ಏಷ್ಯಾಕಪ್ 2022 ಟೂರ್ನಿ (Asia Cup 2022) ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಸೂಪರ್ ಹಂತದ ಪಂದ್ಯಗಳು ಶುಕ್ರವಾರಕ್ಕೆ ಮುಕ್ತಾಯಗೊಂಡಿದ್ದು ಭಾನುವಾರ ಶ್ರೀಲಂಕಾ ಹಾಗೂ ಪಾಕಿಸ್ತಾನ (Sri Lanka vs Pakistan) ನಡುವೆ ಫೈನಲ್ ಕದನ ಏರ್ಪಡಿಸಲಾಗಿದೆ. ಸೂಪರ್ ಹಂತದ ಕೊನೆಯ ಪಂದ್ಯದಲ್ಲಿ ನಿನ್ನೆ ಲಂಕಾ–ಪಾಕ್ ಮುಖಾಮುಖಿ ಆಗಿದ್ದವು. ಇದರಲ್ಲಿ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚಿನ ಪ್ರದರ್ಶನ ತೋರಿದ ಸಿಂಹಳೀಯರು ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಫೈನಲ್ (Final) ಪಂದ್ಯಕ್ಕೂ ಮುನ್ನ ಪಾಕ್ಗೆ ಸೋಲಿನ ರುಚಿ ತೋರಿಸಿದ್ದು ಆತ್ಮವಿಶ್ವಾಸದಲ್ಲಿದೆ.
ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ ಪರ ಫಾರ್ಮ್ನಲ್ಲಿದ್ದ ಮೊಹಮ್ಮದ್ ರಿಜ್ವಾನ್ ಈ ಬಾರಿ 14 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ಫಖರ್ ಜಮಾನ್ ಕೂಡ 18 ಎಸೆತಗಳಲ್ಲಿ 13 ರನ್ಗೆ ಹಾಗೂ ಇಫ್ತಿಖರ್ ಅಹ್ಮದ್ 13 ರನ್ಗೆ ನಿರ್ಗಮಿಸಿದರು. ಕುಶ್ದಿಲ್ ಆಟ 4 ರನ್ಗೆ ಅಂತ್ಯವಾಯಿತು. ಇದರ ನಡುವೆ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದ ಬಾಬರ್ ಅಜಮ್ ಕೂಡ ಹಸರಂಗ ಸ್ಪಿನ್ ಮೋಡಿಗೆ ಸಿಲುಕಿ 30 ರನ್ಗೆ ಪೆವಿಲಿಯನ್ ಸೇರಿಕೊಂಡರು.
ಅಸಿಫ್ ಅಲಿ ಹಾಗೂ ಹಸನ್ ಅಲಿ ಸೊನ್ನೆ ಸುತ್ತಿದರೆ, ಉಸ್ಮಾನ್ ಖಾದಿರ್ 3, ಹ್ಯಾರಿಸ್ ರೌಫ್ 1 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಮೊಹಮ್ಮದ್ ನವಾಜ್ 18 ಎಸೆತಗಳಲ್ಲಿ 26 ರನ್ ಸಿಡಿಸಿದ ಪರಿಣಾಮ ತಂಡದ ಮೊತ್ತ 100ರ ಗಡಿ ದಾಟಿತು.ಅಂತಿಮವಾಗಿ ಪಾಕಿಸ್ತಾನ 19.1 ಓವರ್ನಲ್ಲಿ 121 ರನ್ಗೆ ಆಲೌಟ್ ಆಯಿತು. ಲಂಕಾ ಪರ ವಾನಿಂದು ಹಸರಂಗ 4 ಓವರ್ಗೆ 21 ರನ್ ನೀಡಿ 3 ವಿಕೆಟ್ ಕಿತ್ತರೆ, ತೀಕ್ಷಣ ಹಾಗೂ ಮಧುಶನ್ ತಲಾ 2 ವಿಕೆಟ್ ಪಡೆದರು.
ಸುಲಭ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಕೂಡ 2 ಓವರ್ಗೂ ಮುನ್ನವೇ 2 ವಿಕೆಟ್ ಕಳೆದುಕೊಂಡಿತು. ಕುಸಲ್ ಮೆಂಡಿಸ್ ಹಾಗೂ ಧನುಷ್ಕಾ ಗುಣತಿಲಕ ಖಾತೆ ತೆರೆಯದೆ ಔಟಾದರು. ಧನಂಜಯ್ ಡಿ ಸಿಲ್ವಾ 9 ರನ್ಗೆ ನಿರ್ಗಮಿಸಿದರು. ಈ ಸಂದರ್ಭ ಪಥುಮ್ ನಿಸ್ಸಂಕಾ ಜೊತೆಯಾದ ಭಾನುಕ ರಾಜಪಕ್ಷ ಅತ್ಯುತ್ತಮ ಜೊತೆಯಾಟ ಆಡಿದರು. ತಂಡಕ್ಕೆ ಆಧಾರವಾದ ಪಥುಮ್–ರಾಜಪಕ್ಷ ಅರ್ಧಶತಕದ ಕಾಣಿಕೆ ನೀಡಿದರು. ಭಾನುಕ19 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ 24 ರನ್ ಗಳಿಸಿದರು.
ನಂತರ ಬಂದ ನಾಯಕ ದಸನ್ ಶನಕಾ ಕೂಡ 16 ಎಸೆತಗಳಲ್ಲಿ 21 ರನ್ ಸಿಡಿಸಿ ತಂಡದ ಗೆಲುವನ್ನು ಹತ್ತಿರ ಮಾಡಿದರು. ಹಸರಂಗ ಔಟಾಗದೆ 10 ರನ್ ಗಳಿಸಿದರು. ಆರಂಭದಿಂದಲೂ ತಂಡಕ್ಕೆ ಆಧಾರವಾದ ನಿಸ್ಸಾಂಕಾ 48 ಎಸೆತಗಳಲ್ಲಿ ಅಜೇಯ 55 ರನ್ ಸಿಡಿಸಿ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಲಂಕಾ 17 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 124 ಬಾರಿಸಿ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
Published On - 8:45 am, Sat, 10 September 22