ಕಾಬೂಲ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಆಡಳಿತವು ಇಂದು (ಬುಧವಾರ) ಕೊಲೆ ಪ್ರಕರಣದ ಅಪರಾಧಿಯೊಬ್ಬನಿಗೆ ಸಾರ್ವಜನಿಕ ಮರಣದಂಡನೆಯನ್ನು (public execution) ನೀಡಿದೆ ಎಂದು ಅದರ ವಕ್ತಾರರು ಹೇಳಿದ್ದಾರೆ. ಕಳೆದ ವರ್ಷ ತಾಲಿಬಾನ್ (Taliban)ಗುಂಪು ದೇಶವನ್ನು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿ ಸಾರ್ವಜನಿಕ ಮರಣದಂಡನೆ ಶಿಕ್ಷೆ ನೀಡಿದೆ. 2017ರಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಇರಿದು ಕೊಂದ ವ್ಯಕ್ತಿಗೆ ಪಶ್ಚಿಮ ಫರಾಹ್ ಪ್ರಾಂತ್ಯದಲ್ಲಿ ಮರಣದಂಡನೆ ವಿಧಿಸಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಈ ಹೊತ್ತಲ್ಲಿ ಗುಂಪಿನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎನ್ನಲಾಗಿದೆ.ಈ ಪ್ರಕರಣವನ್ನು ಮೂರು ನ್ಯಾಯಾಲಯಗಳು ತನಿಖೆ ನಡೆಸಿದ್ದು ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ನೆಲೆಸಿರುವ ಗುಂಪಿನ ಸರ್ವೋಚ್ಚ ಆಧ್ಯಾತ್ಮಿಕ ನಾಯಕರಿಂದ ಅಧಿಕೃತಗೊಳಿಸಲಾಗಿದೆ ಎಂದು ಮುಜಾಹಿದ್ ಹೇಳಿದರು. ಅಂದಹಾಗೆ ವ್ಯಕ್ತಿಯನ್ನು ಹೇಗೆ ಸಾಯಿಸಲಾಯಿತು ಎಂದು ಅವರು ಹೇಳಲಿಲ್ಲ. ಹತ್ತಕ್ಕೂ ಹೆಚ್ಚು ಹಿರಿಯ ತಾಲಿಬಾನ್ ಅಧಿಕಾರಿಗಳು, ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಮತ್ತು ಹಾಲಿ ಉಪ ಪ್ರಧಾನಿ ಅಬ್ದುಲ್ ಘನಿ ಬರಾದಾರ್, ಹಾಗೆಯೇ ದೇಶದ ಮುಖ್ಯ ನ್ಯಾಯಮೂರ್ತಿ, ಹಂಗಾಮಿ ವಿದೇಶಾಂಗ ಮಂತ್ರಿ ಮತ್ತು ಹಾಲಿ ಶಿಕ್ಷಣ ಸಚಿವರು ಮರಣದಂಡನೆ ಹೊತ್ತಲ್ಲಿ ಹಾಜರಾಗಿದ್ದರು ಎಂದು ಮುಜಾಹಿದ್ ಹೇಳಿದ್ದಾರೆ.
ದೇಶದ ಸರ್ವೋಚ್ಚ ನ್ಯಾಯಾಲಯವು ದರೋಡೆ ಮತ್ತು ವ್ಯಭಿಚಾರದಂತಹ ಅಪರಾಧದ ದೋಷಿಗಳಾದ ಪುರುಷರು ಮತ್ತು ಮಹಿಳೆಯರ ಮೇಲೆ ಸಾರ್ವಜನಿಕ ಶಿಕ್ಷೆ ಘೋಷಿಸಿದ ನಂತರ ಇದು ಇತ್ತೀಚಿನ ವಾರಗಳಲ್ಲಿ ಹಲವಾರು ಪ್ರಾಂತ್ಯಗಳಲ್ಲಿ ನಡೆದಿದೆ.1990 ರ ದಶಕದಲ್ಲಿ ಇದೇ ರೀತಿಯ ಶಿಕ್ಷೆ ನೀಡಲಾಗುತ್ತಿದ್ದು, ಮತ್ತೆ ಇದು ಮರುಕಳಿಸುವ ಸಾಧ್ಯತೆ ಇದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯ ವಕ್ತಾರರು ಕಳೆದ ತಿಂಗಳು ತಾಲಿಬಾನ್ ಅಧಿಕಾರಿಗಳಿಗೆ ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕ ಚಾಟಿಯೇಟು ಶಿಕ್ಷೆ ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿದ್ದರು. ತಾಲಿಬಾನ್‌ನ ಅತ್ಯುನ್ನತ ಆಧ್ಯಾತ್ಮಿಕ ನಾಯಕ ನವೆಂಬರ್‌ನಲ್ಲಿ ನ್ಯಾಯಾಧೀಶರನ್ನು ಭೇಟಿಯಾಗಿದ್ದು, ನ್ಯಾಯಾಲಯದ ಹೇಳಿಕೆಯ ಪ್ರಕಾರ ಅವರು ಷರಿಯಾ ಕಾನೂನಿಗೆ ಅನುಗುಣವಾಗಿ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು.
ಹಿಂದಿನ 1996-2001 ತಾಲಿಬಾನ್ ಆಳ್ವಿಕೆಯ ಅಡಿಯಲ್ಲಿ ಸಾರ್ವಜನಿಕ ಹೊಡೆತ ಮತ್ತು ಕಲ್ಲೆಸೆತದ ಮೂಲಕ ಮರಣದಂಡನೆ ಶಿಕ್ಷೆ ನೀಡಲಾಗುತ್ತಿತ್ತು. ಅಂತಹ ಶಿಕ್ಷೆಯು ನಂತರ ಅಪರೂಪವಾಯಿತು. ಅಫ್ಘಾನಿಸ್ತಾನದಲ್ಲಿ ಮರಣದಂಡನೆಯು ಕಾನೂನುಬದ್ಧವಾಗಿ ಉಳಿದಿದ್ದರೂ, ವಿದೇಶಿ ಬೆಂಬಲಿತ ಅಫ್ಘಾನ್ ಸರ್ಕಾರ ಇದನ್ನು ಖಂಡಿಸಿತ್ತು.