Karwar News: ಗಂಗಾವಳಿ ನದಿ ಪ್ರವಾಹ, ಡ್ರೋಣ್ ಕ್ಯಾಮೆರಾದಲ್ಲಿ ಸೆರೆ

| Updated By: Ayesha Banu

Updated on: Jul 25, 2023 | 11:07 AM

ಗಂಗಾವಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ತೀರದ ಮನೆಗಳಿಗೆ ನೀರು ನುಗ್ಗಲಾರಂಭಿಸಿದೆ. ಗಂಗಾವಳಿ ಸಮೀಪವೇ ಇರುವ ಬಿಳಿಹೊಯ್ಗೆಯಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಮನೆಗಳ ಅಂಗಳಕ್ಕೆ ನೀರು ಬಂದಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಗಂಗಾವಳಿ ನದಿ‌ ಉಕ್ಕಿ ಹರಿಯುತ್ತಿರುವ ಪರಿಣಾಮ ಅಂಕೋಲಾ ಭಾಗದ ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಲಾರಂಭಿಸಿದ್ದು, ಜನ ಭಯದಲ್ಲಿಯೇ ದಿನ‌ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ‌ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಅದರಲ್ಲಿಯೂ ಗಂಗಾವಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ತೀರದ ಮನೆಗಳಿಗೆ ನೀರು ನುಗ್ಗಲಾರಂಭಿಸಿದೆ. ಗಂಗಾವಳಿ ಸಮೀಪವೇ ಇರುವ ಬಿಳಿಹೊಯ್ಗೆಯಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಮನೆಗಳ ಅಂಗಳಕ್ಕೆ ನೀರು ಬಂದಿದೆ. ಅಲ್ಲದೆ ಕೆಲ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಪರದಾಡುವಂತಾಗಿದೆ.

ಇನ್ನು ಈ ಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪ್ರವಾಹ ಎದುರಾಗಿರುವ ಕಾರಣ ಜನ ಸಂಕಷ್ಟದ ಮೇಲೆ ಸಂಕಷ್ಟ ಎದುರಿಸುವಂತಾಗಿದೆ. ಗಂಗಾವಳಿ ನದಿ ಸಮೀಪದ ದಂಡೆ ಭಾಗದಲ್ಲಿ ಖಾರ್ಲ್ಯಾಂಡ್ ಒಡ್ಡು ಒಡೆದ ಪರಿಣಾಮ ಕಳೆದ 4 ವರ್ಷದಿಂದ ನಿರಂತರವಾಗಿ ನೆರೆ ಹಾವಳಿ ಸೃಷ್ಟಿಯಾಗುವಂತಾಗಿದೆ. ಕೂಡಲೇ ಖಾರ್ಲ್ಯಾಂಡ್ ಸರಿಪಡಿಸಿ ಅಗತ್ಯ ಮುಂಜಾಗೃತೆವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ನಿರಂತರವಾಗಿ ನೆರೆ ಏರಿಕೆಯಾಗುತ್ತಿರುವ ಕಾರಣ ಜನ ಕೂಡ ಮನೆಗಳಲ್ಲಿನ ಅಕ್ಕಿ, ಬಟ್ಟೆ, ಬಂಗಾರ ಸೇರಿದಂತೆ ಇತರೆ ವಸ್ತುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಾಟ ಮಾಡುತ್ತಿದ್ದಾರೆ. ಜೊತೆಗೆ ಇನ್ನುಳಿದ ವಸ್ತುಗಳನ್ನು ನೀರು ಹೆಚ್ಚಾದಲ್ಲಿ ಅವುಗಳನ್ನು ಸಾಗಾಟ ಮಾಡುವುದಕ್ಕೂ ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ ನೀರು ಹೆಚ್ಚಾದಲ್ಲಿ ಮಾತ್ರ ಮನೆ ಬಿಟ್ಟು ಹೋಗುವುದಕ್ಕೆ ಮುಂದಾಗಿದ್ದಾರೆ.

ನೆರೆ ಪ್ರದೇಶದಲ್ಲಿ ಸ್ಥಳೀಯ ಗ್ರಾಮಪಂಚಾಯಿತಿ ಪಿಡಿಓ ಸೇರಿದಂತೆ ಇಬ್ಬಂದಿ ಮನೆ ಮನೆಗೆ ತೆರಳಿ ಕಾಳಜಿ ಕೇಂದ್ರಕ್ಕೆ ತೆರಳುವಂತೆ ತಿಳಿಸುತ್ತಿದ್ದಾರೆ. ಶಾಲೆಗಳಲ್ಲಿ ಕಾಳಜಿ ಕೇಂದ್ರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದು, ನೆರೆ ಹೆಚ್ಚಾದಲ್ಲಿ ಜನರ ಸಾಗಾಟಕ್ಕೆ ದೋಣಿ ವ್ಯವಸ್ಥೆ ಮಾಡಲಾಗಿದೆ. ಕಳೆದ ಕೆಲ ವರ್ಷಗಳಿಂದ ಈ ರಿತಿ ಸಮಸ್ಯೆಯಾಗುತ್ತಿದ್ದು ನಾವೆಲ್ಲರೂ ರಜೆ ನಡುವೆಯೂ ಕೆಲಸ ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Published on: Jul 25, 2023 11:07 AM