ಬೀಜಿಂಗ್: ಕೊರೊನಾ ಅನ್ನೋ ಹೆಮ್ಮಾರಿ ಪ್ರಪಂಚದಾದ್ಯಂತ ಆತಂಕ ಮೂಡಿಸಿದೆ. ನೆಮ್ಮದಿಯಾಗಿ ಉಸಿರಾಡಲು ಸಾಧ್ಯವಾಗದ ಪರಿಸ್ಥಿತಿ ಚೀನಾದಲ್ಲಿ ಎದುರಾಗಿದೆ. ಇಷ್ಟೆಲ್ಲದರ ಮಧ್ಯೆ ಕೊರೊನಾ ವೈರಸ್ ಹೇಗೆ ಬಂತು, ಅದರ ಮೂಲ ಯಾವುದು ಅನ್ನೋದನ್ನ ಸಂಶೋಧಕರು ಕಂಡುಹಿಡಿದಿದ್ದಾರೆ. ಕಂಡ ಕಂಡದ್ದನ್ನೆಲ್ಲಾ ತಿನ್ನುವ ಚೀನಿಯರ ನಾಲಗೆ ಚಪಲವೇ ಇಷ್ಟು ದೊಡ್ಡ ಅವಾಂತರಕ್ಕೆ ಕಾರಣ ಅನ್ನೋ ಸೀಕ್ರೇಟ್ ಕೂಡ ರಿವೀಲ್ ಆಗಿದೆ.
ಡೆಡ್ಲಿ ವೈರಸ್ ಹರಡಲು ಅದೊಂದು ಸೂಪ್ ಕಾರಣ?
ಚೀನಾ ಕಳೆದ ಕೆಲ ದಶಕಗಳಲ್ಲಿ ಅದೆಷ್ಟು ವೇಗವಾಗಿ ಬೆಳವಣಿಗೆ ಸಾಧಿಸಿದೆ ಅಂದ್ರೆ, ವಿಶ್ವದ ದೊಡ್ಡಣ್ಣ ಅಂತಾನೆ ಕರೆಸಿಕೊಳ್ಳುವ ಅಮೆರಿಕ ಕೂಡ ಬೆಚ್ಚಿಬಿದ್ದಿದೆ. ಉತ್ಪಾದನೆ, ರಫ್ತು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಚೀನಾ ದೇಶವನ್ನ ಟಚ್ ಮಾಡಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಆದರೆ ಇಷ್ಟೆಲ್ಲಾ ಮುಂದುವರಿದಿರುವ ದೇಶದ ಜನರು ಮಾತ್ರ ನಾಲಗೆ ಚಪಲದವರು. ಆ ಜನರ ಚಪಲವೇ ಇಂದು ಬಹುದೊಡ್ಡ ವಿನಾಶಕ್ಕೆ ನಾಂದಿ ಹಾಡಿಬಿಟ್ಟಿದೆ.
ಸಂಶೋಧಕರಿಂದ ಹೊರಬಿದ್ದ ಮಾಹಿತಿಯಾದ್ರೂ ಏನು?
ಚೀನಾದ ವುಹಾನ್ ಪ್ರಾಂತ್ಯದ ಸಮುದ್ರ ಉತ್ಪನ್ನಗಳ ಬೃಹತ್ ಮಾರುಕಟ್ಟೆಗೆ ಬೀಗ ಜಡಿಯಲಾಗಿದೆ. ಕಾರಣ ಏನಂದ್ರೆ ಡೆಡ್ಲಿ ಕೊರೊನಾ ವೈರಸ್ ಇಲ್ಲಿಂದಲೇ ಹರಡಿದ್ದು ಅನ್ನೋ ಮಾಹಿತಿ ಸಿಕ್ಕಿರೋದು. ಈ ಮಾರುಕಟ್ಟೆಯಿಂದ ರಫ್ತಾದ ಮಾಂಸದಿಂದ ಕೊರೊನಾ ವೈರಸ್ ಹರಡಿದೆಯಂತೆ. ಮತ್ತೊಂದ್ಕಡೆ ಈ ಮಾರುಕಟ್ಟೆಯಿಂದ ಕೊಂಡೊಯ್ದಿದ್ದ ಬಾವಲಿ ಸೂಪ್ ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ. ಯುವತಿಯೊಬ್ಬಳು ಸೂಪ್ ಕುಡಿದಿದ್ದು, ಆಕೆಯಲ್ಲೇ ಮೊದಲಿಗೆ ಕೊರೊನಾ ವೈರಸ್ ಕಾಣಿಸಿದೆ. ನಂತರ ಇತರರಿಗೂ ಹರಡಿದೆ ಅಂತಾ ಸಂಶೋಧಕರು ಮಾಹಿತಿ ಹೊರ ಹಾಕಿದ್ದಾರೆ. ಹೀಗಾಗಿ ವುಹಾನ್ ಪ್ರಾಂತ್ಯವನ್ನ ಲಾಕ್ ಮಾಡಿ, ಜನರನ್ನ ಹೊರಗಡೆ ಬಿಡದಂತೆ ಹಾಗೂ ಯಾರನ್ನೂ ಈ ಪ್ರಾಂತ್ಯದ ಒಳಗೆ ಕರೆದುಕೊಳ್ಳದಂತೆ ಕಟ್ಟೆಚ್ಚರ ವಹಿಸಲಾಗಿದೆ.
ನೆರೆ ರಾಷ್ಟ್ರ ನೇಪಾಳಕ್ಕೂ ಎಂಟ್ರಿಕೊಟ್ಟ ಮಹಾಮಾರಿ!
ಚೀನಾದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿರುವ ಕೊರೊನಾ ವೈರಸ್ ನೇಪಾಳದಲ್ಲೂ ಪತ್ತೆಯಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಭಾರತದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ವಿದೇಶಗಳಿಂದ ಬರುವವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕೆಂದು ಆದೇಶ ಹೊರಡಿಸಲಾಗಿದೆ. ನೇಪಾಳಕ್ಕೆ ಬಂದ ವಿದ್ಯಾರ್ಥಿಯೊಬ್ಬನಿಗೆ ವೈರಸ್ ತಗುಲಿದೆ ಎನ್ನಲಾಗಿದೆ. ಅನಾರೋಗ್ಯ ಪೀಡಿತನಾಗಿದ್ದ ವಿದ್ಯಾರ್ಥಿಯನ್ನ ತಪಾಸಣೆ ನಡೆಸಿದಾಗ, ‘ಕೊರೊನಾ’ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ನೇಪಾಳ ಪ್ರವಾಸದಲ್ಲಿರುವವರಿಗೆ ಅಲರ್ಟ್ ಆಗಿರಲು ಎಚ್ಚರಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ‘ಕೊರೊನಾ’ ಹಾವಳಿ ನಿಯಂತ್ರಿಸಲು ಪ್ರಯತ್ನಗಳು ಸಾಗಿವೆ.
ಒಂದು ಕಡೆ ಚೀನಿಯರಿಗೆ ಹೊಸವರ್ಷದ ಸಂಭ್ರಮ. ಸ್ಪ್ರಿಂಗ್ ಫೆಸ್ಟ್ನಲ್ಲಿ ಬ್ಯೂಸಿಯಾಗಿರಬೇಕಿದ್ದ ಚೀನಾ ಜನ, ಕೊರೊನಾ ಎಂಬ ಭಯಾನಕ ವೈರಸ್ ಭೀತಿಯಲ್ಲಿ ದಿನ ದೂಡಬೇಕಾಗಿ ಬಂದಿದೆ. ಈಗಾಗ್ಲೇ ವುಹಾನ್ ಪ್ರಾಂತ್ಯವನ್ನ ಜೈಲಿನಂತೆ ಲಾಕ್ ಮಾಡಲಾಗಿದ್ದು, ವೈರಸ್ ಮತ್ತಷ್ಟು ಪ್ರಾಂತ್ಯಕ್ಕೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಆದರೂ ರೋಗ ತೀವ್ರ ಗತಿಯಲ್ಲಿ ಹರಡುತ್ತಿರುವುದು ಆತಂಕ ಮೂಡಿಸಿದ್ದು, ಚೀನಾದಲ್ಲಿ ಮಾಸ್ಕ್ಗಳಿಗೂ ಬರ ಎದುರಾಗಿದೆ. ಇದೆಲ್ಲಾ ಜಿನ್ಪಿಂಗ್ ಸರ್ಕಾರಕ್ಕೆ ಸವಾಲೆಸದಿದ್ದು 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವೈರಾಣು ತಗುಲಿದವರ ಸಂಖ್ಯೆ ಸಾವಿರದ ಗಡಿಗೆ ಬಂದು ನಿಂತಿದ್ದು, ಡ್ರ್ಯಾಗನ್ ನಾಡಿನ ಜನ ಹೆಜ್ಜೆ ಹೆಜ್ಜೆಗೂ ಭಯಪಡುವಂತಾಗಿದೆ.
Published On - 7:03 am, Sat, 25 January 20