Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್ಗೆ ಸಹಾಯ ಹಸ್ತ ಚಾಚಿರುವ ಲಿಂಕ್ಡಿನ್ನಿಗರು
Swiggy Delivery Boy : ‘ಈ ಡೆಲಿವರಿ ಸಿಬ್ಬಂದಿ ನನ್ನ ಮನೆ ಬಾಗಿಲಿಗೆ ಬಂದಾಗ, ಮಂದ ಮತ್ತು ಮೂರ್ಖನಿರಬಹುದು ಎನ್ನಿಸಿತು. ಮೂರು ಮಕ್ಕಳ ಶಿಕ್ಷಣಕ್ಕಾಗಿ ಬೆಂಗಳೂರು ಸೇರಿರುವ ಆತ ಅನೇಕ ಪ್ರಶ್ನೆಗಳನ್ನು ನನ್ನಲ್ಲಿ ಉಳಿಸಿ ಹೋದ.’
Swiggy : ನಾವು ಯಾಕೆ ಆನ್ಲೈನ್ನಲ್ಲಿ ತಿಂಡಿ ತಿನಿಸು ಊಟವನ್ನು ಆರ್ಡರ್ ಮಾಡುತ್ತೇವೆ? ಅಡುಗೆ ತಯಾರಿಸಲು ಸಮಯವಿಲ್ಲವೆಂದೋ, ಹಸಿವೆಯಾಗಿದೆಯೆಂದೋ ಅಥವಾ ಸೋಮಾರಿತನದಿಂದಲೋ ಅಲ್ಲವೆ? ಹಸಿವೆಯಿಂದ ಕಾಯುತ್ತಿರುವಾಗ ಡೆಲಿವರಿ ತಡವಾದರೆ ಅದೆಷ್ಟು ಕೋಪ ಬರುತ್ತದೆ ಎನ್ನುವುದು ಇದನ್ನು ಓದುತ್ತಿರುವ ಅನೇಕರಿಗೆ ಅನುಭವವಾಗಿರುತ್ತದೆ. ಆದರೆ, ಈ ಘಟನೆಯನ್ನು ಓದಿದ ನಿಮಗೆ ಅದೆಷ್ಟು ಒಂದು ಕ್ಷಣವಾದರೂ ಅನುಕಂಪ ತಾಳ್ಮೆ ನಿಮ್ಮಲ್ಲಿ ಹರಿದು ಹೋಗುವುದು ಖಚಿತ. ಬೆಂಗಳೂರಿನಲ್ಲಿ ವಾಸವಾಗಿರುವ ರೋಹಿತ್ ಕುಮಾರ್ ಸಿಂಗ್ ಎನ್ನುವವರು ಸ್ವಿಗ್ಗಿಯ ಡೆಲಿವರಿ ಬಾಯ್ ಆಗಿರುವ ಈ ವಿಶಿಷ್ಟ ಚೇತನ (Specially Abled) ವ್ಯಕ್ತಿಯ ಬಗ್ಗೆ ಸ್ಪೂರ್ತಿದಾಯಕ ಅನುಭವವನ್ನು ಲಿಂಕ್ಡಿನ್ನಲ್ಲಿ ಹಂಚಿಕೊಂಡಿದ್ದಾರೆ. ಆ ದಿನ ಏನಾಯಿತು? ಓದಿ.
ಸ್ವಿಗ್ಗಿ ಬಾಯ್, ರೋಹಿತ್ ಅವರ ಮನೆಬಾಗಿಲಿಗೆ ಬಂದು ಡೆಲಿವರಿ ಪ್ಯಾಕೆಟ್ ತಲುಪಿಸಿದಾಗ ಈ ವ್ಯಕ್ತಿ ಮಂದ ಮತ್ತು ಮೂರ್ಖನಿರಬಹುದು ಎನ್ನಿಸಿತು.
‘ನಾನು ಮಾಡಿದ ಆರ್ಡರ್ ನನ್ನನ್ನು ತಲುಪುವಲ್ಲಿ ತಡವಾಗುತ್ತಲೇ ಇದೆ! ನಿನ್ನೆ ಭಾನುವಾರ ಬೆಂಗಳೂರು ತುಂತುರು ಮಳೆ ಮತ್ತು ತುಸು ಬಿಸಿಲಿನಿಂದ ಕೂಡಿತ್ತು. ಸೋಮಾರಿಗಳಂತೆ ನಾನೂ ಮಲಗೇ ಇದ್ದೆ. ಆ್ಯಪ್ ಮೂಲಕ ಏನಾದರೂ ತಿನ್ನಲು ಆರ್ಡರ್ ಮಾಡೋಣವೆನ್ನಿಸಿತು, ಮಾಡಿದೆ. ಅಂದಾಜು 30 ನಿಮಿಷದಲ್ಲಿ ಡೆಲಿವರಿ ಹುಡುಗ ಬರಬೇಕಿತ್ತು. ಆದರೆ ಬಾರದೇ ಇದ್ದಾಗ ತಾಳ್ಮೆಗೆಟ್ಟು ಡೆಲಿವರಿ ಹುಡುಗನಿಗೆ ಫೋನ್ ಮಾಡಿದೆ. ಅವನು ತುಂಬಾ ಸಮಾಧಾನದ ಧ್ವನಿಯಲ್ಲಿ, ‘ಸ್ವಲ್ಪ ಸಮಯದಲ್ಲಿ ನಾನಲ್ಲಿ ಇರುತ್ತೇನೆ ಸರ್’ ಎಂದ. ಮತ್ತಷ್ಟು ನಿಮಿಷಗಳು ಕಳೆದರೂ ಆ ಮಹಾನುಭಾವ ಬರಲೇ ಇಲ್ಲ. ನಾನು ಮತ್ತೆ ಫೋನ್ ಮಾಡಿ, ‘ಅಣ್ಣಾ ಬೇಗ ಬಾ, ಬಹಳ ಹಸಿವಾಗಿದೆ’ ಎಂದೆ. ಆತ ಮತ್ತೂ ಅದೇ ಶಾಂತಸ್ವರದಲ್ಲಿ, ‘ಇನ್ನೈದೇ ನಿಮಿಷ ಕೊಡಿ ಬಂದುಬಿಡುತ್ತೇನೆ’ ಎಂದ.
ಕಾಲಿಂಗ್ ಬೆಲ್ ಶಬ್ದವಾಯಿತು. ತಡವಾದ ಬಗ್ಗೆ ನನ್ನ ನಿರಾಶೆ ಅಸಮಾಧಾನ ವ್ಯಕ್ತಪಡಿಸಬೇಕೆಂದುಕೊಂಡೇ ಬಾಗಿಲು ತೆರೆದೆ. ಆದರೆ, ಆ ವ್ಯಕ್ತಿ ನಗುತ್ತಲೇ ಆರ್ಡರ್ ನೀಡಿದ. ಸುಮಾರು 40 ರ ವಯಸ್ಸು, ಅಲ್ಲಲ್ಲಿ ಬೂದುಗೂದಲು. ತನ್ನನ್ನು ತಾ ಬ್ಯಾಲೆನ್ಸ್ ಮಾಡಿಕೊಂಡು ನಿಲ್ಲಲು ಪ್ರಯತ್ನಿಸುತ್ತಿದ್ದ. ಎರಡೂ ಬಗಲುಗಳಲ್ಲಿ ಊರುಗೋಲುಗಳಿದ್ದವು. ಒಂದು ಕ್ಷಣ ನನಗೆ ಮಂಕು ಕವಿದಂತಾಯಿತು. ನನ್ನ ಆರ್ಡರ್ ತಲುಪಿಸಲು ಅವನೆಷ್ಟು ಕಷ್ಟಪಟ್ಟಿರಬೇಕು ಎಂಬುದನ್ನು ಊಹಿಸಿಕೊಳ್ಳುತ್ತಲೇ ನನ್ನ ಬಗ್ಗೆ ನನಗೇ ಒಂಥರಾ ಎನ್ನಿಸಿತು. ತಕ್ಷಣವೇ ಅವನಲ್ಲಿ ಕ್ಷಮೆ ಕೇಳಿ ಅವನೊಂದಿಗೆ ಮಾತನಾಡಲು ಪ್ರಯತ್ನಿಸಿದೆ.
ಅವನ ಹೆಸರು ಕೃಷ್ಣಪ್ಪ ರಾಥೋಡ್, ಕೊರೊನಾ ಸಮಯದಲ್ಲಿ ಕೆಫೆಯಲ್ಲಿದ್ದ ಕೆಲಸವನ್ನು ಕಳೆದುಕೊಂಡ. ಅಂದಿನಿಂದ ಸ್ವಿಗ್ಗಿ ಡೆಲಿವರಿ ಬಾಯ್ ಕೆಲಸಕ್ಕೆ ಸೇರಿಕೊಂಡ. ಮೂರು ಮಕ್ಕಳಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ಇಡೀ ದಿನ ಹೀಗೆ ಮೈಮುರಿದು ಅವರಿಗಾಗಿ ದುಡಿಯುತ್ತಿದ್ದಾನೆ. ನಂತರ ಅವನೊಂದಿಗೆ ಸುಮಾರು 2-3 ನಿಮಿಷಗಳ ಕಾಲ ಮಾತನಾಡಿದೆ. ಆಗ ಅವನು, ‘ಸರ್, ಮುಂದಿನ ಡೆಲಿವರಿಗೆ ತಡವಾಗುತ್ತಿದೆ’ ಎಂದು ಹೇಳಿ ನನ್ನಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಉಳಿಸಿ ಹೊರಟುಹೋದ.
ರೋಹಿತ್ ಈ ಪೋಸ್ಟ್ ಹಂಚಿಕೊಂಡಿದ್ದು ಕಳೆದ ವಾರ. ಸುಮಾರು 16, 000 ಲೈಕ್ಸ್ ಹೊಂದಿದೆ. ಆರ್ಥಿಕವಾಗಿ ಸಹಾಯ ಮಾಡಲು ಮತ್ತು ಉದ್ಯೋಗ ನೀಡಲು ತಯಾರಿರುವ ಸುಮಾರು 800 ಜನರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಕೃಷ್ಣಪ್ಪನ ಫೋನ್ ನಂಬರ್ ಕೇಳಿದ್ದಾರೆ.
ಈ ಹಿಂದೆ ಕೃಷ್ಣಪ್ಪನಿಂದ ಡೆಲಿವರಿ ಪಡೆದ ಮಹಿಳೆಯೊಬ್ಬರು, ‘ಈತ ಒಮ್ಮೆ ನನಗೂ ಒಮ್ಮೆ ಫುಡ್ ಡೆಲಿವರಿ ಮಾಡಿದ್ದರು. ನನ್ನ ಮನೆ ಇರುವುದು ಮೊದಲ ಮಹಡಿಯಲ್ಲಿ. ಬಾಗಿಲು ತೆಗೆದು, ‘ನಾನೇ ಕೆಳಗೆ ಬರುತ್ತಿದ್ದೆ. ಏಕೆ ಮೇಲೆ ಬಂದಿರಿ?’ಎಂದೆ. ಅದಕ್ಕೆ ಆತ, ‘ನಿಮ್ಮ ಮನೆ ಬಾಗಿಲಿಗೆ ಆಹಾರ ತಲುಪಿಸುವುದು ನನ್ನ ಕೆಲಸ’ ಎಂದಿದ್ದರು. ದಯವಿಟ್ಟು ಕೃಷ್ಣಪ್ಪನ Gpay ನಂಬರ್ ಹಂಚಿಕೊಳ್ಳಿ ರೋಹಿತ್’ ಎಂದಿದ್ದಾರೆ.
ಇಂಥ ಪ್ರಾಮಾಣಿಕ ಪರಿಶ್ರಮ ಜೀವಿಗಳು ನಿಮ್ಮ ಸುತ್ತಮುತ್ತಲೂ ಇದ್ದಾಗ ಸಹಾಯ ಮಾಡಬೇಕಲ್ಲವೆ?
ಮತ್ತಷ್ಟು ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:20 pm, Mon, 15 August 22