Mangala Gauri vrat 2023: ​ಮಂಗಳ ಗೌರಿ ವ್ರತ​ವನ್ನು ಆಚರಿಸುವ ವಿಧಾನ ಮತ್ತು ಮಹತ್ವ ಬಗ್ಗೆ ತಿಳಿದಿದೆಯಾ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 05, 2023 | 6:19 AM

ಈ ದಿನ ತಾಯಿ ಪಾರ್ವತಿಗೆ ಸಮರ್ಪಿತವಾಗಿದ್ದು, ಮಹಿಳೆಯರು ಸುಖ, ಶಾಂತಿ, ಸಂತಾನ, ಸಮೃದ್ಧಿ, ಸಂಪತ್ತು ಇತ್ಯಾದಿಗಳಿಗಾಗಿ ಈ ಉಪವಾಸವನ್ನು ಆಚರಿಸುತ್ತಾರೆ. ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡುಕೊಳ್ಳಲು ಬಯಸುವವರು ಕೂಡ ಈ ವ್ರತಾಚರಣೆ ಮಾಡಬಹುದು.

Mangala Gauri vrat 2023: ​ಮಂಗಳ ಗೌರಿ ವ್ರತ​ವನ್ನು ಆಚರಿಸುವ ವಿಧಾನ ಮತ್ತು ಮಹತ್ವ ಬಗ್ಗೆ ತಿಳಿದಿದೆಯಾ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: freepik
Follow us on

ಶ್ರಾವಣ ಮಾಸವು ಶಿವ ಮತ್ತು ತಾಯಿ ಪಾರ್ವತಿಗೆ ಸಮರ್ಪಿತವಾಗಿದ್ದು, ಆ ಮಾಸದಲ್ಲಿ ಬರುವ ಸೋಮವಾರದಂತೆ ಮಂಗಳವಾರಕ್ಕೂ ವಿಶೇಷ ಮಹತ್ವವಿದೆ. ಶ್ರಾವಣ ಮಾಸದ ಪ್ರತಿ ಮಂಗಳವಾರದಂದು ಮಂಗಳ ಗೌರಿ ವ್ರತಾಚರಣೆ (Mangala Gauri vrat) ಮಾಡಲಾಗುತ್ತದೆ. ಈ ದಿನ ತಾಯಿ ಪಾರ್ವತಿಗೆ ಸಮರ್ಪಿತವಾಗಿದ್ದು, ಮಹಿಳೆಯರು ಸುಖ, ಶಾಂತಿ, ಸಂತಾನ, ಸಮೃದ್ಧಿ, ಸಂಪತ್ತು ಇತ್ಯಾದಿಗಳಿಗಾಗಿ ಈ ಉಪವಾಸವನ್ನು ಆಚರಿಸುತ್ತಾರೆ. ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡುಕೊಳ್ಳಲು ಬಯಸುವವರು ಕೂಡ ಈ ವ್ರತಾಚರಣೆ ಮಾಡಬಹುದು. ಈ ಬಾರಿ ಅಧಿಕ ಶ್ರಾವಣ ಮಾಸ ಆಗಿರುವುದರಿಂದ 9 ಮಂಗಳವಾರ ಬಂದಿದ್ದು ಮಂಗಳ ಗೌರಿ ವ್ರತಾಚರಣೆ ಮಾಡಲು ಶುಭಪ್ರದವಾಗಿದೆ.

ನಂಬಿಕೆಗಳ ಪ್ರಕಾರ, ಪಾರ್ವತಿಯು ಶಿವನನ್ನು ಪಡೆಯಲು ಅನೇಕ ಉಪವಾಸಗಳನ್ನು ಮಾಡುತ್ತಾಳೆ ಎಂದು ಹೇಳಲಾಗುತ್ತದೆ. ಅದರಲ್ಲಿ ಮಂಗಳಗೌರಿ ವ್ರತವೂ ಒಂದು. ಹಾಗಾಗಿ ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯವನ್ನು ಬಯಸಿ ಈ ಉಪವಾಸವನ್ನು ಆಚರಿಸುತ್ತಾರೆ. ಹಾಗಾಗಿ ಶ್ರಾವಣದ ಪ್ರತಿ ಮಂಗಳವಾರವೂ ಈ ವ್ರತವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:  ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಜೀವನದಲ್ಲೂ ಸಫಲತೆ ಕಾಣುವಿರಿ

ಆಚರಣೆ ಹೇಗೆ?

ಶ್ರಾವಣ ಮಂಗಳವಾರದಂದು, ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿ, ಮನೆಯ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ. ಮನೆಯಲ್ಲಿ ವಿಗ್ರಹ ಇದ್ದಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ಪಾರ್ವತಿ ದೇವಿಗೆ ತೊಡಿಸಬೇಕು. ಇಲ್ಲವಾದಲ್ಲಿ ದೇವಸ್ಥಾನಗಳಿಗೆ ಕೆಂಪು ವಸ್ತ್ರ ನೀಡಬಹುದು. ಬಳಿಕ ದೀಪವನ್ನು ಬೆಳಗಿಸಿ. ಶಿವ ಪಾರ್ವತಿಯನ್ನು ಪೂಜಿಸಬೇಕು. ಇದಾದ ನಂತರ ಮಂಗಳ ಗೌರಿ ವ್ರತ ಕಥೆಯನ್ನು ಕೇಳಿ. ಪೂಜೆಯ ನಂತರ, ಕುಟುಂಬದ ಸದಸ್ಯರಿಗೆ ಪ್ರಸಾದವನ್ನು ನೀಡಿ ಮತ್ತು ಅಗತ್ಯವಿರುವವರಿಗೆ ಹಣ ಮತ್ತು ಧಾನ್ಯಗಳನ್ನು ದಾನ ಮಾಡಿ. ಉಪವಾಸದಲ್ಲಿ ಅಕ್ಕಿಯ ಪದಾರ್ಥಗಳನ್ನು ಸೇವಿಸಬಾರದು.

ಶ್ರಾವಣ ಮಂಗಳವಾರದಂದು ಯಾವ ಮಂತ್ರ ಪಠಣ ಮಾಡಬೇಕು?

”ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|

ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ||”

ಅಥವಾ ”ಓಂ ಉಮಾಮಹೇಶ್ವರಾಯ ನಮಃ” ಎಂಬ ಮಂತ್ರವನ್ನು ಪಠಿಸಬಹುದು.

ಮಂಗಳ ಗೌರಿ ವ್ರತದಂದು, ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಮಕ್ಕಳ ಸಂತೋಷ ಮತ್ತು ಶಾಂತಿಗಾಗಿ ಪಾರ್ವತಿ ದೇವಿಯನ್ನು ಪೂಜಿಸುತ್ತಾರೆ. ಇನ್ನು ಅವಿವಾಹಿತ ಹುಡುಗಿಯರು ಈ ದಿನ ಉಪವಾಸ ಮಾಡುವ ಮೂಲಕ “ಓಂ ಗೌರಿ ಶಂಕರಾಯ ನಮಃ’ ಎಂದು ಮಂತ್ರವನ್ನು ಪಠಿಸಬೇಕು. ಅಥವಾ ಸುಂದರಕಾಂಡ ಪಾರಾಯಣ ಮಾಡಬೇಕು. ಈ ರೀತಿ ಮಾಡುವುದರಿಂದ ಅಡೆತಡೆಗಳು ನಿವಾರಣೆಯಾಗಿ ಶುಭ ಫಲಗಳು ಪ್ರಾಪ್ತಿಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ