Honeytrap: ಮಠ, ರಾಜಕಾರಣ, ಕಾಮ ಮತ್ತು ಹನಿಟ್ರ್ಯಾಪ್; ಬಸವಲಿಂಗಶ್ರೀ ಆತ್ಮಹತ್ಯೆ ಮೊಗೆದುಕೊಟ್ಟ ನೆನಪುಗಳು

| Updated By: TV9 Digital Desk

Updated on: Nov 04, 2022 | 12:31 PM

‘ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿಯಂತೆ ಬಸವಲಿಂಗ ಶ್ರೀ ಸಹ ಆರಂಭದಲ್ಲಿಯೇ ಏಕೆ ಎಚ್ಚೆತ್ತುಕೊಂಡು ಪೊಲೀಸರಿಗೆ ಅಥವಾ ಸಿದ್ದಗಂಗಾ ಮಠದ ಹಿರಿಯರಿಗೆ ದೂರು ಕೊಡಲಿಲ್ಲ’ ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ.

Honeytrap: ಮಠ, ರಾಜಕಾರಣ, ಕಾಮ ಮತ್ತು ಹನಿಟ್ರ್ಯಾಪ್; ಬಸವಲಿಂಗಶ್ರೀ ಆತ್ಮಹತ್ಯೆ ಮೊಗೆದುಕೊಟ್ಟ ನೆನಪುಗಳು
ಬಂಡೇಮಠದ ಬಸವಲಿಂಗ ಸ್ವಾಮೀಜಿ (ಎಡಚಿತ್ರ), ಹನಿಟ್ರ್ಯಾಪ್ ಆರೋಪಿ ನೀಲಾಂಬಿಕೆ (ಮಧ್ಯದ ಚಿತ್ರ) ಮತ್ತು ಸಣ್ಣ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಶಿವಮೂರ್ತಿ ಮುರುಘಾ ಶರಣರು
Follow us on

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಕಂಚುಗಲ್ ಬಂಡೆಮಠದ ಬಸವಲಿಂಗ ಶ್ರೀ ಆತ್ಮಹತ್ಯೆಯ ನಂತರ ಕರ್ನಾಟಕದಲ್ಲಿ ಮತ್ತೊಮ್ಮೆ ಹನಿಟ್ರ್ಯಾಪ್ ಹಗರಣ ಚರ್ಚೆಯ ವಿಷಯವಾಗಿದೆ. ಈ ಹಿಂದೆ ರಮೇಶ್​ ಜಾರಕಿಹೊಳಿ ‘ಸಿಡಿ’ ಬಹಿರಂಗವಾದ ಸಂದರ್ಭದಲ್ಲಿ ‘ಸಂತ್ರಸ್ತರು ಯಾರು’ ಎಂಬ ಪ್ರಶ್ನೆ ಮುಂಚೂಣಿಗೆ ಬಂದಿತ್ತು. ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ‘ಸಂತ್ರಸ್ತೆ’ ಎನ್ನಬಾರದು ಎಂದು ಜಾರಕಿಹೊಳಿ ತಾಕೀತು ಮಾಡಿದ್ದರು. ಈ ಹೇಳಿಕೆಯ ನಂತರ ‘ಹನಿಟ್ರ್ಯಾಪ್ ಮತ್ತು ಅತ್ಯಾಚಾರ ಬೇರೆಬೇರೆ. ಹನಿಟ್ರ್ಯಾಪ್​ ಎನ್ನುವುದು ಕಾಮವನ್ನು ಮೋಸಕ್ಕೆ ಬಳಸಿಕೊಳ್ಳುವ ಅಕ್ರಮ. ಆದರೆ ಅತ್ಯಾಚಾರ ಹಾಗಲ್ಲ. ಅದು ಘೋರ ಅಪರಾಧ’ ಎಂಬ ಮಾತುಗಳು ಕರ್ನಾಟಕದಲ್ಲಿ ಚಾಲ್ತಿಗೆ ಬಂದಿದ್ದವು.

ಬಸವಲಿಂಗ ಶ್ರೀ ಆತ್ಮಹತ್ಯೆ ಮತ್ತು ರಮೇಶ್​ ಜಾರಕಿಹೊಳಿ ಪ್ರಕರಣದಲ್ಲಿ ‘ಹನಿಟ್ರ್ಯಾಪ್’​ ಎನ್ನುವುದು ಸಾಮಾನ್ಯ ಅಂಶವಾಗಿದ್ದರೂ, ಎರಡೂ ಪ್ರಕರಣಗಳನ್ನು ಜನರು ಬೇರೆಯದ್ದೇ ಆದ ರೀತಿಯಲ್ಲಿ ನೋಡುತ್ತಿದ್ದಾರೆ. ಮೃತ ಸ್ವಾಮೀಜಿ ಬಗ್ಗೆ ಸಮಾಜದಲ್ಲಿ ಸಂತಾಪವಿದ್ದರೂ, ‘ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿಯಂತೆ ಬಸವಲಿಂಗ ಶ್ರೀ ಸಹ ಆರಂಭದಲ್ಲಿಯೇ ಏಕೆ ಎಚ್ಚೆತ್ತುಕೊಂಡು ಪೊಲೀಸರಿಗೆ ಅಥವಾ ಸಿದ್ದಗಂಗಾ ಮಠದ ಹಿರಿಯರಿಗೆ ದೂರು ಕೊಡಲಿಲ್ಲ’ ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಬಗ್ಗೆ ಇಡೀ ರಾಜ್ಯದಲ್ಲಿ ಗೌರವವಿದೆ. ಅನ್ನ-ಅಕ್ಷರ ದಾಸೋಹದಿಂದ ಹೆಸರುವಾಸಿಯಾಗಿರುವ ಸಿದ್ದಗಂಗಾ ಮಠದ ಹೆಸರು ಹನಿಟ್ರ್ಯಾಪ್ ಪ್ರಕರಣದಲ್ಲಿ ಕೇಳಿ ಬಂದಿರುವುದು, ಅಲ್ಲಿ ಮಹಜರು ನಡೆದು ನಕಲಿ ಸೀಲ್ ಪತ್ತೆಯಾಗಿರುವುದು ಸಾಂಪ್ರದಾಯಿಕ ವೀರಶೈವ-ಲಿಂಗಾಯತರ ಮನೆಗಳಲ್ಲಿ ಚರ್ಚೆಯ ವಿಷಯವಾಗಿದೆ. ಕಾಮವನ್ನು ಗೆಲ್ಲಲು ಸಾಧ್ಯವಾಗದ ಕಾವಿಧಾರಿಗಳ ಬಗ್ಗೆ ಭಕ್ತರ ವಲಯದಲ್ಲಿ ಆಕ್ರೋಶ ಬೆರೆತ ಮರುಕದ ಮಾತುಗಳು ಕೇಳಿಬರುತ್ತಿವೆ.

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಮಕ್ಕಳನ್ನು ಕಾಮದ ವಾಂಛೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದು ಬಹಿರಂಗಗೊಂಡಾಗಲೂ ಭಕ್ತರಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈಗ ಸ್ವಾಮೀಜಿ ಜೈಲಿನಲ್ಲಿದ್ದರೂ ಅವರ ವಿರುದ್ಧ ಭಕ್ತರ ಸಿಟ್ಟು ಕಡಿಮೆಯಾಗಿಲ್ಲ. ‘ಇವರಿಗೆ ಆಸೆಯಿದ್ದರೆ ಅದಕ್ಕೊಂದು ಮಾರ್ಗ ಕಂಡುಕೊಳ್ಳಬೇಕಿತ್ತು. ಪೀಠದಿಂದ ಕೆಳಗಿಳಿದು ಲಕ್ಷಣವಾಗಿ ಮದುವೆಯಾಗಬಹುದಿತ್ತು. ಅಥವಾ ಪೀಠದಲ್ಲಿದ್ದೇ ಮದುವೆಯಾಗಿ ಹೊಸ ಪರಂಪರೆ ಹುಟ್ಟುಹಾಕಬಹುದಿತ್ತು. ಅದು ಬಿಟ್ಟು ಸಣ್ಣಮಕ್ಕಳನ್ನು ತಮ್ಮ ಆಸೆಗೆ ಬಳಸಿಕೊಂಡಿದ್ದು ಅಕ್ಷಮ್ಯ’ ಎಂದು ಮಠದ ಪಾರಂಪರಿಕ ಭಕ್ತರು ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ.

‘ಸ್ವಾಮಿಗಳೂ ಮನುಷ್ಯರೇ ತಾನೆ. ಜೀವಶಾಶ್ತ್ರದ ಪ್ರಕಾರ ಮನುಷ್ಯ ಎನ್ನುವುದು ಬುದ್ಧಿವಂತ ಪ್ರಾಣಿ. ಆದರೆ ಅವನದೂ ಪ್ರಾಣಿಯ ದೇಹವಷ್ಟೇ. ಹೀಗಾಗಿ ಪ್ರಾಣಿ ಸಹಜವಾದ ಮೂಲ ಪ್ರವೃತ್ತಿಗಳಾದ ಹಸಿವು, ಕಾಮ, ನಿದ್ರೆ ಅವರಿಗೂ ಇದ್ದೇ ಇರುತ್ತದೆ. ಅವರ ಒಟ್ಟಾರೆ ವರ್ತನೆಯನ್ನು ಗಮನದಲ್ಲಿಸಿಕೊಳ್ಳಬೇಕೇ ವಿನಃ ಒಂದು ಸಣ್ಣ ದೌರ್ಬಲ್ಯವನ್ನು ದೊಡ್ಡದು ಮಾಡಬಾರದು. ಸ್ವಾಮಿಗಳು ತಮ್ಮ ವರ್ತನೆ ಸುಧಾರಿಸಿಕೊಳ್ಳಲು ಸತತ ಪ್ರಯತ್ನ ಮಾಡಬೇಕು’ ಎಂದು ಮಠಗಳಿಗೆ ನಡೆದುಕೊಳ್ಳುವ ಆಧುನಿಕ ಪ್ರವೃತ್ತಿಯ ಭಕ್ತರು ಹಲವರು ಮರುಕಭರಿತ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಇದನ್ನು ಒಪ್ಪದ ಸಂಪ್ರದಾಯವಾದಿ ಭಕ್ತರು, ‘ಗೃಹಸ್ಥರ ತಪ್ಪಿಗೆ ಕ್ಷಮೆ ಇರಬಹುದಾದರೂ ಸನ್ಯಾಸಿಗಳ ತಪ್ಪಿಗೆ ಕ್ಷಮೆ ಇರುವುದಿಲ್ಲ. ಕಾಮ ಗೆಲ್ಲಲು ಆಗುವುದಿಲ್ಲ ಎಂದಾದರೆ ಪೀಠ ತ್ಯಾಗ ಮಾಡಿ ಸಾಮಾನ್ಯರಂತೆ ಜೀವನ ಮಾಡಬೇಕು’ ಎಂದು ಆಗ್ರಹಿಸುತ್ತಿದ್ದಾರೆ.

ಈ ಹಿಂದೆ ಉಡುಪಿಯ ಶಿರೂರು ಮಠದ ಲಕ್ಷ್ಮೀವರ ತೀರ್ಥರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಸಂದರ್ಭದಲ್ಲಿಯೂ ‘ಕಾವಿಧಾರಿಗಳ ಕಾಮದ ಜಂಜಡ’ದ ಬಗ್ಗೆ ಕರ್ನಾಟಕದಲ್ಲಿ, ಮುಖ್ಯವಾಗಿ ಸಾಂಪ್ರದಾಯಿಕ ಮಾಧ್ವ ಪರಂಪರೆಯ ಮನೆತನಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು. ಲಕ್ಷ್ಮೀವರ ತೀರ್ಥರೊಂದಿಗೆ ಆಪ್ತ ಒಡನಾಟ ಹೊಂದಿದ್ದ ಮಹಿಳೆಯೊಬ್ಬರು ಕೆಜಿಗಟ್ಟಲೆ ಚಿನ್ನಾಭರಣದೊಂದಿಗೆ ಕಾಣಿಸಿಕೊಂಡಿದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿತ್ತು. ನಂತರದ ದಿನಗಳಲ್ಲಿ ಸನ್ಯಾಸಿಗಳ ಜೀವನ ಪದ್ಧತಿ ಬದಲಾಗಿರುವ ರೀತಿಯ ಬಗ್ಗೆ ಭಕ್ತರು ಬೇಸರ ವ್ಯಕ್ತಪಡಿಸಿದ್ದರು. ಲಕ್ಷ್ಮೀವರ ತೀರ್ಥರು ಸಾವನ್ನಪ್ಪುವ ಕೆಲ ದಿನಗಳ ಮೊದಲಷ್ಟೇ ವೈರಲ್ ಅಗಿದ್ದ ಆಡಿಯೊದಲ್ಲಿ ಅಷ್ಟಮಠಗಳ ಹಲವು ಸ್ವಾಮೀಜಿಗಳು ಮಹಿಳೆಯರೊಂದಿಗೆ ಸಂಪರ್ಕಹೊಂದಿದ್ದಾರೆ ಎಂಬ ಆರೋಪದ ಬಗ್ಗೆ ಸ್ವತಃ ಲಕ್ಷ್ಮೀವರ ತೀರ್ಥರು ಆಡಿದ್ದಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಆಕ್ರೋಶ, ಅಸಮಾಧಾನ ಮೂಡಿಸಿದ್ದವು.

ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆಡಿಯೊ ಬಹಿರಂಗವಾಗುವ ಮೊದಲು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದು ವರ್ಷಗಟ್ಟಲೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಇಂದು ಈ ಪ್ರಕರಣ ಇತ್ಯರ್ಥವಾಗಿದ್ದರೂ ರಾಮಚಂದ್ರಾಪುರ ಮಠದ ಬಗ್ಗೆ ಹಲವು ಭಕ್ತರಲ್ಲಿ ಮೊದಲಿನ ವಿಶ್ವಾಸ ಉಳಿಯಲಿಲ್ಲ. ‘ಕಾಮ ವಯೋಸಹಜ, ಮನೋಸಹಜ. ಗೆಲ್ಲುವ ಆಸೆಯಿದ್ದರೆ ತಪಸ್ಸು ಮಾಡಿ. ಗೆಲ್ಲಲು ಆಗದು ಎಂದಾದರೆ ಕಾವಿ ತ್ಯಜಿಸಿ ಸಂಸಾರಿಯಾಗಿ’ ಎಂದು ಹಲವು ಭಕ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್​ಗಳನ್ನು ಹಾಕಿ ರಾಘವೇಶ್ವರ ಭಾರತಿ ಸ್ವಾಮೀಜಿಗೆ ಸಲಹೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಕಾವಿಧಾರಿಗಳು ಮನುಷ್ಯರು ತಾನೆ? ಸಂಸಾರ ಸುಖ ಅನುಭವಿಸುವ ಮೊದಲೇ ಕಾವಿ ತೊಡಿಸಿ ಸನ್ಯಾಸಿ ಮಾಡುವುದು ಹಲವು ಅಕ್ರಮಗಳಿಗೆ ಮೂಲವಾಗುತ್ತದೆ. ಈ ಪದ್ಧತಿ ಬದಲಾದರೆ ಮಠಗಳು ಸುಧಾರಿಸುತ್ತವೆ’ ಎನ್ನುವ ಮಾತುಗಳು ಮೇಲಿನ ಎಲ್ಲ ಸಂದರ್ಭಗಳಲ್ಲಿ ಕೇಳಿ ಬಂದಿತ್ತು. ಇದೀಗ ಮತ್ತೊಮ್ಮೆ ಈ ಮಾತು ಪ್ರಬಲವಾಗಿ ಕೇಳಿಬರುತ್ತಿದೆ. ಈ ಮಾತು ಆಡುವ ಹಲವರು ವಿದ್ಯಾಭೂಷಣರ ಉದಾಹರಣೆ ಕೊಡುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಯಾಗಿದ್ದ ವಿದ್ಯಾಭೂಷಣರು ಪೀಠತ್ಯಾಗ ಮಾಡಿ ಮದುವೆಯಾಗಿ ಗೃಹಸ್ಥರಾಗಿದ್ದರು.

ಇದನ್ನೂ ಓದಿ: Tv9 Exclusive: ಅತ್ಯಾಚಾರಕ್ಕೂ ಹನಿಟ್ರ್ಯಾಪ್​ಗೂ ವ್ಯತ್ಯಾಸವಿದೆ, ಕೆಲ ಮಠಗಳಲ್ಲಿ ಕಾಮ ವ್ಯಾಪಾರದ ಸರಕಾಗಿದೆ; ಲೈಂಗಿಕ ಚಿಕಿತ್ಸಕ ಡಾ ವಿನೋದ್ ಛಬ್ಬಿ

ಇದೀಗ ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ನಿಧನದ ನಂತರವೂ ಈ ಅಂಶವನ್ನು ಹಲವರು ಪ್ರಸ್ತಾಪಿಸುತ್ತಿದ್ದಾರೆ. ಪೀಠದಲ್ಲಿದ್ದು ಭಕ್ತರಿಗೆ ವಿಶ್ವಾಸದ್ರೋಹ ಮಾಡುವುದಕ್ಕಿಂತಲೂ ಪೀಠ ತ್ಯಾಗ ಮಾಡಿ ಸಂಸಾರಸ್ಥರಾಗುವುದು ಒಳ್ಳೆಯದು ಎಂಬ ಮಾತುಗಳು ಕೇಳಿಬರುತ್ತಿವೆ. ಗಂಡಸರ ದೌರ್ಬಲ್ಯವನ್ನೇ ಅಸ್ತ್ರವಾಗಿಸಿಕೊಂಡು ಬ್ಲಾಕ್​ಮೇಲ್ ಮೂಲಕ ತಮ್ಮ ತಾಳಕ್ಕೆ ಕುಣಿಸಲು ಯತ್ನಿಸುವ ಹನಿಟ್ರ್ಯಾಪ್ ಜಾಲ ಕರ್ನಾಟಕದಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದು, ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಬರಹ: ಡಿ.ಎಂ.ಘನಶ್ಯಾಮ

Published On - 11:43 am, Fri, 4 November 22