ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ಓವರ್‌ನಲ್ಲಿ 35 ರನ್ ಕಲೆಹಾಕುವ ಮೂಲಕ ಜಸ್ಪ್ರೀತ್ ಬುಮ್ರಾ (Jasprit Bumrah) ಹೊಸ ದಾಖಲೆ ಬರೆದರೆ, ಮತ್ತೊಂದೆಡೆ ನಡೆದ ಟಿ20 ಕ್ರಿಕೆಟ್ನ ಒಂದೇ ಓವರ್‌ನಲ್ಲಿ 5 ಸಿಕ್ಸ್ ಚಚ್ಚಿಸಿಕೊಂಡು ಭಾರತೀಯ ಮೂಲದ ಪ್ರೇಮ್ ಸಿಸೋಡಿಯಾ ಕೆಟ್ಟ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್ ನಡೆಯುತ್ತಿರುವ ಟಿ20 ಬ್ಲಾಸ್ಟ್ನ ಸೌತ್ ಗ್ರೂಪ್ ಪಂದ್ಯದಲ್ಲಿ ಎಸೆಕ್ಸ್ ಹಾಗೂ ಗ್ಲಾಮೊರ್ಗಾನ್ (Essex vs Glamorgan) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗ್ಲಾಮೊರ್ಗಾನ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕನ ನಿರ್ಧಾರ ತಪ್ಪು ಎಂಬಂತೆ ಎಸೆಕ್ಸ್ ತಂಡಕ್ಕೆ ರೋಸಿಂಗ್ಟನ್ (45) ಹಾಗೂ ರಾಬಿನ್ ದಾಸ್ (23) ಸ್ಪೋಟಕ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ಡ್ಯಾನ್ ಲಾರೆನ್ಸ್ ಮತ್ತು ಪಾಲ್ ವಾಲ್ಟರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.
ಅದರಲ್ಲೂ 16ನೇ ಓವರ್ ಎಸೆಯಲು ಬಂದ 23 ವರ್ಷದ ಎಡಗೈ ಸ್ಪಿನ್ನರ್ ಪ್ರೇಮ್ ಸಿಸೋಡಿಯಾ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸುವ ಮೂಲಕ ಪಾಲ್ ವಾಲ್ಟರ್ ಅಬ್ಬರಿಸಿದರು. ಮೊದಲ 4 ಎಸೆತಗಳಲ್ಲಿ 4 ಸಿಕ್ಸರ್ ಸಿಡಿಸಿದ ವಾಲ್ಟರ್ 5ನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಕೇವಲ 1 ರನ್ ಮಾತ್ರ ಲಭಿಸಿತು. ಇತ್ತ ಕೊನೆಯ ಎಸೆತದಲ್ಲಿ ಡ್ಯಾನ್ ಲಾರೆನ್ಸ್ ಸಿಕ್ಸರ್ ಬಾರಿಸಿದರು. ಈ ಮೂಲಕ ಪ್ರೇಮ್ ಸಿಸೋಡಿಯ ಅವರ ಒಂದೇ ಓವರ್‌ನಲ್ಲಿ ಒಟ್ಟು 31 ರನ್‌ಗಳನ್ನು ಕಲೆಹಾಕಿದರು. ಇದರೊಂದಿಗೆ ಟಿ20 ಬ್ಲಾಸ್ಟ್ನಲ್ಲಿ ಅತ್ಯಧಿಕ ರನ್ ನೀಡಿದ ಕೆಟ್ಟ ದಾಖಲೆಯೊಂದು ಪ್ರೇಮ್ ಸಿಸೋಡಿಯಾ ಪಾಲಾಯಿತು.
ಇನ್ನು ಎಸೆಕ್ಸ್ ಪರ ಲಾರೆನ್ಸ್ 37 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸ್ನೊಂದಿಗೆ 71 ರನ್ ಬಾರಿಸಿದರೆ, ಪಾಲ್ ವಾಲ್ಟರ್ 23 ಎಸೆತಗಳಲ್ಲಿ 58 ರನ್ ಚಚ್ಚಿದರು. ಈ ವೇಳೆ 2 ಬೌಂಡರಿ ಮತ್ತು 6 ಸಿಕ್ಸ್ಗಳು ಮೂಡಿಬಂದಿತ್ತು. ಮತ್ತೊಂದೆಡೆ ಪ್ರೇಮ್ ಸಿಸೋಡಿಯಾ 4 ಓವರ್ಗಳಲ್ಲಿ ನೀಡಿದ್ದು ಬರೋಬ್ಬರಿ 57 ರನ್. ಪರಿಣಾಮ ಎಸೆಕ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು.
6️⃣ 6️⃣ 6️⃣ 6️⃣ 1️⃣ 6️⃣
Stunning batting from @EssexCricket as they hit 31 from one over ?#Blast22 pic.twitter.com/1mbP34r8rB
— Vitality Blast (@VitalityBlast) July 2, 2022
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗ್ಲಾಮೊರ್ಗಾನ್ ತಂಡದ ಪರ ನಾಯಕ ಸ್ಯಾಮ್ ನಾರ್ಥ್ಈಸ್ಟ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 56 ಎಸೆತಗಳಲ್ಲಿ 10 ಬೌಂಡರಿ 4 ಸಿಕ್ಸ್ನೊಂದಿಗೆ ಅಜೇಯ 97 ರನ್ ಬಾರಿಸಿ ಅಬ್ಬರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ ಗ್ಲಾಮೊರ್ಗಾನ್ ತಂಡವು 7 ವಿಕೆಟ್ ನಷ್ಟಕ್ಕೆ 185 ರನ್ ಕಲೆಹಾಕುವ ಮೂಲಕ 69 ರನ್ಗಳಿಂದ ಸೋಲೊಪ್ಪಿಕೊಂಡಿತು.