ಬೆಂಗಳೂರು, (ಆಗಸ್ಟ್ 13): ವಿಧಾನಸಭೆ ಚುನಾವಣೆಯಲ್ಲಿ(Karnataka Assembly Elections 2023) ಪ್ರಚಂಡ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಿರುವ ರಾಜ್ಯ ಕಾಂಗ್ರೆಸ್ (Congress) ಪಡೆ ಈಗ ಲೋಕಸಭೆ ಚುನಾವಣೆಗೆ (Loksabha Elections 2024) ದೊಡ್ಡ ಜೋಶ್ನಲ್ಲೇ ಸಜ್ಜಾಗ್ತಿದೆ. ಮೇಲಾಗಿ, ಇತ್ತೀಚೆಗಷ್ಟೇ ಹೈಕಮಾಂಡ್ ಕೂಡಾ, ರಾಜ್ಯ ನಾಯಕರಿಗೆ ಲೋಕಸಭೆ ಚುನಾವಣೆ ಗೆಲ್ಲಲು ಟಾಸ್ಕ್ ಸಹ ನೀಡಿದೆ. ಇದೇ ಕಾರಣಕ್ಕೆ ರಾಜ್ಯ ಕೈ ಪಡೆ ತಂತ್ರಗಳನ್ನ ಹೆಣೆಯುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ನಲ್ಲಿ ಲೋಕಸಭೆ ಟಿಕೆಟ್ಗಾಗಿ ಭಾರೀ ಲಾಬಿ ಶುರುವಾಗಿದೆ. ಲೋಕಸಭೆ ಟಿಕೆಟ್ ಮೇಲೆ ಹಲವು ನಾಯಕರು ಕಣ್ಣಿಟ್ಟಿದ್ದರೆ, ಮತ್ತೊಂದೆಡೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತವರಿಗೆ ಟಿಕೆಟ್ ನೀಡಬೇಡಿ. ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಕೆಲವರು ಪಟ್ಟು ಹಿಡಿದಿದ್ದಾರೆ. ಇನ್ನು ಕೆಲವು ನಾಯಕರು ವಿಧಾನಸಭೆ ಟಿಕೆಟ್ ಸಿಗದ್ದಕ್ಕೆ ಲೋಕಸಭೆ ಚುನಾವಣೆ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಹಾಗಾದ್ರೆ, ಯಾರೆಲ್ಲ ಯಾವ ಕ್ಷೇತ್ರಗಳಿಗೆ ಟಿಕೆಟ್ ಲಾಬಿ ನಡೆಸಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಬಳ್ಳಾರಿ ಭದ್ರಕೋಟೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಛೀದ್ರ-ಛಿದ್ರವಾಗಿದೆ. ಎಸ್ಟಿ ಮಾಜಿ ಸಚಿವ ಶ್ರೀರಾಮು, ಎಸ್ಟಿ ಸೋಮಶೇಖರ್ ನಂತಹ ಘಟಾಘಟಿ ನಾಯಕರು ಮಕಾಡೆ ಮಲಗಿದ್ದು ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹವಾ ಜೋರಾಗಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರ ಕಣಕ್ಕಿಳಿಲು ವಿಎಸ್ ಉಗ್ರಪ್ಪ ಸಜ್ಜಾಗಿದ್ದಾರೆ. ಈ ಹಿಂದೆ ಇದೇ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಬಳಿಕ 2029ರ ಲೋಕಸಭಾ ಚುನಾವಣೆಯಲ್ಲಿ ಸೋಲುಕಂಡಿದ್ದರು. ಇದೀಗ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲೂ ಸಹ ಬಳ್ಳಾರಿಯಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದು ಟಿಕೆಟ್ಗಾಗಿ ಲಾಬಿ ನಡೆಸಿದ್ದಾರೆ.
ಇನ್ನು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ವಿಧಾನಪರಿಷತ್ ಸದಸ್ಯ ಹೆಚ್ಎಂ ರೇವಣ್ಣ ಸಹ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಗಾದರೂ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಇದೇ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಶಾಸಕ ಹ್ಯಾರೀಸ್ ಪುತ್ರ, ಕರ್ನಾಟಕ ಕಾಂಗ್ರೆಸ್ ಯುವ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಸಹ ಪೈಪೋಟಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಟಿ ನರಸೀಪುರ ವಿಧಾನಸಭೆ ಟಿಕೆಟ್ ಕೈತಪ್ಪಿದ್ದರಿಂದ ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಲಾಬಿ ನಡೆಸಿದ್ದಾರೆ. ಟಿ ನರಸೀಪುರ ವಿಧಾನಸಭೆ ಸ್ಪರ್ಧಿಸಲು ಸುನಿಲ್ ಬೋಸ್ ಮುಂದಾಗಿದ್ದರು. ಆದ್ರೆ, ಹೈಕಮಾಂಡ್, ಪುತ್ರನಿಗೆ ಬಿಟ್ಟು ಅವರ ತಂದೆ ಮಹಾದೇವಪ್ಪ ಅವರಿಗೆ ಟಿಕೆಟ್ ನೀಡಿತ್ತು. ಹೀಗಾಗಿ ಇದೀಗ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯಲು ಸುನಿಲ್ ಬೋಸ್ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಇದೇ ಕ್ಷೇತ್ರದ ಟಿಕೆಟ್ಗಾಗಿ ಎಂ.ಆರ್.ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಸಹ ಸದ್ದಿಲ್ಲದೇ ಪೈಪೋಟಿ ನಡೆಸಿದ್ದಾರೆ. ಮಾಜಿ ಯೂತ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಚಾಮರಾಜನಗರ ಲೋಕಸಭಾ ಕ್ಷೇತ್ರ ಟಿಕೆಟ್ಗಾಗಿ ಕಸರತ್ತು ನಡೆಸಿದ್ದಾರೆ.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಗೆ ಕಾಂಗ್ರೆಸ್ ನಾಯಕರು ಗಾಳ ಹಾಕಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲು ಒಪ್ಪಿಗೆ ಕೂಡ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಅಧ್ಯಕ್ಷರ ಅವಧಿ ವಿಸ್ತರಣೆಯ ಅಭಯ ನೀಡಲಾಗಿದೆ. ಇದರೊಂದಿಗೆ ಜಯಪ್ರಕಾಶ್ ಹೆಗ್ಡೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಲು ಪ್ಲ್ಯಾನ್ ಮಾಡಿದೆ ಎಂದು ತಿಳಿದುಬಂದಿದೆ.
2009 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ, ಬಿಜೆಪಿಯ ಡಿವಿ ಸದಾನಂದಗೌಡ ವಿರುದ್ಧ ಸೋಲುಕಂಡಿದ್ದರು. ಆದ್ರೆ, ಸದಾನಂದಗೌಡ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕಾರಣ ರಾಜಿನಾಮೆ ನೀಡಿದ್ದರು. ಇದರಿಂದ 2012ರಲ್ಲಿ ಉಪಚುನಾವಣೆಯಲ್ಲಿ ನಡೆದಿತ್ತು. ಈ ಚುನಾವಣೆ ಜಯಪ್ರಕಾಶ್ ಹೆಗ್ಡೆ ಗೆದ್ದಿದ್ದರು. ನಂತರ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ವಿರುದ್ಧ ಪರಾಭಗೊಂಡಿದ್ದರು. 2014ರಲ್ಲಿ ಸೋಲಿನ ಬಳಿಕ ಕಾಂಗ್ರೆಸ್ಗೆ ಗುಡ್ಬೈ ಹೇಳಿ ಬಿಜೆಪಿ ಸೇರಿದ್ದರು. ಇದೀಗ ಮತ್ತೆ ಜಯಪ್ರಕಾಶ್ ಹೆಗ್ಡೆಗೆ ಕಾಂಗ್ರೆಸ್ ಗಾಳ ಹಾಕಿದ್ದು, ಒಂದು ವೇಳೆ ಇದು ಸಕ್ಸಸ್ ಆದರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಅವರಿಗೆ ಫಿಕ್ಸ್ ಎನ್ನಲಾಗಿದೆ.
ಇನ್ನು ಮಾಜಿ ಸಂಸದ ಶಿವರಾಮೇಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ವಿಧಾನಸಬೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಅವರು ಈ ಬಾರಿ ಕೊಪ್ಪಳ ಲೋಕಸಭಾ ಟಿಕೆಟ್ ತಮಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಮತ್ತೊಂದೆಡೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸೋತಿರುವ ಮತ್ತೋರ್ವ ಕಾಂಗ್ರೆಸ್ ಹಿರಿಯ ನಾಯಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೆಸರು ಸಹ ಕೇಳಿಬರುತ್ತಿದೆ. ಇವರಿಬ್ಬರ ಜೊತೆ ಇದೊಂದು ಸಲ ತಮಗೆ ಟಿಕೆಟ್ ನೀಡಬೇಕೆಂದು ರಾಜಶೇಖರ್ ಹಿಟ್ನಾಳ್ ಪೈಪೋಟಿ ನಡೆಸಿದ್ದಾರೆ. ಕಳೆದ ಬಾರಿ ಸೋಲು ಕಂಡಿದ್ದ ರಾಜಶೇಖರ್ ಹಿಟ್ನಾಳ್ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಕಷ್ಟ ಸಾಧ್ಯ. ಬಯ್ಯಾಪುರ ಇಲ್ಲ ಶಿವರಾಮೇಗೌಡ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ.
ವಿಧಾನಸಭೆ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿಯಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಎಂದು ಬಿಂಬಿತರಾಗಿರುವ ಶೆಟ್ಟರ್ ಅವರನ್ನು ಅಖಾಡಕ್ಕಿಳಿಸಿದರೆ ಅಕ್ಕ-ಪಕ್ಕದ ಕ್ಷೇತ್ರಗಳಿಗೆ ಅನುಕೂಲವಾಗಲಿದೆ ಎನ್ನುವುದು ಕಾಂಗ್ರೆಸ್ನ ಲೆಕ್ಕಾಚಾರವಾಗಿದೆ. ಆದ್ರೆ, ಜಗದೀಶ್ ಶೆಟ್ಟರ್ ಹಾಲಿ ಕೇಂದ್ರ ಸಚಿವ, ಪ್ರಭಾವಿ ನಾಯಕ ಪ್ರಲ್ಹಾದ್ ಸೋಶಿ ವಿರುದ್ಧ ಸೆಣುಸುತ್ತಾರಾ ಎನ್ನುವುದೇ ಮುಂದಿರುವ ಪ್ರಶ್ನೆ.
ಇನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಮೇಲೆ ಶಾಸಕ ವಿಜಯಾನಂದ್ ಕಾಶಪ್ಪನವರ್ ಪತ್ನಿ ವೀಣಾ ಕಾಶಪ್ಪನವರ್ ಟವೆಲ್ ಹಾಕಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗದ್ದಿಗೌಡರ್ ವಿರುದ್ಧ ಸೋಲುಕಂಡಿದ್ದರು. ಈ ಬಾರಿಯೂ ಸಹ ಬಾಗಲಕೋಟೆ ಕ್ಷೇತ್ರದ ಟಿಕೆಟ್ ಬೇಕೆಂದು ವೀಣಾ ಕಾಶಪ್ಪನವರ್ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಇನ್ನು ಕರ್ನಾಟಕ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸಚಿವ ಸತೀಶ್ ಜಾರಕಿಹೊಳಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸತೀಶ್ ಜಾತಕಿಹೊಳಿ ಅಲ್ಪ ಮತಗಳಿಂದ ಸೋಲುಕಂಡಿದ್ದರು. ಬಿಜೆಪಿಯ ಭದ್ರಕೋಟೆಯಾಗಿದ್ದ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಪಡೆದ ಮತ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಹೀಗಾಗಿ ಹೈಕಮಾಂಡ್ ಈ ಬಾರಿಯೂ ಸಹ ಸತೀಶ್ ಜಾರಕಿಹೊಳಿಗೆ ಮಣೆ ಹಾಕುವ ಎಲ್ಲಾ ಸಾದ್ಯತೆಗಳಿವೆ. ಒಂದು ವೇಳೆ ಸತೀಶ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧೆಗೆ ಒಪ್ಪಿ ಗೆದ್ದರೆ ತಮ್ಮ ವಿಧಾನಸಭಾ ಕ್ಷೇತ್ರವನ್ನು ಪುತ್ರಿನಿಗೆ ಬಿಟ್ಟುಕೊಡಲಿದ್ದಾರೆ.