ತಮಿಳುನಾಡಿಗೆ ಹೆಚ್ಚುವರಿ ಕಾವೇರಿ ನೀರು, ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ: ಹೆಚ್ಡಿಕೆ ಕಿಡಿ
ಈ ವರ್ಷವೂ ನದಿ ಹಂಚಿಕೆಯಲ್ಲಿ ತಮಿಳುನಾಡಿನ ಸರ್ಕಾರಕ್ಕೆ ಕರುನಾಡು ( Karnataka) ಮಣಿದಿದ್ದು ಹೆಚ್ಚುವರಿ ನೀರು ಸರಬರಾಜಿಗೆ ರಾಜಿಯಾಗಿದೆ. ಇನ್ನು ಇದಕ್ಕೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರು/ಬೆಂಗಳೂರು, (ಆಗಸ್ಟ್ 17): ಕಾವೇರಿ ನದಿ (Cauvery River)ನೀರಿನ ಹಂಚಿಕೆಯಲ್ಲಿ ವರ್ಷಗಳು ಉರುಳುತ್ತಿದ್ದರೂ ಎರಡು ರಾಜ್ಯಗಳ ಜಟಾಪಟಿ ಇನ್ನೂ ಮುಂದುವರೆಯುತ್ತಲೇ ಇದೆ. ಈ ವರ್ಷವೂ ನದಿ ಹಂಚಿಕೆಯಲ್ಲಿ ತಮಿಳುನಾಡಿನ ಸರ್ಕಾರಕ್ಕೆ ( Tamil Nadu Government) ಕರುನಾಡು ( Karnataka) ಮಣಿದಿದ್ದು ಹೆಚ್ಚುವರಿ ನೀರು ಸರಬರಾಜಿಗೆ ರಾಜಿಯಾಗಿದೆ. ಆಗಸ್ಟ್ 13ರ ಬೆಳಿಗ್ಗೆ 5,243 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿತ್ತು. ಆದರೆ, ಇಂದಿನಿಂದ ( ಆಗಸ್ಟ್ 17)ರಿಂದ 12,718 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಹೆಚ್ಚಿನ ನೀರನ್ನು ಬಿಡುಗಡೆಗೊಳಿಸುವ ಕುರಿತು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ತಮಿಳುನಾಡು ಸರ್ಕಾರ ಅದರಲ್ಲಿ ಮೇಲುಗೈ ಸಾಧಿಸಿದೆ. ತಮಿಳುನಾಡು ಸರ್ಕಾರ ಕರ್ನಾಟಕದ ವಿರುದ್ಧ ಮತ್ತೊಮ್ಮೆ ಸುಪ್ರೀಂ ಕೋರ್ಟ್ನಲ್ಲಿ ಜಯಶಾಲಿಯಾಗಿದೆ. ಆಗಸ್ಟ್ 13ರ ಬೆಳಿಗ್ಗೆ 5243 ಕ್ಯೂಸೆಕ್ ನೀರನ್ನು ಬಿಡುಗಡೆ ಗೊಳಿಸಿದ್ದರೂ ಸಂಜೆ ವೇಳೆಗಾಗಿ 9273 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗಿತ್ತು. ಆದರೂ ಸುಪ್ರೀಂ ಮೋರೆ ಹೊದ ತಮಿಳುನಾಡು 12,718 ಕ್ಯೂಸೆಕ್ ನೀರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ಡ್ಯಾಂ ಗರಿಷ್ಠ ಸಂಗ್ರಹದ ಮಟ್ಟ 124.80( 49.45 ಟಿಎಂಸಿ) ಅಡಿಗಳಷ್ಟಿದೆ. ಸದ್ಯ ಜಲಾಶಯದ ಮಟ್ಟ 110.04 ( 31.760ಟಿಎಂಸಿ) ಅಡಿಯಷ್ಟು ನೀರು ಸಂಗ್ರಹವಾಗಿದೆ. ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಈ ಬಾರಿಯ ಮಳೆ ಪ್ರಮಾಣ ಕಡಿಮೆಯಿದ್ದು, ರಾಜ್ಯದಲ್ಲಿಯೇ ನೀರಿನ ಕೊರತೆ ಎದುರಾಗುವ ಸಂಭವವಿದೆ. ಅದರಲ್ಲಿಯೂ ಕಾವೇರಿ ನದಿ ನೀರನನ್ನು ಬಳಸುವ 110 ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಮಳೆಗಾಲವು ಮುಗಿಯುವ ಹಂತದಲ್ಲಿದ್ದು, ತಮಿಳುನಾಡಿನಲ್ಲಿ ಇನ್ನೇನು ಆರಂಭಗೊಳ್ಳಲಿದೆ. ತಮಿಳುನಾಡಿಗೆ ಮಳೆ ನೀರು ಒದಗುವ ಸಾಧ್ಯತೆ ಇನ್ನೂ ಇದ್ದರೂ ಕಾವೇರಿ ನೀರಿನ ಪ್ರಮಾಣ ಹೆಚ್ಚಿಸಿರುವುದು ಆಘಾತಕಾರಿಯಾಗಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ನೀರಿನ ಸಂಕಷ್ಟ ಎದುರಿಸುವ ಸಾಧ್ಯತೆಯು ಹೆಚ್ಚಿದೆ.
ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ಕೆಂಡಾಮಂಡಲ
ಇನ್ನು ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುತ್ತಿರುವ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷ ಮೆಕೆದಾಟು ಪಾದಯಾತ್ರೆಯ ಹೈಡ್ರಾಮಾ ಆಡಿ ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಹಾಕಿದೆ. I.N.D.I.A ಗೆ ಜೀವದಾನ ಮಾಡುವ ಉದ್ದೇಶದಿಂದ ಕಾವೇರಿ ಹಿತವನ್ನೇ ಬಲಿದಾನ ಮಾಡಿ, ಕನ್ನಡಿಗರಿಗೆ ಅದರಲ್ಲಿಯೂ ಅನ್ನದಾತರಿಗೆ ಘೋರ ಅನ್ಯಾಯ ಮಾಡಿದೆ. ನಾವು ಅಂದುಕೊಂಡಂತೆಯೇ ವಿಶ್ವಾಸ ದ್ರೋಹ ಮಾಡಿದೆ. ಈಗಾಗಲೇ ಮಳೆ ಅಭಾವದಿಂದ ಜಲಾಶಯಗಳು ತುಂಬಿಲ್ಲ, ರೈತರ ಬೆಳೆಗೆ ನೀರಿಲ್ಲ ಹಾಗೂ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಕನ್ನಡಿಗರಿಗೆ ವಂಚಿಸಿ ರಾಜಾರೋಷವಾಗಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ತಮಿಳುನಾಡು ಜೊತೆ ರಾಜಕೀಯ ಚೌಕಬಾರವಾಡುತ್ತಿದೆ. ಇದೊಂತರ ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ ಮುಡಿಸಲು ಹೋಗುವಂತಿದೆ ಎಂದು ಸರ್ಕಾರದ ನಡೆಗೆ ಕಿಡಿಕಾರಿದ್ದಾರೆ.
ಕರ್ನಾಟಕ ಸರ್ಕಾರ ತಮಿಳುನಾಡಿಗೆ ಬೆದರಿ ಶರಣಾಗಿದೆ. 2024ರ ಲೋಕಸಭೆ ಗೆಲುವಿಗೆ ಕಾವೇರಿ ಹಿತವನ್ನೇ ನೆರೆ ರಾಜ್ಯಕ್ಕೆ ಸರ್ಕಾರ ಅಡವಿಟ್ಟಿದೆ. ಇದೊಂದು ಗ್ಯಾರಂಟಿ ಸರ್ಕಾರನಾ? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, 1962ರಿಂದಲೂ ಕಾವೇರಿ ಕೊಳ್ಳದ ರೈತರಿಗಾಗಿ ದೇವೇಗೌಡರು ಜೀವವನ್ನೇ ತೇದಿದ್ದಾರೆ. ಆ ರಾಜ್ಯಾದ ವಿರುದ್ಧ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ ರಾಜ್ಯದೆದರು ಇಂದು ಮಂಡಿಯೂರಿ ನಿಂತಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಕೊಡಲಿಪೆಟ್ಟು ನೀಡಿದಂತೆ ಎಂದು ಗುಡುಗಿದರು.
ಕಾವೇರಿಗಾಗಿ ಹಿಂದಿನ ಪ್ರತಿ ಸರ್ಕಾರವು ಕೇಂದ್ರಕ್ಕೆ ಸಡ್ಡು ಹೊಡೆದು ತಮಿಳುನಾಡಿನ ಅಬ್ಬರಕ್ಕೆ ತಡೆಯಾಗಿದ್ದರು. ಇಂಥಹ ಕೆಚ್ಚಿನ ಕರ್ನಾಟಕದ ಇತಿಹಾಸದಲ್ಲಿಯೇ ಪ್ರಸ್ತುತ ಸರ್ಕಾರವು ಸುಪ್ರೀಂ ಕೋರ್ಟ್ ಅರ್ಜಿ ಎಂದಾಕ್ಷಣ ಬೆದರಿ ಕೈ ಚೆಲ್ಲಿದೆ. ರಾಜ್ಯದಲ್ಲಿತುವ ಸ್ಥಿತಿಯ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಿಲ್ಲ. ಕಾನೂನು ತಜ್ಞರು, ಪ್ರತಿಪಕ್ಷ ನಾಯಕರುಗಳ ಜೊತೆ ಚರ್ಚಿಸದೇ ತಮಿಳುನಾಡಿಗೆ ನೀರನ್ನು ಹರಿಸಿದರ ಒಳಗುಟ್ಟು ಜನತೆಗೆ ತಿಳಿಯಬೇಕು. ಉಪಮುಖ್ಯಮಂತ್ರಿಗಳೂ ಜಲಸಂಪನ್ಮೂಲ ಸಚಿವರು ಆಗಿರುವುದು ಕರ್ನಾಟಕಕ್ಕೋ ಅಥವಾ ತಮಿಳುನಾಡಿಗೋ ಎಂದು ಗೊಂದಲವಾಗುತ್ತಿದೆ ಎಂದು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಕಾವೇರಿ ಕೀಲಿ ಕೇಂದ್ರದ ಮೇಲಿದೆ ಎಂದಾದರೆ ಇವರ ಹೊಣೆ ಎನು? ಆ ಕೀಲಿ ಸೋನಿಯಾ ಗಾಂಧಿಯವರ ಬಳಿ ಇದೆಯೋ ಅಥವಾ ಸ್ಟಾಲಿನ್ನವರ ಬಳಿ ಇದೆಯೋ? ತಿಳಿಯುತ್ತಿಲ್ಲ. ರೈತರ ಬಳಿ ತಾಕತ್ತಿದ್ದರೆ ಕೋರ್ಟಿಗೆ ಹೋಗಿ ಎಂದಿರುವುದು ಉಪಮುಖ್ಯಮಂತ್ರಿಯವರ ದರ್ಪಕ್ಕೆ ಸಾಕ್ಷಿಯಾಗಿದೆ. ನಿತ್ಯವೂ ಸಾವಿರಾರು ಕ್ಯೂಸೆಕ್ ನೀರು ನೆರೆ ರಾಜ್ಯಕ್ಕೆ ಹೋಗುತ್ತಿದ್ದರೂ ಇನ್ನೂ 10 ಟಿಎಂಸಿ ನೀರನ್ನು ಹೆಚ್ಚುವಾರಿಯಾಗಿ ಬಿಡುತ್ತೇವೆ ಎಂದಿರುವುದು ಸರಿಯಲ್ಲ. ಕನ್ನಡಿಗರಿಂದ ಕೇಳಿ ಕೇಳಿ ಪಡೆದುಕೊಂಡ ಪೆನ್ ಈಗ ಗನ್ ರೂಪ ಪಡೆದಿದೆಯಾ? ಅಥವಾ ಪೆಚ್ಚಗೆ ತೆಪ್ಪಗೆ ಮಲುಗಿದೆಯಾ? ಎಂದು ಪ್ರಶ್ನಿಸಿದರು.
ರಾಜ್ಯದ ಜಲ ಸಂಕಷ್ಟದ ಸಭೆಯಲ್ಲಿಯೇ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಂಕಷ್ಟವನ್ನು ಅಂಕಿ ಅಂಶದ ಮೂಲಕವೇ ಸಾಬೀತುಪಡಿಸಿದೆ. ಪಾಪ! ಸ್ವತಃ ಜಲಸಚಿವ ಸಂಪನ್ಮೂಲ ಸಚಿವರಿಗೆ ಇದರ ಕುರಿತು ಮಾಹಿತಿ ಇಲ್ಲವೇನೋ? ಕಾವೇರಿ ಪಾಲಿಗೆ ಆ ಪಕ್ಷ ನಯವಂಚಿಕೆ, ನಂಬಿಕೆ ದ್ರೋಹದ ಪ್ರತೀಕ. ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಅದನ್ನು ಸಾಬೀತುಪಡಿಸಿದೆ. ಕಾವೇರಿ ವಿಷಯದಲ್ಲಿ ಕಾಂಗ್ರೆಸ್ಸಿನದು ಸದಾ ಎರಡು ನಾಲಿಗೆ. ಈ ಅನ್ಯಾಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಸಂಕಷ್ಟ ಸೂತ್ರದ ಪಾಲನೆಗೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:35 pm, Thu, 17 August 23