IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ

| Updated By: Zahir Yusuf

Updated on: May 11, 2022 | 7:15 PM

IPL 2022: ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕೆಕೆಆರ್ ವಿರುದ್ದ ಆಡಬೇಕಿದ್ದು, ಈ ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದ್ರೆ ಪ್ಲೇಆಫ್​ಗೆ ಪ್ರವೇಶಿಸಲಿದೆ.

IPL 2022: ಸೋಲುತ್ತೆ ನಿಜ, ಆದರೆ ಇದು?, LSG ಆಟಗಾರರ ವಿರುದ್ದ ಗಂಭೀರ್ ಗರಂ
Gautam Gambhir
Follow us on

IPL 2022: ಐಪಿಎಲ್​ ಸೀಸನ್​ 15 ನಲ್ಲಿ ಪ್ಲೇಆಫ್ ಪ್ರವೇಶಿಸುವ ಮೊದಲ ಅವಕಾಶವನ್ನು ಲಕ್ನೋ ಸೂಪರ್ ಜೈಂಟ್ಸ್ (LSG) ಕೈಚೆಲ್ಲಿಕೊಂಡಿದೆ. ಪಾಯಿಂಟ್ಸ್ ಟೇಬಲ್​​ನಲ್ಲಿ ಅಗ್ರ ಸ್ಥಾನದಲ್ಲಿದ್ದ ಲಕ್ನೋ ತಂಡವನ್ನು ಸೋಲಿಸಿ ಗುಜರಾತ್ ಟೈಟನ್ಸ್ ತಂಡವು ನೇರವಾಗಿ ಪ್ಲೇಆಫ್ ಪ್ರವೇಶಿಸಿದೆ. ಇನ್ನು ಲಕ್ನೋ ತಂಡಕ್ಕೆ ಕೇವಲ 2 ಪಂದ್ಯಗಳು ಮಾತ್ರ ಉಳಿದಿದ್ದು, ಹೀಗಾಗಿ ಈ ಪಂದ್ಯದಲ್ಲಿ ಒಂದು ಮ್ಯಾಚ್ ಅನ್ನು ಗೆಲ್ಲುವ ಮೂಲಕ ಪ್ಲೇಆಫ್​ಗೆ ಎಂಟ್ರಿ ಕೊಡಬೇಕಿದೆ. ಆದರೆ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು.

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೇವಲ 82 ರನ್‌ಗಳಿಗೆ ಲಕ್ನೋ ಸೂಪರ್ ಜೈಂಟ್ಸ್ ಆಲೌಟ್ ಆಗಿತ್ತು. ಇದು ಈ ಸೀಸನ್​ನ ಲಕ್ನೋ ತಂಡದ ಅತ್ಯಂತ ಕಡಿಮೆ ಸ್ಕೋರ್ ಎಂಬುದು ವಿಶೇಷ. ಅಲ್ಲದೆ 144 ರನ್​ಗಳ ಟಾರ್ಗೆಟ್ ಅನ್ನು ಬೆನ್ನತಿದ ಕೆಎಲ್ ರಾಹುಲ್ 14ನೇ ಓವರ್​ನಲ್ಲಿ ಆಲೌಟ್ ಆಗಿ 62 ರನ್‌ಗಳಿಂದ ಹೀನಾಯವಾಗಿ ಸೋಲನುಭವಿಸಿತು.

ಗುಜರಾತ್ ಟೈಟನ್ಸ್​ ವಿರುದ್ಧದ ಸೋಲಿನ ಬಳಿಕ, ಲಕ್ನೋ ಸೂಪರ್ ಜೈಂಟ್ಸ್​ ತಂಡದ ಮೆಂಟರ್ ಗೌತಮ್ ಗಂಭೀರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರ ವಿರುದ್ದ ಹರಿಹಾಯ್ದರು. ಸೋತರೂ ಪರವಾಗಿಲ್ಲ, ಬಿಟ್ಟುಕೊಡುವುದು ಸ್ವೀಕಾರಾರ್ಹವಲ್ಲ ಎಂದು ನೇರವಾಗಿ ಆಟಗಾರರಿಗೆ ತಿಳಿಸಿದರು. ನಮ್ಮ ತಂಡಕ್ಕೆ ಆಟದ ಪ್ರಜ್ಞೆಯ ಕೊರತೆಯಿದೆ. ಐಪಿಎಲ್‌ನಂತಹ ಸ್ಪರ್ಧೆಯಲ್ಲಿ ನಾವು ಯಾವತ್ತೂ ದುರ್ಬಲರಾಗಬಾರದು ಎಂದು ಗೌತಿ ಹೇಳಿದರು.

“ಸೋಲುವುದರಲ್ಲಿ ತಪ್ಪೇನಿಲ್ಲ. ಒಂದು ತಂಡ ಗೆಲ್ಲಬೇಕು ಒಂದು ತಂಡ ಸೋಲಬೇಕು. ಆದರೆ ಬಿಟ್ಟುಕೊಡುವುದರಲ್ಲಿ ಬಹಳಷ್ಟು ತಪ್ಪಿದೆ. ಇಂದು ನಾವು ಬಿಟ್ಟುಕೊಟ್ಟಿದ್ದೇವೆ. ನಾವು ಅಷ್ಟೊಂದು ದುರ್ಬಲರಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ. ಐಪಿಎಲ್​ನಂತಹ ಟೂರ್ನಿಗಳಲ್ಲಿ ದುರ್ಬಲರಿಗೆ ಜಾಗವಿಲ್ಲ” ಎಂದು ಗಂಭೀರ್ ತಂಡದ ಪ್ರದರ್ಶನದ ಬಗ್ಗೆ ಆಕ್ರೋಶ ಹೊರಹಾಕಿದರು.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿನ ಬಳಿಕ ಆಟಗಾರರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಮೆಂಟರ್ ಗೌತಮ್ ಗಂಭೀರ್ ಅವರ ವಿಡಿಯೋವನ್ನು ಎಲ್​ಎಸ್​ಜಿ ತಂಡದ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಕೆಕೆಆರ್ ತಂಡದ ಮಾಜಿ ನಾಯಕನ ಮಾತುಗಳಲ್ಲಿ ಸ್ಪಷ್ಟತೆಯಿದೆ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ 2012 ಮತ್ತು 2014 ರಲ್ಲಿ ಕೆಕೆಆರ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದ ನಾಯಕ ಗೌತಮ್ ಗಂಭೀರ್ ಇದೀಗ ಲಕ್ನೋ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದ ಲಕ್ನೋ ತಂಡವು ಗುಜರಾತ್ ಟೈಟನ್ಸ್ ವಿರುದ್ದ ಕೇವಲ 82 ರನ್​ಗೆ ಆಲೌಟ್ ಆಗಿ ನಿರಾಸೆ ಮೂಡಿಸಿದೆ. ಇದಾಗ್ಯೂ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕೆಕೆಆರ್ ವಿರುದ್ದ ಆಡಬೇಕಿದ್ದು, ಈ ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸಿದ್ರೆ ಪ್ಲೇಆಫ್​ಗೆ ಪ್ರವೇಶಿಸಲಿದೆ.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:07 pm, Wed, 11 May 22