Stratospheric Balloons: ಅಮೆರಿಕ ಮೇಲೆ ಹಾರಾಡಿದ ಚೀನಾದ ನಿಗೂಢ ಬಲೂನ್​ಗಳು ಹೇಗೆ ಕೆಲಸ ಮಾಡುತ್ತವೆ? ಇಲ್ಲಿದೆ ವಿವರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 05, 2023 | 12:17 PM

China Spy Balloons: ಪತ್ತೆಯಾಗದಿದ್ದರೆ ಈ ಬಲೂನ್ ಅಮೆರಿಕದ ಅಣ್ವಸ್ತ್ರ ಕೇಂದ್ರದ ಕಡೆಗೆ ತೆರಳಬಹುದಿತ್ತು ಎಂಬ ಆತಂಕ ವ್ಯಕ್ತವಾಗಿದೆ. ಸದ್ದಿಲ್ಲದೆ ಸಂಚರಿಸುವ ಈ ಬಲೂನ್​ಗಳ ತಂತ್ರಜ್ಞಾನದ ವಿವರಗಳು ಇಲ್ಲಿದೆ.

Stratospheric Balloons: ಅಮೆರಿಕ ಮೇಲೆ ಹಾರಾಡಿದ ಚೀನಾದ ನಿಗೂಢ ಬಲೂನ್​ಗಳು ಹೇಗೆ ಕೆಲಸ ಮಾಡುತ್ತವೆ? ಇಲ್ಲಿದೆ ವಿವರ
ಅಮೆರಿದಲ್ಲಿ ಹಾರಾಡಿದ ಬಲೂನ್​
Follow us on

ಅಮೆರಿಕದ ವಾಯುಪ್ರದೇಶದಲ್ಲಿ ಹಾರಾಡಿದ ಚೀನಾದ ಬಲೂನ್ (Chinese Balloon) ಈಗ ವಿಶ್ವಮಟ್ಟದ ಸುದ್ದಿಯಾಗಿದೆ. ನೆಲದಿಂದ 60,000 ಅಡಿಗಳಷ್ಟು ಎತ್ತರದಲ್ಲಿ ಹಾರಾಡುತ್ತಿದ್ದ ಬಲೂನು (Stratospheric Balloons) ಬರಿಗಣ್ಣಿಗೆ ಕಾಣಿಸುತ್ತಿತ್ತು. ಅಷ್ಟು ಎತ್ತರದಲ್ಲಿಯೂ ಈ ಆಕಾಶಕಾಯ ಬರಿಗಣ್ಣಿಗೆ ಕಾಣಿಸುತ್ತಿತ್ತು ಎನ್ನುವುದು ಅದೆಷ್ಟು ದೊಡ್ಡದಾಗಿತ್ತು ಎನ್ನುವುದನ್ನು ಬಿಂಬಿಸುತ್ತದೆ. ಈ ಬಲೂನ್​ ಅನ್ನು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ‘ಗೂಢಚರ್ಯೆಗೆ ಬಳಸುವ ಸಾಧನ’ ಎಂದು ವ್ಯಾಖ್ಯಾನಿಸಿದ್ದರು. ಆದರೆ ಚೀನಾ ಈ ಆರೋಪವನ್ನು ತಳ್ಳಿಹಾಕಿತ್ತು. ‘ವೈಜ್ಞಾನಿಕ ಸಂಶೋಧನೆ, ಟೆಲಿಕಮ್ಯುನಿಕೇಶನ್ ಮತ್ತು ಹವಾಮಾನ ಮುನ್ಸೂಚನೆಗಾಗಿ ಮಾಹಿತಿ ಕಲೆಹಾಕುವ ಸಾಧನವಿದು’ ಎಂದು ಚೀನಾ ಸ್ಪಷ್ಟನೆ ನೀಡಿತ್ತು. ಇದು ನಿಜಕ್ಕೂ ಗೂಢಚರ್ಯೆಗೆ ಬಳಸುತ್ತಿದ್ದ ಸಾಧನವೇ ಅಥವಾ ವೈಜ್ಞಾನಿಕ ಸಂಶೋಧನೆಗೆಂದು ಹಾರಿಬಿಟ್ಟಿದ್ದ ಸಾಮಾನ್ಯ ಬಲೂನ್​ ಅಷ್ಟೇ ಆಗಿತ್ತೇ ಎಂಬ ಬಗ್ಗೆ ಈವರೆಗೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಅತ್ಯಂತ ಎತ್ತರದಲ್ಲಿ ಹಾರಾಡುವ ಇಂಥ ಬಲೂನ್​ಗಳ ಬಗ್ಗೆ ಕೆಲ ಮೂಲ ಮಾಹಿತಿ ಇಲ್ಲಿದೆ.

ಆಕಾಶದಲ್ಲಿ ಒಂದು ಕಣ್ಣು

ವೈಮಾನಿಕ ಎಂಜಿನಿಯರಿಂಗ್​ನಲ್ಲಿ ‘ಶೂನ್ಯ ತಾಪಮಾನದ ದೀರ್ಘಗಾಮಿ ಬಲೂನ್’ (zero-pressure ultra-long duration balloon) ಎಂದು ಕರೆಯುವ ಸಾಧನವನ್ನೇ ಅಮೆರಿಕದಲ್ಲಿ ಕಾಣಿಸಿಕೊಂಡ ಬಲೂನ್​ ಸಹ ಹೋಲುತ್ತದೆ. ಮಾಹಿತಿ ಕಲೆಹಾಕಬೇಕು ಅಥವಾ ಗೂಢಚರ್ಯೆ ನಡೆಸಬೇಕಕು ಎಂದುಕೊಂಡ ನಿರ್ದಿಷ್ಟ ಪ್ರದೇಶದ ಮೇಲೆ ವಾರ ಅಥವಾ ತಿಂಗಳುಗಟ್ಟಲೆ ಈ ಬಲೂನು ಹಾರಬಲ್ಲದು. ಆಗಸದಲ್ಲಿ ನೆಲೆನಿಂತೇ ಅತ್ಯಂತ ಪ್ರಬಲ ಮತ್ತು ಸೂಕ್ಷ್ಮ ಸಂವೇದಕಗಳು (Sensor) ಹಾಗೂ ಕ್ಯಾಮೆರಾಗಳ ಮೂಲಕ ಸಾಕಷ್ಟು ದತ್ತಾಂಶಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.

ಅಮೆರಿಕದಲ್ಲಿ ಇದೀಗ ಹಾರಾಡಿರುವ ಚೀನಾದ ಬಲೂನ್​ ಒಂದು ವೇಳೆ ಎಲ್ಲರೂ ಆರೋಪಿಸುವಂತೆ ನಿಜವಾಗಿಯೂ ಗೂಢಚರ್ಯೆಗೆ ಬಳಸುವ ಬಲೂನ್ ಆಗಿದ್ದರೆ ಅದರಲ್ಲಿ ಕ್ಯಾಮೆರಾ, ಟೆಲಿಕಮ್ಯುನಿಕೇಶನ್ ಉಪಕರಣಗಳು ಇದ್ದಿರಬಹುದು ಎಂದು ಅಮೆರಿಕದ ಭದ್ರತಾ ವಿಶ್ಲೇಷಕ ಜೇಮ್ಸ್ ಲೂಯಿಸ್ ಹೇಳುತ್ತಾರೆ. ‘ಈಗ ಹೊಡೆದುಹಾಕಿರುವ ಬಲೂನ್​ನಲ್ಲಿ ಸೆನ್ಸಾರ್​ ಪ್ಯಾಕೇಜ್​ಗಳು ಪತ್ತೆಯಾದರೆ ಅವುಗಳ ಲಕ್ಷಣವನ್ನು ವಿಶ್ಲೇಷಿಸಿ ಅದು ಗೂಢಚರ್ಯೆಗೆ ಸಂಬಂಧಿಸಿದ್ದೇ ಅಥವಾ ಹವಾಮಾನಕ್ಕೆ ಸಂಬಂಧಿಸಿದ್ದೇ ಎಂಬ ವಿಚಾರ ಸ್ಪಷ್ಟವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಅಮೆರಿಕದ ದಕ್ಷಿಣ ಕರೊಲಿನಾ ಕಡಲ ತೀರದಲ್ಲಿ ಫೈಟರ್​ ಪೈಲಟ್​ಗಳು ಕ್ಷಿಪಣಿಯೊಂದನ್ನು ಹಾರಿಬಿಟ್ಟು ಹೊಡೆದುರುಳಿಸಿದ ಬಲೂನ್​ ಯಾವ ವರ್ಗಕ್ಕೆ ಸೇರಿದ್ದು ಎಂಬುದನ್ನು ಪತ್ತೆ ಮಾಡಲು ಅಮೆರಿಕದ ರಕ್ಷಣಾ ಇಲಾಖೆಗೆ ಈವರೆಗೆ ಸಾಧ್ಯವಾಗಿಲ್ಲ. ಬಲೂನ್​ನ ಅವಶೇಷಗಳನ್ನು ಸಂಗ್ರಹಿಸಲು ಅಮೆರಿಕದ ನೌಕಾಪಡೆ ಮತ್ತು ಕೋಸ್ಟ್​ ಗಾರ್ಡ್​ ಸಿಬ್ಬಂದಿಗೆ ರಕ್ಷಣಾ ಇಲಾಖೆ ಆದೇಶಿಸಿದೆ.

ಬಲೂನ್​ಗೆ ಬಳಕೆಯಾದ ತಂತ್ರಜ್ಞಾನ

ಈ ಬಲೂನ್​ನ ಬಹುಭಾಗವನ್ನು (ಮೇಲ್ಭಾಗ) ಹೀಲಿಯಂ ಅಥವಾ ಹೈಡ್ರೊಜನ್​ ಆವರಿಸಿರುತ್ತದೆ. ಇದು ವಾತಾವರಣದ ಗಾಳಿಗಿಂತಲೂ ಕಡಿಮೆ ತೂಕ ಹೊಂದಿದ್ದು ಬಲೂನ್ ಕೆಳಗೆ ಇಳಿಯದಂತೆ ನೋಡಿಕೊಳ್ಳುತ್ತದೆ. ಕೆಳಭಾಗದಲ್ಲಿ ವಾತಾವರಣದ ಗಾಳಿ ತುಂಬಿಸಲಾಗುತ್ತದೆ. ಈ ಗಾಳಿಯ ಪ್ರಮಾಣ ಹೆಚ್ಚು-ಕಡಿಮೆ ಮಾಡುವ ಮೂಲಕ ಬಲೂನ್​ನ ಎತ್ತರವನ್ನು, ಕೆಳಗೆ ಇಳಿಯಬೇಕಾದಾಗ ಇಳಿಸಲು ನೆರವಾಗುತ್ತದೆ. ಕೆಳಭಾಗಕ್ಕೆ ಹೊಂದಿಕೊಂಡಂತೆ ಇರುವ ಕಡ್ಡಿಗೆ ಸಣ್ಣ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿರುತ್ತದೆ. ಇದು ಸೆನ್ಸಾರ್​ಗಳು ಕಾರ್ಯನಿರ್ವಹಿಸಲು ಬೇಕಿರುವಷ್ಟು ವಿದ್ಯುತ್ ಉತ್ಪಾದಿಸುತ್ತದೆ. ಇದರ ಜೊತೆಗೆ ಗಾಳಿಯ ದಿಕ್ಕು ಗುರುತಿಸಲು ಬೇಕಿರುವ ಮತ್ತೊಂದು ಸೆನ್ಸಾರ್ ಇದ್ದು, ಅದು ಬಲೂನ್ ಸಾಗಲು ಅಗತ್ಯವಿರುವ ದಿಕ್ಕಿನ ಕಡೆಗೆ ಕೊಂಡೊಯ್ಯಲು ನೆರವಾಗುತ್ತದೆ.

ಚೀನಾ ಸರ್ಕಾರ ಹೇಳುವಂತೆ ಇದು ಹವಾಮಾನ ಮುನ್ಸೂಚನೆಗೆ ಬಳಸುವ ಬಲೂನ್, ಆದರೆ ದಾರಿ ತಪ್ಪಿ ಅಮೆರಿಕ ಕಡೆಗೆ ತೆರಳಿದೆ. ಕಳೆದ ಬುಧವಾರ ಇದೇ ಬಲೂನ್ ಅಲಾಸ್ಕದ ದಕ್ಷಿಣ ತುದಿಯಲ್ಲಿ ಪತ್ತೆಯಾಗಿತ್ತು. ಮಾಂಟಾನಾ ಸಮೀಪ ಇರುವ ಮಿನಟ್​ಮನ್-3 ಉಡಾವಣಾ ಕೇಂದ್ರದ ಮೇಲೆಯೂ ಇದು ಕಳೆದ ಶುಕ್ರವಾರ ಹಾರಾಡಿತ್ತು. ಮಿಸೂರಿ ಸಮೀಪದ ಸೇಂಟ್ ಲೂಯಿಸ್ ಮೇಲೆಯೂ ಇದೇ ಬಲೂನು ಕಾಣಿಸಿಕೊಂಡಿತ್ತು. ಕೊನೆಗೆ ಅಮೆರಿಕ ಸೇನೆಯು ಅಟ್ಲಾಂಟಿಕ್ ಸಾಗರದಲ್ಲಿ ಈ ಬಲೂನ್ ಹೊಡೆದುರುಳಿಸಿತು. ಪತ್ತೆಯಾಗದಿದ್ದರೆ ಈ ಬಲೂನ್ ಅಮೆರಿಕದ ಅಣ್ವಸ್ತ್ರ ಕೇಂದ್ರದ ಕಡೆಗೆ ತೆರಳಬಹುದಿತ್ತು ಎಂಬ ಆತಂಕ ವ್ಯಕ್ತವಾಗಿದೆ.

ಆರಂಭವಷ್ಟೇ ಅಲ್ಲ, ಕೊನೆಯೂ ಕುತೂಹಲಕರ

ಭೂಮಿಯಿಂದ ಸಾವಿರಾರು ಅಡಿಗಳಷ್ಟು ಎತ್ತರದಲ್ಲಿ ಈ ಬಲೂನ್ ಯಾವೆಲ್ಲಾ ಮಾಹಿತಿ ಸಂಗ್ರಹಿಸಿದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಎತ್ತರದಲ್ಲಿ ಹಾರಾಡುವ ಹಲವು ಬಲೂನ್​ಗಳು ಗಾಳಿಯ ದಿಕ್ಕು ಅನುಸರಿಸಿ ಸಂಚರಿಸುತ್ತವೆ. ಕೆಲವು ಮಾತ್ರ ಕೆಲ ಸೂಕ್ಷ್ಮ ಬದಲಾವಣೆಗಳ ಮೂಲಕ ತಮಗೆ ಬೇಕಾದ ಹಾದಿಯಲ್ಲಿ ಸಂಚರಿಸುವ ಸಾಮರ್ಥ್ಯ ಪಡೆದುಕೊಂಡಿರುತ್ತವೆ. ಅಗತ್ಯಕ್ಕೆ ತಕ್ಕಂತೆ ಎತ್ತರಕ್ಕೆ ಏರುವ ಮತ್ತು ಕೆಳಗೆ ಇಳಿಯುವ ತಂತ್ರಗಳನ್ನು ಬಳಸುವ ಮೂಲಕ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೇಕಾದಷ್ಟು ಹೊತ್ತು ಇರಬಲ್ಲವು. ಅಮೆರಿಕ ಸಹ ಹಲವು ವರ್ಷಗಳಿಂದ ಇಂಥ ಹಲವು ಮಾದರಿಯ ಬಲೂನ್​ಗಳನ್ನು ಬಳಸುತ್ತಿವೆ.

ಬಲೂನ್​ಗಳು ತಮ್ಮ ಕಾರ್ಯಾಚರಣೆ ಪೂರ್ಣಗೊಳಿಸಿದ ನಂತರ ಸಾಮಾನ್ಯವಾಗಿ ತಮ್ಮ ದೇಶಕ್ಕೆ ಹಿಂದಿರುಗುತ್ತವೆ. ಸೆನ್ಸಾರ್-ಕ್ಯಾಮೆರಾ ಪ್ಯಾಕೇಜ್​ಗಳನ್ನು ಪ್ಯಾರಾಚೂಟ್​ಗಳ ಸಹಾಯದಿಂದ ಭೂಮಿಗೆ ಇಳಿಸುತ್ತವೆ. ಸೆನ್ಸಾರ್​ಗಳನ್ನು ಅನುಸರಿಸಿ ವಿಶೇಷ ಪಡೆಗಳು ಈ ಪ್ಯಾಕೇಜ್​ಗಳನ್ನು ಸಂಗ್ರಹಿಸಿ, ವಿಜ್ಞಾನಿಗಳು ಅಥವಾ ವಿಶ್ಲೇಷಕರಿಗೆ ಒಪ್ಪಿಸುತ್ತಾರೆ. ಕೆಲವೊಮ್ಮೆ ಮಾತ್ರ ಬಲೂನ್​ಗಳು ಆಗಸದಲ್ಲಿ ಇರುವಂತೆಯೇ ಹೆಲಿಕಾಪ್ಟರ್​ಗಳ ಮೂಲಕ ಸೆನ್ಸಾರ್-ಕ್ಯಾಮೆರಾಗಳ ಪ್ಯಾಕೇಜ್​ ಸಂಗ್ರಹಿಸಲಾಗುತ್ತದೆ.

ಈ ಬಲೂನ್​ಗಳಲ್ಲಿದ್ದ ಸಾಧನಗಳ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆ ಈಗಾಗಲೇ ನಿಖರ ಮಾಹಿತಿ ಕಲೆಹಾಕಿದೆ. ಆದರೆ ಅಧಿಕೃತವಾಗಿ ಏನೂ ಹೇಳುತ್ತಿಲ್ಲ. ಚೀನಾದ ಗೂಢಚಾರಿ ಉಪಗ್ರಹಗಳು ಸಂಗ್ರಹಿಸಲು ಆಗದ ಯಾವುದೇ ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯ ಈ ಬಲೂನ್​ಗಳಿಗೆ ಇದೆ ಎಂದು ಹೇಳಲು ಆಗುವುದಿಲ್ಲ ಎಂಬುದಷ್ಟೇ ಅಮೆರಿಕದ ರಕ್ಷಣಾ ಇಲಾಖೆಯ ಅಧಿಕೃತ ಪ್ರತಿಕ್ರಿಯೆಯಾಗಿದೆ.

ಇದನ್ನೂ ಓದಿ: Chinese ‘Spy’ Balloon: ಅಮೆರಿಕದಲ್ಲಿ ಮತ್ತೆ ಕಾಣಿಸಿದ ಚೀನಾ ರಹಸ್ಯ ಬಲೂನ್; ಬ್ಲಿಂಕೆನ್ ಚೀನಾ ಭೇಟಿ ರದ್ದು

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Sun, 5 February 23