ಸೂಪರ್ ಸಂಡೇಯಂದು ಟಿ20 ವಿಶ್ವಕಪ್ನಲ್ಲಿ (T20 World Cup) 3 ಮಾಡು ಇಲ್ಲವೇ ಮಡಿ ಪಂದ್ಯಗಳು ನಡೆಯುತ್ತಿವೆ. ಇದರಲ್ಲಿ ಭಾರತ- ಜಿಂಬಾಬ್ವೆ (India and Zimbabwe) ನಡುವಿನ ಪಂದ್ಯವೂ ಒಂದು. ಈ ಪಂದ್ಯದಲ್ಲಿನ ಗೆಲುವು ರೋಹಿತ್ (Rohit Sharma) ಪಡೆಯನ್ನು ಟಿ20 ವಿಶ್ವಕಪ್ನ ಸೆಮಿಫೈನಲ್‌ಗೆ ಕರೆದೊಯ್ಯುತ್ತದೆ. ಆದರೆ ಸೋಲು ಇಡೀ ಭಾರತೀಯ ಅಭಿಮಾನಿಗಳಿಗೆ ಆಘಾತದ ಶಾಕ್ ನೀಡಲಿದೆ. ಹೀಗಿರುವಾಗ ಟೀಂ ಇಂಡಿಯಾ ಈ ಪಂದ್ಯವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಜಿಂಬಾಬ್ವೆಯನ್ನು ಲಘುವಾಗಿ ತೆಗೆದುಕೊಂಡರೆ ರೋಹಿತ್ ಪಡೆಗೆ ಸೋಲು ಕಟ್ಟಿಟ್ಟ ಬುತ್ತಿ. ಅಲ್ಲದೆ ಪಾಕಿಸ್ತಾನದ ರೀತಿಯಲ್ಲಿಯೇ ಟೀಂ ಇಂಡಿಯಾ ಸಂಕಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ರೋಹಿತ್ ಪಡೆ ಈ ಪಂದ್ಯವನ್ನು ಶತಾಯಗತಾಯ ಗೆಲ್ಲುವ ಗುರಿಯೊಂದಿಗೆ ಅಖಾಡಕ್ಕಿಳಿಯಲಿದೆ.
ಈಗಾಗಲೇ ಸೂಪರ್ 12 ಸುತ್ತಿನಲ್ಲಿ ಬಲಿಷ್ಠ ಪಾಕಿಸ್ತಾನಕ್ಕೆ ಸೋಲಿನ ರುಚಿ ನೀಡಿರುವ ಜಿಂಬಾಬ್ವೆ ತಂಡ ಭಾರತದ ವಿರುದ್ಧವೂ ಇದೇ ಆಟ ಪ್ರದರ್ಶಿಸಲು ಸಜ್ಜಾಗಿದೆ. ಇದು ಅವರಿಗೆ ತುಂಬಾ ಕಷ್ಟಕರವಾದ ಕೆಲಸವಾಗಿದ್ದರೂ, ಈ ತಂಡದ ಆಟಗಾರರು ಯಾವ ಸಮಯದಲ್ಲಿ ಫಾರ್ಮ್ಗೆ ಬರುತ್ತಾರೆ ಎಂದು ಹೇಳುವುದು ಅಸಾಧ್ಯ. ಒಂದು ವೇಳೆ ಜಿಂಬಾಬ್ವೆ ಈ ಪಂದ್ಯದಲ್ಲಿ ಗೆದ್ದರೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಗೇಟ್ ಓಪನ್ ಆಗಲಿದೆ. ಹಾಗೆಯೇ ಈ ಪಂದ್ಯದಲ್ಲಿ ಮಳೆ ಬಂದು ಪಂದ್ಯ ರದ್ದಾದರೆ, ಭಾರತಕ್ಕೆ ಒಂದು ಅಂಕ ಸಿಗಲಿದ್ದು, ತನ್ನ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಸೆಮಿಫೈನಲ್‌ಗೆ ಹೋಗಲಿದೆ.
ಟೀಂ ಇಂಡಿಯಾದಲ್ಲಿ ಬದಲಾವಣೆ?
ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಪ್ಲೇಯಿಂಗ್-11 ಅನ್ನು ಬದಲಾಯಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಈಗ ಪ್ರಶ್ನೆಯಾಗಿದೆ. ಜಿಂಬಾಬ್ವೆಯನ್ನು ದುರ್ಬಲ ತಂಡವೆಂದು ಪರಿಗಣಿಸಲಾಗುವುದರಿಂದ, ಈ ತಂಡದ ವಿರುದ್ಧ ಬಲಿಷ್ಠ ತಂಡಗಳು ತಮ್ಮ ಕೆಲವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುತ್ತವೆ ಮತ್ತು ಬೆಂಚ್ ಮೇಲೆ ಕುಳಿತಿರುವ ಆಟಗಾರರಿಗೆ ಅವಕಾಶ ನೀಡುತ್ತವೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಪ್ಲೇಯಿಂಗ್-11ರಲ್ಲಿ ಯಾವುದೇ ಬದಲಾವಣೆ ಮಾಡುವ ಲಕ್ಷಣ ಕಾಣುತ್ತಿಲ್ಲ.
ಇದುವರೆಗೂ ಆಡಿರುವ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರ ಬ್ಯಾಟ್ ಸದ್ದು ಮಾಡಿಲ್ಲ. ಆದರೆ ತಂಡದ ಮ್ಯಾನೇಜ್‌ಮೆಂಟ್ ಕಾರ್ತಿಕ್ಗೆ ಈ ಪಂದ್ಯದಲ್ಲೂ ಅವಕಾಶ ನೀಡಲಿದೆ. ಅಂತಹ ಪರಿಸ್ಥಿತಿಯಲ್ಲಿ, ರಿಷಬ್ ಪಂತ್ ಅವರಿಗೆ ಅವಕಾಶ ಸಿಗುವ ಯಾವುದೇ ಅವಕಾಶವಿಲ್ಲ. ರವಿಚಂದ್ರನ್ ಅಶ್ವಿನ್ ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ ಅಶ್ವಿನ್ ಬೌಲಿಂಗ್ ಆಲ್ರೌಂಡರ್ ಆಗಿರುವುದರಿಂದ ಅವರಿಗೆ ಯುಜುವೇಂದ್ರ ಚಹಾಲ್‌ಗಿಂತ ಹೆಚ್ಚು ಆದ್ಯತೆ ನೀಡಿಲಾಗಿದೆ. ಹೀಗಾಗಿ ಅಶ್ವಿನ್ ಜಿಂಬಾಬ್ವೆ ವಿರುದ್ಧವೂ ಆಡಲಿದ್ದಾರೆ.
ರೋಹಿತ್, ಹಾರ್ದಿಕ್ ಮೋಡಿ ಮಾಡಬೇಕಿದೆ
ಈ ಪಂದ್ಯದಲ್ಲಿ ನಾಯಕ ರೋಹಿತ್ ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ. ನೆದರ್ಲೆಂಡ್ಸ್ ವಿರುದ್ಧ ರೋಹಿತ್ ಉತ್ತಮ ಇನ್ನಿಂಗ್ಸ್ ಆಡಿದನ್ನು ಬಿಟ್ಟರೆ, ಉಳಿದಂತೆ ಅವರ ಬ್ಯಾಟ್ ಶಾಂತವಾಗಿದೆ. ಅದೇ ಸಮಯದಲ್ಲಿ, ಹಾರ್ದಿಕ್ ಪಾಕಿಸ್ತಾನದ ವಿರುದ್ಧ ಆಡಿದ ಇನ್ನಿಂಗ್ಸ್ ನಂತರ ಯಾವುದೇ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಸೆಮಿಫೈನಲ್‌ಗೂ ಮುನ್ನ ಇಬ್ಬರೂ ತಮ್ಮ ಹಳೆಯ ಫಾರ್ಮ್ಗೆ ಮರಳಬೇಕಾಗಿರುವುದು ಬಹಳ ಮುಖ್ಯವಾಗಿದೆ.
ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್-11
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಕುಮಾರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್.