ಕರ್ನಾಟಕವನ್ನು ಬಲಿ ಕೊಡುತ್ತಿದ್ದಾರೆ ಎಂದ ಹೆಚ್ಡಿ ಕುಮಾರಸ್ವಾಮಿಗೆ ಡಿಕೆ ಸುರೇಶ್ ಟಾಂಗ್; ವಾಕ್ಸಮರ ತೀವ್ರ
DK Suresh vs HD Kumaraswamy; ನೈಸ್ ಹಗರಣದ ಕುರಿತು ದಾಖಲೆ ನೀಡಲು ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಬಳಿ ಸಮಯ ಕೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಸಿಎಂ ಆಗಿದ್ದ ಸಮಯದಲ್ಲಿ ನೈಸ್ ರಸ್ತೆಗೆ ಯೋಜನೆಗೆ ಸಹಿ ಹಾಕಿದ್ದರು. ಪ್ರಧಾನ ಮಂತ್ರಿಗಳ ಬಳಿ ದರಾಳವಾಗಿ ಎಲ್ಲವನ್ನೂ ಹೇಳಬಹುದು ಎಂದರು.
ಬೆಂಗಳೂರು, ಆಗಸ್ಟ್17: ಕಾವೇರಿ ನದಿಯಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡುತ್ತಿರುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಸರಣಿ ಟ್ವೀಟ್ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ರಾಮನಗರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಅವರು ತಿರುಗೇಟು ನೀಡಿದ್ದಾರೆ. ರಾಮನಗರ ತಾಲೂಕಿನ ಬಿಡದಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ರಾಜ್ಯದ ಜನ ವಿಶ್ರಾಂತಿ ನೀಡಿದ್ದಾರೆ. ಹೀಗಾಗಿ ಅವರಿಗೆ ಬೇರೆ ಬೇರೆ ಅಲೋಚನೆಗಳು ಬರುತ್ತಿರುತ್ತವೆ. ಕೆಲಸ ಮಾಡಿ ಅಂತ ರಾಜ್ಯದ ಜನ ಕಾಂಗ್ರೆಸ್ಗೆ ಆಶೀರ್ವದಿಸಿದ್ದಾರೆ. ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಸಲಹೆ ತಗೊಂಡು ಅಭಿವೃದ್ಧಿ ಮಾಡುತ್ತೇವೆ. ಕುಮಾರಸ್ವಾಮಿ ಸಲಹೆ ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ನೈಸ್ ಹಗರಣದ ಕುರಿತು ದಾಖಲೆ ನೀಡಲು ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಬಳಿ ಸಮಯ ಕೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸುರೇಶ್, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಸಿಎಂ ಆಗಿದ್ದ ಸಮಯದಲ್ಲಿ ನೈಸ್ ರಸ್ತೆಗೆ ಯೋಜನೆಗೆ ಸಹಿ ಹಾಕಿದ್ದರು. ರಸ್ತೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಟ್ಟಿದ್ದು ದೇವೇಗೌಡರು. ನೈಸ್ ರಸ್ತೆ ಪರ ಹೋರಾಟ, ವಿರೋಧ ಮಾಡಿರೋದು ಕುಮಾರಸ್ವಾಮಿ. ರೈತರಿಗೆ ತೊಂದರೆ ಕೊಡುತ್ತಿರುವುದು ಕುಮಾರಸ್ವಾಮಿ. ಪ್ರಧಾನ ಮಂತ್ರಿಗಳ ಬಳಿ ದರಾಳವಾಗಿ ಎಲ್ಲವನ್ನೂ ಹೇಳಬಹುದು ಎಂದರು.
ಹೆಚ್ಡಿ ಕುಮಾರಸ್ವಾಮಿ ಟ್ವೀಟ್ನಲ್ಲಿ ಹೇಳಿದ್ದೇನು?
ಕಾಂಗ್ರೆಸ್ ಪಕ್ಷ ಮೆಕೆದಾಟು ಪಾದಯಾತ್ರೆಯ ಹೈಡ್ರಾಮಾ ಆಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಹಾಕಿದೆ. I.N.D.I.A ಗೆ ಜೀವದಾನ ಮಾಡುವ ಉದ್ದೇಶದಿಂದ ಕಾವೇರಿ ಹಿತವನ್ನೇ ಬಲಿದಾನ ಮಾಡಿ, ಕನ್ನಡಿಗರಿಗೆ ಅದರಲ್ಲಿಯೂ ಅನ್ನದಾತರಿಗೆ ಘೋರ ಅನ್ಯಾಯ ಮಾಡಿದೆ. ನಾವು ಅಂದುಕೊಂಡಂತೆಯೇ ವಿಶ್ವಾಸ ದ್ರೋಹ ಮಾಡಿದೆ. ರಾಜ್ಯವು ಜಲ ಕ್ಷಾಮದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಬಗ್ಗೆ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ಗೆ ಯಾಕೆ ಮನವರಿಕೆ ಮಾಡಿಕೊಟ್ಟಿಲ್ಲ? ಕಾನೂನು ತಜ್ಞರು, ಪ್ರತಿಪಕ್ಷ ನಾಯಕರುಗಳ ಜೊತೆ ಚರ್ಚಿಸದೇ ತಮಿಳುನಾಡಿಗೆ ನೀರನ್ನು ಹರಿಸಿದ್ದರ ಒಳಗುಟ್ಟು ಜನತೆಗೆ ತಿಳಿಯಬೇಕು ಎಂದು ಕುಮಾರಸ್ವಾಮಿ ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ತಮಿಳುನಾಡಿಗೆ ಹೆಚ್ಚುವರಿ ಕಾವೇರಿ ನೀರು, ನಮ್ಮ ಹೊಟ್ಟೆಗೇ ಹಿಟ್ಟಿಲ್ಲ, ನೆರೆಮನೆಯವರ ಜುಟ್ಟಿಗೆ ಮಲ್ಲಿಗೆ: ಹೆಚ್ಡಿಕೆ ಕಿಡಿ
ಅಧಿಕಾರಕ್ಕೆ ಬಂದು 100 ದಿನ ಕಳೆಯುವ ಮುನ್ನವೇ ಕಾಂಗ್ರೆಸ್ ತನ್ನ ನಿಲುವು ಏನೆಂಬುದನ್ನು ಸಾಬೀತುಪಡಿಸಿದೆ. ಕಾವೇರಿ ವಿಷಯದಲ್ಲಿ ಕಾಂಗ್ರೆಸ್ಸಿನದು ಸದಾ ಎರಡು ನಾಲಿಗೆ ಎಂದು ಕುಮಾರಸ್ವಾಮಿ ವ್ಯಕ್ತಪಡಿಸಿದ್ದರು.
ಏನಿದು INDIA ಓಕ್ಕೂಟ?
2024ರ ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸೇರಿದಂತೆ 26 ಪ್ರತಿಪಕ್ಷಗಳು ಸೇರಿ ರಚಿಸಿಕೊಂಡ ಒಕ್ಕೂಟವಿದು. ಜಾತ್ಯಾತೀತ ತತ್ವಗಳನ್ನು ಎತ್ತಿ ಹಿಡಿಯುವುದು ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಈ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ