ಚಿಕ್ಕಬಳ್ಳಾಪುರ, ಆಗಸ್ಟ್ 22: ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಸ್ವಪಕ್ಷದ ವಿರುದ್ಧ ಬಿಜೆಪಿ (BJP) ಸಂಸದ ಬಿಎನ್ ಬಚ್ಚೇಗೌಡ (BN Bache Gowda) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ (Chikkaballapur) ಮಾತನಾಡಿದ ಅವರು, ಬಿಜೆಪಿ ಪಕ್ಷ ನನ್ನನ್ನು ಯಾವುದಕ್ಕೂ ಬಳಸಿಕೊಳ್ಳಲಿಲ್ಲ. ನನ್ನ ಪಾಡಿಗೆ ನಾನು ಲೋಕಸಭೆಗೆ ಹೊಗುತ್ತಿದ್ದೆ ಬರುತ್ತಿದ್ದೆ ಅಷ್ಟೆ. ಚಿಕ್ಕಬಳ್ಳಾಫುರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನನ್ನನ್ನು ಪರಿಗಣಿಸಲಿಲ್ಲ. ಪಕ್ಷ ಅಧಿಕಾರದಲ್ಲಿ ಇದ್ದಾಗ ನನ್ನನ್ನು ಗಣನೆಗೇ ತೆಗೆದುಕೊಂಡಿರಲಿಲ್ಲ. ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಬಚ್ಚೇಗೌಡ ಅವರು ಕೇಂದ್ರ ಸರ್ಕಾರದ ಕೆಲವು ನಿರ್ಧಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡದ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ ಎಂದು ಅವರು ಸ್ವಪಕ್ಷದ ಸರ್ಕಾರದ ವಿರುದ್ಧವೇ ಸಂಸದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಹಣ ನೀಡುತ್ತೇವೆ ಎಂದರೂ ಅಕ್ಕಿ ನೀಡದಿರುವುದು ತಪ್ಪು. ನಾನು ರಾಜ್ಯದ ಸಂಸದನಾಗಿ ಹೇಳುತ್ತಿದ್ದೇನೆ, ಅಕ್ಕಿ ಕೊಡದಿರುವುದು ತಪ್ಪು. ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡದೆ ಅನ್ಯಾಯ ಮಾಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ; ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಚುನಾವಣಾ ರಾಜಕೀಯದಿಂದ ನಿವೃತ್ತಿ
ಇಷ್ಟೇ ಅಲ್ಲದೆ, ರಾಜ್ಯದಲ್ಲಿ ನೀರಿನ ಕೊರತೆ ಇರುವಾಗ ತಮಿಳುನಾಡಿಗೆ ನೀರು ಬಿಟ್ಟ ನಿರ್ಧಾರದ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದು ತಪ್ಪು ಎಂದು ಬಚ್ಚೇಗೌಡ ಅವರು ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ನನ್ನ ಪ್ರಕಾರ ಈ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ತಪ್ಪು. ನೀರಿಲ್ಲದೆ ನಮಗೆ ತೊಂದರೆ ಆಗುತ್ತಾ ಇದೆ. ಕಾವೇರಿ ನೀರು ಬಿಡುವುದಕ್ಕೆ ನನ್ನ ವಿರೋಧ ಇದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷ ಸಭೆ ಕರೆದಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಸರಿಯಾದ ತೀರ್ಮಾನ ತಅವರಯ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಕಾವೇರಿ ಮಂಡ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಕರ್ನಾಟಕಕ್ಕೆ ಸಂಬಂಧಪಟ್ಟಿದೆ ಎಂದು ಅವರು ಹೇಳಿದ್ದಾರೆ.
ರಾಜಕೀಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Tue, 22 August 23