R Praggnanandhaa: ವಿಶೇಷ ಸಾಧನೆ: ವಿಶ್ವಕಪ್ ಚೆಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ ಪ್ರಜ್ಞಾನಂದ
FIDE World Cup: ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹೊರತುಪಡಿಸಿ ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆರ್ ಪ್ರಜ್ಞಾನಂದ ಆಗಿದ್ದಾರೆ. ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ವಿಜೇತರು ತಮ್ಮ ಅಂತಿಮ ಪಂದ್ಯದಲ್ಲಿ ಪ್ರಸ್ತುತ ವಿಶ್ವ ಚಾಂಪಿಯನ್ ಅನ್ನು ಎದುರಿಸುತ್ತಾರೆ.
ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ (R Praggnanandhaa) ಅವರು ಗುರುವಾರ ರಾತ್ರಿ ಬಾಕುದಲ್ಲಿ ನಡೆದ ಫಿಡೆ ವಿಶ್ವಕಪ್ ಚೆಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಿದ ದಾಖಲೆ ಬರೆದಿದ್ದಾರೆ. ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಪ್ರಜ್ಞಾನಂದ ಆಗಿದ್ದಾರೆ. 18 ವರ್ಷದ ಇವರು ರಣರೋಚಕ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದೇಶಬಾಂಧವ ಅರ್ಜುನ್ ಎರಿಗೈಸಿ ವಿರುದ್ಧ 5-4ರಿಂದ ಗೆಲುವು ಸಾಧಿಸಿ ಈ ವಿಶೇಷ ಸಾಧನೆ ಗೈದಿದ್ದಾರೆ. ಈ ಗೆಲುವಿನೊಂದಿಗೆ, ಇವರು ಅಮೆರಿಕದ ಏಸ್ ಫ್ಯಾಬಿಯಾನೊ ಕರುವಾನಾ ವಿರುದ್ಧ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ ಮುಂದಿನ ವರ್ಷದ ಕ್ಯಾಡಿಡೇಟ್ಸ್ ಈವೆಂಟ್ನಲ್ಲಿ ಬಹುತೇಕ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹೊರತುಪಡಿಸಿ ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆರ್ ಪ್ರಜ್ಞಾನಂದ ಆಗಿದ್ದಾರೆ. ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ವಿಜೇತರು ತಮ್ಮ ಅಂತಿಮ ಪಂದ್ಯದಲ್ಲಿ ಪ್ರಸ್ತುತ ವಿಶ್ವ ಚಾಂಪಿಯನ್ ಅನ್ನು ಎದುರಿಸುತ್ತಾರೆ, ಇದು ವಿಶ್ವ ಅಂತಿಮ ಚಕ್ರದಲ್ಲಿ ಎರಡನೇ ಅತ್ಯಂತ ಮಹತ್ವದ ಪಂದ್ಯಾವಳಿಯಾಗಿದೆ. 1948 ರಿಂದ, FIDE ವಿಶ್ವ ಚಾಂಪಿಯನ್‌ಶಿಪ್ ಸೈಕಲ್ ಅನ್ನು ಆಯೋಜಿಸಿದೆ ಮತ್ತು 1950 ರಿಂದ, ಕ್ಯಾಂಡಿಡೇಟ್ಸ್ ಪಂದ್ಯಾವಳಿಯನ್ನು ಆಯೋಜಿಸಿದೆ. 2013 ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ, ಕ್ಯಾಂಡಿಡೇಟ್ಸ್ ಪಂದ್ಯಾವಳಿಯನ್ನು ನಡೆಯುತ್ತಿವೆ.
ಅಭಿಮಾನಿಗಳಿಂದಲೇ ವಿಶೇಷ ದಾಖಲೆ ಬರೆದ CSK
ಪ್ರಜ್ಞಾನಂದ ಸೆಮಿಸ್‌ನಲ್ಲಿ ಸ್ಥಾನ ಕಾಯ್ದಿರಿಸಿಕೊಂಡಿದ್ದು ಹೇಗೆ?:
ಆರಂಭದಲ್ಲಿ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋತ ನಂತರ ಪ್ರಜ್ಞಾನಂದ ಅವರು ಬುಧವಾರದಂದು ತನ್ನ ಎರಡನೇ ಪಂದ್ಯವನ್ನು ಗೆದ್ದು ಟೈ-ಬ್ರೇಕ್‌ಗೆ ಮರಳಿದರು. ಮೊದಲ 5+3 ಬ್ಲಿಟ್ಜ್ ಗೇಮ್‌ನಲ್ಲಿ, ಎರಿಗೈಸಿಯನ್ನು ಸೋಲಿಸಲು ಅದ್ಭುತ ಆಟವಾಡಿದರು. ಮುಂದಿನ ಪಂದ್ಯದಲ್ಲಿ ಎರಿಗೈಸಿ ಪಂದ್ಯವನ್ನು ಸಮಬಲಗೊಳಿಸಿದರು. ಮೂರು ಮತ್ತು ನಾಲ್ಕನೇ ಪಂದ್ಯಗಳನ್ನು ಕ್ರಮವಾಗಿ ಪ್ರಜ್ಞಾನಂದ ಮತ್ತು ಎರಿಗೈಸಿ ಗೆದ್ದರು, ಕ್ವಾರ್ಟರ್ ಫೈನಲ್ ಟೈ ಬ್ರೇಕರ್‌ನ ಸಡನ್ ಡೆತ್‌ನಲ್ಲಿ ಪ್ರಜ್ಞಾನಂದ ಗೆಲುವು ಸಾಧಿಸಿದರು. ಸೆಮಿಫೈನಲ್‌ನಲ್ಲಿ ಪ್ರಜ್ಞಾನಂದ ಅವರು ವಿಶ್ವ ನಂ.2, ಅಮೆರಿಕದ ಫ್ಯಾಬಿಯಾನೋ ಕರುವಾನಾ ಅವರನ್ನು ಎದುರಿಸಲಿದ್ದಾರೆ.
ಯಾರು ಈ ಪ್ರಜ್ಞಾನಂದ?:
ಮೂಲತಃ ತಮಿಳುನಾಡಿನ ಚೆನ್ನೈ ಮೂಲದವರಾದ ಪ್ರಜ್ಞಾನಂದ ಆಗಸ್ಟ್ 10, 2005ರಲ್ಲಿ ಜನಿಸಿದರು. 2016 ರಲ್ಲಿ 10 ವರ್ಷಗಳು, 10 ತಿಂಗಳುಗಳು ಮತ್ತು 19 ದಿನಗಳ ವಯಸ್ಸಿನಲ್ಲಿ ಕಿರಿಯ ಅಂತರರಾಷ್ಟ್ರೀಯ ಮಾಸ್ಟರ್ ಆಗುವ ಮೂಲಕ ವಿಶ್ವ ಮಟ್ಟದಲ್ಲಿ ದಾಖಲೆಯನ್ನು ನಿರ್ಮಿಸಿದ ಕೀರ್ತಿ ಇವರದ್ದು. ನಂತರದಲ್ಲಿ 2018ರಲ್ಲಿ ಗ್ರ್ಯಾಂಡ್ಮಾಸ್ಟರ್ ಆಗಿ ಹೊರ ಹೊಮ್ಮಿದ್ದರು. ಜುಲೈ 2019 ರಲ್ಲಿ ಡೆನ್ಮಾರ್ಕ್ನಲ್ಲಿ ನಡೆದ ಎಕ್ಸ್ಟ್ರಾಕಾನ್ ಚೆಸ್ ಓಪನ್ನಲ್ಲೂ ಪರಾಕ್ರಮ ಮೆರೆದಿದ್ದರು. ಅಲ್ಲದೇ 18 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಯುವ ಚಾಂಪಿಯನ್ ಶಿಪ್ ಗಳನ್ನು 9/11 ಅಂಕಗಳೊಂದಿಗೆ ಜಯಿಸಿದ ಸಾಧನೆ ಮಾಡಿದ್ದಾರೆ. ಪ್ರಗ್ನಾನಂದ ಅವರ ಹಿರಿಯ ಸಹೋದರಿ ವೈಶಾಲಿ ಕೂಡ ಅತ್ಯಂತ ಶ್ರೇಷ್ಠಆಟಗಾರ್ತಿ ಆಗಿದ್ದು (IM ಮತ್ತು ಮಹಿಳಾ ಗ್ರ್ಯಾಂಡ್ ಮಾಸ್ಟರ್) ಈಗಾಗಲೇ 12 ವರ್ಷದೊಳಗಿನ ಮತ್ತು 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಶಿಪ್ ಪದಕಗಳನ್ನು ಗೆದ್ದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ