ನವದೆಹಲಿ, ಆಗಸ್ಟ್ 7: ಹೈಕಮಾಂಡ್ ಬುಲಾವ್ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ದೆಹಲಿಗೆ ಭೇಟಿ ನೀಡಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರನ್ನೂ ಭೇಟಿಗೆ ಯತ್ನಿಸುತ್ತಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ದೆಹಲಿಗೆ ಆಗಮಿಸಿದ್ದೇವೆ. ನಮ್ಮ ಸಂಸದರು ಮನವಿ ಮಾಡಿದ್ದ ಹಿನ್ನೆಲೆ ಚರ್ಚಿಸಲು ಬಂದಿದ್ದೇನೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದೆ. ಸಂಸತ್ ಕಲಾಪ ಹಿನ್ನೆಲೆ ಅಮಿತ್ ಶಾ ಭೇಟಿಯಾಗಲು ಆಗುತ್ತಿಲ್ಲ. ಆದರೆ ಭೇಟಿಗೆ ಪ್ರಯತ್ನ ಮಾಡುತ್ತೇನೆ ಎಂದರು.
ಸಮಯ ಸಿಕ್ಕ ಬಳಿಕ ನಾನು ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೇನೆ. ಸೂಕ್ತ ನಿರ್ಣಯವನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಬೇಕು. ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಬಿಜೆಪಿ ರಾಷ್ಟ್ರೀಯ ಪಕ್ಷ ಆಗಿದ್ದರಿಂದ ಸೋಲು-ಗೆಲುವು ಸಹಜ. ರಾಜ್ಯ ನಾಯಕರ ಮೇಲೆ ಬೇಸರ ಮಾಡಿಕೊಳ್ಳುವುದು ಏನೂ ಇಲ್ಲ ಎಂದರು.
ಇದನ್ನೂ ಓದಿ: ಎಸ್ಸಿಪಿ, ಟಿಎಸ್ಪಿ ಹಣದ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ, ಸಿಎಂರಿಂದ ದಲಿತರ ಹಿತ ಕಡೆಗಣನೆ: ಮಾಜಿ ಸಿಎಂ ಬೊಮ್ಮಾಯಿ
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ 22 ಸ್ಥಾನ ಗೆಲ್ಲುವುದು ಕನಸಿನ ಮಾತು. 1996 ರಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಗೆದ್ದಿಲ್ಲ. 2018ರಲ್ಲಿ ರಾಜ್ಯದಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ. ಆಗ ನಾವು ರಾಜ್ಯದಲ್ಲಿ ಅಧಿಕಾರದಲ್ಲಿ ಇರದಿದ್ದರೂ ಹೆಚ್ಚುಸ್ಥಾನ ಗೆಲುವು ಸಾಧಿಸಿದ್ದೇವೆ ಎಂದರು.
ಲೋಕಸಭೆ ಚುನಾವಣೆಗೆ ವಿಚಾರಗಳು ಬೇರೆ ಇರುತ್ತವೆ. 25 ಸ್ಥಾನಗಳನ್ನು ಉಳಿಸಿಕೊಳ್ಳಲು ನಾವು ತಯಾರಿ ಮಾಡಿಕೊಳ್ಳುತ್ತೇವೆ. ರಾಷ್ಟ್ರೀಯ ಅಧ್ಯಕ್ಷರನ್ನು ನಾಳೆ ಭೇಟಿ ಮಾಡುತ್ತೇನೆ ಎಂದು ಬೊಮ್ಮಾಯಿ ಹೇಳಿದರು. ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮಾಹಿತಿ ಇಲ್ಲ. ರಾಜ್ಯಪಾಲರಿಂದ ಪತ್ರ ಬಂದ ಬಳಿಕ ಕ್ರಮ ವಹಿಸಬೇಕು. ರಾಜ್ಯಭವನ ಪತ್ರ ಬರೆದಿದ್ಯಾ ಇಲ್ಲ ಸ್ಪಷ್ಟಪಡಿಸಬೇಕು, ಸ್ಪಷ್ಟತೆ ಸಿಕ್ಕಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ