ಸತತ ನಾಲ್ಕು ವಿಂಬಲ್ಡನ್ (Wimbledon) ಗೆದ್ದಿದ್ದ ಸರ್ಬಿಯಾದ ಸೂಪರ್‌ಸ್ಟಾರ್ ನೊವಾಕ್ ಜೊಕೊವಿಚ್ (Novak Djokovic), 20ರ ಹರೆಯ ಕಾರ್ಲೋಸ್ ಅಲ್ಕರಾಝ್ (Carlos Alcaraz) ಎದುರು ಸೋತು ತನ್ನ ಅಜೇಯ ವಿಂಬಲ್ಡನ್ ಓಟಕ್ಕೆ ಬ್ರೇಕ್ ಹಾಕಿದ್ದಾರೆ. ವಿಂಬಲ್ಡನ್‌ನ ಪುರುಷರ ಸಿಂಗಲ್ಸ್ನಲ್ಲಿ ಸರ್ಬಿಯಾದ ದಂತಕಥೆ ಜೊಕೊವಿಚ್ ಆಳ್ವಿಕೆಯನ್ನು ಅಂತ್ಯಗೊಳಿಸಿದ 20 ವರ್ಷದ ಅಲ್ಕರಾಝ್, 1-6, 7-6, 6-1, 3-6, 6-4 ಸೆಟ್‌ಗಳಿಂದ ಗೆದ್ದು ಮೊದಲ ಬಾರಿಗೆ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ಕೊನೆಯ ಬಾರಿಗೆ ಫೆಡರರ್ ಎದುರು ವಿಂಬಲ್ಡನ್ ಫೈನಲ್‌ನಲ್ಲಿ ಸೋಲನುಭವಿಸಿದ್ದ ಜೊಕೊವಿಚ್ಗೆ 4 ವರ್ಷಗಳ ಕಾಲ ಒಂದೇ ಒಂದು ಸೋಲು ಎದುರಾಗಿರಲಿಲ್ಲ. ಈ 4 ವರ್ಷಗಳ ಅವಧಿಯಲ್ಲಿ 4 ಬಾರಿ ಈ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಜೊಕೊವಿಚ್ ಪ್ರತಿ ಬಾರಿಯೂ ಫೈನಲ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಚಾಂಪಿಯನ್‌ಶಿಪ್‌ನ ಆರಂಭದಿಂದಲೂ, ಈ ವರ್ಷ ಗ್ರ್ಯಾಂಡ್‌ಸ್ಲಾಮ್‌ನಲ್ಲಿ ಜೊಕೊವಿಚ್ರನ್ನು ಯಾರಾದರೂ ಸೋಲಿಸಲು ಸಾಧ್ಯವಾದರೆ, ಅದು 20 ವರ್ಷದ ಅಲ್ಕರಾಝ್ರಿಂದ ಮಾತ್ರ ಸಾಧ್ಯ ಎನ್ನಲಾಗುತ್ತಿತ್ತು. ಎಲ್ಲರ ನಿರೀಕ್ಷೆಯಂತೆ ಅಲ್ಕರಾಝ್ ಅದನ್ನು ಮಾಡಿ ತೀರಿದರು. ಅಷ್ಟಕ್ಕೂ ಸ್ವತಃ ಜೊಕೊವಿಚ್ರಿಂದ ಸ್ಪ್ಯಾನಿಷ್ ಬುಲ್ ಎಂದು ಕರೆಸಿಕೊಂಡ ಈ ಕಾರ್ಲೋಸ್ ಅಲ್ಕರಾಝ್ ಯಾರು?.. ಅದಕ್ಕೆಲ್ಲ ಉತ್ತರ ಇಲ್ಲಿದೆ.
20ರ ಹರೆಯದ ಕಾರ್ಲೋಸ್ ಅಲ್ಕರಾಝ್ ಸ್ಪೇನ್ ದೇಶದ ಸ್ಟಾರ್ ಟೆನಿಸ್ ಆಟಗಾರನಾಗಿದ್ದು, 2018 ರಲ್ಲಿ ತನ್ನ ವೃತ್ತಿಪರ ಟೆನಿಸ್ ಲೋಕದ ಮೊದಲ ಪಂದ್ಯವನ್ನಾಡಿದರು. ಆ ಬಳಿಕ ಅಂದರೆ 4 ವರ್ಷಗಳ ನಂತರ 2022 ರಲ್ಲಿ ಯುಎಸ್ ಓಪನ್ ಗೆಲ್ಲುವ ಮೂಲಕ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟರು. ಸುಮಾರು 24,000 ಜನಸಂಖ್ಯೆಯನ್ನು ಹೊಂದಿರುವ ಸಣ್ಣ ಹಳ್ಳಿಯಾದ ಎಲ್ ಪಾಲ್ಮಾರ್ (ಮುರ್ಸಿಯಾ) ನಲ್ಲಿ ಜನಿಸಿದ ಅಲ್ಕಾರಾಝ್ ಟೆನ್ನಿಸ್ ಕಡೆಗೆ ಒಲವು ಹೊಂದಿರುವ ಕುಟುಂಬದಲ್ಲಿ ಬೆಳೆದರು. ಅವರ ಅಜ್ಜ ಮತ್ತು ತಂದೆ, ಇಬ್ಬರೂ ವೃತ್ತಿಪರವಾಗಿ ಟೆನಿಸ್ ಆಡಿದ್ದು, ಅವರ ತಂದೆ ಟೆನಿಸ್ ಅಕಾಡೆಮಿಯನ್ನೂ ನಡೆಸುತ್ತಿದ್ದಾರೆ.
A lifelong dream! ?? You always have to believe! I’m only 20 years old, everything is happening too fast, but I’m very proud of how we work every day. Thank you everyone for your support, from the bottom of my heart! ??? @Wimbledon
? Getty pic.twitter.com/MsdjFqBhiO
— Carlos Alcaraz (@carlosalcaraz) July 16, 2023
ಇನ್ನು ಅಲ್ಕರಾಜ್ ಅವರ ತರಬೇತುದಾರರಾಗಿರುವ ಜುವಾನ್ ಕಾರ್ಲೋಸ್ ಫೆರೆರೊ ಕೂಡ ಮಾಜಿ ವಿಶ್ವದ ನಂ. 1 ಶ್ರೇಯಾಂಕಿತರಾಗಿದ್ದು, ಎರಡು ಬಾರಿ ಒಲಿಂಪಿಯನ್ ಆಗಿರುವುದರೊಂದಿಗೆ, 2003 ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಾರೆ.
ತನ್ನ ಆಟದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಲ್ಕರಾಝ್, ನನ್ನ ಆಟ ರೋಜರ್ ಫೆಡರರ್ ಅವರಂತೆಯೇ ಇದ್ದರೂ, ನಾನು ಮಾತ್ರ ನನ್ನ ರೋಲ್ ಮಾಡೆಲ್ ಆಗಿರುವ ರಾಫೆಲ್ ನಡಾಲ್ ಅವರಂತೆ ಇರಲು ಬಯಸುತ್ತೇನೆ ಎಂದಿದ್ದರು.
2021 ರಲ್ಲಿ ತನ್ನ ಮೊದಲ ಎಟಿಪಿ ಟೂರ್ ಪ್ರಶಸ್ತಿಯನ್ನು ಗೆದ್ದ ಅಲ್ಕರಾಝ್, ಆ ಬಳಿಕ 2022 ರಲ್ಲಿ, ಮಿಯಾಮಿ ಮತ್ತು ಮ್ಯಾಡ್ರಿಡ್‌ನಲ್ಲಿ ಎರಡು ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಒಟ್ಟಾರೆಯಾಗಿ, 2021ರಲ್ಲಿ ಅಲ್ಕರಾಝ್ ಖಾತೆಗೆ ಬರೋಬ್ಬರಿ 4 ಎಟಿಪಿ ಪ್ರಶಸ್ತಿಗಳು ಬಂದು ಸೇರಿದವು.
20ರ ಹರೆಯದ ಅಲ್ಕರಾಝ್ ಟೆನಿಸ್ ಕೋರ್ಟ್ನಲ್ಲಿ ಜೊಕೊವಿಕ್ರಂತಹ ದಿಗ್ಗಜರನ್ನು ಸೋಲಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಅಂದರೆ 2022 ರಲ್ಲಿ ಅಲ್ಕರಾಝ್, ಟೆನಿಸ್ ದಿಗ್ಗಜರಾದ ರಾಫೆಲ್ ನಡಾಲ್, ನೊವಾಕ್ ಜೊಕೊವಿಚ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿ ಮ್ಯಾಡ್ರಿಡ್ ಓಪನ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ