ಉಡುಪಿ, ಆಗಸ್ಟ್ 5: ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ದೂರು ನೀಡಿದ ವಿಚಾರ ಸ್ವಾಗತಿಸುತ್ತೇವೆ, ಅದರ ಬಗ್ಗೆ ಚರ್ಚೆಗೆ ಹೋಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಹೇಳಿಕೆ ಕೊಡಲು ಹೋಗಬಾರದು ಎಂದರು.
ವರ್ಗಾವಣೆ ವಿಚಾರದಲ್ಲಿ ಒಂದು ಸಾವಿರ ಕೋಟಿ ದಂಧೆ ನಡೆದಿದೆ ಎಂದು ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಕುಮಾರಸ್ವಾಮಿ ಬಹಳಷ್ಟು ಅನುಭವಸ್ಥರು, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ ಅಂತಾ ಹೇಳಿದ್ದಾರೆ. ಧೈರ್ಯವಿದ್ದರೆ ಮುಂದೆ ಬಂದು ಹೇಳಲಿ ನೋಡೋಣ. ನಾವು ಐದು ಗ್ಯಾರಂಟಿಗಳನ್ನು ನೀಡಿದ್ದೆವು, ಅದರಂತೆ ಜಾರಿಗೊಳಿಸುತ್ತೇವೆ. ಗ್ಯಾರಂಟಿಗಳಿಂದ ಲಾಭ ಇಲ್ಲ, ಬೇಡವೆನ್ನಲಿ ನೋಡೋಣ ಎಂದರು.
ಉಡುಪಿ ಖಾಸಗಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಯಾವುದೇ ಹೆಣ್ಣುಮಕ್ಕಳ ಮೇಲೆ ಅನ್ಯಾಯವಾದರೂ ಸಹಿಸುವುದಿಲ್ಲ. ವಿದ್ಯಾರ್ಥಿನಿಯರ ಭವಿಷ್ಯದ ಪ್ರಶ್ನೆ ಇದಾಗಿದ್ದು, ತನಿಖೆ ಆಗುವವರೆಗೂ ಕಾಯಿರಿ ಎಂದರು.
ಇದನ್ನೂ ಓದಿ: ನೈಸ್ ಹಗರಣದ ಕುರಿತು ದಾಖಲೆ ನೀಡಿದ್ರೆ, ನೀವು ರೈತರಿಗೆ ನ್ಯಾಯ ಕೊಡಿಸುತ್ತೀರಾ – ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಪ್ರಶ್ನೆ
ಉಡುಪಿಗೆ ಆಗಮಿಸಿದ್ದ ಖುಷ್ಬೂ ಅವರು ಬಂದು ಏನು ಹೇಳಿದ್ದಾರೆ ಎಲ್ಲರಿಗೂ ಗೊತ್ತಿದೆ. ಅವರದೇ (ಬಿಜೆಪಿ) ಪಕ್ಷದವರು ಬಂದು ಹುರುಳಿಲ್ಲ ಅಂತಾ ಹೇಳಿದ್ದಾರೆ ಎಂದು ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದೆ. ಆದರೆ ತಪ್ಪು ಮಾತನಾಡಿರುವ ಅಥವಾ ಪ್ರಚೋದನಕಾರಿ ಭಾಷಣ ಮಾಡಿದ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಜೊತೆಗೂ ಮಾತನಾಡಿದ್ದೇನೆ ಎಂದರು.
ಗೃಹಲಕ್ಷ್ಮೀ ಯೋಜನೆ ಬಗ್ಗೆ ಮಾತನಾಡಿದ ಸಚಿವೆ, ಆ.18 ಅಥವಾ 20ರಂದು ಮನೆ ಯಜಮಾನಿ ಖಾತೆಗೆ ಹಣ ಹಾಕುತ್ತೇವೆ. ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ದಿನಾಂಕ ತಿಳಿಸಿದ್ದೇವೆ. ಗೃಹಲಕ್ಷ್ಮೀಗೆ 1.25 ಕೋಟಿ ಫಲಾನುಭವಿಗಳ ನೋಂದಣಿ ಆಗಬೇಕು. ಈಗಾಗಲೇ 1 ಕೋಟಿ ಜನ ನೋಂದಣಿ ಮಾಡಿಸಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ