ್ ತಂಡದಲ್ಲಿ. ಆರಂಭಿಕ ಪಂದ್ಯಗಳ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ನೆಹ್ರಾ ಹೇಳಿದ್ದು ಇಷ್ಟೇ…ಚೆನ್ನಾಗಿ ತಿನ್ನಿರಿ…ಚೆನ್ನಾಗಿ ವಿಶ್ರಾಂತಿ ಪಡೆಯಿರಿ, ಚೆನ್ನಾಗಿ ನಿದ್ದೆ ಮಾಡಿ. ಹೀಗಾಗಿಯೇ ನೆಹ್ರಾ ಅವರ ನಡೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.
ಇದರ ಬೆನ್ನಲ್ಲೇ ಪೆನ್ನು ಪೇಪರ್ನೊಂದಿಗೆ ತಂಡಕ್ಕಾಗಿ ಪ್ಲ್ಯಾನ್ ರೂಪಿಸುತ್ತಿರುವುದು ಕಂಡು ಬಂತು. ಆದರೆ ಇತರೆ ತಂಡಗಳ ಕೋಚಿಂಗ್ ಸಿಬ್ಬಂದಿಗಳು ಲ್ಯಾಪ್ಟ್ಯಾಪ್ ಮತ್ತು ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದರು. ನೆಹ್ರಾ ಮಾತ್ರ ಹಳೆಯ ಸ್ಟ್ರೈಲ್ನಲ್ಲೇ ಪೆನ್ನು ಪೇಪರ್ ಹಿಡಿದು ಕೊಂಡು ಆಟಗಾರರ ಅಭ್ಯಾಸವನ್ನು ಗಮನಿಸುತ್ತಿದ್ದರು.
ಅಷ್ಟೇ ಯಾಕೆ ಎಳನೀರು ಕುಡಿಯುತ್ತಾ ಅಭ್ಯಾಸದ ವೇಳೆ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಈ ವೇಳೆ ಕೂಡ ನಾನಾ ಟ್ರೋಲ್ಗಳು ಹರಿದಾಡಿತು. ಎಲ್ಲರೂ ಎನರ್ಜಿ ಡ್ರಿಂಕ್ಸ್ ಮೊರೆ ಹೋದರೆ, ಆಶಿಶ್ ನೆಹ್ರಾ ಎಳನೀರು ಪವರ್ ತೋರಿಸುತ್ತಿದ್ದಾರೆ ಎಂದೆಲ್ಲಾ ಕಿಚಾಯಿಸಲಾಗಿತ್ತು. ಬಲಿಷ್ಠರನ್ನೇ ಬಗ್ಗು ಬಡಿಯುವ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿತು.
ಅದರಲ್ಲೂ ಲೀಗ್ ಹಂತದ ಪಂದ್ಯಗಳ ಮುಕ್ತಾಯಕ್ಕೂ ಮೊದಲೇ 18 ಅಂಕಗಳಿಸಿ ಗುಜರಾತ್ ಟೈಟಾನ್ಸ್ ಪ್ಲೇಆಫ್ಗೆ ಎಂಟ್ರಿ ಕೊಟ್ಟಾಗ ಅಚ್ಚರಿಪಟ್ಟವರೇ ಹೆಚ್ಚು. ಈ ವೇಳೆ ಕೂಡ ನೆಹ್ರಾ ಅವರು ಕಾಣಿಸಿಕೊಂಡಿದ್ದು ಪೆನ್ನು ಪೇಪರ್ಗಳೊಂದಿಗೆ ಎಂಬುದು ವಿಶೇಷ. ಅಂತಿಮವಾಗಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ಗೆ ಪ್ರವೇಶಿಸಿತು. ಫೈನಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗು ಬಡಿದು ಚಾಂಪಿಯನ್ ಪಟ್ಟಕ್ಕೇರಿತು. ಹೊಸ ತಂಡವೊಂದರ ಈ ಅಭೂತಪೂರ್ವ ಗೆಲುವಿನ ಹಿಂದಿರುವುದು ಪೆನ್ನು ಪೇಪರ್ನೊಂದಿಗೆ ಪ್ಲ್ಯಾನ್ ರೂಪಿಸಿದ ಆಶಿಶ್ ನೆಹ್ರಾ ಅವರ ಬುದ್ದಿವಂತಿಕೆ.
Red bull, MacBooks can make you win the matches, but Nariyal Paani & paper sheet makes you win the tournament.
: Stud bull Nehra Ji.#IPLFinals #RRvGT #GTvRR pic.twitter.com/ZR9wDpIXha
— sudhanshu’ (@whoshud) May 29, 2022
ಅಂದಹಾಗೆ ನೀವು ಐಪಿಎಲ್ ನೋಡಿದ್ರೆ ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯದ ವೇಳೆ ಆಶಿಶ್ ನೆಹ್ರಾ ಸುಮ್ಮನೆ ಕೂತಿರುವುದನ್ನು ನೋಡಿರುವ ಸಾಧ್ಯತೆ ಕಡಿಮೆ. ಮೈದಾನದ ಬೌಂಡರಿ ಲೈನ್ ಬಳಿ ನಿಂತು ಮಾತನಾಡುತ್ತಿರುವುದು, ನಾಯಕ ಹಾರ್ದಿಕ್ ಪಾಂಡ್ಯ ಜೊತೆ ಚರ್ಚಿಸುತ್ತಿರುವುದು…ತಂಡದ ಮೆಂಟರ್ ಗ್ಯಾರಿ ಕಸ್ಟರ್ನ್ ಜೊತೆ ಮಾತನಾಡುತ್ತಿರುವುದು…ಹೀಗೆ ತಂಡ ಯಾವುದೇ ಸನ್ನಿವೇಶದಲ್ಲಿದ್ದರೂ ತುಂಬಾ ಶಾಂತತೆಯಿಂದ ನೆಹ್ರಾ ನಿಂತಿರುವುದು ನೀವು ಕೂಡ ನೋಡಿರುತ್ತೀರಿ…ಈ ವೇಳೆ ಅವರ ಬಳಿ ಲ್ಯಾಪ್ಟಾಪ್ ಆಗಲಿ ಅಥವಾ ಇನ್ನಾವುದೇ ಉಪಕರಣಗಳಾಗಲಿ ನೀವು ನೋಡಿರುವ ಸಾಧ್ಯತೆಯಿಲ್ಲ. ಬದಲಾಗಿ ಕೈಯಲ್ಲಿ ಪೆನ್ನು ಪೇಪರ್ ನೋಡಿರುತ್ತೀರಿ. ಹೌದು, ಪೆನ್ನು ಪೇಪರ್ಗಳ ಮೂಲಕವೇ ಆಶಿಶ್ ನೆಹ್ರಾ 9 ತಂಡಗಳನ್ನು ಅಂಗಳದಲ್ಲಿ ಸೋಲಿಸಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.