ಟೀಮ್ ಇಂಡಿಯಾದ (Team India) ಮಾಜಿ ಆಲ್ರೌಂಡರ್ ಸುರೇಶ್ ರೈನಾ (Suresh Raina) ಅವರಿಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ (Indian Cricket Team) ಪ್ರತಿಭಾವಂತ ಆಟಗಾರನಾಗಿ ಅದ್ಭುತ ಬ್ಯಾಟ್ಸ್‍ಮನ್ ಆಗಿ ಮತ್ತು ಸೂಪರ್ ಫೀಲ್ಡರ್ ಆಗಿ ಕ್ರಿಕೆಟ್ ಲೋಕದಲ್ಲಿ ಮಿಂಚಿರುವ ರೈನಾಗೆ ಇಂದು ಜನ್ಮದಿನದ ಸಡಗರ-ಸಂಭ್ರಮ (Suresh Raina Birthday). ಅಸಂಖ್ಯಾತ ಅಭಿಮಾನಿಗಳು ಈ ತಾರೆಗೆ ಹುಟ್ಟುಹಬ್ಬದ ಶುಭ ಹಾರೈಸಿದ್ದಾರೆ. ನವೆಂಬರ್ 27, 1986ರಂದು ಜನಿಸಿದ ರೈನಾ ಎಡಗೈ ಬ್ಯಾಟ್ಸ್‍ಮನ್ ಆಗಿ ಸಾಂದರ್ಭಿಕ ಆಫ್-ಸ್ಪಿನ್ ಬೌಲರ್ ಆಗಿ ಭಾರತ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅತ್ಯಂತ ಅದ್ಭುತ ಕ್ಯಾಚ್‍ಗಳನ್ನು ಹಿಡಿದಿರುವ ಇವರು ವಿಶ್ವದ ಅತ್ಯುತ್ತಮ ಫೀಲ್ಡರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಆರಂಭದಲ್ಲಿ ಉತ್ತರಪ್ರದೇಶದ ಸ್ಥಳೀಯ ತಂಡಕ್ಕಾಗಿ ಆಡುತ್ತಿದ್ದ ಸುರೇಶ್ ರೈನಾ, ಇಂಡಿಯನ್ ಪ್ರೀಮಿಯರ್ ಲೀಗ್-ಐಪಿಎಲ್‍ನಲ್ಲಿ ಗುಜರಾತ್ ಲಯನ್ಸ್‍ನ ನಾಯಕರಾಗಿದ್ದರು. ಭಾರತೀಯ ಕ್ರಿಕೆಟ್ ತಂಡ ನಾಯಕರೂ ಆಗಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್‍ನ ಎಲ್ಲ ಮೂರು ವಿಧಗಳ ಪಂದ್ಯಗಳಲ್ಲೂ ಶತಕ ಗಳಿಸಿದ ಕೆಲವೇ ಬ್ಯಾಟರ್ಗಳಲ್ಲಿ ರೈನಾ ಕೂಡ ಒಬ್ಬರು. ಟಿ20 ಕ್ರಿಕೆಟ್‍ನಲ್ಲಿ ಇವರು ಅತ್ಯುತ್ತಮ ಬ್ಯಾಟ್ಸ್‍ಮನ್ ಎಂದು ಪರಿಗಣಿಸಲ್ಪಟ್ಟಿದ್ದಾರೆ.
2007 ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ಅಂಗವಾಗಿರುವ ರೈನಾ ಅವರು ಮಹೇಂದ್ರ ಸಿಂಗ್ ಧೋನಿ ನಾಯಕನಾಗಿರುವಾಗ ಹಲವಾರು ಸ್ಮರಣೀಯ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಳೆದ ಆಗಸ್ಟ್ 15ರಂದು ಧೋನಿ ಜತೆ ಜತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ಅವರನ್ನು ಮಿಸ್ಟರ್ ಐಪಿಎಲ್ ಎಂದೇ ಕರೆಯಲಾಗುತ್ತದೆ.
ಜುಲೈ 2005ರಲ್ಲಿ ಶ್ರೀಲಂಕಾ ತಂಡದ ವಿರುದ್ಧ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುವ ಮೂಲಕ ಇಂಟರ್‍ನ್ಯಾಷನಲ್ ಕ್ರಿಕೆಟ್‍ಗೆ ಇವರು ಕಾಲಿಟ್ಟರು. ಆಗ ರೈನಾಗೆ 19 ವರ್ಷ. 2010ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನಸೆಳೆದರು. 2011ರಲ್ಲಿ ಭಾರತ ವಿಶ್ವಕಪ್ ಕ್ರಿಕೆಟ್ ಗೆದ್ದಾಗ ಭಾರತೀಯ ತಂಡದಲ್ಲಿ ಸುರೇಶ್ ರೈನಾ ಸಹ ಪ್ರಮುಖ ಆಟಗಾರರಾಗಿದ್ದರು.
ಭಾರತ ಪರ ಸುರೇಶ್ ರೈನಾ 18 ಟೆಸ್ಟ್, 226 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 7988 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್ ಒಟ್ಟಾರೆ 62 ವಿಕೆಟ್ ಕಬಳಿಸಿದ್ದಾರೆ. ಸುರೇಶ್ ರೈನಾ ಹುಟ್ಟುಹಬ್ಬಕ್ಕೆ ಬಿಸಿಸಿಐ ಸೇರಿದಂತೆ ಅನೇಕ ಕ್ರಿಕೆಟ್ ಮಂದಿ ಶುಭಕೋರಿದ್ದಾರೆ.
Wriddhiman Saha: ಕಳಪೆ ಆಟದ ನಡುವೆ 3ನೇ ದಿನ ವಿಕೆಟ್ ಕೀಪಿಂಗ್ಗೆ ಬರದ ವೃದ್ದಿಮಾನ್ ಸಾಹ: ಕಾರಣವೇನು ಗೊತ್ತೇ?
(Happy Birthday Suresh Raina Suresh Raina who was born on November 27 in 1986 turns 35)