ಗಣಪತಿ ಕೂರಿಸುವ ವಿಚಾರದಲ್ಲಿ ಮುಸ್ಲಿಮರ ಜೊತೆ ಕೈಜೋಡಿಸಿದ ಬಿಜೆಪಿ: ಪ್ರಮೋದ್ ಮುತಾಲಿಕ್ ವಾಗ್ದಾಳಿ
ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಗಣಪತಿ ಕೂರಿಸಲು ಅಂದಿನ ಬಿಜೆಪಿ ಸರ್ಕಾರ ಅವಕಾಶ ನೀಡಿರಲಿಲ್ಲ. ಈ ಬಗ್ಗೆ ಇಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಪ್ರಮೋದ್ ಮುತಾಲಿಕ್, ಬಿಜೆಪಿ ಮುಸ್ಲಿಮರ ಜೊತೆ ಕೈಜೋಡಿಸಿತ್ತು ಎಂದು ಆರೋಪಿಸಿದ್ದಾರೆ.
ಹಾವೇರಿ, ಜುಲೈ 30: ಚಾಮರಾಜಪೇಟೆ ಮೈದಾನದಲ್ಲಿ ಗಣಪತಿ ಕೂರಿಸುವ ವಿಚಾರದಲ್ಲಿ ಬಿಜೆಪಿ (BJP) ಮುಸ್ಲಿಮರ ಜೊತೆ ಕೈ ಜೋಡಿಸಿದ್ದರು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರೇ ನೇಮಿಸಿದ ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಹದಿ ಗಣಪತಿ ಕೂಸಿಲು ಅವಕಾಶ ನೀಡಬಾರದೆಂದು ಕೋರ್ಟ್ಗೆ ಹೋಗಿದ್ದರು. ಇವನಿಗೆ ಆಧಾರವಾಗಿ ನಿಂತಿದ್ದು ಸಚಿವ ಜಮೀರ್ ಅಹ್ಮದ್ ಖಾನ್ ಎಂಬ ಮತಾಂಧ, ದೇಶದ್ರೋಹಿ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೆ, ಮೈದಾನದಲ್ಲಿ ಒಂದು ಗಣಪತಿ ಕೂರಿಸಲು ಬಿಡಲಿಲ್ಲ. ಅದಕ್ಕೆ ಬಿಜೆಪಿಯವರೇ ಮುಸ್ಲಿಮರ ಜೊತೆ ಕೈ ಜೋಡಿಸಿದ್ದರು. ನ್ಯಾಯಾಲಯ ಕೂಡಾ ಸ್ಟೇ ಕೊಟ್ಟಿತ್ತು. ಕೋರ್ಟ್ ಒಂದು ಕಡೆ ನಿಮ್ಮದೇ ಜಾಗ ಎಂದು ಹೇಳಿತು, ಇನ್ನೊಂದು ಕಡೆ ಸ್ಟೇ ಕೊಟ್ಟಿತು. ಇದೇ ಕಾರಣಕ್ಕೆ ಬಿಜೆಪಿಯವರು ಚುನಾವಣೆಯಲ್ಲಿ ಮಣ್ಣು ತಿಂದರು ಎಂದರು.
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ, ಯಾರಿಗೆ? ಯಾವ ಸ್ಥಾನ?
ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರದ ಧ್ವಜನೇ ಹಾರಲಿಲ್ಲ. ಇದಕ್ಕೆ ಕಠೀಣ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಬಿಜೆಪಿಯವರು ಹೇಳಿ ಏನೂ ಮಾಡಲಿಲ್ಲ. ನಮಗೆ ಕಾಂಗ್ರೆಸ್, ಜೆಡಿಎಸ್ನವರ ಮೇಲೆ ಬೇಸರ ಆಗಲಿಲ್ಲ. ಕೇಸರಿ ಹಾಕಿಕೊಂಡು ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದರವ ಮೇಲೆ ನಮಗೆ ಬೇಸರ ಆಯ್ತು. ಅಲ್ಲಿ ಧ್ವಜ ಹಾರಿಸಿದ್ದು ಬಿಜೆಪಿಯವರಲ್ಲ, ನಾವು ಎಂದರು.
ಮೊನ್ನೆ ಸಚಿವ ಜಮೀರ್ ಮುಖ್ಯಮಂತ್ರಿ ಜೊತೆ ಹೋಗಿ ನಮಾಜ್ ಮಾಡಿದರು. ಆದರೆ ಬಿಜೆಪಿ ಅವಧಿಯಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ಶೇಕಡಾ 30 ರಷ್ಟು ಮುಸ್ಲಿಮರಿದ್ದಾರೆ ಅಂತ ಆಗಿನ ಮುಖ್ಯಮಂತ್ರಿ ಅಲ್ಲಿಗೆ ಹೋಗಲೇ ಇಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ವಿರುದ್ಧ ಮುತಾಲಿಕ್ ವಾಗ್ದಾಳಿ ನಡೆಸಿದರು.
ಈ ಕರ್ನಾಟಕದ ಬಿಜೆಪಿ ನಾಯಕರ ಬಗ್ಗೆ ಚರ್ಚೆನೇ ಬೇಡ. ದೇಶ ಉಳಿಸಬೇಕಿದೆ. ನರೇಂದ್ರ ಮೋದಿ ಅವರನ್ನು ಗೆಲ್ಲಿಸಿ ದೇಶ ಉಳಿಸಿ ಅಭಿಯಾನ ಆರಂಭ ಮಾಡುತ್ತಿದ್ದೇವೆ. ಈ ವರ್ಷ ಪೂರ್ತಿ ಮನೆ ಮನೆಗಳಲ್ಲಿ ಮೋದಿ ಗೆಲ್ಲಿಸಿ ದೇಶ ಉಳಿಸಿ ಅಭಿಯಾನ ಮಾಡುತ್ತೇವೆ. ಗ್ಯಾರಂಟಿ ವಾರಂಟಿ ಮರೆಯಿರಿ, ದೇಶ ಉಳಿಸೋಣ ಬನ್ನಿ ಅಂತ ಕಾರ್ಯಕರ್ತರು ಜಾಗೃತಿ ಮೂಡಿಸಲಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ