Political Analysis: ಬ್ರಾಹ್ಮಣರ ಬಗ್ಗೆ ಕುಮಾರಸ್ವಾಮಿ ಹೇಳಿಕೆ; ಬತ್ತಳಿಕೆ ಬರಿದಾಗಿದ್ದ ಬಿಜೆಪಿಗೆ ಹೊಸ ಅಸ್ತ್ರ -ಬಿಎಸ್ ಅರುಣ್ ಬರಹ

Karnataka Politics: ಒಂದೊಂದು ಸಲ ರಾಜಕೀಯ ಪಕ್ಷಗಳು ಹಾಗೂ ರಾಜಕಾರಿಣಿಗಳ ಹೇಳಿಕೆಗಳಿಗಷ್ಟೇ ಅಲ್ಲ; ಮೌನಕ್ಕೂ ಸಾಕಷ್ಟು ಅರ್ಥಗಳಿರುತ್ತವೆ, ಆಡದ ಮಾತೂ ಸಾಕಷ್ಟು ಸಂದೇಶಗಳನ್ನು ರವಾನಿಸುತ್ತವೆ.

Important Highlight‌
Political Analysis: ಬ್ರಾಹ್ಮಣರ ಬಗ್ಗೆ ಕುಮಾರಸ್ವಾಮಿ ಹೇಳಿಕೆ; ಬತ್ತಳಿಕೆ ಬರಿದಾಗಿದ್ದ ಬಿಜೆಪಿಗೆ ಹೊಸ ಅಸ್ತ್ರ -ಬಿಎಸ್ ಅರುಣ್ ಬರಹ
ಎಚ್​.ಡಿ.ಕುಮಾರಸ್ವಾಮಿ (ಎಡಚಿತ್ರ) ಮತ್ತು ಹಿರಿಯ ಪತ್ರಕರ್ತ ಬಿ.ಎಸ್.ಅರುಣ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Feb 07, 2023 | 2:23 PM

ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಶಿ ಅವರನ್ನು ಟೀಕಿಸುವ ಭರದಲ್ಲಿ ಎಚ್​.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣ ಸಮುದಾಯದ ಬಗ್ಗೆ ಆಡಿರುವ ಮಾತಿನ ಬಗ್ಗೆ ಕರ್ನಾಟಕದಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿವೆ. ಈ ಹೇಳಿಕೆಯ ಒಳಾರ್ಥ, ಕುಮಾರಸ್ವಾಮಿ ಅವರಿಗೆ ಇರಬಹುದಾದ ಉದ್ದೇಶಗಳು, ಕಾಂಗ್ರೆಸ್​ನ ಮೌನದ ಪರಿಣಾಮ, ಬಿಜೆಪಿಗೆ ಸಿಕ್ಕಿರುವ ಅವಕಾಶಗಳು ಸೇರಿದಂತೆ ಹಲವು ಆಯಾಮಗಳಲ್ಲಿ ಈ ಬೆಳವಣಿಗೆಯನ್ನು ಸದ್ಯದ ರಾಜಕೀಯ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ ಹಿರಿಯ ಪತ್ರಕರ್ತ ಬಿ.ಎಸ್.ಅರುಣ್. ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಡೆಪ್ಯುಟಿ ಎಡಿಟರ್ ಆಗಿ ನಿವೃತ್ತರಾಗಿರುವ ಅರುಣ್ ಅವರು ಬಹುಕಾಲ ದೆಹಲಿಯಲ್ಲಿ ಪತ್ರಕರ್ತರ ತಂಡವನ್ನು ಮುನ್ನಡೆಸಿದ ಅನುಭವಿ ಪತ್ರಕರ್ತ. ಕರ್ನಾಟಕದ ಅಭಿವೃದ್ಧಿ ಮತ್ತು ರಾಜಕೀಯ ಒಳನೋಟಗಳ ಬಗೆಗಿನ ಅವರ ದೃಷ್ಟಿಕೋನ ಹೊಸತನದಿಂದ ಕೂಡಿರುತ್ತದೆ. ಅವರ ಬರಹ ಇಲ್ಲಿದೆ.

***

ಬ್ರಾಹ್ಮಣ ಸಮುದಾಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಅವರು ನೀಡಿರುವ ಹೇಳಿಕೆಯ ಬಗ್ಗೆ ಕರ್ನಾಟಕದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಕೆಲವರು ಖಂಡಿಸಿದ್ದಾರೆ, ಸ್ವತಃ ಕುಮಾರಸ್ವಾಮಿ ಸೇರಿದಂತೆ ಹಲವರು ಸಮರ್ಥಿಸಿಕೊಂಡಿದ್ದಾರೆ. ‘ಟಿವಿ9’ನಂಥ (Tv9 Kannada News Channel) ಪ್ರಮುಖ ಸುದ್ದಿವಾಹಿನಿಯಲ್ಲಿ ಈ ಬಗ್ಗೆ ಇಂದು (ಫೆ 7) ಒಂದು ತಾಸು ಚರ್ಚೆ ನಡೆಯಿತು. ನಾನೂ ಚರ್ಚೆಯಲ್ಲಿ ಭಾಗವಹಿಸಿದ್ದೆ. ಕುಮಾರಸ್ವಾಮಿ ತಮ್ಮ ಹೇಳಿಕೆಯ ಹಿನ್ನೆಲೆಯ ಬಗ್ಗೆ ವಿವರಿಸಿದರು. ಇವೆಲ್ಲಾ ಸಹಜ; ಆದರೆ ನನಗೆ ಅಚ್ಚರಿ ಅನ್ನಿಸಿದ್ದು ಕಾಂಗ್ರೆಸ್​ನ ಮೌನ.

ಒಂದೊಂದು ಸಲ ರಾಜಕೀಯ ಪಕ್ಷಗಳು ಹಾಗೂ ರಾಜಕಾರಿಣಿಗಳ ಮೌನಕ್ಕೂ ಸಾಕಷ್ಟು ಅರ್ಥಗಳಿರುತ್ತವೆ, ಆಡದ ಮಾತೂ ಸಾಕಷ್ಟು ಸಂದೇಶಗಳನ್ನು ರವಾನಿಸುತ್ತವೆ. ಕಾಂಗ್ರೆಸ್​ನ ಈ ಮೌನವನ್ನೂ ನಾನು ಒಂದು ರಾಜಕೀಯ ನಡೆ ಎಂದೇ ಗುರುತಿಸುತ್ತೇನೆ.

ಕುಮಾರಸ್ವಾಮಿ ಅವರ ಹೇಳಿಕೆ ಮತ್ತು ನಂತರದ ಒಟ್ಟೂ ಬೆಳವಣಿಗೆ ಗಮನಿಸಿದಾಗ ನನಗೆ ಮೊದಲು ಅನ್ನಿಸಿದ್ದು ಹೀಗೆ; ಜಾತಿನಿಂದನೆ ಮತ್ತು ಧರ್ಮನಿಂದನೆಯನ್ನು ರಾಜಕಾರಿಣಿಗಳು ಸಾಧ್ಯವಾದಷ್ಟರ ಮಟ್ಟಿಗೂ ತಪ್ಪಿಸಬೇಕು. ಚುನಾವಣೆಯ ಕಾಲದಲ್ಲಿ ಎಲ್ಲರೂ ಉದ್ವೇಗದಿಂದ ಮಾತನಾಡುತ್ತಾರೆ. ಆದರೆ ಪ್ರಬುದ್ಧ ರಾಜಕಾರಿಣಿಗಳು ಸಂಯಮ ಕಾಪಾಡಿಕೊಳ್ಳಬೇಕು. ತಮ್ಮ ಹೇಳಿಕೆಗಳ ದೀರ್ಘಾವಧಿ ಪರಿಣಾಮಗಳ ಅರಿವು ಅವರಿಗೆ ಇರಬೇಕು. ಇದನ್ನು ಎಲ್ಲ ಪಕ್ಷಗಳ ನಾಯಕರೂ ಅರ್ಥ ಮಾಡಿಕೊಳ್ಳಬೇಕು.

ಹೇಳಿಕೆ ಪರಿಣಾಮ ಅರಿಯದವರಲ್ಲ ಎಚ್​ಡಿಕೆ

ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಹಲವರು, ‘ಅವರು ಹತಾಶೆಯಿಂದ ಮಾತನಾಡಿದ್ದಾರೆ’ ಎಂದು ಹೇಳುತ್ತಿದ್ದಾರೆ. ನನಗೆ ಹಾಗೆ ಅನ್ನಿಸುತ್ತಿಲ್ಲ. ಅವರು ಹಲವು ದಶಕಗಳಿಂದ ರಾಜಕಾರಣ ನೋಡಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದಾರೆ. ರಾಜಕೀಯ ಎಂದರೆ ಏನು? ಯಾವಾಗ ಏನು ಮಾತನಾಡಬೇಕು ಎಂಬ ಅರಿವು ಅವರಿಗಿದೆ. ಇದು ಜೋಶಿ ಅವರ (ನವಗ್ರಹ) ಹೇಳಿಕೆಯೊಂದಕ್ಕೆ ಅವರು ಕೊಟ್ಟಿರುವ ಪ್ರತಿಕ್ರಿಯೆಯಷ್ಟೇ ಆಗಿಲ್ಲ. ಬ್ರಾಹ್ಮಣ ಸಮುದಾಯದ ಬಗ್ಗೆ ಅವರು ನೀಡಿರುವ ಹೇಳಿಕೆಯನ್ನು ಹಾಗೆ ನೋಡಲೂ ಆಗುವುದಿಲ್ಲ.

ಯಾವುದೋ ಕಾಲದಲ್ಲಿ ಏನೋ ಆಗಿದ್ದನ್ನು ಪ್ರಸ್ತಾಪಿಸಿ ಈಗ ಅದಕ್ಕೆ ಜೋಶಿ ಅವರನ್ನು ಹೊಣೆಯಾಗಿಸಲು, ಅವರನ್ನು ಉತ್ತರದಾಯಿ ಎನ್ನಲು ಆಗುವುದಿಲ್ಲ. ದೇವೇಗೌಡರು ಮತ್ತು ಅವರ ಕುಟುಂಬ ಬ್ರಾಹ್ಮಣರಿಗೆ ಸಾಕಷ್ಟು ನೆರವಾಗಿರಬಹುದು. ದೇವೇಗೌಡರ ಕುಟುಂಬದ ಬಗ್ಗೆ ಬ್ರಾಹ್ಮಣರ ಒಂದು ವಲಯದಲ್ಲಿ ಸದ್ಭಾವನೆಯೂ ಇರಬಹುದು. ಆದರೆ ಈ ಸಂದರ್ಭದಲ್ಲಿ ಎಚ್​ಡಿಕೆ ಕೊಟ್ಟಿರುವ ಈ ರೀತಿಯ ಹೇಳಿಕೆಯಿಂದ ಆಗುವ ಪರಿಣಾಮಗಳೇನು ಎಂದು ಸರಳವಾಗಿ ವಿವರಿಸುವುದು ಕಷ್ಟ.

ಎಚ್​ಡಿಕೆ ಅವರಿಗೆ ಬ್ರಾಹ್ಮಣ ಸಮುದಾಯವನ್ನು ಟೀಕಿಸುವುದಕ್ಕಿಂತಲೂ ಬೇರೆ ಸಮುದಾಯಕ್ಕೆ ಒಂದು ರೀತಿಯಲ್ಲಿ ಎಚ್ಚರಿಕೆ (ವಾರ್ನಿಂಗ್) ಕೊಡುವುದೇ ಮುಖ್ಯ ಉದ್ದೇಶ ಇದ್ದಂತೆ ಇದೆ. ಬಿಜೆಪಿಗೆ ವೋಟ್ ಹಾಕಿದರೆ ಬ್ರಾಹ್ಮಣರು ಮುಖ್ಯಮಂತ್ರಿಯಾಗುತ್ತಾರೆ. ನಿಮ್ಮ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂದು ಉತ್ತರ ಕರ್ನಾಟಕದಲ್ಲಿ ಲಿಂಗಾಯತರಿಗೆ ಮತ್ತು ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರಿಗೆ ಎಚ್​ಡಿಕೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಹೇಳಿಕೆಯಿಂದ ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯಗಳ ಮತಗಳ ಕ್ರೋಡೀಕರಣವಾಗುತ್ತದೆಯೋ ಇಲ್ಲವೋ, ಆದರೆ ಬ್ರಾಹ್ಮಣರು ಮುನಿಸಿಕೊಂಡರೆ ಅದು ಸಹಜವಾಗಿಯೇ ಕೆಲವಾದರೂ ಕ್ಷೇತ್ರಗಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

ಕಾಂಗ್ರೆಸ್​ಗೆ ಮೌನವೂ ದುಬಾರಿಯಾದೀತು

ಜೆಡಿಎಸ್​ನ ಹೇಳಿಕೆ ಮತ್ತು ಕಾಂಗ್ರೆಸ್​ನ ಮೌನವನ್ನು ಬಿಜೆಪಿ ಒಂದು ಚುನಾವಣಾ ಅಸ್ತ್ರವಾಗಿ ಮಾಡಬಹುದು. ಕರ್ನಾಟಕದಲ್ಲಿ ಬ್ರಾಹ್ಮಣರದು ಒಂದು ಸಣ್ಣ ಸಮುದಾಯ. ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ, ಪ್ರತಿಕ್ರಿಯಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ನಿಲುವಿಗೆ ಕಾಂಗ್ರೆಸ್ ಬಂದಿರಬಹುದು. ಆದರೆ ಈ ವಿಷಯ ಅಷ್ಟು ಸರಳವಾಗಿಲ್ಲ.

ಮೊದಲಿನಿಂದಲೂ ಬಹುತೇಕ ಬ್ರಾಹ್ಮಣರು ಬಿಜೆಪಿಯನ್ನು ಬೆಂಬಲಿಸಿಕೊಂಡೇ ಬಂದಿದ್ದಾರೆ. ಎಚ್​ಡಿಕೆ ಹೇಳಿಕೆ ಮತ್ತು ಕಾಂಗ್ರೆಸ್​ನ ಮೌನ ಬ್ರಾಹ್ಮಣ ಮತಗಳನ್ನು ಬಿಜೆಪಿಯ ಕಡೆಗೆ ಕ್ರೋಡೀಕರಣ ಮಾಡಬಹುದು. ಕಾಂಗ್ರೆಸ್ ಕಡೆಗೆ ಒಲವಿದ್ದ ಬ್ರಾಹ್ಮಣರು ಮುಂದೆ ಬಿಜೆಪಿಯ ಕಡೆಗೆ ವಾಲಬಹುದು. ತ್ರಿಕೋನ ಸ್ಪರ್ಧೆಗಳಿರುವ ಚುನಾವಣೆಗಳಲ್ಲಿ 500ರಿಂದ 1,000 ಮತಗಳು ನಿರ್ಣಾಯಕವಾಗುತ್ತವೆ. ಬ್ರಾಹ್ಮಣರ ಮತಗಳು 2,000ದ ಆಸುಪಾಸು ಇರುವ ಸಾಕಷ್ಟು ಕ್ಷೇತ್ರಗಳು ಕರ್ನಾಟಕದಲ್ಲಿವೆ. ಇಂತಲ್ಲಿ ಎಚ್​ಡಿಕೆ ಹೇಳಿಕೆಯ ಪರಿಣಾಮ ಗೋಚರಿಸಬಹುದು.

ಕರ್ನಾಟಕದಲ್ಲಿ ತಕ್ಷಣ ಚುನಾವಣೆ ನಡೆದರೆ ಇಂಥದ್ದೇ ಪಕ್ಷ ಬಹುಮತ ಪಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಕೆಲ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಸಿಗುವುದು ಕಷ್ಟ ಎಂದು ಅಭಿಪ್ರಾಯಪಟ್ಟಿವೆ. ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ನಾಲ್ಕೈದು ಸಲ ಕರ್ನಾಟಕಕ್ಕೆ ಬಂದುಹೋಗಿದ್ದಾರೆ. ಚುನಾವಣೆ ಘೋಷಣೆಯಾಗುವ ಮೊದಲೇ ಬಿಜೆಪಿ ಕಾರ್ಯತಂತ್ರ ಹೆಣೆದು ಕಣಕ್ಕಿಳಿದಿದೆ. ನಾವಿನ್ನೂ ಫೆಬ್ರುವರಿಯಲ್ಲಿದ್ದೇವೆ. ಮಾರ್ಚ್ ಕೊನೆಯ ವಾರದಲ್ಲಿ ಚುನಾವಣೆ ಘೋಷಣೆಯಾಗಬಹುದು. ಮೇ ಮಧ್ಯದಲ್ಲಿ ಚುನಾವಣೆ ಆಗಬಹುದು. ಆದರೆ ಬಿಜೆಪಿಯ ಘಟಾನುಘಟಿ ನಾಯಕರು ಇಷ್ಟು ಸಲ, ಇಷ್ಟು ಮುಂಚೆ ಕರ್ನಾಟಕಕ್ಕೆ ಬಂದಿರುವುದು ಗಮನಿಸಿದರೆ ಕರ್ನಾಟಕವನ್ನು ಬಿಜೆಪಿ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎನ್ನುವುದು ತಿಳಿಯುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಾಲಿಗೆ ಕರ್ನಾಟಕವೇ ಹೆಬ್ಬಾಗಿಲು ಎನ್ನುವುದು ಹಳೆಯ ಮಾತು. ಈ ಹೆಬ್ಬಾಗಿಲನ್ನು ಉಳಿಸಲು ಬಿಜೆಪಿ ತನ್ನೆಲ್ಲಾ ಸಾಮರ್ಥ್ಯ ಹಾಕಿ ಹೋರಾಡಲಿದೆ.

ಬಿಜೆಪಿ ಕೈಗೆ ಸಿಕ್ಕ ಹೊಸ ಅಸ್ತ್ರ

ವಿಧಾನಸಭೆ ಚುನಾವಣೆಗಳಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಒಂದಿಷ್ಟು ಅನುಕೂಲಗಳು ಇರುವಂತೆಯೇ ಪ್ರತಿಕೂಲ ಅಂಶಗಳೂ ಇರುತ್ತವೆ. ಕರ್ನಾಟಕದ ಮಟ್ಟಿಗೆ ಈವರೆಗೆ ಬಿಜೆಪಿಗೆ ಅನುಕೂಲಕ್ಕಿಂತಲೂ ಪ್ರತಿಕೂಲ ಅಂಶಗಳೇ ಹೆಚ್ಚಾಗಿದ್ದವು. 40 ಪರ್ಸೆಂಟ್ (ಭ್ರಷ್ಟಾಚಾರ) ಸರ್ಕಾರ, ದುರ್ಬಲ ಮುಖ್ಯಮಂತ್ರಿ (ವೀಕ್ ಚೀಫ್ ಮಿನಿಸ್ಟರ್) ಎಂಬ ಟೀಕೆಗಳನ್ನು ಎದುರಿಸುವಲ್ಲಿಯೇ ಬಿಜೆಪಿ ನಾಯಕರು ಸುಸ್ತಾಗುತ್ತಿದ್ದರು. ಆದರೆ ಇದೀಗ ಕುಮಾರಸ್ವಾಮಿ ಕೊಟ್ಟಿರುವ ಹೇಳಿಕೆ ಬಿಜೆಪಿಯ ಕೈಗೆ ದೊಡ್ಡ ಅಸ್ತ್ರವನ್ನೇ ಒದಗಿಸಿದಂತೆ ಆಗಿದೆ. ಇದನ್ನು ಸರಿಯಾಗಿ ಬಳಸಿಕೊಂಡರೆ ಅವರು ಜೆಡಿಎಸ್​ಗೆ ಹಾಕುವ ಒಂದೊಂದು ಮತವೂ ಸಮಾಜಗಳನ್ನು ಒಡೆಯುತ್ತದೆ ಎಂದು ಬಿಂಬಿಸಬಹುದು.

ಇವೆಲ್ಲಾ ಒತ್ತಟ್ಟಿಗಿರಲಿ, ಕುಮಾರಸ್ವಾಮಿ ನೀಡಿದ ಈ ಹೇಳಿಕೆಯ ಪರಿಣಾಮ ಏನಾಗಬಹುದು ಎಂಬ ಮೂಲ ಪ್ರಶ್ನೆಗೆ ಮತ್ತೆ ಹೊರಳೋಣ. ಇದು ಎಲ್ಲಿಗೆ ಹೋಗಿ ನಿಲ್ಲಬಹುದು. ಜಾತಿ ನಿಂದನೆ ಅಥವಾ ಧರ್ಮ ನಿಂದನೆಯನ್ನು ಮತದಾರರು ಸಹಿಸಿಕೊಳ್ಳಬಾರದು. ಯಾವುದೇ ರಾಜಕಾರಿಣಿ ಅಂಥ ಹೇಳಿಕೆಗಳನ್ನು ಕೊಡಬಾರದು. ತಮ್ಮ ಮಾತಿನ ಪರಿಣಾಮ ಏನು ಎಂಬುದನ್ನು ಲೆಕ್ಕಾಚಾರ ಹಾಕದೇ ಮಾತನಾಡುವಷ್ಟು ಮುಗ್ಧರು ಇವರಲ್ಲ ಎಂಬ ಅರಿವು ಮತದಾರರಿಗೆ ಇರಬೇಕು.

ಇದನ್ನೂ ಓದಿ: ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಲ್ಲ, ಅಂಥ ತಪ್ಪು ನನ್ನಿಂದ ಆಗಿಲ್ಲ; ಎಚ್​ಡಿ ಕುಮಾರಸ್ವಾಮಿ

ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:18 pm, Tue, 7 February 23

ತಾಜಾ ಸುದ್ದಿ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಸಕಲೇಶಪುರ: ದಂತಗಳಿಂದ ತಿವಿದು ಆನೆ ಭೀಮನನ್ನು ಗಾಯಗೊಳಿಸಿರೋ ಕಾಡಾನೆಗಳು, ಗಾಯ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ವರಮಹಾಲಕ್ಷ್ಮಿಗೆ ಪಂಚಾಭಿಷೇಕದ ಬಳಿಕ ಭ
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಇಂದು ವರಮಹಾಲಕ್ಷ್ಮಿ ಹಬ್ಬ, ಮೈಸೂರಿನ ದೇವರಾಜ ಮಾರ್ಕೆಟ್​ನಲ್ಲಿ ಜಾತ್ರೆ, ಹಬ್
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ಚಿಕ್ಕಮಗಳೂರಿನಲ್ಲಿ ಕಂದಾಯ ಭೂ ಹಗರಣ: ಕಾರವಾರ ಸೀಬರ್ಡ್ ನೌಕಾನೆಲೆಯ ಭೂ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
ತುಮಕೂರು: ಗೊರವನಹಳ್ಳಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಮುಜರಾಯಿ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
'777 ಚಾರ್ಲಿ' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿರುವ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
‘ಉಪಾಧ್ಯಕ್ಷ’ ಕಥೆ ಕೇಳಿ ಯಶ್ ಹೇಳಿದ್ದೇನು? ಮಾಹಿತಿ ಹಂಚಿಕೊಂಡ ಚಿಕ್ಕಣ್ಣ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಹರ್ಷಿಕಾ-ಭುವನ್ ಮದುವೆಗೆ ಹಾಜರಾಗಿ ವಧು-ವರರಿಗೆ ದುಬಾರಿ ಉಡುಗೊರೆ ಕೊಟ್ಟ ಗಣೇ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಆಪರೇಷನ್​ ಹಸ್ತ: ಬಿಜೆಪಿ ಶಾಸಕ ಭೈರತಿ ಬಸವರಾಜ ಖಡಕ್ ರಿಯಾಕ್ಷನ್, ಇಲ್ಲಿದೆ ನ
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು
ಚಂದ್ರನ ದಕ್ಷಿಣ ಧ್ರುವಕ್ಕೆ ಬೆಂಗಳೂರಿನ ಹೆಸರು ರಿಜಿಸ್ಟರ್; ISTRAC ನಿರ್ದೇಶಕ ಬಿಎನ್ ರಾಮಕೃಷ್ಣ ಹೇಳಿದ್ದಿಷ್ಟು