ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಬಂಧನ
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ವಕ್ತಾರ ಝುಲ್ಫಿ ಬುಖಾರಿ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಮೆಹಮೂದ್ ಖುರೇಷಿ ಅವರು ಇತ್ತೀಚೆಗೆ ಬಂಧಿತರಾಗಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪರಮಾಪ್ತರಾಗಿದ್ದಾರೆ.
ಇಸ್ಲಾಮಾಬಾದ್, ಆಗಸ್ಟ್ 19: ಇತ್ತೀಚೆಗೆ ಬಂಧಿತರಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪರಮಾಪ್ತರೂ ಆಗಿರುವ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರನ್ನು ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಈ ಬಗ್ಗೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ವಕ್ತಾರ ಝುಲ್ಫಿ ಬುಖಾರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಎರಡು ಬಾರಿ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಖುರೇಷಿಯ ಬಂಧನಕ್ಕೆ ನಿರ್ದಿಷ್ಟ ಕಾರಣ ತಕ್ಷಣವೇ ಸ್ಪಷ್ಟವಾಗಿಲ್ಲ ಎಂದು ಪಕ್ಷದ ವಕ್ತಾರ ಜುಲ್ಫಿ ಬುಖಾರಿ ರಾಯಿಟರ್ಸ್‌ಗೆ ತಿಳಿಸಿದರು.
ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಪತ್ನಿ ಪಾಕಿಸ್ತಾನದ ಹಂಗಾಮಿ ಪ್ರಧಾನಿಗೆ ವಿಶೇಷ ಸಲಹೆಗಾರ್ತಿ
ಪಿಟಿಐ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರು ಭ್ರಷ್ಟಾಚಾರದ ಆರೋಪದ ಮೇಲೆ ಮೂರು ವರ್ಷಗಳ ಕಾಲ ಸೆರೆಮನೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಐದು ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಇಮ್ರಾನ್ ಖಾನ್ ಅವರು 2018 ರಲ್ಲಿ ಕೊನೆಯ ಚುನಾವಣೆಯಲ್ಲಿ ಗೆದಿದ್ದರು ಮತ್ತು 2022 ರಲ್ಲಿ ಅವಿಶ್ವಾಸ ಮತದಲ್ಲಿ ಅವರನ್ನು ಪದಚ್ಯುತಗೊಳಿಸುವವರೆಗೂ ಪ್ರಧಾನಿಯಾಗಿದ್ದರು.
ಇಮ್ರಾನ್ ಖಾನ್ ನಂತರ ಶೆಹಬಾಜ್ ಷರೀಫ್ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಪಾಕಿಸ್ತಾನದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ಆರ್ಥಿಕ ಬಿಕ್ಕಟ್ಟು ತಲೆದೋರಿದ ಕಾರಣ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಶಿಫಾರಸಿನ ಮೇರೆಗೆ ಸಂಸತ್ ವಿಸರ್ಜಿಸಲಾಗಿತ್ತು. ಸದ್ಯ ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಗಳ ಮೇಲ್ವಿಚಾರಣೆಗಾಗಿ ಸೆನೆಟರ್ ಅನ್ವರ್-ಉಲ್-ಹಕ್ ಕಾಕರ್ ಅವರನ್ನು ಹಂಗಾಮಿ ಪ್ರಧಾನಿಯಾನ್ನಾಗಿ ನೇಮಿಸಲಾಗಿದೆ.
ವಿದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:19 pm, Sat, 19 August 23