ಬೆಂಗಳೂರು, ಆಗಸ್ಟ್ 24: ಆಪರೇಷನ್ ಹಸ್ತದ ವದಂತಿಗಳು ಜೋರಾಗಿರುವ ಬೆನ್ನಲ್ಲೇ ಅತೃಪ್ತ ಶಾಸಕರನ್ನು, ನಾಯಕರನ್ನು ಮನವೊಲಿಸುವ ತಂತ್ರಕ್ಕೆ ಬಿಜೆಪಿ (BJP) ಮೊರೆ ಹೋಗಿದೆ. ಯಶವಂತಪುರದ ಶಾಸಕ ಎಸ್ಟಿ ಸೋಮಶೇಖರ್ ಜತೆ ಬಿಜೆಪಿ ನಾಯಕರು ಸರಣಿ ಸಭೆ ನಡೆಸಿದ್ದಾರೆ. ಈ ಮಧ್ಯೆ, ಕಾಂಗ್ರೆಸ್ ಸೇರುವ ಕುರಿತ ವದಂತಿಗಳ ಬಗ್ಗೆ ಕೆಆರ್ ಪುರಂ ಕ್ಷೇತ್ರದ ಶಾಸಕ ಭೈರತಿ ಬಸವರಾಜ (Byrati Basavaraj) ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾನು ಭಾರತೀಯ ಜನತಾ ಪಕ್ಷ ತೊರೆಯಲ್ಲ. ನಾನು ಬಿಜೆಪಿ ಬಿಡುತ್ತಿದ್ದೇನೆಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಒಂದು ವೇಳೆ ನಾನು ಬಿಜೆಪಿ ಬಿಡುವ ಸಂದರ್ಭ ಒದಗಿ ಬಂದರೆ ನಿವೃತ್ತಿಯಾಗಿ ಮನೆಯಲ್ಲಿರುವೆ. ಅದರ ಬದಲು ಕಾಂಗ್ರೆಸ್ ಸೇರಲಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನಿಂದ ನನಗೆ ಆಹ್ವಾನ ಬಂದಿಲ್ಲ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿಯಲ್ಲಿ ನನಗೆ ಅಧಿಕಾರ, ಸ್ಥಾನ ಮಾನ, ಗೌರವ ಎಲ್ಲವೂ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ. ಯಾರು ಏನೇ ಹೇಳಿದರೂ ನಾನು ಬಿಜೆಪಿ ಕಾರ್ಯಕರ್ತನಾಗಿರುತ್ತೇನೆ. ಎಸ್ಟಿ ಸೋಮಶೇಖರ್ ಕೂಡ ಬಿಜೆಪಿ ಬಿಡುವುದಿಲ್ಲ ಅಂದಿದ್ದಾರೆ. ನಮ್ಮ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲ ಬಗೆಹರಿಸಬೇಕಿದೆ ಎಂದು ಬಸವರಾಜ ಹೇಳಿದ್ದಾರೆ.
ಇದನ್ನೂ ಓದಿ: ಯಶವಂತಪುರ ಕ್ಷೇತ್ರದಲ್ಲಿ ಸುಂಟರಗಾಳಿ ಎದ್ದಿದೆ, ಇದು ನಮಗೆ ಎಚ್ಚರಿಕೆ ಗಂಟೆ; ಸೋಮಶೇಖರ್ ಭೇಟಿ ಬಳಿಕ ಹೀಗೆ ಹೇಳಿದ್ದೇಕೆ ಅಶೋಕ್?
ಈ ಮಧ್ಯೆ, ಎಸ್ಟಿ ಸೋಮಶೇಖರ್ ಅವರು ಬಿಜೆಪಿ ನಾಯಕ ಆರ್. ಅಶೋಕ ಅವರನ್ನು ಭೇಟಿಯಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಆರ್ ಅಶೋಕ ಅವರು ಸೋಮಶೇಖರ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:49 pm, Thu, 24 August 23