ನಾಥೂರಾಮ್ ವಿನಾಯಕ ಗೋಡ್ಸೆ (Nathuram Godse) ಭಾರತೀಯರ ಪಾಲಿಕೆ ಇತಿಹಾಸ ಪುಟದಲ್ಲಿ ಒಬ್ಬ ಖಳನಾಯಕ. ಕಾರಣ ರಾಷ್ಟ್ರಪಿತ ಮಹಾತ್ಮ ಗಾಂಧಿ (Mahatma Gandhi) ಅವರನ್ನು ಹತ್ಯೆ ಮಾಡಿದರೆಂದು. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಸದಾ ಚರ್ಚೆಗೆ ಗ್ರಾಸವಾಗಿರುವ ನಾಥೂರಾಮ್ ಗೋಡ್ಸೆ ಗಾಂಧಿ ಹಂತಕ ಎಂದು ಇವರನ್ನು ವಿರೋಧಿಸುವರು ಅಸಂಖ್ಯ ಜನರಿದ್ದರೇ, ಇವರ ಪರ ವಕಾಲತ್ತು ವಹಿಸುವವರು ಕೆಲ ಜನರು. ಕಳೆದ 7 ದಶಕಗಳಿಂದ ಇಲ್ಲಿಯವರೆಗು ನಿರಂತರವಾಗಿ ಚರ್ಚೆಯಾಗುತ್ತಿದೆ.
ನಾಥೂರಾಮ್ ವಿನಾಯಕ ಗೋಡ್ಸೆ ಹುಟ್ಟಿದ್ದು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ. ನಾಥೂರಾಮ್ ಗೋಡ್ಸೆ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮೇ.19 1910 ರಲ್ಲಿ ಜನಿಸಿದರು. ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದ ತಂದೆ ವಿನಾಯಕ ವಾಮನರಾವ್ ಗೋಡ್ಸೆ ಮತ್ತು ತಾಯಿ ಲಕ್ಷ್ಮೀ (ಜನ್ಮನಾಮ ಗೋದಾವರಿ)ನಾಥೂರಾಮ್‌ರ ಜನ್ಮನಾಮ ರಾಮಚಂದ್ರ.
ಬಾಲಕ ರಾಮಚಂದ್ರನಿಗೆ ನಾಥೂರಾಮ್ ಎಂದು ಹೆಸರು ಬರಲು ಒಂದು ಕಾರಣ ಇದೆ. ಅದು ಬಾಲಕ ರಾಮಚಂದ್ರನಿಗಿಂತ ಮೊದಲು ಹುಟ್ಟಿದ ಮೂರು ಗಂಡು ಮಕ್ಕಳೂ ಕಿರಿವಯಸ್ಸಿನಲ್ಲಿಯೇ ತೀರಿಹೋದರು. ಬದುಕಿದ್ದು ಒಬ್ಬ ಸೋದರಿ ಮಾತ್ರ. ಹೀಗಾಗಿ ತಮ್ಮ ಕುಟುಂಬದ ಗಂಡು ಮಕ್ಕಳ ಮೇಲೆ ಯಾವುದೋ ಶಾಪವಿದೆ ಎಂದುಕೊಂಡು, ಬಾಲಕ ರಾಮಚಂದ್ರನನ್ನು ಬಾಲ್ಯದಲ್ಲಿ ಮೂಗು ಚುಚ್ಚಿಸುವುದು, ಮೂಗುತಿ ಹಾಕುವುದು ಸೇರಿದಂತೆ, ಹುಡುಗಿಯ ರೀತಿಯಲ್ಲಿ ಬೆಳೆಸಲಾಯಿತು. ಹೀಗಾಗಿ ಅವರಿಗೆ ನಾಥೂರಾಮ್ ಎಂಬ ಹೆಸರು ಬಂತು.
ಇನ್ನು ಶಾಲಾ ದಿನಗಳಲ್ಲಿ ನಾಥುರಾಮ್ ಗೋಡ್ಸೆಗೆ ಮಹಾತ್ಮ ಗಾಂಧಿಯವರ ಬಗ್ಗೆ ಅಪಾರ ಗೌರವ ಇತ್ತು. ಇದಕ್ಕೆ ಪೂರಕವಾಗಿ ನಾಥುರಾಮ್ 1930 ರಲ್ಲಿ ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತದೆ.
ಇದೇ ವರ್ಷ 1930ರಲ್ಲಿ ನಾಥೂರಾಮ್‌ರ ತಂದೆಯವರಿಗೆ ರತ್ನಾಗಿರಿ ಎಂಬ ಪಟ್ಟಣಕ್ಕೆ ವರ್ಗವಾಯಿತು. ಅಲ್ಲಿ ತನ್ನ ತಂದೆತಾಯಿಗಳೊಂದಿಗೆ ವಾಸಿಸುತ್ತಿರುವಾಗ ಬಾಲಕ ನಾಥೂರಾಮರಿಗೆ ಹಿಂದುತ್ವ ಸಿದ್ಧಾಂತ ಪ್ರತಿಪಾದಕರಾದ ವೀರ್ ಸಾವರ್ಕರ್‌ರ ಪರಿಚಯವಾಯಿತು.
ನಾಥೂರಾಮ್ ಗೋಡ್ಸೆ ಪ್ರೌಢಶಾಲೆಯಲ್ಲಿದ್ದಾಗಲೇ ಶಿಕ್ಷಣ ನಿಲ್ಲಿಸಿ ಹಿಂದೂ ಮಹಾಸಭಾದ ಕಾರ್ಯಕರ್ತನಾಗಿದ್ದ. ಅಲ್ಲದೆ ಹಿಂದೂ ಮಹಾಸಭಾ ಪರವಾಗಿ ‘ಅಗ್ರಣಿ’ ಎಂಬ ಮರಾಠಿ ಪತ್ರಿಕೆಯನ್ನೂ ಆರಂಭಿಸಿದ್ದ. ಮುಂದೆ ಅದರ ಹೆಸರನ್ನು ‘ಹಿಂದೂ ರಾಷ್ಟ್ರ’ ಎಂದು ಬದಲಾಯಿಸಲಾಗಿತ್ತು. ಹಿಂದೂ ಮಹಾಸಭಾ ಆರಂಭದಲ್ಲಿ ಬ್ರಿಟೀಷರ ವಿರುದ್ಧದ ಗಾಂಧಿ ಚಳುವಳಿಯನ್ನು ಬೆಂಬಲಿಸಿತ್ತು.
1942ರಲ್ಲಿ ನಂತರ ಗಾಂಧಿ ಕುರಿತ ಗೋಡ್ಸೆಯವರ ಅಭಿಪ್ರಾಯ ಬದಲಾಗಿತ್ತು. ಮುಸಲ್ಮಾನರನ್ನು ಸಂತೋಷಗೊಳಿಸುವ ಪ್ರಯತ್ನದಲ್ಲಿ ಗಾಂಧಿ ಹಿಂದೂಗಳ ಹಿತಾಸಕ್ತಿಗಳನ್ನು ಬಲಿ ಕೊಡುತ್ತಿದ್ದಾರೆ ಎಂಬ ಆಭಿಪ್ರಾಯಗಳು ಗೋಡ್ಸೆಯಲ್ಲಿ ಮೂಡಲಾರಂಭಿಸಿದವು. ಅಲ್ಲದೆ ದೇಶ ವಿಭಜನೆಗೆ ಹಾಗೂ ಈಸಂದರ್ಭದಲ್ಲಿ ಭಾರತ ಪಾಕಿಸ್ತಾನದ ಗಡಿ ಭಾಗಗಳು, ಬಂಗಾಳದಲ್ಲಿ ಉಂಟಾದ ಕೋಮುಗಲಭೆಗಳಿಗೆ ಗಾಂಧಿಯೇ ನೇರ ಕಾರಣ ಎಂಬುದು ಆತನ ಆರೋಪವಾಗಿತ್ತು.
ನಾಥೂರಾಮ್ ಅವರ ಪ್ರಕಾರ ಹಿಂದೂಗಳು ತಮ್ಮ ಸ್ವರಕ್ಷಣೆಗೆ ನಡೆಸಲು ಬೇಕಾದ ಹೋರಾಟಕ್ಕೆ ಅಗತ್ಯವಾದ ಸಂಕಲ್ಪಶಕ್ತಿಯನ್ನೇ ಕಳೆದುಕೊಳ್ಳುವ ಹಾಗೆ ಮಾಡಿ ಅವರನ್ನು ಶಾಶ್ವತವಾಗಿ ಗುಲಾಮರನ್ನಾಗಿ ಮಾಡಿಬಿಡುತ್ತವೆ ಗಾಂಧಿಜಿಯವರ ಚಿಂತನೆಗಳು ಹೀಗಾಗಿ ಗಾಂಧಿಜಿಯವರನ್ನು ವಿರೋಧಿಸಲು ಪ್ರಾರಂಭಿಸಿದರು.
ಗಾಂಧಿಜಿಯವರನ್ನು ಹತ್ಯೆ ಮಾಡುವ ನಿರ್ಧಾರವನ್ನು ಕೈಗೊಳ್ಳಲು ಅವರಿಗಿದ್ದ ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿತ್ತು ಎನ್ನಲಾಗಿದೆ. ಆದರೆ ಅವರು ರಾಷ್ಟ್ರಪ್ರೇಮಿಯೂ ಆಗಿದ್ದರು. ಈ ಕಾರಣದಿಂದ ನಾಥೂರಾಮ್ ಜನವರಿ 30, 1948ರಂದು ಸಂಜೆ ಸಮಯದಲ್ಲಿ ಗಾಂಧಿಜಿಯವರ ಪ್ರಾರ್ಥನಾ ಮಂದಿರಕ್ಕೆ ಹೋದರು. ಅಲ್ಲಿ ಗಾಂಧಿಜಿಯವರ ತೀರ ಸನಿಹದಲ್ಲಿ ನಿಂತುಕೊಂಡು, ಅವರಿಗೆ 38 ಬೆರೆಟ್ಟಾ ಅರೆ-ಸ್ವಯಂಚಾಲಿತ ಪಿಸ್ತೂಲಿನಿಂದ ಮೂರು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದರು. ಗುಂಡು ಹಾರಿಸಿದ ನಂತರ ನಾಥೂರಾಮ್ ಗೋಡ್ಸೆ ಓಡಲೂ ಪ್ರಯತ್ನಿಸಲಿಲ್ಲ. ಅಲ್ಲೇ ಇದ್ದ ಪೊಲೀಸರು ಅವರನ್ನು ಬಂಧಿಸಿದರು.
1948ರಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ವಿಚಾರಣೆಯ ಸಂದರ್ಭದಲ್ಲಿ ನಾಥೂರಾಮ್ ಗೋಡ್ಸೆ, 1947 ರ ಭಾರತದ ವಿಭಜನೆಯ ಸಮಯದಲ್ಲಿ ಬ್ರಿಟಿಷ್ ಭಾರತದ ಮುಸ್ಲಿಮರ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮಹಾತ್ಮ ಗಾಂಧಿ ಮನಸ್ಸು ಮಾಡಿದ್ದು ತಪ್ಪು ಎಂದು ಹೇಳಿದ್ದರು.
ಗೋಡ್ಸೆಯನ್ನು ಬಂಧಿಸಲಾಯಿತು. ಶಿಮ್ಲಾದ ಪೀಟರ್‌ಹಾಫ್‌ನಲ್ಲಿದ್ದ ಪಂಜಾಬ್ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಗೋಡ್ಸೆಯವರನ್ನು ಅಂಬಾಲಾ ಸೆಂಟ್ರಲ್ ಜೈಲಿನಲ್ಲಿ 1949ರ ನವೆಂಬರ್ 15ರಂದು ಗಲ್ಲಿಗೇರಿಸಲಾಯಿತು ಎಂಬುದು ಇತಿಹಾಸ.