ಮನೀಶ್ ಪಾಂಡೆ ಸಿಡಿಲಬ್ಬರದ ಮುಂದೆ ಮಂಡಿಯೂರಿದ ಮಂಗಳೂರು ಡ್ರಾಗನ್ಸ್

| Updated By: Zahir Yusuf

Updated on: Aug 17, 2023 | 9:17 PM

Maharaja Trophy T20 2023: ಶರತ್ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹುಬ್ಬಳ್ಳಿ ಟೈಗರ್ಸ್ ಬೌಲರ್​ಗಳು ರನ್​ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೃಷ್ಣಮೂರ್ತಿ ಸಿದ್ಧಾರ್ಥ್ ಅಜೇಯ  47 ರನ್​ಬಾರಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಮನೀಶ್ ಪಾಂಡೆ ಸಿಡಿಲಬ್ಬರದ ಮುಂದೆ ಮಂಡಿಯೂರಿದ ಮಂಗಳೂರು ಡ್ರಾಗನ್ಸ್
Manish Pandey
Follow us on

Maharaja Trophy T20 2023: ಮಹಾರಾಜ ಟ್ರೋಫಿ ಟಿ20 ಟೂರ್ನಿಯ 10ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ಡ್ರಾಗನ್ಸ್ ತಂಡದ ನಾಯಕ ಕೃಷ್ಣಪ್ಪ ಗೌತಮ್ ಬೌಲಿಂಗ್ ಆಯ್ದುಕೊಂಡಿದ್ದರು. ಇತ್ತ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಲವ್ನೀತ್ ಸಿಸೋಡಿಯಾ ಕೇವಲ 1 ರನ್​ಗಳಿಸಿ ಪ್ರತೀಕ್ ಜೈನ್​ಗೆ ವಿಕೆಟ್ ಒಪ್ಪಿಸಿದ್ದರು.

ಈ ವೇಳೆ ಮೊಹಮ್ಮದ್ ತಾಹ ಜೊತೆಗೂಡಿದ ಕೃಷ್ಣನ್ ಶ್ರೀಜಿತ್ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಒಂದೆಡೆ ತಾಹ ಅಬ್ಬರಿಸಲಾರಂಭಿಸಿದರೆ, ಮತ್ತೊಂದೆಡೆ ಶ್ರೀಜಿತ್ ಸಿಡಿಲಬ್ಬರ ಶುರು ಮಾಡಿದರು. ಪರಿಣಾಮ ಆರಂಭಿಕ ಯಶಸ್ಸು ಪಡೆದಿದ್ದ ಮಂಗಳೂರು ಡ್ರಾಗನ್ಸ್ ಬೌಲರ್​ಗಳು ಲಯ ತಪ್ಪಿದರು.

ಇದರ ಸಂಪೂರ್ಣ ಲಾಭ ಪಡೆದ ತಾಹ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಿದರು. ಅಲ್ಲದೆ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳನ್ನು ಚಚ್ಚಿದರು. ಈ ಮೂಲಕ ಕೇವಲ 28 ಎಸೆತಗಳಲ್ಲಿ 52 ರನ್​ ಸಿಡಿಸಿದರು. ಮೊಹಮ್ಮದ್ ತಾಹ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ 9ನೇ ಓವರ್​ನಲ್ಲಿ ಹುಬ್ಬಳ್ಳಿ ಟೈಗರ್ಸ್​ ತಂಡದ ಮೊತ್ತ 97 ಕ್ಕೆ ಬಂದು ನಿಂತಿತು.

ಇನ್ನು ತಾಹ ನಿರ್ಗಮನದ ಬಳಿಕ ಬಿರುಸಿನ ಆಟ ಮುಂದುವರೆಸಿದ ಶ್ರೀಜಿತ್ 3 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 29 ಎಸೆತಗಳಲ್ಲಿ 52 ರನ್​ ಬಾರಿಸಿದರು. ಇದೇ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮನೀಶ್ ಪಾಂಡೆಯ ಅಬ್ಬರಕ್ಕೆ ಮಂಗಳೂರು ಡ್ರಾಗನ್ಸ್ ಬೌಲರ್​ಗಳು ಹೈರಾಣರಾದರು.

ಕ್ರೀಸ್​ಗೆ ಆಗಮಿಸುತ್ತಿದ್ದಂತೆ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪಾಂಡೆ 4 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಕೇವಲ 34 ಎಸೆತಗಳಲ್ಲಿ ಅಜೇಯ 69 ರನ್​ ಬಾರಿಸಿದರು. ಮನೀಶ್ ಪಾಂಡೆಯ ಈ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡವು 20 ಓವರ್​ಗಳಲ್ಲಿ ​5 ವಿಕೆಟ್ ನಷ್ಟಕ್ಕೆ 215 ರನ್​ ಕಲೆಹಾಕಿತು.

216 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಮಂಗಳೂರು ಡ್ರಾಗನ್ಸ್ ತಂಡವು ನಿಧಾನಗತಿಯ ಆರಂಭ ಪಡೆಯಿತು. ಇದಾಗ್ಯೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ಶರತ್ ಬಿಆರ್​ ಕೇವಲ 18 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 38 ರನ್​ ಚಚ್ಚಿದರು. ಈ ವೇಳೆ ಕಾರ್ಯಪ್ಪ ಎಸೆದ ಎಸೆತವನ್ನು ಗುರುತಿಸುವಲ್ಲಿ ಎಡವಿದ ಶರತ್ (38) ಮನೀಶ್ ಪಾಂಡೆಗೆ ಕ್ಯಾಚ್ ನೀಡಿದರು.

ಶರತ್ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಹುಬ್ಬಳ್ಳಿ ಟೈಗರ್ಸ್ ಬೌಲರ್​ಗಳು ರನ್​ ಗತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೃಷ್ಣಮೂರ್ತಿ ಸಿದ್ಧಾರ್ಥ್ ಅಜೇಯ  47 ರನ್​ಬಾರಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ 8 ವಿಕೆಟ್​ ಕಳೆದುಕೊಂಡು  152 ರನ್​ಗಳಿಸಿ ಮಂಗಳೂರು ಡ್ರಾಗನ್ಸ್​ ತಂಡ ಸೋಲೊಪ್ಪಿಕೊಂಡಿತು. ಇತ್ತ ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು 63 ರನ್​ಗಳ ಅಮೋಘ ಗೆಲುವು ತಮ್ಮದಾಗಿಸಿಕೊಂಡರು.

ಮಂಗಳೂರು ಡ್ರಾಗನ್ಸ್ ಪ್ಲೇಯಿಂಗ್ 11: ಶರತ್ ಬಿಆರ್ (ವಿಕೆಟ್ ಕೀಪರ್) , ನವೀನ್ ಎಂಜಿ , ಅನೀಶ್ವರ್ ಗೌತಮ್ , ಕೃಷ್ಣಮೂರ್ತಿ ಸಿದ್ಧಾರ್ಥ್ , ಬಿಯು ಶಿವಕುಮಾರ್ , ಅನಿರುದ್ಧ ಜೋಶಿ , ಕೃಷ್ಣಪ್ಪ ಗೌತಮ್ (ನಾಯಕ) , ಧೀರಜ್ ಜೆ ಗೌಡ , ಆದಿತ್ಯ ಗೋಯಲ್ , ಪ್ರತೀಕ್ ಜೈನ್ , ಪಾರಸ್ ಆರ್ಯ.

ಇದನ್ನೂ ಓದಿ: ಸಿಕ್ಸ್​ ಸಿಡಿಸಿ ವಿಶ್ವ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

ಹುಬ್ಬಳ್ಳಿ ಟೈಗರ್ಸ್ ಪ್ಲೇಯಿಂಗ್ 11: ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್) , ಮೊಹಮ್ಮದ್ ತಾಹ , ಕೃಷ್ಣನ್ ಶ್ರೀಜಿತ್ , ನಾಗ ಭರತ್ , ಮನೀಶ್ ಪಾಂಡೆ (ನಾಯಕ) , ಮನ್ವಂತ್ ಕುಮಾರ್ ಎಲ್ , ಪ್ರವೀಣ್ ದುಬೆ , ಲವಿಶ್ ಕೌಶಲ್ , ಕೆ.ಸಿ ಕಾರ್ಯಪ್ಪ , ವಿಧ್ವತ್ ಕಾವೇರಪ್ಪ , ನಾಥನ್ ಡಿಮೆಲ್ಲೋ.

 

Published On - 9:16 pm, Thu, 17 August 23