ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಎರಡು ದಿನಗಳ ಪ್ರವಾಸಕ್ಕಾಗಿ ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ. ಎರಡು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ಪ್ಯಾರಿಸ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಫ್ರಾನ್ಸ್ ಪ್ರಧಾನಿ ಎಲಿಸಬೆತ್ ಬೋರ್ನ್ ಸ್ವಾಗತಿಸಿದರು. ಬಳಿಕ ಪ್ಯಾರಿಸ್ನಲ್ಲಿ ನಡೆದ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಭಾಗವಹಿಸಿದ್ದ ಮೋದಿ, ಕಾರ್ಯಕ್ರಮದಲ್ಲಿ ಫ್ರೆಂಚ್ ಫುಟ್ಬಾಲ್ ಸ್ಟಾರ್ ಸ್ಟ್ರೈಕರ್ ಕೈಲಿಯನ್ ಎಂಬಪ್ಪೆ (Kylian Mbappe) ಅವರ ಗುಣಗಾನ ಮಾಡಿದ್ದಾರೆ.
ಫ್ರಾನ್ಸ್‌ನ ಅತ್ಯಂತ ಜನಪ್ರಿಯ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರಾಗಿರುವ ಕೈಲಿಯನ್ ಎಂಬಪ್ಪೆ ಪ್ರಪಂಚದಾದ್ಯಂತ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಬಾರಿ ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ ತಂಡವನ್ನು ಫೈನಲ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂಬಪ್ಪೆ, ಫೈನಲ್ ಪಂದ್ಯದಲ್ಲಿ ದಾಖಲೆಯ ಹ್ಯಾಟ್ರಿಕ್ ಗೋಲು ಬಾರಿಸಿದ್ದರು. ಅಲ್ಲದೆ ಇದರ ಹಿಂದಿನ ಆವೃತ್ತಿ, ಅಂದರೆ ರಷ್ಯಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ ಚಾಂಪಿಯನ್ ಆಗುವಲ್ಲಿ ಎಂಬಪ್ಪೆ ಪಾತ್ರ ಆಗಾದವಾಗಿತ್ತು. ಇನ್ನು ಕತಾರ್ ವಿಶ್ವಕಪ್ನಲ್ಲಿ ಆಡಿದ ಏಳು ಪಂದ್ಯಗಳಲ್ಲಿ 8 ಗೋಲು ಸಿಡಿಸಿದ್ದ ಎಂಬಪ್ಪೆ ಗೋಲ್ಡನ್ ಬೂಟ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ದಾಖಲೆಯ 172 ಗೋಲುಗಳು; ಮೆಸ್ಸಿ, ಎಂಬಪ್ಪೆಗೆ ಪ್ರತಿಷ್ಠಿತ ಪ್ರಶಸ್ತಿ! ಈ ವಿಶ್ವಕಪ್ನ 5 ಪ್ರಮುಖ ಸಂಗತಿಗಳಿವು
ಪ್ರಸ್ತುತ ಫುಟ್ಬಾಲ್ ಜಗತ್ತಿನಲ್ಲಿ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಶ್ಷಿಯನೋ ರೊನಲ್ಡೋ ಬಳಿಕ ಕೇಳಿಬರುವ ಪ್ರಮುಖ ಹೆಸರೆಂದರೆ ಅದು ಕೈಲಿಯನ್ ಎಂಬಪ್ಪೆ. ಹೀಗಾಗಿ ಈ ಫ್ರೆಂಚ್ ಸ್ಟಾರ್ಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಎಂಬಪ್ಪೆ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಫ್ರಾನ್ಸ್ ಪ್ರವಾಸದಲ್ಲಿರುವ ಮೋದಿ, ಫ್ರಾನ್ಸ್ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಕೈಲಿಯನ್ ಎಂಬಪ್ಪೆ ಅವರ ಗುಣಗಾನ ಮಾಡಿದ್ದು, ಎಂಬಪ್ಪೆ ನಿಮ್ಮ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದರು. “ಫ್ರೆಂಚ್ ಫುಟ್ಬಾಲ್ ಆಟಗಾರ ಕೈಲಿಯನ್ ಎಂಬಪ್ಪೆ ಭಾರತದ ಯುವಜನರಲ್ಲಿ ಸೂಪರ್‌ಹಿಟ್ ಆಗಿದ್ದಾರೆ. ಬಹುಶಃ ಫ್ರಾನ್ಸ್‌ಗಿಂತ ಭಾರತದಲ್ಲಿ ಹೆಚ್ಚಿನ ಜನರಿಗೆ ಎಂಬಪ್ಪೆ ಪರಿಚಿತರಾಗಿದ್ದಾರೆ” ಎಂದು ಪ್ಯಾರಿಸ್‌ನ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Fri, 14 July 23