ಟರ್ಫ್ ಕ್ಲಬ್ ಪರವಾನಗಿ ನವೀಕರಣಕ್ಕೆ ಒಲ್ಲೆ ಎಂದ ರಾಜ್ಯ ಸರ್ಕಾರ; ರೇಸಿಂಗ್ ಚಟುವಟಿಕೆಗಳು ಸ್ಥಗಿತ
ಟರ್ಫ್ ಕ್ಲಬ್ನ ಮಾಸಿಕ ಪರವಾನಗಿಯ ನವೀಕರಣ ಮಾಡಲು ರಾಜ್ಯ ಸರ್ಕಾರ ನಿರಾಕರಿಸಿದ್ದು, ಇದರಿಂದಾಗಿ ರೇಸ್ಕೋರ್ಸ್ನಲ್ಲಿ ನಡೆಯಬೇಕಿದ್ದ ರೇಸ್‌ಗಳು ಮತ್ತು ಇತರ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಕಳೆದ 13 ವರ್ಷಗಳಿಂದ ನಡೆಯುತ್ತಿರುವ ನಗರದ ಹೃದಯ ಬಾಗದಲ್ಲಿರುವ ಟರ್ಫ್ ಕ್ಲಬ್ (bangalore turf club ) ಹಾಗೂ ರಾಜ್ಯ ಸರ್ಕಾರದ ನಡುವಿನ ಹಗ್ಗಜಗ್ಗಾಟಕ್ಕೆ ತೀಲಾಂಜಲಿ ಇಡಲು ರಾಜ್ಯ ಸರ್ಕಾರ ಮುಂದಾಗಿದೆ. ವಾಸ್ತವವಾಗಿ 2008 ರಲ್ಲಿ ಬಿ.ಎಸ್. ಯಡಿಯೂರಪ್ಪ (B. S. Yediyurappa) ನೇತೃತ್ವದ ಸರ್ಕಾರ, ಬೆಂಗಳೂರಿನಲ್ಲಿರುವ ರೇಸ್‌ಕೋರ್ಸ್ ಅನ್ನು ಬೇರೆಡೆಗೆ ಸ್ಥಳಾಂತರ ಮಾಡುವುದಾಗಿ ಘೋಷಿಸಿತ್ತು. ಆದರೆ ರಾಜ್ಯ ಸರ್ಕಾರ ತೆಗೆದುಕೊಂಡಿದ್ದ ಸ್ಥಳಾಂತರವನ್ನು ವಿರೋಧಿಸಿ ಬಿಟಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಗಿನಿಂದ ಈ ಸ್ಥಳಾಂತರದ ವಿಚಾರದಲ್ಲಿ ಟರ್ಫ್ ಕ್ಲಬ್ ಹಾಗೂ ರಾಜ್ಯ ಸರ್ಕಾರದ ನಡುವೆ ಕಾನೂನು ಸಮರ ನಡೆದಿತ್ತು. ಬಳಿಕ ಪ್ರಕರಣದ ವಾದ ವಿವಾದವನ್ನು ಆಲಿಸಿದ್ದ ಹೈಕೋರ್ಟ್ (High Court) ರಾಜ್ಯಸರ್ಕಾರದ ಪರ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಟರ್ಫ್ ಕ್ಲಬ್ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು. ಪ್ರಸ್ತುತ ಟರ್ಫ್ ಕ್ಲಬ್ನ ಮಾಸಿಕ ಪರವಾನಗಿಯ ನವೀಕರಣ ಮಾಡಲು ರಾಜ್ಯ ಸರ್ಕಾರ ನಿರಾಕರಿಸಿದ್ದು, ಇದರಿಂದಾಗಿ ರೇಸ್ಕೋರ್ಸ್ನಲ್ಲಿ ನಡೆಯಬೇಕಿದ್ದ ರೇಸ್‌ಗಳು ಮತ್ತು ಇತರ ಚಟುವಟಿಕೆಗಳು ಸ್ಥಗಿತಗೊಂಡಿವೆ.
ಪರವಾನಗಿಯ ನವೀಕರಣ ವಿಚಾರವಾಗಿ ಇತ್ತೀಚೆಗೆ ಟರ್ಫ್ ಕ್ಲಬ್ ಆಡಳಿತ ಮಂಡಳಿಯು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿತ್ತು. ಆದರೆ ಕ್ಲಬ್ ಮನವಿಯನ್ನು ತಿರಸ್ಕರಿಸಿರುವ ಸಿದ್ಧರಾಮಯ್ಯ, ಈಗಿರುವ ಟರ್ಫ್ ಕ್ಲಬ್ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಮತ್ತು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ನಲ್ಲಿ ಹೂಡಿದ ಮೊಕದಮ್ಮೆಯನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಮುಖ್ಯಮಂತ್ರಿಗಳು ನೀಡಿರುವ ಆದೇಶದಿಂದಾಗಿ ಟರ್ಫ್ ಕ್ಲಬ್ಗೆ ಭಾರಿ ಹೊಡೆತಬಿದ್ದಿದೆ.
ಅವಧಿ ಮುಗಿದು 13 ವರ್ಷ ಕಳೆದರೂ ಸ್ಥಳಾಂತರವಾಗದ ಟರ್ಫ್ ಕ್ಲಬ್: ಸರ್ಕಾರವನ್ನು ಟೀಕಿಸಿದ ಕೃಷ್ಣಬೈರೇಗೌಡ
ನಷ್ಟದಲ್ಲಿರುವ ಟರ್ಫ್ ಕ್ಲಬ್
ಏಕೆಂದರೆ, ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಜಿಎಸ್ಟಿ ನೀತಿಯಿಂದಾಗಿ ಟರ್ಫ್ ಕ್ಲಬ್ ಅಪಾರ ನಷ್ಟದಲ್ಲಿದೆ. ಅಲ್ಲದೆ ರೇಸಿಂಗ್ ಚಟುವಟಿಕೆಗಳು ಸಹ ಹೆಚ್ಚು ಹೆಚ್ಚು ನಡೆಯುತ್ತಿಲ್ಲ. ಇದೀಗ ರಾಜ್ಯ ಸರ್ಕಾರ ಕೂಡ ಕ್ಲಬ್ಗೆ ಖಡಕ್ ಸಂದೇಶ ರವಾನೆ ಮಾಡಿರುವುದು ಕ್ಲಬ್ನ ಆಡಳಿತ ಮಂಡಳಿಯನ್ನು ಇನ್ನಷ್ಟು ಇಕ್ಕಟಿಗೆ ಸಿಲುಕಿಸಿದೆ.
6 ತಿಂಗಳೊಳಗೆ ಜಾಗ ತೆರವು
ವಾಸ್ತವವಾಗಿ ಯಡಿಯೂರಪ್ಪ ಸರ್ಕಾರ ತೆಗೆದುಕೊಂಡ ಸ್ಥಳಾಂತರ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಕ್ಲಬ್, ಪ್ರಸ್ತುತ ರೇಸ್ ಕೋರ್ಸ್ ಇರುವ ಜಾಗವನ್ನು ಅಂದಿನ ಮೈಸೂರಿನ ಮಹಾರಾಜರು ‘ಇನಾಮು‘ ಎಂದು ಕೊಟ್ಟಿದ್ದರು. ಅಲ್ಲದೆ ಈ ಜಾಗದಲ್ಲಿ ಕುದುರೆ ರೇಸಿಂಗ್ ಮಾತ್ರ ನಡೆಸಬೇಕು ಎಂಬ ಷರತ್ತು ವಿಧಿಸಿದ್ದರು ಎಂದು ಕೋರ್ಟ್‌ನಲ್ಲಿ ವಾದಿಸಿತ್ತು. ಆದರೆ ಕ್ಲಬ್ ವಾದಕ್ಕೆ ಸೊಪ್ಪು ಹಾಕದ ಹೈಕೋರ್ಟ್ ಇನ್ನು 6 ತಿಂಗಳೊಳಗೆ ಜಾಗವನ್ನು ತೆರವುಗೊಳಿಸುವಂತೆ ಕ್ಲಬ್ಗೆ ಆದೇಶಿಸಿತ್ತು. ಆ ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಇನ್ನು ಟರ್ಫ್ ಕ್ಲಬ್ ಅನ್ನು ಇಲ್ಲಿಂದ ಸ್ಥಳಾಂತರಿಸುವ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಸೀನಿಯರ್ ಸ್ಟೀವರ್ಡ್, ‘ಟರ್ಫ್ ಕ್ಲಬ್ ಸ್ಥಳಾಂತರಿಸಲು ನಮ್ಮ ವಿರೋದವಿಲ್ಲ. ಪ್ರಸ್ತುತ ಈ ಕ್ಲಬ್ ಸ್ಥಳ ಕೂಡ ಕುದುರೆ ರೇಸಿಂಗ್ ನಡೆಸಲು ಉತ್ತಮ ಸ್ಥಿತಿಯಲಿಲ್ಲ. ಆದರೆ ರಾಜ್ಯ ಸರ್ಕಾರ ಬೇರೆಡೆ ಸೂಚಿಸಿರುವ ಪರ್ಯಾಯ ಸ್ಥಳಗಳು ಕ್ಲಬ್ ಸ್ಥಾಪನೆಗೆ ಮತ್ತು ಅದರ ನಿರ್ವಾಹಣೆಗೆ ಸೂಕ್ತವಾಗಿಲ್ಲ ಎಂದಿದ್ದಾರೆ.
ಮೂರರಿಂದ ನಾಲ್ಕು ವರ್ಷಗಳು ಬೇಕು
ಈ ಬಗ್ಗೆ ಮಾತನಾಡಿರುವ ಮತ್ತೊಬ್ಬ ಸ್ಟಿವರ್ಡ್, ಹೊಸ ರೇಸ್ ಟ್ರ್ಯಾಕ್ ನಿರ್ಮಾಣ ಮಾಡಬೇಕೆಂದರೆ ಏನಿಲ್ಲವೆಂದರು ಮೂರರಿಂದ ನಾಲ್ಕು ವರ್ಷಗಳು ಬೇಕು. ಅಲ್ಲದೆ ಇದರ ನಿರ್ಮಾಣಕ್ಕೆ ದೊಡ್ಡ ಮೊತ್ತಡ ಹೂಡಿಕೆಯಾಗಬೇಕು. ಪ್ರಸ್ತುತ ಕ್ಲಬ್ನ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಎಲ್ಲ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ನಮಗೆ ಬೆಂಬಲ ನೀಡಿದರೆ, ನಾವು ಕ್ಲಬ್ ಸ್ಥಳಾಂತರಗೊಳಿಸಲು ಅನುಕೂಲವಾಗಲಿದೆ ಎಂದಿದ್ದಾರೆ.
ಶುಕ್ರವಾರ ಟರ್ಫ್ ಕ್ಲಬ್ ಆಡಳಿತ ಮಂಡಳಿಯನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಟರ್ಫ್ ಕ್ಲಬ್ ಆಡಳಿತ ಮಂಡಳಿ ಹಾಗೂ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಮತ್ತ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಿ ಈ ಬಗ್ಗೆ ಚರ್ಚಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಈ ಸಭೆಯ ಬಳಿಕವೇ ಟರ್ಫ್ ಕ್ಲಬ್ ಸ್ಥಳಾಂತರದ ವಿಚಾರದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Mon, 7 August 23