ಬೆಂಗಳೂರು, ಆಗಸ್ಟ್ 22: ಕರ್ನಾಟಕ ರಾಜಕೀಯದಲ್ಲೀಗ (Karnataka Politics) ‘ಆಪರೇಷನ್ ಹಸ್ತ’ದ ವದಂತಿ. ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ (BJP) ಸೇರಿದ್ದ ಕೆಲವು ಪ್ರಮುಖ ನಾಯಕರು ಮತ್ತೆ ‘ಕೈ’ ಹಿಡಿಯಲಿದ್ದಾರೆ ಎಂಬ ವರದಿಗಳಿಗೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಪುಷ್ಟಿ ನೀಡಿವೆ. ಈ ಮಧ್ಯೆ, ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ (ST Somashekhar) ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದ್ದು, ಜೆಡಿಎಸ್ ನಾಯಕರು ಅಲರ್ಟ್ ಆಗಿದ್ದಾರೆ! ಒಂದು ವೇಳೆ ಎಸ್ಟಿ ಸೋಮಶೇಖರ್ ಕಾಂಗ್ರೆಸ್ಗೆ ಸೇರಿದ್ದೇ ಆದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯ ನಡೆಯಬೇಕಾಗುತ್ತದೆ. ಹೀಗಾಗಿ ಅದಕ್ಕೆ ಜೆಡಿಎಸ್ ಈಗಲೇ ಸಿದ್ಧತೆ ಆರಂಭಿಸಿದೆ.
ಜೆಡಿಎಸ್ನಿಂದ ಉಪ ಚುನಾವಣೆಗೆ ಸಿದ್ಧತೆ ಶುರುವಾಗಿದ್ದು, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಮಹತ್ವದ ಸಭೆ ನಡೆಸಲಾಗಿದೆ. ಪರಾಜಿತ ಅಭ್ಯರ್ಥಿ ಜವರಾಯಿಗೌಡ ಸೇರಿ ಹಲವು ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಜವರಾಯಿಗೌಡ ಸೋತಿದ್ದರು.
ಎಸ್ಟಿ ಸೋಮಶೇಖರ್ ಅವರ ಕೆಲವು ಮಂದಿ ಬೆಂಬಲಿಗರು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಅವರ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಭರ್ಜರಿ ಅನುದಾನ ಮಂಜೂರು ಮಾಡಿದೆ. ಇದು ಸೋಮಶೇಖರ್ ಸಹ ಕಾಂಗ್ರೆಸ್ ಹಾದಿ ಹಿಡಿಯುವ ಎಲ್ಲ ಸುಳಿವನ್ನೂ ನೀಡಿದೆ ಎಂದೇ ವಿಶ್ಲೇಷಿಸಲಾಗಿದೆ. ಆದಾಗ್ಯೂ, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅವರಿನ್ನೂ ದೃಢವಾದ ಹೇಳಿಕೆ ನೀಡಿಲ್ಲ.
ಯಶವಂತಪುರ ಕ್ಷೇತ್ರದ ಜೆಡಿಎಸ್ ಪ್ರಮುಖರ ಸಭೆ ಕರೆದ ವಿಚಾರವಾಗಿ ಬೆಂಗಳೂರಿನಲ್ಲಿ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಪ್ರಮುಖ ಕಾರ್ಯಕರ್ತರನ್ನು ತಮ್ಮ ಕಡೆ ಸೆಳೆಯಲು ಕಾಂಗ್ರೆಸ್ನವರು ಆರಂಭಿಸಿದ್ದಾರೆ. ಅನುಕೂಲಸಿಂಧು ರಾಜಕಾರಣ ಮಾಡಲು ಆಪರೇಷನ್ ಮಾಡಬೇಕು ಎಂದು ತಮ್ಮ ಕಾರ್ಯಕರ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ ಈ ಕ್ಷೇತ್ರದ ಜನರು ಜೆಡಿಎಸ್ ಹಾಗೂ ದೇವೇಗೌಡರ ಪರ ಇದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ಕೆಲ ಬೆಳೆವಣಿಗೆ ನಡೆಯುತ್ತಿದೆ. ಯಶವಂತಪುರ ಜನರು ಅತ್ಯಂತ ಸಂಕಷ್ಟದಲ್ಲಿ ಪಕ್ಷವನ್ನು ಉಳಿಸಿದ್ದಾರೆ. ಮುಂದಿನ ಚುನಾವಣೆಗೆ ಸನ್ನದ್ಧರಾಗಲು ಕರೆ ನೀಡಲು ಬಂದಿದ್ದೇನೆ. ವಿಧಾನಸಭೆ, ಜಿ.ಪಂ, ತಾ.ಪಂ, ಚುನಾವಣೆಗೆ ಸನ್ನದ್ಧರಾಗಲು ಕರೆ ನೀಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೆಳೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ತಿಳುವಳಿಕೆ ಮಟ್ಟಿಗೆ ನನ್ನ ಪಕ್ಷದ ಶಾಸಕರು ಪಕ್ಷ ಬಿಡುವ ಸಾಧ್ಯತೆ ಇಲ್ಲ. ಕಾಂಗ್ರೆಸ್ ನವರು ಯಾಕೆ ಈ ರೀತಿಯ ಚರ್ಚೆ ಹುಟ್ಟುಹಾಕಿದ್ದಾರೆ ಎಂದರೆ, ಕಾಂಗ್ರೆಸ್ನ 30 ಶಾಸಕರು ಪಕ್ಷ ಬಿಡಲು ಮುಂದಾಗಿದ್ದಾರೆ. ಬಿಜೆಪಿ, ಜೆಡಿಎಸ್ ನಿಂದ ಬರಲಿದ್ದಾರೆ ಎಂದು ಹೇಳುತ್ತಾ ಇದ್ದಾರೆ. ಕಾಂಗ್ರೆಸ್ ಶಾಸಕರು ಪಕ್ಷ ಬಿಡುವುದನ್ನು ತಡೆಯಲು ಹಾಗೆ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನು ಕಾಂಗ್ರೆಸ್ ಬಿಡುವಾಗ ಬಿಜೆಪಿಗೆ ಅಗತ್ಯ ಇತ್ತು, ಕಾಂಗ್ರೆಸ್ಗೆ ಅಂತಹ ಅಗತ್ಯವಿಲ್ಲ; ಸೋಮಶೇಖರ್ ಹೇಳಿಕೆಯ ಮರ್ಮವೇನು?
ಬಿಜೆಪಿಗೆ ಮಾತ್ರವಲ್ಲ, ಜೆಡಿಎಸ್ಗೂ ಮರ್ಮಾಘಾತ ನೀಡಲು ಕಾಂಗ್ರೆಸ್ ಯೋಜನೆ ಹಾಕಿಕೊಡಿದೆ ಎನ್ನಲಾಗಿದೆ. ಜೆಡಿಎಸ್ನ ಶಾಸಕರ ಸೆಳೆಯುವ ಪ್ರಯತ್ನ ಮುಂದುವರಿದಿದ್ದು, ಜೆಡಿಎಸ್ನ ಹಲವು ಶಾಸಕರು ಕಾಂಗ್ರೆಸ್ ಕಡೆ ಮುಖ ಮಾಡಲು ತೆರೆ ಮರೆಯಲ್ಲಿ ಸಿದ್ದತೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದಿರುವ ಕಾಂಗ್ರೆಸ್ ಶಾಸಕರು, ಅಗತ್ಯ ಸಂಖ್ಯೆಯ ಶಾಸಕರು ಸಿಕ್ಕಿದರೆ ತಾಂತ್ರಿಕವಾಗಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಗತ್ಯ ಸಂಖ್ಯೆಯ ಶಾಸಕರು ಸಿಕ್ಕಿದರೆ ಕಾಂಗ್ರೆಸ್ ಜೊತೆಗೆ ಪಕ್ಷವನ್ನೇ ವಿಲೀನಗೊಳಿಸುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕರ ವಲಯದಲ್ಲಿಯೇ ಈ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಆದರೆ ಪಕ್ಷ ಸೇರ್ಪಡೆ ಸಮಯದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಇನ್ನೂ ಸ್ಪಷ್ಟತೆ ದೊರೆತಿಲ್ಲ ಎನ್ನಲಾಗಿದೆ. ಹಳೆ ಮೈಸೂರು ಭಾಗದ ಶಾಸಕರೊಬ್ಬರ ನೇತೃತ್ವದಲ್ಲಿ ಮಾತುಕತೆ ನಡೆದಿದೆ. ಈ ಮಧ್ಯೆ, ತಾವು ಹೇಳುವ ತನಕ ಯಾವುದೇ ನಿರ್ಧಾರ ಬೇಡ. ಸೂಕ್ತ ಸಮಯ ಬರುವವರೆಗೆ ಕಾಯೋಣ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.
ರಾಜಕೀಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:06 pm, Tue, 22 August 23