ರೆಬೆಲ್ ಸ್ಟಾರ್ ಅಂಬರೀಶ್ (Ambareesh)… ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಕಲಿಯುಗದ ಕರ್ಣನೆಂದೇ ಬಿಂಬಿತರಾಗಿದ್ದ ಅಂಬರೀಶ್ ಅಲಿಯಾಸ್ ಅಮರನಾಥ್, ಕರ್ನಾಟಕ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳ ಬಳಗ ಹಾಗೂ ಸಾಕಷ್ಟು ಮಿತ್ರ ಬಳಗವನ್ನು ಹೊಂದಿದ್ದಂತಹ ನಟ. ಬದುಕಿರುವವರೆಗೂ ಕಷ್ಟ ಎಂದವರ ನೆರವಿಗೆ ನಿಲ್ಲುತ್ತಿದ್ದ ಅಂಬರೀಶ್ ಅವರಿಂದ ಸಹಾಯ ಪಡೆದವರ ಪಟ್ಟಿಯಲ್ಲಿ ಸಿನಿಮಾ ನಟ/ ನಟಿಯರು, ರಾಜಕೀಯ ಪುಡಾರಿಗಳು, ಬಡ ಕ್ರೀಡಾ ಸ್ಪರ್ಧಿಗಳು ಸೇರಿದ್ದಾರೆ. ಅವರಿಂದ ಸಹಾಯ ಪಡೆದವರು ಇಂದು ಬದುಕಿನ ಉತ್ತುಂಗದಲ್ಲಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ (Team India) ಮಾಜಿ ನಾಯಕ ಹಾಗೂ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni) ಕೂಡ ಒಬ್ಬರು.
ತನ್ನ ಚಾಣಾಕ್ಷ ನಾಯಕತ್ವದಿಂದ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಮಹೇಂದ್ರ ಸಿಂಗ್ ಧೋನಿ ತೀರ ಬಡ ಕುಟುಂಬದಿಂದ ಬಂದವರು. ಇದನ್ನು ನಾವು ಅವರ ಬಯೋಗ್ರಫಿಯಲ್ಲೇ ನೋಡಿದ್ದೇವೆ. ಅಂತಹ ಧೋನಿಗೆ ಅವರ ವೃತ್ತಿ ಬದುಕಿನ ಆರಂಭದಲ್ಲಿ ಕರ್ನಾಟಕದ ಸೂಪರ್ಸ್ಟಾರ್ ಅಂಬರೀಶ್ ಹಣ ಸಹಾಯ ಮಾಡಿದ್ದರು ಎಂಬ ಸುದ್ದಿ ಬಹಳಷ್ಟು ಹಿಂದೆಯೇ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಆ ಸುದ್ದಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
MS Dhoni: ನನ್ನ ಪತ್ನಿಗೆ ತಮಿಳಿನ ಕೆಟ್ಟ ಪದಗಳು ಗೊತ್ತು ಎಂದ ಧೋನಿ..! ವಿಡಿಯೋ ನೋಡಿ
ಅಂಬರೀಶ್ ಅವರ ಪತ್ನಿ ಹಾಗೂ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ವಿಚಾರವನ್ನು ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ತಮ್ಮ ಪೇಸ್ಬುಕ್ ಖಾತೆಯಲ್ಲಿ ಅಂಬರೀಶ್ ಅವರು ಧೋನಿಗೆ ಸಹಾಯ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಸುಮಲತಾ ಅವರು, ಬೆಲೆಯನ್ನೇ ಕಟ್ಟಲಾಗದ ಫೋಟೋವೊಂದು ಇಂದು ನನಗೆ ಸಿಕ್ಕಿದೆ. 2006 ರಲ್ಲಿ , ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂಬರೀಶ್ ಅವರು 2 ಲಕ್ಷ ರೂಗಳ ಚೆಕ್ ಅನ್ನು ಅಂದಿನ ಉದಯೋನ್ಮುಖ ಪ್ರತಿಭೆ ಎಂಎಸ್ ಧೋನಿ ಅವರಿಗೆ ನೀಡಿದ್ದರು.
ವಾಸ್ತವವಾಗಿ ಈ ಘಟನೆಗೂ ಮುನ್ನ ಅಂಭಿ ಅವರು ಧೋನಿಯವರ ತಂದೆಯ ಸಂದರ್ಶನವೊಂದನ್ನು ನೋಡಿದ್ದರು. ಅದರಲ್ಲಿ ಧೋನಿ ಜನಪ್ರಿಯತೆಯ ಬಗ್ಗೆ ಮಾತನಾಡಿದ್ದ ಧೋನಿ ಅವರ ತಂದೆ, ಧೋನಿ ಈಗ ಜನಪ್ರಿಯವಾಗುತ್ತಿದ್ದಾರೆ. ಹೀಗಾಗಿ ಧೋನಿಯವರನ್ನು ಸಂದರ್ಶಿಸಲು ಸಾಕಷ್ಟು ಸಂದರ್ಶಕರು ಮನೆಗೆ ಬರುತ್ತಿದ್ದಾರೆ. ಆದರೆ ಅವರು ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಇದು ಅಪಾರ ಕ್ರೀಡಾ ಮತ್ತು ಕ್ರಿಕೆಟ್ ಅಭಿಮಾನಿಯಾಗಿದ್ದ ಅಂಬರೀಶ್ ಅವರನ್ನು ಬೆಚ್ಚಿಬೀಳಿಸಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಧೋನಿ ಪಂದ್ಯವನ್ನಾಡಲು ಬಂದಿದ್ದಾಗ ಅಂಬರೀಶ್ ತಮ್ಮ ಕೈಲಾದ ಸಹಾಯ ಮಾಡಿದ್ದರು. ಆ ಸಮಯದಲ್ಲಿ ತೆಗೆದಿದ್ದ ಫೋಟೋವನ್ನು ನಾನು ಕಳೆದುಕೊಂಡಿದ್ದೆ. ಅದಕ್ಕಾಗಿ ಸಾಕಷ್ಟು ಹುಡುಕಾಟ ಮಾಡಿದ್ದೇವು. ಇಂದು ಆ ಫೋಟೋ ಸಿಕ್ಕಿತು. ಹಾಗಾಗಿ ಅಂದಿನ ಘಟನೆಯನ್ನು ಮತ್ತೊಮ್ಮೆ ಸ್ಮರಿಸಲು ಸಾಧ್ಯವಾಯಿತು ಎಂದು ಸುಮಲತಾ ಬರೆದುಕೊಂಡಿದ್ದಾರೆ.
ವಾಸ್ತವವಾಗಿ ಏಕದಿನ ಸರಣಿಗಾಗಿ ಶ್ರೀಲಂಕಾ, ಭಾರತ ಪ್ರವಾಸ ಮಾಡಿತ್ತು. ಆ ಪ್ರವಾಸದಲ್ಲಿ ಒಂದು ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಧೋನಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ವೇಳೆ ಪಂದ್ಯ ವೀಕ್ಷಿಸಲು ಹೋಗಿದ್ದ ಅಂಬರೀಶ್, ಧೋನಿಯವರ ಆರ್ಥಿಕ ಪರಿಸ್ಥಿತಿಯನ್ನು ಈ ಮೊದಲೇ ಅರಿತಿದ್ದರು. ಹೀಗಾಗಿ ಧೋನಿ ಅವರಿಗೆ 2 ಲಕ್ಷ ರೂಗಳ ಚೆಕ್ ಅನ್ನು ನೀಡಿ, ಬಡ ಕ್ರಿಕೆಟಿಗನ ಬೆನ್ನಿಗೆ ನಿಂತಿದ್ದರು. ಈ ವಿಚಾರ ತಡವಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:27 am, Fri, 25 August 23