ಐಪಿಎಲ್ ಮಾಧ್ಯಮ ಹಕ್ಕು (IPL Media Rights)ಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಜೊತೆಗೆ ಈ ಹಕ್ಕುಗಳು ಯಾರ ಪಾಲಾಗುತ್ತವೆ ಎಂಬುದರ ಮೇಲೂ ಎಲ್ಲರ ಕಣ್ಣು ನೆಟ್ಟಿದೆ. ಈ ಬಾರಿಯ ಹರಾಜು ಸ್ವಲ್ಪ ವಿಭಿನ್ನವಾಗಿ ನಡೆಯಲಿದೆ. ಅಂದರೆ, ಟಿವಿ ಹಕ್ಕುಗಳಿಗಾಗಿ ಪ್ರತ್ಯೇಕ ಹರಾಜು ಮತ್ತು ನೇರ ಪ್ರಸಾರಕ್ಕಾಗಿ ಪ್ರತ್ಯೇಕ ಹರಾಜು ನಡೆಯಲಿದೆ. ಆದರೆ ಲೈವ್ ಸ್ಟ್ರೀಮಿಂಗ್ ಪ್ರಸಾರದ ಹಕ್ಕಿಗಾಗಿ ನಡೆಯುವ ಹರಾಜಿನ ಬಗ್ಗೆ ಸಾಕಷ್ಟು ಕುತೂಹಲ ಹೆಚ್ಚಾಗಿದೆ. ಇದಕ್ಕೆ ಕಾರಣ ಅಮೆಜಾನ್ ಕಂಪನಿ (Amazon company) ಈ ಹಕ್ಕುಗಳನ್ನು ಖರೀದಿಸಲು ಅಖಾಡಕ್ಕಿಳಿದಿರುವುದು. ಇದರ ಜೊತೆಗೆ, ಅಮೆಜಾನ್ ಮತ್ತು ರಿಲಯನ್ಸ್ ಇಂಡಸ್ಟ್ರಿ ನಡುವೆ ಇದಕ್ಕಾಗಿ ಘರ್ಷಣೆ ನಡೆಯಲಿದೆ ಎಂಬ ವಿಚಾರವೂ ಸಖತ್ ಸುದ್ದಿ ಮಾಡಿತ್ತು. ಆದರೆ ಈಗ ಅಮೆಜಾನ್ ಈ ಐಪಿಎಲ್ ಮಾಧ್ಯಮ ಹಕ್ಕುಗಳ ಹರಾಜಿನಿಂದ ತನ್ನ ಹೆಸರನ್ನು ಹಿಂದಕ್ಕೆ ತೆಗೆದುಕೊಂಡಿದೆ ಎಂಬ ಸುದ್ದಿ ಹೊರ ಬಂದಿದೆ. ಇದು ಸಂಭವಿಸಿದಲ್ಲಿ, ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರಿ ಮತ್ತು ವಾಲ್ಟ್ ಡಿಸ್ನಿ (Reliance Industry and Walt Disney) ಈ ರೇಸ್ನಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾಗುತ್ತವೆ.
ಜೂನ್ 12 ರಂದು ನಡೆಯಲಿರುವ ಈ ಹರಾಜಿನಲ್ಲಿ ಹಕ್ಕುಗಳ ಅಂದಾಜು ಮೊತ್ತವು $ 7.7 ಬಿಲಿಯನ್ ಆಗಿರಬಹುದು ಎಂದು ವರದಿಯಾಗಿದೆ. ಆದರೆ ಈಗ ದಿ ಪ್ರಿಂಟ್ ವರದಿಯ ಪ್ರಕಾರ, ಜೆಫ್ ಬೆಜೋಸ್ ಒಡೆತನದ ಕಂಪನಿ ಅಮೆಜಾನ್ ಈ ಹರಾಜಿನಿಂದ ಹಿಂದೆ ಸರಿದಿದೆ. ಅಮೆಜಾನ್ ಈಗಾಗಲೇ ದೇಶದಲ್ಲಿ 6 ಬಿಲಿಯನ್ ಹೂಡಿಕೆ ಮಾಡಿದೆ, ಆದ್ದರಿಂದ ಆನ್ಲೈನ್ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಮಾತ್ರ ಇಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡುವುದು ಕಂಪನಿಯ ವ್ಯವಹಾರಕ್ಕೆ ಸರಿಹೊಂದುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದ್ದರಿಂದ ಈ ಬಗ್ಗೆ ಅಮೆಜಾನ್ ಪ್ರತಿನಿಧಿಯ ಪ್ರತಿಕ್ರಿಯೆಯನ್ನು ತಿಳಿಯಲು ಇಚ್ಚಿಸಿದರಾದ್ದರೂ, ಅವರು ಪ್ರತಿಕ್ರಿಯಿಸಲಿಲ್ಲ ಎಂದು ಪ್ರಿಂಟ್ ತನ್ನ ವರದಿಯಲ್ಲಿ ಬರೆದಿದೆ.
ಇದನ್ನೂ ಓದಿ:RCB: ಒಮ್ಮೆಯೂ ಕಪ್ ಗೆಲ್ಲದಿದ್ದರು ಐಪಿಎಲ್ನಲ್ಲಿ ಆರ್ಸಿಬಿ ಮಾಡಿರುವ ದಾಖಲೆಗಳು ಅಷ್ಟಿಷ್ಟಲ್ಲ..!
ಮೂರು ಕಂಪನಿಗಳಿಗೆ ಲಾಭವಾಗಲಿದೆ
ಅಮೆಜಾನ್ ಈ ಹರಾಜಿನಲ್ಲಿ ಭಾಗವಹಿಸದಿದ್ದರೆ, ರಿಲಯನ್ಸ್, ಡಿಸ್ನಿ ಮತ್ತು ಸೋನಿ ಗ್ರೂಪ್ಗಳು ಇದರಿಂದ ಲಾಭ ಪಡೆಯುತ್ತವೆ. ಏಕೆಂದರೆ ಈ ಮೂರು ಕಂಪನಿಗಳು ಸ್ಟ್ರೀಮಿಂಗ್ ಹಕ್ಕಿಗಾಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲ್ಲಿವೆ. ಇದರಲ್ಲಿ ಯಾರು ಗೆದ್ದರೂ ಭಾರತದ ಮಾರುಕಟ್ಟೆಯ ಮೇಲೆ ಬಲವಾದ ಪ್ರಭಾವ ಬೀರಲಿದೆ. ಅಂತಹ ಪರಿಸ್ಥಿತಿಯಲ್ಲಿ, ರಿಲಯನ್ಸ್ ಹೆಚ್ಚು ಲಾಭ ಪಡೆಯಬಹುದು. ರಿಲಯನ್ಸ್ 2021ರಿಂದಲೇ ಈ ಹರಾಜಿಗೆ ತಯಾರಿ ಆರಂಭಿಸಿದೆ.
ಬಿಸಿಸಿಐಗೆ ಹೆಚ್ಚಿನ ಅನುಕೂಲ
ಹರಾಜಿನಲ್ಲಿ ಯಾವುದೇ ಕಂಪನಿ ಭಾಗವಹಿಸಿದರೂ ಈ ಬಾರಿ ಬಿಸಿಸಿಐ ಜೇಬಿಗೆ ಭಾರಿ ಮೊತ್ತ ಬರುವುದು ಖಚಿತ. ಬಿಸಿಸಿಐ ಕಳೆದ ಅವಧಿಯಲ್ಲಿ ಅಂದರೆ, 2018-2022ಕ್ಕೆ ಮಾರಾಟ ಮಾಡಿದ ಮಾಧ್ಯಮ ಹಕ್ಕುಗಳಿಂದ 16,347.5 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಈ ಬಾರಿ 50 ರಿಂದ 60 ಸಾವಿರ ಕೋಟಿ ರೂಪಾಯಿ ಬಿಸಿಸಿಐ ಚೀಲಕ್ಕೆ ಬೀಳುವ ನಿರೀಕ್ಷೆಯಿದೆ. ಈ ಬಾರಿ ಐಪಿಎಲ್ನಲ್ಲಿ ತಂಡಗಳ ಸಂಖ್ಯೆಯೂ ಹೆಚ್ಚಿದ್ದು, ಇಂತಹ ಪರಿಸ್ಥಿತಿಯಲ್ಲಿ ಅದರ ಬ್ರ್ಯಾಂಡ್ ಮೌಲ್ಯವೂ ಏರಿಕೆ ಕಾಣಬಹುದಾಗಿದೆ. ಬಿಸಿಸಿಐ ಈ ಬಾರಿ ಬೇಸ್ ಫ್ರೈಸ್ ಅನ್ನು ದ್ವಿಗುಣಗೊಳಿಸಿದ್ದು, 33,000 ಕೋಟಿ ರೂ.ಗೆ ಬೇಸ್ ಫ್ರೈಸ್ ಏರಿಕೆಯಾಗಿದೆ.
Published On - 5:58 pm, Fri, 10 June 22