ಬಸ್ ನಿಲ್ಲುವೆಡೆ, ರೈಲು ಬೋಗಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಬೇಕು; ಫೇಸ್​ಬುಕ್​ನಲ್ಲಿ ಮಾರ್ದನಿಸುತ್ತಿದೆ ಹಕ್ಕೊತ್ತಾಯ

| Updated By: Ayesha Banu

Updated on: Jan 25, 2023 | 3:39 PM

Womens Toilet: ‘ಹೆಣ್ಣು ಗಂಡಿನ ಜೈವಿಕ ವ್ಯವಸ್ಥೆ ಬೇರೆ. ಅದಕ್ಕೆ ತಕ್ಕಂತೆ ವಿಸರ್ಜನೆ ರೀತಿಯೂ ತಾನೆ. ಪ್ರತ್ಯೇಕ ಶೌಚಾಲಯವೇ ಬೇಕು’ ಎಂದು ದನಿಗೂಡಿಸಿದ್ದಾರೆ.

ಬಸ್ ನಿಲ್ಲುವೆಡೆ, ರೈಲು ಬೋಗಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಬೇಕು; ಫೇಸ್​ಬುಕ್​ನಲ್ಲಿ ಮಾರ್ದನಿಸುತ್ತಿದೆ ಹಕ್ಕೊತ್ತಾಯ
ಮಹಿಳೆಯರ ಶೌಚಾಲಯ ಸಮಸ್ಯೆ ಪರಿಹರಿಸಬೇಕೆಂದು ಫೇಸ್​ಬುಕ್​ನಲ್ಲಿ ಹಲವು ಬರೆಯುತ್ತಿದ್ದಾರೆ.
Follow us on

ರೈಲು ಬೋಗಿಗಳಲ್ಲಿ ಶೌಚಾಲಯಗಳು ಇರುವುದು ನಿಜವಾದರೂ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಇರುವುದಿಲ್ಲ. ಕೆಲ ಪುರುಷರ ಅಸಭ್ಯ ವರ್ತನೆ ಮತ್ತು ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡುವುದರಲ್ಲಿ ಇರುವ ನಿರ್ಲಕ್ಷ್ಯ ಧೋರಣೆಯಿಂದ ಮಹಿಳೆಯರಿಗೆ ತೀವ್ರ ಮುಜುಗರವಾಗುತ್ತದೆ. ಹಲವು ದಿನಗಳ ಈ ಸಮಸ್ಯೆ ಇದೀಗ ಮತ್ತೊಮ್ಮೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮುಜುಗರದ ಮುಸುಕಿನಿಂದ ಹೊರಗೆ ಬಂದು ಸಾರ್ವಜನಿಕವಾಗಿ ಹಕ್ಕೊತ್ತಾಯ ಮಂಡಿಸುತ್ತಿರುವ ಮಹಿಳೆಯರ ಧ್ವನಿಗೆ ಹಲವು ಪ್ರಜ್ಞಾವಂತರ ಬೆಂಬಲವೂ ಸಿಕ್ಕಿದೆ. ಕಾಸರಗೋಡು ತಾಲ್ಲೂಕಿನ ಕುಂಬ್ಳೆಯ ಬರಹಗಾರ್ತಿ ಅನುಪಮಾ ಪ್ರಸಾದ್​ ಅವರು ಜನವರಿ 23ರಂದು ಫೇಸ್​ಬುಕ್​ನಲ್ಲಿ ಹಾಕಿದ ಒಂದು ‘ಪಬ್ಲಿಕ್’ ಪೋಸ್ಟ್​ನಿಂದ ಈ ಚರ್ಚೆ ಅರಂಭವಾಯಿತು. ‘ಗಂಡಸರೇಕೆ ಹೀಗೆ’ ಎಂಬ ಶೀರ್ಷಿಕೆಯಡಿ ಬರೆದಿದ್ದ ಅನುಪಮಾ, ‘ಸ್ವಚ್ಛ ಆರೋಗ್ಯಕರ ಶೌಚಾಲಯ ಮಹಿಳೆಯರ ಹಕ್ಕು ಅಲ್ವಾ’ ಎಂದು ಖಡಕ್​ ಆಗಿ ಪ್ರಶ್ನಿಸಿದ್ದರು. 108ಕ್ಕೂ ಹೆಚ್ಚು ಲೈಕ್, 60 ಕಾಮೆಂಟ್ ಹಾಗೂ 9 ಶೇರ್ ಪಡೆದಿದ್ದ ಈ ಪೋಸ್ಟ್​ ಹಲವು ಗಮನ ಸೆಳೆದಿತ್ತು.

‘ಈ ವಿಷಯದಲ್ಲಿ ಎಲ್ಲೆಲ್ಲಿ ಎಷ್ಟು ಜಗಳಾಡಿದ್ದೇನೆ ಎಂದು ನನಗೆ ಈಗ ನೆನಪಿಲ್ಲ. ಅನೇಕ ಕಡೆ ಜಗಳಾಡಿ ದೂರು ಕೊಟ್ಟಿದ್ದೇನೆ’ ಎಂದು ವಿ.ಲಕ್ಷ್ಮೀ ಎನ್ನುವವರು ಇದೇ ಪೋಸ್ಟ್​ಗೆ ಅತ್ಯಂತ ಬೇಸರದಿಂದ ಕಾಮೆಂಟ್ ಮಾಡಿದ್ದಾರೆ. ‘ಡ್ರೈವರ್ ಗಳು ಗಂಡಸರು ಮಾತ್ರ ಪ್ರಯಾಣಿಕರು ಅಂದ್ಕೋಬಿಟ್ಟಿರ್ತಾರೆ.. ಅವರದ್ದು ಮುಗಿದರೆ ಇಡೀ ಬಸ್ಸಿನದೇ ಶೌಚ ಮುಗಿದ ಹಾಗೆ ಅವರಿಗೆ. ಪೀರಿಯಡ್ ಟೈಮಾದ್ರಂತೂ ಅವಸ್ಥೆ ಬೇಡ ಹೆಣ್ಣುಮಕ್ಕಳದು’ ಎಂದು ರೇಣುಕಾ ರಮಾನಂದ ಎನ್ನುವವರು ಮಹಿಳೆಯರ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಾರೆ. ‘ಕೆಲವೆಡೆ ಉದ್ಯೋಗ ಮಾಡುವ ಸ್ಥಳಗಳಲ್ಲಿಯೂ ಪರಿಸ್ಥಿತಿ ಹೀಗೆಯೇ ಇದೆ’ ಎಂದು ತ್ರಿವೇಣಿ ಎನ್ನುವವರ ಪ್ರತಿಕ್ರಿಯಿಸಿದ್ದಾರೆ.

ದುರ್ನಾತದ ಸಂಕಟ: ಅನುಪಮಾ ಪ್ರಸಾದ್ ಬರಹ

ಫೇಸ್​ಬುಕ್​ನಲ್ಲಿ ಅನುಪಮಾ ಅವರು ಬರೆದಿರುವ ಪೋಸ್ಟ್​ನ ಒಕ್ಕಣೆ ಹೀಗಿದೆ…

‘ನಿನ್ನೆ ಮಧ್ಯಾಹ್ನ ಮೂರು ಘಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಡುವ ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ ಬಸ್ಸಲ್ಲಿ ಪ್ರಯಾಣ ಹೊರಟೆ. ಹಿರಿಯೂರಿನ ಒಂದು ಹೊಟೆಲ್ ಮುಂದೆ ಅಂತು ಇಂತು ಡ್ರೈವರಣ್ಣ ನಿಲುಗಡೆ ಕೊಟ್ಟರು. ಸಂಜೆಯಾಗಿತ್ತು. ಹೆಂಗಸರು ಬಡಬಡ ಫ್ರೆಶ್ ರೂಂ ಕಡೆ ಓಡಿದರು. ಒಳಹೊಕ್ಕುವ ಮೊದಲೇ ದುರ್ನಾತ ದೂರ ನಡೀರಿ ಅಂತಿತ್ತು. ಮೂಗಿಗೆ ಬಟ್ಟೆ ಮುಚ್ಕಂಡು ಅರೆಬರೆ ಓರೆ ಇದ್ದ ಬಾಗಿಲು ತಳ್ಳಿ ನೋಡಿ ಕೆಲವರು ವಾಪಸ್ ಹಾಗೇ ಹಿಂದೆ ಬಂದರು. ಅಷ್ಟು ಹೊತ್ತು ನೀರು ಇತ್ತೊ ಇಲ್ವೊ. ಇದ್ದಕ್ಕಿದ್ದಂತೆ ನಳಗಳು ಕಿತ್ತು ಹೋಗುವಷ್ಟು ರಭಸದಲ್ಲಿ ನೀರು ಬರಲಾರಂಭಿಸಿತ್ತು. ಯಾರಿಗೆ ಹೇಳೋಣ ನಮ್ಮ ಫಜೀತಿ.

‘ಈ ಡ್ರೈವರಣ್ಣ ಇಲ್ಲಿ ಬಸ್ ನಿಲ್ಲಿಸುವ ಮೊದಲು ಒಂದೆರಡು ಕಡೆ ಬಸ್ ಸೈಡಿಗೆ ಹಾಕಿ ಉಚ್ಚೆ ಹೊಯ್ಕಂಡಿದ್ರು. ಕೆಲವು ಗಂಡಸು ಪ್ರಯಾಣಿಕರೂ ಇಳಿದು ಜಿಪ್ ಇಳಿಸಿ ಬೆಳ್ಳ ಬಿಟ್ರು. ಆ ಗಂಡಸರಲ್ಲಿ ಕೆಲವರು ಬಸ್ಸಲ್ಲಿ ಕೋಟಿಗಟ್ಟಲೆ ವ್ಯವಹಾರದ ಮಾತಾಡ್ಕಂಡು ಇದ್ರು. ಇಂಗ್ಲಿಷಲ್ಲೇ ಯಾರಿಗೊ ಬೈತಾನೂ ಇದ್ರು. ಭಯಂಕರ ಬ್ರಾಂಡೆಡ್ ಅಂಗಿ ತೊಟ್ಟವರೂ ಇದ್ರು. ಇವರಿಗೆಲ್ಲ ತಮ್ಮ ಸಹ ಪ್ರಯಾಣಿಕ ಹೆಂಗಸರ ಬಗ್ಗೆ ಏನೂ ಅನಿಸುವುದೇ ಇಲ್ವಾ. ನೀವೆಲ್ಲ ಬಾಯಿ ಬಿಟ್ಟರೆ ಈ ಡ್ರೈವರಣ್ಣಂದೀರು ಹೀಗೆ ಮಾಡ್ತಾರಾ? ನಿಮ್ಮ ಅಮ್ಮಂದಿರಿಗೆ, ಅಕ್ಕತಂಗೀರಿಗೆ, ಹೆಂಡ್ತಿಗೆ, ಗೆಳತಿಗೆ, ಮಗಳಿಗೆ ಏನೇನೊ ಆರೋಗ್ಯ ಸಮಸ್ಯೆ ಇರಬಹುದು. ಇಲ್ಲದಿರಬಹುದು. ದೇಹಬಾಧೆ ಇದೆ ಅಲ್ವಾ. ಸ್ವಚ್ಛ ಆರೋಗ್ಯಕರ ಶೌಚಾಲಯ ಅವರ ಹಕ್ಕು ಅಲ್ವಾ. ಹೋಗಲಿ. ಹೊಟೆಲಿನವರಿಗೆ, ಹಾಗೂ ಬಸ್ ಸಿಬ್ಬಂದಿ ನಡುವೆ ಏನೊ ಕಮಿಷನ್ ಗಿಮಿಷನ್ ವ್ಯವಹಾರ ಒಪ್ಪಂದ ಇರಬಹುದು. ಅದಕ್ಕಾಗಿ ಅದೇ ಹೊಟೆಲುಗಳ ಮುಂದೆ ನಿಲ್ಲಿಸಬಹುದು. ಆ ಹೊಟೆಲ್ ನಡೆಸುವವರಿಗೆ ಪ್ರಯಾಣಿಕರ ಬಗ್ಗೆ ಕಾಳಜಿ ಬೇಡವೇ’ ಎಂದು ಅವರು ಪ್ರಶ್ನಿಸಿದ್ದರು.

ರೈಲುಗಳಲ್ಲೂ ಶೌಚಾಲಯ ಸಂಕಟ: ಪ್ರತಿಭಾ ಕುಡ್ತಡ್ಕ ಬರಹ

ಅನುಪಮಾ ಪ್ರಸಾದ್ ಅವರ ಪೋಸ್ಟ್​ಗೆ ಕಾಮೆಂಟ್​ ಮಾಡಿರುವ ಹಲವರು ರೈಲುಗಳ ಪ್ರಯಾಣವನ್ನು ಶಿಫಾರಸು ಮಾಡಿದ್ದರು. ಅನುಪಮಾ ಅವರ ಪೋಸ್ಟ್​ ಅನ್ನು ಶೇರ್ ಮಾಡಿಕೊಂಡ ಪ್ರತಿಭಾ ಕುಡ್ತಡ್ಕ ರೈಲುಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪ್ರತಿಭಾ ಅವರು ಮೈಸೂರಿನ ಅಬ್ದುಲ್ ನಜೀರ್​ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಬೋಧಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪೋಸ್ಟ್ ಸಹ ಸಾಕಷ್ಟು ಜನರ ಗಮನ ಸೆಳೆದಿದೆ.

‘ರೈಲು ಲಭ್ಯವಿದ್ದಲ್ಲಿ ನಾನು ರೈಲಲ್ಲೇ ಪ್ರಯಾಣಿಸೋದು. ಹಾಗಂತ ರೈಲಿನ ಶೌಚಾಲಯಗಳೂ ಶುಚಿಯಾಗೇನೂ ಇರೋದಿಲ್ಲ. ಮೂಲ ನಿಲ್ದಾಣದಿಂದ ಹೊರಡುವಾಗ ಶುಚಿಯಾಗಿದ್ದರೂ ಪ್ರಯಾಣಿಕರೇ ಗಲೀಜು ಮಾಡಿ ಹಾಕ್ತಾರೆ. ಕೊನೆಯ ನಿಲ್ದಾಣ ತಲಪುವವರೆಗೂ ನೀರು ಸ್ಟಾಕ್ ಇರುವುದೇ ಇಲ್ಲ. ರೈಲಲ್ಲಿ ಹೆಂಗಸರ/ ಗಂಡಸರ ಶೌಚಾಲಯ ಅಂತಿಲ್ಲ. ಎಲ್ಲವೂ ಜನರಲ್. ಅನುಪಮಾ ಪ್ರಸಾದ್ ಅವರು ಹೇಳಿದಂತೆ ಕೋಟಿ ವ್ಯವಹಾರ ಮಾತಾಡುವ, ಇಂಗ್ಲಿಷ್ ಉಲಿಯುವ ಎಸಿ ಕ್ಲಾಸಿನ ಗಂಡಸರಿಗೂ ನಾಗರಿಕ ಪ್ರಜ್ಞೆಯೆಂಬುದು ಮಾತ್ರ ಇಲ್ಲ. ಕಮೋಡ್​ನ ಮೇಲೆಲ್ಲ ಉಚ್ಚೆ ಹೊಯ್ಡು, ಸಿಗರೇಟು, ಗುಟ್ಕಾಗಳ ಪ್ಯಾಕೇಟ್ ಚೆಲ್ಲಾಡಿ, ಫ್ಲಶ್ ಕೂಡಾ ಮಾಡದೆ ಬರ್ತಾರೆ.

‘ರೈಲು ಸಿಗದೆ ಒಮ್ಮೆ ಗದಗದಿಂದ ಮಂಗಳೂರಿಗೆ ಬಸ್ಸಲ್ಲಿ ಬಂದ ಅನುಭವ ಮಾತ್ರ ಅನನ್ಯ. ಎಲ್ಲೋ ನಿರ್ಜನ ಕಾಡು ದಾರಿಯಲ್ಲಿ ಬಸ್ ನಿಲ್ಲಿಸಿ, ಮಹಿಳೆಯರೂ ಅಲ್ಲೇ ಮರೆಯಲ್ಲಿ ಮುಗಿಸುವಂತೆ ಹೇಳಿದ್ದ ಡ್ರೈವರ್ ಮಹಾಶಯ! ರೈಲಲ್ಲೂ ಹೆಂಗಸರ / ಗಂಡಸರ ಶೌಚಾಲಯ ಅಂತ ಕಾಯ್ದಿರಿಸುವುದು ಒಳ್ಳೇದಲ್ವೇ? ದಯವಿಟ್ಟು ಅಭಿಪ್ರಾಯ ತಿಳಿಸಿ…’ ಎಂದು ಪ್ರತಿಭಾ ಅವರು ತಮ್ಮ ಪೋಸ್ಟ್ ಮುಗಿಸಿದ್ದಾರೆ.

ಈ ಪೋಸ್ಟ್​ಗೆ ಅನುಪಮಾ ಪ್ರಸಾದ್ ಅವರು ಮತ್ತಷ್ಟು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿ, ‘ಹೆಣ್ಣು ಗಂಡಿನ ಜೈವಿಕ ವ್ಯವಸ್ಥೆ ಬೇರೆ. ಅದಕ್ಕೆ ತಕ್ಕಂತೆ ವಿಸರ್ಜನೆ ರೀತಿಯೂ ತಾನೆ. ಪ್ರತ್ಯೇಕ ಶೌಚಾಲಯವೇ ಬೇಕು’ ಎಂದು ದನಿಗೂಡಿಸಿದ್ದಾರೆ.

ಪ್ರತಿಭಾ ಅವರ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಪಂಡಿತಾರಾಧ್ಯ ಮೈಸೂರು ಶೌಚಾಲಯದ ಸಮಸ್ಯೆ ಗಂಡಸರಿಗೂ ಇದೆ ಎಂದು ಒತ್ತಿ ಹೇಳಿದ್ದಾರೆ. ‘ದೂರದ ಊರುಗಳಿಂದ ಬೆಂಗಳೂರು ಮೂಲಕ ಮೈಸೂರಿಗೆ ಬಂದು ತಲುಪುವ ರೈಲುಗಳಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ಅನುಭವ ಹಿತವಾಗಿರುವುದಿಲ್ಲ. ಸತತ ಮೂರ್ನಾಲ್ಕು ದಿನಗಳ ಪ್ರಯಾಣದಿಂದ ಶೌಚಾಲಯ ಹೊಲಸಾಗಿರುತ್ತದೆ. ಬಹುತೇಕ ಬೋಗಿಗಳಲ್ಲಿ ನೀರು ಖಾಲಿಯಾಗಿರುತ್ತದೆ. ಮುಂದಿನ ನಿಲ್ದಾಣ ಕೊನೆಯ ನಿಲ್ದಾಣ (ಮೈಸೂರು) ಆಗಿರುವುದರಿಂದ ಸ್ವಚ್ಛಗೊಳಿಸಲು ಕಾಲಾವಕಾಶವೂ ಇಲ್ಲದೆ, ನೀರು ತುಂಬುವುದಿಲ್ಲ’ ಎಂದು ಬೆಂಗಳೂರು-ಮೈಸೂರು ಪ್ರಯಾಣಿಕರ ಸಂಕಷ್ಟ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಮಾಡಿದ ಆಕೃತಿಗೆ ಪ್ರಧಾನಿ ಮೆಚ್ಚುಗೆ

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Wed, 25 January 23