ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮಹಾಟೂರ್ನಿ ಹತ್ತಿರವಾಗುತ್ತಿದೆ. ಮುಂದಿನ ತಿಂಗಳು ಅಕ್ಟೋಬರ್ 16ಕ್ಕೆ ಈ ಚಟುಕು ವಿಶ್ವಕಪ್ಗೆ ಚಾಲನೆ ಸಿಗಲಿದ್ದು, ಈಗಾಗಲೆ ಕೆಲವು ತಂಡಗಳು ಕೂಡ ಪ್ರಕಟವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇನ್ನಷ್ಟೆ ಟೀಮ್ ಇಂಡಿಯಾವನ್ನು ವಿಶ್ವಕಪ್ಗೆ ಹೆಸರಿಸಬೇಕಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಸೆಪ್ಟಂಬರ್ 16 ರಂದು ಬಿಸಿಸಿಐ ಟಿ20 ವಿಶ್ವಕಪ್ಗೆ 16 ಮಂದಿ ಸದಸ್ಯರ ಭಾರತ ತಂಡವನ್ನು ಪ್ರಕಟ ಮಾಡಲಿದೆಯಂತೆ. ಟೀಮ್ ಇಂಡಿಯಾದಲ್ಲಿ (Team India) ಇಂಜುರಿಯಿಂದ ಅನೇಕ ಆಟಗಾರರು ಬಳಲುತ್ತಿದ್ದು, ಸೆ. 16ಕ್ಕೂ ಮುನ್ನ ಬೆಂಗಳೂರಿನ ಎನ್ಸಿಯನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗ ಬೇಕಿದೆ ಎಂದು ಬಿಸಿಸಿಐ ಹೇಳಿದೆ.
ಮುಖ್ಯವಾಗಿ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಮೇಲೆ ಎಲ್ಲರ ಕಣ್ಣಿದೆ. ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದರೆ, ಹರ್ಷಲ್ ಪಕ್ಕೆಲುಬು ಗಾಯಕ್ಕೆ ತುತ್ತಾಗಿದ್ದರು. ಈಗಾಗಲೇ ಅನೇಕ ಪಂದ್ಯಗಳಿಂದ ಹೊರಗುಳಿದಿರುವ ಇವರು ಸದ್ಯ ಫಿಟ್ನೆಸ್ ಟೆಸ್ಟ್ನಲ್ಲಿ ಉತ್ತೀರ್ಣರಾಗಿ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯುತ್ತಾರ ಎಂಬುದು ನೋಡಬೇಕಿದೆ.
ಈ ಬಗ್ಗೆ ಇನ್ಸೈಡ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಬಿಸಿಸಿಐ ಆಯ್ಕೆ ಸಮಿತಿ ಅಧಿಕಾರಿಯೊಬ್ಬರು, ”ಸದ್ಯದಲ್ಲೇ ಟಿ20 ವಿಶ್ವಕಪ್ಗೆ ಭಾರತ ತಂಡವನ್ನ ಪ್ರಕಟ ಮಾಡುತ್ತೇವೆ. ಇದಕ್ಕೂ ಮುನ್ನ ನಮಗೆ ಹರ್ಷಲ್ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಅಪ್ಡೇಟ್ ಬೇಕಿದೆ. ಇದು ಆದ ತಕ್ಷಣ ತಂಡವನ್ನು ಹೆಸರಿಸುತ್ತೇವೆ. ಈ ವಾರವೇ ಬುಮ್ರಾ ಫಿಟ್ನೆಸ್ ಟೆಸ್ಟ್ಗೆ ಒಳಗಾಗಲಿದ್ದಾರೆ,” ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಹರ್ಷಲ್ ಪಟೇಲ್ ಫಿಟ್ ಆಗಿದ್ದು ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ. ಆದರೆ, ಬುಮ್ರಾ ಆಡುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಹರ್ಷಲ್ ನೆಟ್ನಲ್ಲಿ ಬೌಲಿಂಗ್ ಅಭ್ಯಾಸ ಕೂಡ ಶುರು ಮಾಡಿಕೊಂಡಿದ್ದಾರೆ. ಇನ್ನು ರವೀಂದ್ರ ಜಡೇಜಾ ಅವರಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು ಇವರು ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಇವೆಲ್ಲದರ ನಡುವೆ ಬಹುಕಾಲದ ಬಳಿಕ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಸೇರಿಕೊಳ್ಳುವ ಸಂಭವವಿದೆ ಎಂಬ ಮಾತುಕೂಡ ಕೇಳಿಬರುತ್ತಿದೆ.
ಟಿ20 ವಿಶ್ವಕಪ್ಗೆ ತಂಡವನ್ನು ಪ್ರಕಟ ಮಾಡಲು ಸೆಪ್ಟಂಬರ್ 16 ಕೊನೆಯ ದಿನಾಂಕವಾಗಿದೆ. ಇದಕ್ಕೂ ಮುನ್ನ ಬಿಸಿಸಿಐ ಅಧಿಕಾರಿಗಳು, ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಸಭೆ ಸೇರಿ ಚರ್ಚಿಸಬೇಕಿದೆ. ಈಗಾಗಲೇ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಮ್ಮ ಟೀಮ್ ಅನ್ನು ಪ್ರಕಟ ಮಾಡಿದೆ.
Published On - 10:44 am, Sat, 10 September 22