ಕಾಬೂಲ್: ಅಫ್ಘಾನಿಸ್ತಾನ ದೇಶದಲ್ಲಿ ಶೀತ ಗಾಳಿಯ ಕಾಟ (Cold Wave) ಮುಂದುವರಿದಿದ್ದು ಕಳೆದೆರಡು ವಾರಗಳಿಂದ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ 2 ಲಕ್ಷಕ್ಕೂ ಹೆಚ್ಚು ಜಾನುವಾರುಗಳು (Livestock death) ಶೀತದ ಕಾರಣದಿಂದ ಮೃತಪಟ್ಟಿವೆ ಎಂದು ಆ ದೇಶದ ಸುದ್ದಿ ಸಂಸ್ಥೆ ಟೋಲೋ ನ್ಯೂಸ್ ವರದಿ ಮಾಡಿದೆ.
ದೇಶದ ಉತ್ತರ ಭಾಗದ ಬಾಲ್ಕ್, ಜವಝಾನ್ ಮತ್ತು ಪಂಜಶೀರ್ ಪ್ರಾಂತ್ಯಗಳಲ್ಲಿ ಕೋಲ್ಡ್ ವೇವ್ನಿಂದ ಅತಿ ಹೆಚ್ಚು ಸಾವು ನೋವುಗಳಾಗಿರುವುದು ತಿಳಿದುಬಂದಿದೆ. ಒಟ್ಟಾರೆ ಅಫ್ಘಾನಿಸ್ತಾನದ 34 ಪ್ರಾಂತ್ಯಗಳ ಪೈಕಿ 20 ಪ್ರಾಂತ್ಯಗಳಿಂದ 2.6 ಲಕ್ಷ ಜಾನುವಾರುಗಳು ಸಾವನ್ನಪ್ಪಿವೆ. ಇವುಗಳ ಪೈಕಿ 1.29 ಲಕ್ಷದಷ್ಟು ಜಾನುವಾರುಗಳು ಮೇಕೆ ಮತ್ತು ಕುರಿಗಳೇ ಆಗಿವೆ.
ಶೀತದ ಅಲೆಯ ಜೊತೆಗೆ ಮೇವಿನ ಕೊರತೆಯಿಂದಲೂ ಜಾನುವಾರುಗಳು ಸಾವನ್ನಪ್ಪುತ್ತಿವೆ ಎಂದು ಇಲ್ಲಿನ ಕೆಲ ರೈತರು ಅಳಲು ವ್ಯಕ್ತಪಡಿಸುತ್ತಿದ್ದು, ತಾಲಿಬಾನ್ ಸರ್ಕಾರದಿಂದ ಅಗತ್ಯ ನೆರವಿಗಾಗಿ ಯಾಚಿಸುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಬಹಳ ಸಂಕಷ್ಟದ ಪರಿಸ್ಥಿತಿ ಏರ್ಪಟ್ಟಿದೆ. ಅಂತಾರಾಷ್ಟ್ರೀಯ ನೆರವು ಕಡಿಮೆಯಾಗಿ ಆ ದೇಶದ ಆರ್ಥಿಕ ವ್ಯವಸ್ಥೆ ಶೋಚನೀಯ ಸ್ಥಿತಿ ತಲುಪಿದೆ. ಅನ್ನಾಹಾರ ಇತ್ಯಾದಿ ಅಗತ್ಯ ವಸ್ತುಗಳ ಕೊರತೆ ಕಾಡುತ್ತಿದೆ. ವಿದ್ಯುತ್ ಅಭಾವ ಇತ್ಯಾದಿ ಮೂಲ ಸೌಕರ್ಯಗಳ ಕೊರತೆಯೂ ಇದೆ.
ಇದರ ಜೊತೆಗೆ ಅಫ್ಘಾನಿಸ್ತಾನದಲ್ಲಿ ಈಗ ಮಹಿಳೆಯರು ಶಾಲೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ತಾಲಿಬಾನ್ ಆಡಳಿತದ ಇಂಥ ಹಲವು ಕ್ರಮಗಳಿಂದಾಗಿ ಅಫ್ಘಾನಿಸ್ತಾನಕ್ಕೆ ಅಂತಾರಾಷ್ಟ್ರೀಯ ನೆರವು ಸಿಗುವುದು ಇನ್ನೂ ದುಸ್ತರವಾಗಿದೆ.