ವಿಶ್ವಕಪ್ ತಂಡದ ಬಾಗಿಲು ಮುಚ್ಚಿಲ್ಲ: ರೋಹಿತ್ ಶರ್ಮಾ ಸಂದೇಶ
Asia Cup 2023: ಆಗಸ್ಟ್ 30 ರಿಂದ ಈ ಬಾರಿಯ ಏಷ್ಯಾಕಪ್ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ. ಆದರೆ ಈ ತಂಡದಲ್ಲಿ ಕೆಲ ಪ್ರಮುಖ ಆಟಗಾರರು ಕಾಣಿಸಿಕೊಂಡಿಲ್ಲ. ಅದರಲ್ಲೂ ಈ ಬಾರಿ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದ ಯುಜ್ವೇಂದ್ರ ಚಹಲ್ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಕೈ ಬಿಡಲಾಗಿದೆ. ಇತ್ತ ಈ ಮಹತ್ವದ ನಿರ್ಧಾರ ಬೆನ್ನಲ್ಲೇ ಯಾರಿಗೂ ಏಕದಿನ ವಿಶ್ವಕಪ್ ತಂಡ ಬಾಗಿಲು ಮುಚ್ಚಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.
ಟೀಮ್ ಇಂಡಿಯಾ ಘೋಷಣೆಯ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಏಷ್ಯಾಕಪ್ ತಂಡವೇ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವುದಿಲ್ಲ. ಅದಕ್ಕಾಗಿ ಇನ್ನೂ ಕೂಡ ಸಮಯವಕಾಶವಿದೆ. ಏಷ್ಯಾ ಕಪ್‌ನಲ್ಲಿನ ಪ್ರದರ್ಶನವನ್ನು ಆಧರಿಸಿ ಮುಂದಿನ ಬದಲಾವಣೆ ಬಗ್ಗೆ ನಿರ್ಧರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಹೀಗಾಗಿ ಏಕದಿನ ವಿಶ್ವಕಪ್ಗಾಗಿ ಯಾವುದೇ ಆಟಗಾರನಿಗೆ ಬಾಗಿಲು ಮುಚ್ಚಿಲ್ಲ. ಯಾರು ಬೇಕಾದರೂ ತಂಡಕ್ಕೆ ಮರಳಬಹುದು. ಚಹಲ್ ಸಾಕಷ್ಟು ವೈಟ್-ಬಾಲ್ ಕ್ರಿಕೆಟ್ ಆಡಿದ್ದಾರೆ. ನಮಗೆ ವಿಶ್ವಕಪ್‌ಗೆ ಅವರು ಬೇಕು ಎಂದೆನಿಸಿದರೆ ಖಂಡಿತವಾಗಿಯೂ ಆಯ್ಕೆ ಮಾಡುತ್ತೇವೆ.
ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ವಿಷಯದಲ್ಲೂ ಇದೇ ನಿರ್ಧಾರ ಹೊಂದಿದ್ದೇನೆ. ಏಕದಿನ ವಿಶ್ವಕಪ್‌ಗೆ ಈ ಆಟಗಾರರು ಬೇಕು ಎಂದೆನಿಸಿದರೆ ಖಂಡಿತವಾಗಿಯೂ ಇವರುಗಳು ಆಯ್ಕೆಯಾಗಲಿದ್ದಾರೆ. ಇಲ್ಲಿ ಏಷ್ಯಾಕಪ್ಗೆ ತಂಡವನ್ನು ಘೋಷಿಸಿದ ಮಾತ್ರಕ್ಕೆ, ಏಕದಿನ ವಿಶ್ವಕಪ್ ತಂಡ ಫೈನಲ್ ಆಗಿದೆ ಎಂದಲ್ಲ. ಈ ಟೂರ್ನಿಯಲ್ಲಿನ ಪ್ರದರ್ಶನ ಆಧರಿಸಿ ವಿಶ್ವಕಪ್ ತಂಡವನ್ನು ರೂಪಿಸಲಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಕೇವಲ ಮೂವರು ಸ್ಪಿನ್ನರ್ಗಳಿಗೆ ಅವಕಾಶ:
ಏಷ್ಯಾಕಪ್ಗೆ ಆಯ್ಕೆ ಮಾಡಲಾದ 17 ಸದಸ್ಯರಲ್ಲಿ ಸ್ಪಿನ್ನರ್ಗಳಾಗಿ ಸ್ಥಾನ ಪಡೆದಿರುವುದು ಕೇವಲ ಮೂವರು ಆಟಗಾರರು ಮಾತ್ರ. ಅದರಲ್ಲಿ ಇಬ್ಬರು ಆಲ್ರೌಂಡರ್ಗಳಾದರೆ ಒಬ್ಬರು ಮಾತ್ರ ಪರಿಪೂರ್ಣ ಸ್ಪಿನ್ನರ್.
ಇಲ್ಲಿ ಕುಲ್ದೀಪ್ ಯಾದವ್ ಅವರನ್ನು ಪರಿಪೂರ್ಣ ಸ್ಪಿನ್ನರ್ ಆಗಿ ಆಯ್ಕೆ ಮಾಡಿದ್ದರೆ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ ಆಲ್ರೌಂಡರ್ಗಳಾಗಿ ಕಾಣಿಸಿಕೊಂಡಿದ್ದಾರೆ.
ಈ ಮೂರು ಆಯ್ಕೆಗಳ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ನಾವು ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಇಲ್ಲಿ ಸ್ಪಿನ್ ಆಲ್ರೌಂಡರ್ಗಳು ಇದ್ದರೆ ನಮಗೆ 8 ಮತ್ತು 9ನೇ ಕ್ರಮಾಂಕದ ತನಕ ಬ್ಯಾಟಿಂಗ್ ಆಯ್ಕೆ ಇರಲಿದೆ. ಹೀಗಾಗಿ ಉತ್ತಮವಾಗಿ ಬ್ಯಾಟ್ ಮಾಡಬಲ್ಲ ಸಾಮರ್ಥ್ಯ ಇರುವ ಅಕ್ಷರ್ ಪಟೇಲ್ರನ್ನು 3ನೇ ಸ್ಪಿನ್ನರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಭಾರತದ ಮೊದಲ ಪಂದ್ಯ ಯಾವಾಗ?
ಆಗಸ್ಟ್ 30 ರಿಂದ ಈ ಬಾರಿಯ ಏಷ್ಯಾಕಪ್ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಹಾಗೆಯೇ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ. ಏಷ್ಯಾಕಪ್ನ ಸಂಪೂರ್ಣ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಏಷ್ಯಾಕಪ್ಗಾಗಿ ಆಯ್ಕೆ ಮಾಡಲಾದ ಭಾರತ ತಂಡ:
- ರೋಹಿತ್ ಶರ್ಮಾ (ನಾಯಕ)
- ಶುಭ್ಮನ್ ಗಿಲ್
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಕೆಎಲ್ ರಾಹುಲ್ (ವಿಕೆಟ್ ಕೀಪರ್)
- ತಿಲಕ್ ವರ್ಮಾ
- ಇಶಾನ್ ಕಿಶನ್ (ವಿಕೆಟ್ ಕೀಪರ್)
- ಸೂರ್ಯಕುಮಾರ್ ಯಾದವ್
- ಹಾರ್ದಿಕ್ ಪಾಂಡ್ಯ (ಉಪನಾಯಕ)
- ರವೀಂದ್ರ ಜಡೇಜಾ
- ಅಕ್ಷರ್ ಪಟೇಲ್
- ಶಾರ್ದೂಲ್ ಠಾಕೂರ್
- ಕುಲ್ದೀಪ್ ಯಾದವ್
- ಮೊಹಮ್ಮದ್ ಸಿರಾಜ್
- ಜಸ್ಪ್ರೀತ್ ಬುಮ್ರಾ
- ಮೊಹಮ್ಮದ್ ಶಮಿ
- ಪ್ರಸಿದ್ಧ್ ಕೃಷ್ಣ
- ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).