ಕಾಂಗ್ರೆಸ್ ಸೇರ್ಪಡೆಯಾದ ಆಯನೂರು ಮಂಜುನಾಥ್, ಬೆಂಗಳೂರಿನಿಂದಲೇ ಶಿವಮೊಗ್ಗ ಕೈ ನಾಯಕನಿಗೆ ತಿರುಗೇಟು
ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಆಯನೂರು ಮಂಜುನಾಥ್ ಇದೀಗ ತೆನೆ ಇಳಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನ ಕೆಲ ನಾಯಕರ ವಿರೋಧದ ನಡುವೆಯೂ ಮಂಜುನಾಥ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬರಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಬೆಂಗಳೂರು, (ಆಗಸ್ಟ್ 24): ನಿರೀಕ್ಷೆಯಂತೆ ಜೆಡಿಎಸ್ ನಾಯಕ ಆಯನೂರು ಮಂಜುನಾಥ್ (ayanur manjunath), ಶಿಕಾರಿಪುರದ ನಾಗರಾಜ್ ಗೌಡ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ (Congress) ಸೇರ್ಪಡೆಯಾದರು. ಇಂದು(ಆಗಸ್ಟ್ 24) ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಈ ವೇಳೆ ಶಿವಮೊಗ್ಗ (Shivamogga) ಜಿಲ್ಲಾ ಕಾಂಗ್ರೆಸ್ ನಾಯಕರಾದ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಿವಮೊಗ್ಗ ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿದಂತೆ ಹಲವು ಉಪಸ್ಥಿತರಿದ್ದರು.
ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆಯನೂರು ಮಂಜುನಾಥ್, ಯಾವುದೇ ಷರತ್ತುಗಳು ಇಲ್ಲದೆಯೇ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದೇನೆ. ನಾನು ಹಿಂದೆ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಗಿದ್ದೆ. ಆದರೆ ಈಗ ಅಂತ ಯಾವ ಕಂಡಿಷನ್ ಕೂಡ ಹಾಕಿಲ್ಲ. ಬಹಳ ದೊಡ್ಡ ಸಂಖ್ಯೆಯ ನಾಯಕರು ಜೊತೆಗಿದ್ದಾರೆ. ಬರುವ ದಿನಗಳಲ್ಲಿ ಗ್ರಾಮ ಪಂಚಾಯತಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನನ್ನ ಎಲ್ಲ ಶ್ರಮ ಹಾಕುತ್ತೇನೆ. ಕೆಲವು ಜಿಲ್ಲಾ ನಾಯಕರು ಸಿಲ್ಲಿಯಾಗಿ ಮಾತಾಡಿರಬಹುದು. ಆ ಬಗ್ಗೆ ಜಿಲ್ಲಾಧ್ಯಕ್ಷರು ರಾಜ್ಯಾಧ್ಯಕ್ಷರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೆಸರು ಉಲ್ಲೇಖಿಸಲದೇ ಶಿವಮೊಗ್ಗ ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೇಶ್ಗೆ ತಿರುಗೇಟು ನೀಡಿದರು.
ಆಯನೂರು ಮಂಜುನಾಥ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಶಿವಮೊಗ್ಗ ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೇಶ್ ವಿರೋಧ ವ್ಯಕ್ತಪಡಿಸಿದ್ದರು. ಈ ಮೊದಲು ಸಿದ್ದರಾಮಯ್ಯನರವರ ಬಗ್ಗೆ ಮಾತನಾಡಿ, ಈಗ ಪಕ್ಷ ಸೇರ್ಪಡೆಗೆ ಅವರ ಮನೆ ಬಾಗಿಲನ್ನೇ ತಟ್ಟುತ್ತಿದ್ದಾರೆ. ಮಂಜುನಾಥ್ ವರ್ಷದಲ್ಲಿ ಮೂರು ಕಾಲ ಬದಲಾದಂತೆ ಪಕ್ಷ ಬದಲಿಸುತ್ತಾರೆ. ಚಳಿಗಾಲದಲ್ಲಿ ಬಿಜೆಪಿಯಲ್ಲಿದ್ದು, ಬೇಸಿಗೆಯಲ್ಲಿ ಕಾಂಗ್ರೆಸ್ ಬಾಗಿಲು ಮುಚ್ಚಿದೆ ಎಂದಾಗ ಜೆಡಿಎಸ್ ಪಕ್ಷ ಸೇರಿದ್ದರು. ಈಗ ಮಳೆಗಾಲದಲ್ಲಿ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಪಕ್ಷದಿಂದ ಪಕ್ಷಕ್ಕೆ ಹಾರುವ ಮೂಲಕ ಯುವಕರಿಗೆ ಏನು ಸಂದೇಶ ನೀಡುತ್ತಿರಾ? ನಿಮಗೆ ಧಮ್ ಇದ್ದರೆ ನೀವಿರುವ ಪಕ್ಷದಲ್ಲೇ ಇದ್ದು ಸಾಧಿಸಿ ತೋರಸಿ ಎಂದು ಸವಾಲು ಹಾಕಿದ್ದರು. ಈ ವಿರೋಧದ ನಡುವೆಯೇ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಯನೂರು ಮಂಜುನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಇದು ಮುಂದೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ನಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ